Site icon Vistara News

Narada Jayanti | ಪತ್ರಕರ್ತರು ನಾರದ ಮಹರ್ಷಿಗಳಿಂದ ಕಲಿಯಬೇಕಾದ 4 ಪಾಠಗಳು

“ನಾರಾಯಣ” ಎಂಬ ಶಬ್ದ ಕೇಳಿದ ಕೂಡಲೆ ನಮಗೆ ನೆನಪಾಗುವುದು ಮಹಾವಿಷ್ಣು. “ನಾರಾಯಣ ನಾರಾಯಣ” ಎಂದರೆ ನೆನಪಾಗುವವರು ನಾರದ ಮಹರ್ಷಿಗಳು. ರಾಮನಾಮದ ಜತೆಗೆ ಆಂಜನೇಯ ಬೆರೆತಂತೆ ವಿಷ್ಣುವಿನ ಹೆಸರಿನೊಂದಿಗೆ ಸಮರಸಗೊಂಡ ನಾರದ ಮಹರ್ಷಿಗಳನ್ನು ಜಗತ್ತಿನ ಮೊದಲ ಪತ್ರಕರ್ತ ಎಂದೂ ಕರೆಯಲಾಗುತ್ತದೆ. ಅಂತಹ ನಾರದ ಮಹರ್ಷಿಗಳ ಜನ್ಮದಿನ, ನಾರದ ಜಯಂತಿ (Narada Jayanti) ಇಂದು.

ನಾರದ ಎಂದರೆ ಕಲಹಪ್ರಿಯ, ಅಲ್ಲಿಂದ ಇಲ್ಲಿಗೆ ತಂದು ಹಾಕುವ ಬುದ್ಧಿ ಉಳ್ಳವರು, ಹಾಸ್ಯಗಾರ, ವಿದೂಷಕ ಎಂಬ ಅನೇಕ ತಿಳುವಳಿಕೆಗಳಿವೆ. ಅವುಗಳೆಲ್ಲವೂ ಸತ್ಯ. ಅವರು ಇಬ್ಬರ ನಡುವೆ ಕಲಹವನ್ನು ಉಂಟು ಮಾಡಿದ್ದಾರೆ, ಅಸುರರ ವಿಷಯವನ್ನು ಸುರರಿಗೆ, ಸುರರ ವಿಷಯವನ್ನು ಅಸುರರಿಗೆ ತಿಳಿಸಿ ಜಗಳವನ್ನು ಉಂಟು ಮಾಡಿದ್ದಾರೆ, ಅಪಾರ ಹಾಸ್ಯ ಪ್ರಜ್ಞೆಯನ್ನೂ ಹೊಂದಿದ್ದಾರೆ. ಕೆಲವು ಸಿನಿಮಾಗಳ ಕಾರಣಕ್ಕೆ ನಾರದರ ಕುರಿತು ತಪ್ಪು ತಿಳುವಳಿಕೆಗಳೂ ಮೂಡಿರಲೂಬಹುದು.

ಆದರೆ ನಾರದರ ಪ್ರತಿ ಕ್ರಿಯೆಯೂ ಒಂದು ಸದುದ್ದೇಶವನ್ನು ಹೊಂದಿದೆ. ಲೋಕಕಲ್ಯಾಣವೇ ಆ ಉದ್ದೇಶ. ಅಧಿಕಾರ ಒಂದೆಡೆ ಇದ್ದರೆ, ಸಮಾಜ ಇನ್ನೊಂದೆಡೆ ಇರುತ್ತದೆ. ಈ ಎರಡು ವ್ಯವಸ್ಥೆಗಳ ನಡುವೆ ಸೇತುವೆ ಆಗುವ ಕೆಲಸವನ್ನು ನಾರದರು ಮಾಡುತ್ತಾರೆ. ಇದೇ ಅಲ್ಲವೇ ಪತ್ರಕರ್ತರ ಕೆಲಸ? ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಅಧಿಕಾರದಲ್ಲಿರುವವರು ಹಾಗೂ ಸಮಾಜದ ನಡುವೆ ಸೇತುವೆಯ ಕೆಲಸ ಮಾಡುವ ಪತ್ರಕರ್ತರಿಗೆ ನಾರದರೇ ಆದರ್ಶ. “ಆದ್ಯಪತ್ರಕರ್ತ” ನಾರದ ಮಹರ್ಷಿಗಳಿಂದ, ಇಂದಿನ “ಆಧುನಿಕ ಪತ್ರಕರ್ತರು” ಕಲಿಯಬೇಕಾದ ನಾಲ್ಕು ಪಾಠಗಳು ಇಲ್ಲಿವೆ.

1.. ಗುರಿಯೆಡೆಗೆ ಪಯಣ

ಒಮ್ಮೆ ನಾರದ ಮಹರ್ಷಿಗಳು ಒಂದು ತಪೋವನದಲ್ಲಿ ತಪಸ್ಸಿಗೆ ಕುಳಿತಿರುತ್ತಾರೆ. ಅತ್ಯುಗ್ರವಾಗಿ ತಪಸ್ಸು ಮಾಡುತ್ತಿರುವುದನ್ನು ಕಂಡ ಇಂದ್ರ ದೇವನು ನಾರದದ ತಪಸ್ಸು ಭಂಗ ಮಾಡಬೇಕೆಂದು ಉಪಾಯ ಮಾಡುತ್ತಾನೆ. ಅಗ್ನಿ, ವರುಣ ಮತ್ತು ವಾಯು ಅವರನ್ನು ಕಳುಹಿಸಿ ತಪಸ್ಸು ಭಂಗಕ್ಕೆ ಯತ್ನಿಸುತ್ತಾನೆ. ಆದರೆ ಈ ಎಲ್ಲ ಪ್ರಯತ್ನಗಳು ವಿಫಲವಾಗುತ್ತವೆ. ಆಗ ಇಂದ್ರದೇವನು ಕಾಮದೇವನನ್ನು ಕಳಿಸುತ್ತಾನೆ. ಕಾಮದೇವನು ರತಿ, ಅಪ್ಸರೆ, ಸ್ವರ್ಗಲೋಕದ ದೇವಕನ್ಯೆ ಸೇರಿ ಎಲ್ಲರನ್ನೂ ಬಳಸಿ ತಪಸ್ಸನ್ನು ಭಂಗ ಮಾಡಲು ಯತ್ನಿಸುತ್ತಾನೆ. ಆದರೆ ಇಷ್ಟೆಲ್ಲ ಪ್ರಯತ್ನಗಳ ನಂತರವೂ ನಾರದ ಮಹರ್ಷಿಗಳ ತಪಸ್ಸು ಭಂಗವಾಗುವುದಿಲ್ಲ, ಇಂದ್ರ ಸೋಲನ್ನೊಪ್ಪುತ್ತಾನೆ.

ಕಲಿಯಬೇಕಾದ ಪಾಠ: ಒಳ್ಳೆಯವರಷ್ಟೆ ಅಲ್ಲದೆ, ದುಷ್ಟರ ಜತೆಗೂ ಪತ್ರಕರ್ತರು ಭೇಟಿ, ಚರ್ಚೆ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರನ್ನು ಹೆದರಿಸಲು ಅಗ್ನಿ, ವರುಣ, ವಾಯುವಿನ ರೀತಿ ಅನೇಕ ತೊಂದರೆಗಳನ್ನು ಅವರು ನೀಡಬಹುದು. ಇಷ್ಟಕ್ಕೆ ಬಗ್ಗದಿದ್ದಾಗ ಗುರಿಯನ್ನು ತಪ್ಪಿಸಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳಲು ಆಸೆ, ಆಮಿಷಗಳನ್ನು ಒಡ್ಡಬಹುದು. ಇವೆಲ್ಲವನ್ನೂ ಧಿಕ್ಕರಿಸಿ ಪತ್ರಕರ್ತನಾದವನು ತನ್ನ ವ್ರತವನ್ನು ಮುಂದುವರಿಸಬೇಕು.

2.. ಜ್ಞಾನವೇ ಸಂಪತ್ತು, ಕಲಿಕೆ ನಿರಂತರ

ಮಹಾಭಾರತದಲ್ಲಿ ತಿಳಿಸಿರುವಂತೆ, ನಾರದರು ಎಲ್ಲ ವೇದಗಳು ಹಾಗೂ ಉಪನಿಷದ್‌ಗಳನ್ನು ಅರಿತವರಾಗಿದ್ದರು. ಇತಿಹಾಸ ಹಾಗೂ ಪುರಾಣಗಳ ಬಗೆಗೂ ಅವರಿಗೆ ಅಪಾರ ಜ್ಞಾನವಿತ್ತು. ಷಡಂಗಗಳಲ್ಲಿ ಅವರು ಪ್ರಾವೀಣ್ಯತೆ ಪಡೆದಿದ್ದರು. ದೇವಾನುದೇವತೆಗಳು ನಾರದರನ್ನು ಅವರಲ್ಲಿನ ಜ್ಞಾನಕ್ಕಾಗಿಯೇ ಗೌರವಿಸುತ್ತಿದ್ದರು. ನ್ಯಾಯಶಾಸ್ತ್ರ ಹಾಗೂ ನೈತಿಕ ಶಾಸ್ತ್ರಗಳನ್ನು ತಿಳಿದಿದ್ದರು ಹಾಗೂ ಅನುಸರಿಸುತ್ತಿದ್ದರು.

ಕಲಿಯಬೇಕಾದ ಪಾಠ: ಜ್ಞಾನವಂತರನ್ನು ಜಗತ್ತಿನ ಎಲ್ಲೆಡೆಯೂ ಗೌರವಿಸಲಾಗುತ್ತದೆ. ಪತ್ರಕರ್ತರು ಒಂದು ವಿಷಯದಲ್ಲಲ್ಲ, ಅನೇಕ ವಿಚಾರಗಳನ್ನು ತಿಳಿದಿರಬೇಕಾಗುತ್ತದೆ. ಸಮಾಜದಲ್ಲಿ ನೈಜವಾಗಿ ನಡೆಯುತ್ತಿರುವ ಅನೇಕ ಘಟನೆಗಳ ಅರಿವು ಪತ್ರಕರ್ತರಿಗಿರುತ್ತದೆ. ಪತ್ರಕರ್ತರಿಗಿರುವ ಲೋಕಜ್ಞಾನಕ್ಕಾಗಿಯೇ ಅಧಿಕಾರದಲ್ಲಿರುವವರು, ಸಮಾಜದಲ್ಲಿರುವ ಜನರು ಗೌರವಿಸಬೇಕು. ಜ್ಞಾನವೇ ಪತ್ರಕರ್ತರ ಅಸ್ತಿಯಾಗಬೇಕು. ಜ್ಞಾನ ಸಂಪಾದನೆಗೆ ನಿರಂತರ ಕಲಿಕೆಯನ್ನು ರೂಢಿಸಿಕೊಳ್ಳಬೇಕು.

ಇದನ್ನೂ ಓದಿ | Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು

3. ಮನಃಪರಿವರ್ತನೆಯ ಕಾರ್ಯ

ರಾಮಾಯಣವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳ ಮೂಲ ಹೆಸರು ರತ್ನಾಕರ. ಕಾಡುಗಳ್ಳ ರತ್ನಾಕರ, ಅರಣ್ಯದ ಮೂಲಕ ಹಾದು ಹೋಗುವವರನ್ನು ತಡೆದು, ಕೊಂದು ಅವರಲ್ಲಿದ್ದ ವಜ್ರ, ಹಣವನ್ನು ಕಿತ್ತುಕೊಂಡು ಅದರಿಂದ ಜೀವನ ನಡೆಸುತ್ತಿದ್ದವನು. ಹೀಗೆಯೇ ಒಂದು ದಿನ ಕಾಡಿನಲ್ಲಿ ನಾರದರು ಭೇಟಿಯಾಗುತ್ತಾರೆ. ಕಾಡುಗಳ್ಳನನ್ನು ಕಂಡು ಬೆದರದ ನಾರದರು ಆತನನ್ನು ತಮ್ಮ ಮಾತಿನ ಕೌಶಲ್ಯದಿಂದ ಚರ್ಚೆಗೆ ಎಳೆಯುತ್ತಾರೆ. ಹೀಗೆಯೇ ಮಾತನಾಡುತ್ತ, ನಿನ್ನ ಈ ಎಲ್ಲ ಪಾಪದ ಫಲಗಳನ್ನು ನಿನ್ನ ತಂದೆ, ಪತ್ನಿಯೂ ಹಂಚಿಕೊಳ್ಳುತ್ತಾರೆಯೇ ಎಂದು ಕೇಳುತ್ತಾರೆ. ಇದರಿಂದ ವಿಚಲಿತನಾದ ರತ್ನಾಕರ, ನಾರದರನ್ನು ಅಲ್ಲಿಯೇ ಮರಕ್ಕೆ ಕಟ್ಟಿಹಾಕಿ ಮನೆಗೆ ತೆರಳುತ್ತಾನೆ. ಮನೆಗೆ ತೆರಳಿ ಪತ್ನಿ, ತಂದೆಗೆ, “ನಾನು ಮಾಡುವ ದುಡಿಮೆಯ ಫಲವೂ ನಿಮಗೆ ಸೇರುತ್ತದೆ ತಾನೆ?” ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಅವರು, ನಿನ್ನ ದುಡಿಮೆ ಮಾತ್ರ ನಮಗೆ, ಅದರ ಫಲಗಳೆಲ್ಲವೂ ನಿನಗೆ ಮಾತ್ರ ಎನ್ನುತ್ತಾರೆ. ಇದರಿಂದ ವಿಲಿತನಾದ ರತ್ನಾಕರ, ದಾರಿ ತೋರುವಂತೆ ನಾರದರನ್ನು ಬೇಡಿಕೊಳ್ಳುತ್ತಾನೆ. ನಾರದರ ಮಾರ್ಗದರ್ಶನದಲ್ಲಿ ವಾಲ್ಮೀಕಿ ಮಹರ್ಷಿಯಾಗಿ ರೂಪುಗೊಳ್ಳುತ್ತಾನೆ.

ಕಲಿಯಬೇಕಾದ ಪಾಠ: ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ಕೆಟ್ಟವರ ಜತೆಗೆ, ಬದುಕಿನ ಅನಿವಾರ್ಯತೆಗಳಿಂದ ತಪ್ಪುಹಾದಿ ತುಳಿದವರಿರುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಸಂಚರಿಸುವಾಗ ಪತ್ರಕರ್ತರು ಅಂತಹವರ ಭೇಟಿ ಮಾಡಬೇಕಾಗುತ್ತದೆ. ತಮ್ಮ ದಾರಿ ಸರಿಯಾಗಿದೆಯೇ ಅಥವಾ ನೈತಿಕತೆಗೆ ವಿರುದ್ಧವಾಗಿದೆಯೇ ಎನ್ನುವುದನ್ನು ಜ್ಞಾನ, ಮಾತಿನ ಕೌಶಲ ಹಾಗೂ ಸತ್ಯದ ಮೂಲಕ ತಿಳಿ ಹೇಳುವ ಪ್ರಯತ್ನವನ್ನು ಪತ್ರಕರ್ತರು ಮಾಡಬೇಕು.

4.. ಜಗವೆಲ್ಲವೂ ಸುಂದರ

ನಾರದ ಮಹರ್ಷಿಗಳು ನಾರಾಯಣನ ಪರಮ ಭಕ್ತರು ಎನ್ನುವುದು ತಿಳಿದೇ ಇದೆ. ಆದರೆ ಒಮ್ಮೆ, ನಾರದರಿಗೆ ಇದೇ ವಿಷಯಕ್ಕೆ ಅಹಂಕಾರ ಬಂದುಬಿಟ್ಟಿತು. ಬ್ರಹ್ಮಾಂಡದಲ್ಲಿ ನಾರಾಯಣನ ಪರಮಭಕ್ತರು ತನಗಿಂತ ದೊಡ್ಡವರು ಯಾರೂ ಇಲ್ಲ ಎಂದು ಭಾವಿಸಿದರು. ಒಮ್ಮೆ ವಿಷ್ಣುವು ನಾರದರಿಗೆ ಒಂದು ಕೆಲಸ ಕೊಟ್ಟ. ಒಂದು ಮಡಕೆ ತೈಲವನ್ನು ತಲೆಯ ಮೇಲಿಟ್ಟುಕೊಂಡು ಭೂಮಿಯನ್ನು ಸುತ್ತಿ ಬರಬೇಕು. ಒಂದು ನಿಬಂಧನೆ ಏನೆಂದರೆ, ಒಂದು ತೊಟ್ಟು ತೈಲವೂ ನೆಲಕ್ಕೆ ಚೆಲ್ಲದಂತೆ ನೋಡಿಕೊಳ್ಳಬೇಕು. ಈ ಕೆಲಸವನ್ನು ಒಪ್ಪಿದ ನಾರದರು, ಮಡಕೆ ತೈಲವನ್ನು ತಲೆಯ ಮೇಲೆ ಹೊತ್ತು, ಒಂದು ಹನಿಯನ್ನೂ ಚೆಲ್ಲದೆ ಭೂಮಿ ಸುತ್ತಿ ಹಿಂದಿರುಗುತ್ತಾರೆ. ಅದನ್ನು ಮೆಚ್ಚಿದ ವಿಷ್ಣು, ಇನ್ನೊಂದು ಕೆಲಸ ಹೇಳುತ್ತಾನೆ.

ಭೂಮಿಯಲ್ಲಿ ನನ್ನ ಪರಮ ಭಕ್ತನೊಬ್ಬನಿದ್ದಾನೆ, ರೈತನಾದ ಅವನು ದಿನಪೂರ್ತಿ ಏನು ಮಾಡುತ್ತಾನೆ ನೋಡಿಕೊಂಡು ಬಾ ಎನ್ನುತ್ತಾನೆ. ರೈತನ ಬಳಿಗೆ ತೆರಳಿದ ನಾರದರು ಅವನ ದಿನಚರಿ ನೋಡುತ್ತಾರೆ. ಬೆಳಗ್ಗೆ ಎದ್ದ ಕೂಡಲೆ ನಾರಾಯಣ ನಾರಾಯಣ ಎನ್ನುವ ರೈತ, ದಿನಪೂರ್ತಿ ಕೆಲಸ ಮಾಡುತ್ತಾನೆ. ಹೊಲದಲ್ಲಿ ದುಡಿದು, ಹಸುಕರುಗಳಿಗೆ ಆಹಾರ ನೀಡಿ, ಮನೆಯವರಿಗೆ ಆಹಾರ ತಯಾರಿಸಲು ಸಾಮಗ್ರಿ ತಂದು ಹಾಕುತ್ತಾನೆ. ಕೆಲಸದ ನಂತರ ರಾತ್ರಿ ಊಟ ಸೇವಿಸಿ ಮಲಗುವ ಮುನ್ನ ನಾರಾಯಣ ನಾರಾಯಣ ಎನ್ನುತ್ತಾನೆ. ಇದನ್ನು ನೋಡಿದ ನಾರದರು ವಿಷ್ಣುವಿನ ಬಳಿಗೆ ಬರುತ್ತಾರೆ.

ನಾನು ದಿನವೆಲ್ಲ ನಾರಾಯಣ ಧ್ಯಾನ ಮಾಡುತ್ತೇನೆ. ಆದರೆ ಇಡೀ ದಿನದಲ್ಲಿ ಎರಡು ಬಾರಿ ಮಾತ್ರ ನಾರಾಯಣ ಧ್ಯಾನ ಮಾಡುವ ಅವನು ಹೇಗೆ ನಿನ್ನ ಪರಮ ಭಕ್ತನಾಗುತ್ತಾನೆ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ, ನೀನು ತೈಲವನ್ನು ತಲೆಯ ಮೇಲೆ ಹೊತ್ತಿದ್ದಾಗ ಎಷ್ಟು ಬಾರಿ ನಾರಾಯಣ ನಾರಾಯಣ ಎಂದೆ? ಎಂದು ವಿಷ್ಣುವಿನ ಪ್ರಶ್ನೆ. “ಅದು ಹೇಗೆ ಸಾಧ್ಯ? ಇಂತಹ ನಾಜೂಕಿನ ಕೆಲಸ ಮಾಡುವಾಗ ನಿನ್ನ ಹೆಸರು ಹೇಗೆ ಹೇಳಲಿ? ನನ್ನ ಗಮನವೆಲ್ಲವೂ, ತೈಲವು ನೆಲಕ್ಕೆ ಚೆಲ್ಲದಂತೆ ನೋಡಿಕೊಳ್ಳವುದರಲ್ಲೇ ಇತ್ತು” ಎಂದರು ನಾರದರು. ಅದಕ್ಕೆ ಉತ್ತರಿಸಿದ ವಿಷ್ಣು, ಒಂದು ಸಣ್ಣ ಕೆಲಸ ಮಾಡುವಾಗಲೇ ನೀನು ನಾರಾಯಣ ಎನ್ನುವುದನ್ನು ಮರೆತೆ. ಇನ್ನು ಜೀವನದಲ್ಲಿ ಇಷ್ಟೊಂದು ಶ್ರಮ ವಹಿಸುವ ರೈತ ದಿನದಲ್ಲಿ ಎರಡು ಬಾರಿ ನಾರಾಯಣ ನಾರಾಯಣ ಎಂದು ಧ್ಯಾನಿಸುತ್ತಾನೆ ಎಂದರೆ ಮಹಾ ಭಕ್ತನಲ್ಲವೇ? ಎನ್ನುತ್ತಾನೆ. ನಾರದರ ಅಹಂಕಾರ ಇಳಿಯುತ್ತದೆ.

ಕಲಿಯಬೇಕಾದ ಪಾಠ: ಪತ್ರಕರ್ತರು ಸಮಾಜದಲ್ಲಿನ ದುಷ್ಟರನ್ನೂ ನೋಡುತ್ತಿರುತ್ತಾರೆ. ಇಂತಹ ಸಮಯದಲ್ಲಿ, ಸಮಾಜದಲ್ಲಿ ಇರುವವರೆಲ್ಲರೂ ದುಷ್ಟರಂತೆಯೇ ಕಾಣುತ್ತಾರೆ. ಸಮಾಜದಲ್ಲಿ ನಡೆಯುವ ಎಲ್ಲ ಕೆಲಸಗಳೂ ಭ್ರಷ್ಟಾಚಾರದಂತೆ, ಎಲ್ಲ ಸಂಬಂಧಗಳೂ ಅನೈತಿಕದಂತೆ ಭಾಸವಾಗುತ್ತದೆ. ತಾನು ಮಾತ್ರ ಪ್ರಾಮಾಣಿಕನಾಗಿದ್ದು, ಎಲ್ಲರೂ ಭ್ರಷ್ಟರು ಎನ್ನಿಸಲು ಆರಂಭಿಸುತ್ತದೆ. ಯಾವುದೇ ವಿಚಾರ ಕಂಡರೂ ಅದರಲ್ಲಿ ನಕಾರಾತ್ಮಕತೆಯೇ ಕಾಣುತ್ತದೆ. ಪತ್ರಕರ್ತರು ಇದರಿಂದ ಹೊರಬರಬೇಕು. ಸಮಾಜದಲ್ಲಿ ಅನೇಕ ಉತ್ತಮ ವ್ಯಕ್ತಿಗಳಿದ್ದಾರೆ, ಅವರಿಂದ ಸಾಕಷ್ಟು ಉತ್ತಮ ಕೆಲಸಗಳ ಆಗುತ್ತಿವೆ, ಅನೇಕ ಸತ್ಯವಂತರಿದ್ದಾರೆ ಎನ್ನುವ ಅರಿವಾಗಬೇಕು. ಧನಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು.
ಇದನ್ನೂ ಓದಿ | Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

Exit mobile version