Site icon Vistara News

Narayanaguru Jayanti : ಬಟ್ಟೆ ಬಿಚ್ಚಿ ದೇವಸ್ಥಾನ ಪ್ರವೇಶಿಸಿ ಎನ್ನುವುದು ದೇವರಿಗೆ ಮಾಡುವ ಅವಮಾನ ಎಂದ ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಬಟ್ಟೆ ಬಿಚ್ಚಿ ದೇವಾಲಯಕ್ಕೆ ಬನ್ನಿ (Entering temple without shirt) ಎನ್ನುವುದು ದೇವರ ದೃಷ್ಟಿಯಲ್ಲಿ ಅಮಾನವೀಯ. ದೇವರನ್ನು ಮುಂದಿಟ್ಟುಕೊಂಡು ತಾರತಮ್ಯ ಆಚರಿಸುವುದು ದೇವರಿಗೆ ಮಾಡುವ ಅವಮಾನ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ಅವರು ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು (Narayanaguru Jayanti) ಉದ್ಘಾಟಿಸಿ ಮಾತನಾಡಿದರು. ʻʻದೇವರನ್ನು ಮುಂದಿಟ್ಟು ಜಾತಿ-ಧರ್ಮದ ಸಂಘರ್ಷ ಸೃಷ್ಟಿಸುವುದು ದೇವರಿಗೆ ಮಾಡುವ ಅವಮಾನ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರುʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.‌ ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಶಕ್ತಿಗಳು ನಾರಾಯಣಗುರುಗಳ ಅವಧಿಯಲ್ಲೂ ಇದ್ದವು. ಈಗಲೂ ಇವೆ. ನಾರಾಯಣಗುರುಗಳು ಸಂಘರ್ಷಕ್ಕೆ ಕಾರಣ ಆಗದಂತೆ ಸಮಾಜದಲ್ಲಿ ವ್ಯಾಪಕ ಬದಲಾವಣೆ ತಂದರು ಎಂದರು.

ಪ್ರವೇಶವಿಲ್ಲದ ದೇವಸ್ಥಾನಕ್ಕೆ ಹೋಗಲೇಬೇಡಿ ಎಂದಿದ್ದರು

ʻʻದೇವರನ್ನೇ ಮುಂದಿಟ್ಟುಕೊಂಡು ಜಾತಿ, ಧರ್ಮ ಸಂಘರ್ಷ ಸೃಷ್ಟಿಸುವ ವಿಕೃತಿಯನ್ನು ಈಗಲೂ ಆಚರಿಸಲಾಗುತ್ತಿದೆ.‌ ಈ ತಾರತಮ್ಯಕ್ಕೆ ನಾರಾಯಣಗುರುಗಳು ಭಿನ್ನವಾದ ಆಚರಣೆ ಕಂಡುಕೊಂಡರು. ನಿಮಗೆ ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಹೋಗಲೇಬೇಡಿ. ನೀವೇ ನಿಮ್ಮ ದೇವರುಗಳಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡಿ ಎಂದರು. ಈ ಸಮಾಜ ಸುಧಾರಣೆಯ ಕ್ರಾಂತಿಕಾರಕ ಧಾರ್ಮಿಕ‌ ಚಳವಳಿ ಪರಿಣಾಮವಾಗಿ ಕೇರಳದಲ್ಲಿ 60 ದೇವಸ್ಥಾನಗಳನ್ನು ನಿರ್ಮಿಸಿದರು. ಉಳಿದ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಶೂದ್ರ ಮತ್ತು ದಲಿತ ಸಮುದಾಯವನ್ನು ತಾವೇ ಕಟ್ಟಿಸಿದ ದೇವಸ್ಥಾನಗಳಿಗೆ ಪ್ರವೇಶಿಸುವಂತೆ ಕ್ರಾಂತಿ ಮಾಡಿದರುʼʼ ಎಂದು ಹಲವು ನಿದರ್ಶನಗಳನ್ನು ಉದಾಹರಿಸಿದರು.

ವಿದ್ಯೆ ಕಲಿತು ಸ್ವತಂತ್ರರಾಗಿ, ಸಂಘಟಿತರಾಗಿ ಬಲಯುತರಾಗಿ ಎನ್ನುವುದು ನಾರಾಯಣಗುರುಗಳು ಶೂದ್ರ-ದಲಿತ ಸಮುದಾಯಕ್ಕೆ ನೀಡಿದ ಅತ್ಯುನ್ನತ ಧ್ಯೇಯ ಎಂದು ಸಿದ್ದರಾಮಯ್ಯ ನುಡಿದರು.

ʻʻನಾರಾಯಣಗುರುಗಳು ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಅವರು ಜಾತಿ-ಧರ್ಮದ ತಾರತಮ್ಯಗಳನ್ನು ಮೀರಿದ ವಿಶ್ವಮಾನವ. ಹೀಗಾಗಿ ವಿಶ್ವ ಮಾನವ ನಾರಾಯಣಗುರುಗಳ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಎಂದು ಆದೇಶ ಮಾಡಿದೆʼʼ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಬೆಂಗಳೂರಿನಲ್ಲಿ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು.

ಈಡಿಗ ಅಭಿವೃದ್ಧಿ ನಿಗಮ, ಭವನಕ್ಕೆ ಅನುದಾನ

ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಮತ್ತು ನಾರಾಯಣಗುರು ಭವನ ನಿರ್ಮಿಸಬೇಕು ಎನ್ನುವ ಸಮುದಾಯದ ಬೇಡಿಕೆಗೆ ಒಪ್ಪಿದ ಮುಖ್ಯಮಂತ್ರಿಗಳು ವೇದಿಕೆಯಲ್ಲೇ ಎರಡು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಎಚ್.ಆರ್.ಗವಿಯಪ್ಪ, ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ಡಾ.ಎಂ.ತಿಮ್ಮೇಗೌಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Exit mobile version