Site icon Vistara News

Navaratri: ದಸರಾ ರಜೆಯಲ್ಲಿ ಇಲ್ಲೆಲ್ಲ ಸುತ್ತಾಡಿ; ಕೆಎಸ್‌ಆರ್‌ಟಿಸಿ ಟೂರ್‌ ಪ್ಯಾಕೇಜ್‌ ಘೋಷಣೆ

ksrtc

ksrtc

ಬೆಂಗಳೂರು: ನಾಡಿನೆಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ (Navaratri 2023). ಅಕ್ಟೋಬರ್‌ 15ರಿಂದ ದೇವಿಯ ಆರಾಧನೆ ನಡೆಯಲಿದ್ದು, ಮಕ್ಕಳಿಗೆ ರಜೆಯೂ ಸಿಕ್ಕಿದೆ. ಈ ದಸರಾ ರಜೆ ಸಂದರ್ಭದಲ್ಲಿ ಟೂರ್‌ ಪ್ಲ್ಯಾನ್‌ ಮಾಡಿದ್ದೀರಾ? ಹಾಗಾದರೆ ನಿಮಗೆ ಇಲ್ಲಿದೆ ಅತ್ಯುತ್ತಮ ಪ್ಯಾಕೇಜ್‌. ಕೆಎಸ್‌ಆರ್‌ಟಿಸಿ ಈ ಬಾರಿಯೂ ವಿಶೇಷ ಪ್ಯಾಕೇಜ್‌ ಘೋಷಿಸಿದ್ದು, ಆ ಕುರಿತಾದ ವಿವರ ಇಲ್ಲಿದೆ. ಈ ವಿಶೇಷ ಪ್ಯಾಕೇಜ್‌ ಅಕ್ಟೋಬರ್‌ 20ರಿಂದ 26ರ ತನಕ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.

ʼದರ್ಶಿನಿʼ ವಿಶೇಷ

ವಿಶೇಷ ಎಂದರೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಪ್ರವಾಸಿಗರನ್ನು ಮೈಸೂರು ಮತ್ತು ಸುತ್ತಮುತ್ತಲಿನ ಅತ್ಯುತ್ತಮ ತಾಣಗಳಿಗೆ ಕರೆದೊಯ್ಯುತ್ತದೆ. ಇದನ್ನು ʼದರ್ಶಿನಿʼ ಪ್ರವಾಸಗಳು ಎಂದು ಕರೆಯಲಾಗುತ್ತದೆ. ಇದರಲ್ಲಿ ಗಿರಿ ದರ್ಶಿನಿ, ಜಲ ದರ್ಶಿನಿ ಮತ್ತು ದೇವ ದರ್ಶಿನಿ ಎಂಬ ಮೂರು ವಿಭಾಗಗಳನ್ನು ಮಾಡಲಾಗಿದೆ. ಈ ಪೈಕಿ ಗಿರಿ ದರ್ಶಿನಿ ಪ್ರವಾಸಿಗರನ್ನು ಗಮನ ಸೆಳೆಯುವ ಬೆಟ್ಟದ ಪ್ರದೇಶಗಳಿಗೆ ಕರೆದೊಯ್ದರೆ, ಜಲ ದರ್ಶಿನಿ ನೀರು, ನದಿ, ನಿಸರ್ಗಧಾಮಗಳ ದರ್ಶನ ಮಾಡಿಸುತ್ತದೆ. ಇನ್ನು ಪವಿತ್ರ ದೇವಸ್ಥಾನಗಳಿಗೆ ತೆರಳುವ ವಿಭಾಗವೇ ದೇವ ದರ್ಶಿನಿ. ಒಂದು ದಿನದ ಪ್ರವಾಸ ಇದಾಗಿದ್ದು, ಪ್ರವಾಸಿಗರು ವಿವಿಧ ನಿಸರ್ಗ ರಮಣೀಯ ತಾಣಗಳಿಗೆ ಭೇಟಿ ನೀಡಬಹುದು. ಜತೆಗೆ ಮೈಸೂರು ನಗರ ದೀಪಾಲಂಕಾರ ದರ್ಶನವೂ ಲಭ್ಯ.

ರಾಜ್ಯ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಈ ಪ್ರವಾಸವನ್ನು ಆಯೋಜಿಸುತ್ತಿದೆ. ಎಲ್ಲ ಬಸ್‌ಗಳು ಬೆಳಗ್ಗೆ ಮೈಸೂರಿನಿಂದ ಹೊರಟು ಸಂಜೆ ಮತ್ತೆ ಮೈಸೂರಿಗೆ ಮರಳಲಿದೆ. ಕರ್ನಾಟಕ ಸಾರಿಗೆ ಜತೆಗೆ ರಾಜಹಂಸ ಸಾರಿಗೆ, ಸಿಟಿ ವೋಲ್ವೋ ಸಾರಿಗೆ ಮತ್ತು ಐರಾವತ ಕ್ಲಬ್‌ ಕ್ಲಾಸ್‌ ವಾಹನಗಳಲ್ಲಿ ಈ ಪ್ಯಾಕೇಜ್‌ ಲಭ್ಯ.

ಗಿರಿ ದರ್ಶಿನಿ

ಸುಮಾರು 325 ಕಿ.ಮೀ. ಸಂಚರಿಸುವ ಈ ಟೂರ್‌ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟವನ್ನು ಒಳಗೊಂಡಿದೆ.
ಪ್ರಯಾಣ ದರ: ಕರ್ನಾಟಕ ಸಾರಿಗೆಯಲ್ಲಿ- ವಯಸ್ಕರಿಗೆ: 400 ರೂ., ಮಕ್ಕಳಿಗೆ: 250 ರೂ. ರಾಜಹಂಸ ಸಾರಿಗೆಯಲ್ಲಿ-ವಯಸ್ಕರಿಗೆ: 625 ರೂ., ಮಕ್ಕಳಿಗೆ: 400 ರೂ.

ಜಲ ದರ್ಶಿನಿ

ಮೈಸೂರು ಮತ್ತು ಕೊಡಗಿನ ಜಲಪಾತ, ನಿಸರ್ಗ ತಾಣ, ವನ್ಯಜೀವಿ ಸಂರಕ್ಷಣಾ ಕೇಂದ್ರಗಳಿಗೆ ಈ ಪ್ಯಾಕೇಜ್‌ ಮೂಲಕ ತೆರಳಬಹುದು. ಗೋಲ್ಡನ್‌ ಟೆಂಪಲ್‌(ಬೈಲುಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್‌, ಹಾರಂಗಿ ಜಲಾಶಯ ಮತ್ತು ಕೆ.ಆರ್‌.ಎಸ್‌. ಡ್ಯಾಮ್‌- ಇಲ್ಲಿಗೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ.
ಪ್ರಯಾಣ ದರ: ಕರ್ನಾಟಕ ಸಾರಿಗೆಯಲ್ಲಿ-ವಯಸ್ಕರಿಗೆ: 450 ರೂ., ಮಕ್ಕಳಿಗೆ: 250 ರೂ.

ದೇವ ದರ್ಶಿನಿ

ಈ ಪ್ಯಾಕೇಜ್‌ ಮೂಲಕ ಸುಮಾರು 250 ಕಿ.ಮೀ. ದೂರ ಸಂಚರಿಸಲಾಗುತ್ತದೆ. ನಂಜನಗೂಡು, ಬ್ಲಫ್‌, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣಗಳಿಗೆ ಬಸ್‌ ತೆರಳಲಿದೆ.
ಪ್ರಯಾಣ ದರ: ಕರ್ನಾಟಕ ಸಾರಿಗೆಯಲ್ಲಿ: ವಯಸ್ಕರಿಗೆ: 300 ರೂ., ಮಕ್ಕಳಿಗೆ: 175 ರೂ., ರಾಜಹಂಸ ಸಾರಿಗೆಯಲ್ಲಿ: ವಯಸ್ಕರಿಗೆ: 525 ರೂ., ಮಕ್ಕಳಿಗೆ: 350 ರೂ., ಸಿಟಿ ವೋಲ್ವೋ ಸಾರಿಗೆಯಲ್ಲಿ: ವಯಸ್ಕರಿಗೆ: 500 ರೂ., ಮಕ್ಕಳಿಗೆ: 350 ರೂ.

ಮೈಸೂರು ನಗರ ದೀಪಾಲಂಕಾರ ದರ್ಶನ(ಸಿಟಿ ವೋಲ್ವೋ ಸಾರಿಗೆ)

ಮೈಸೂರು ನಗರ ಬಸ್‌ ನಿಲ್ದಾಣದಿಂದ ಅರಮನೆ ರಸ್ತೆ, ಮೈಸೂರು ಕೇಂದ್ರೀಯ ಬಸ್‌ ನಿಲ್ದಾಣ ರಸ್ತೆ, ಎಲ್‌ಐಸಿ ವೃತ್ತ, ಜಂಬೂ ಬಜಾರ್‌ ರಸ್ತೆ, ರೈಲ್ವೇ ನಿಲ್ದಾಣ ವೃತ್ತ, ಜೆಎಲ್‌ಬಿ ರಸ್ತೆ(ಮೂಡ ಕಚೇರಿ ರಸ್ತೆ) ಮತ್ತು ನಗರ ಬಸ್‌ ನಿಲ್ದಾಣ.
ಪ್ರಯಾಣ ದರ: ವಯಸ್ಕರಿಗೆ: 200 ರೂ., ಮಕ್ಕಳಿಗೆ: 150 ರೂ. ಇದು ಸಂಜೆ 6 ಗಂಟೆಗೆ ಪ್ರಯಾಣ ಆರಂಭಿಸಲಿದೆ.

ಮಡಿಕೇರಿ ಪ್ಯಾಕೇಜ್‌(ಐರಾವತ ಕ್ಲಬ್‌ ಕ್ಲಾಸ್‌ ಸಾರಿಗೆ)

ನಿಸರ್ಗಧಾಮ, ಗೋಲ್ಡನ್‌ ಟೆಂಪಲ್‌, ಹಾರಂಗಿ ಜಲಾಶಯ, ರಾಜಾ ಸೀಟ್‌, ಅಬ್ಬಿ ಫಾಲ್ಸ್‌.
ಪ್ರಯಾಣ ದರ: ವಯಸ್ಕರಿಗೆ: 1,200 ರೂ., ಮಕ್ಕಳಿಗೆ: 1,000 ರೂ.

www.ksrtc.karnataka.gov.in ವೆಬ್‌ಸೈಟ್‌ ಮೂಲಕ ಸೀಟ್‌ ಕಾಯ್ದಿರಿಸಬಹುದು.

ಕರಾವಳಿಯಲ್ಲೂ ಪ್ಯಾಕೇಜ್‌ ಲಭ್ಯ

ವಿಶೇಷ ಎಂದರೆ ಕರಾವಳಿಯಲ್ಲೂ ದಸರಾ ಟೂರ್‌ ಪ್ಯಾಕೇಜ್‌ ಅನ್ನು ಕೆಎಸ್‌ಆರ್‌ಟಿಸಿ ಘೋಷಿಸಿದೆ. ಅಕ್ಟೋಬರ್ 15ರಿಂದ 10 ದಿನಗಳ ಕಾಲ ಈ ಪ್ಯಾಕೇಜ್ ಜಾರಿಯಲ್ಲಿರಲಿದೆ. ಮಂಗಳೂರು ದಸರಾ ದರ್ಶನ, ಮಂಗಳೂರು- ಮಡಿಕೇರಿ, ಮಂಗಳೂರು- ಉಡುಪಿ, ಪಂಚದುರ್ಗಾ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಸ್ಥಳೀಯ ದೇಗುಲಗಳು

ಶ್ರೀ ಮಂಗಳಾದೇವಿ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲುಶ್ರೀ ಭಗವತಿ ದೇವಸ್ಥಾನ ಹಾಗೂ ಬೀಚ್‌, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನಗಳ ಪ್ರವಾಸ. ಪ್ರಯಾಣ ದರ: ಕರ್ನಾಟಕ ಸಾರಿಗೆಯಲ್ಲಿ: ವಯಸ್ಕರಿಗೆ: 400 ರೂ., ಮಕ್ಕಳಿಗೆ: 300 ರೂ., ವೋಲ್ವೋ ಬಸ್‌ನಲ್ಲಿ: ವಯಸ್ಕರಿಗೆ 500 ರೂ., ಮಕ್ಕಳಿಗೆ 400 ರೂ.

ಮಡಿಕೇರಿ ಪ್ರವಾಸ

ಮಡಿಕೇರಿ ರಾಜಾಸೀಟ್‌, ಅಬ್ಬಿ ಫಾಲ್ಸ್‌, ನಿಸರ್ಗಧಾಮ, ಗೋಲ್ಡನ್‌ ಟೆಂಪಲ್‌, ಹಾರಂಗಿ ಡ್ಯಾಮ್‌ ಪ್ರವಾಸ. ಪ್ರಯಾಣ ದರ: ಕರ್ನಾಟಕ ಸಾರಿಗೆ: ವಯಸ್ಕರಿಗೆ: 500 ರೂ., ಮಕ್ಕಳಿಗೆ: 400 ರೂ.

ಉಡುಪಿ ಪ್ರವಾಸ

ಮಾರಣಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನವಾಗಿ ವಾಪಸ್‌ ಮಂಗಳೂರು ಬಸ್‌ ನಿಲ್ದಾಣಕ್ಕೆ. ಪ್ರಯಾಣ ದರ: ಕರ್ನಾಟಕ ಸಾರಿಗೆ: ವಯಸ್ಕರಿಗೆ: 500 ರೂ., ಮಕ್ಕಳಿಗೆ: 400 ರೂ.

ಪಂಚದುರ್ಗಾ ದರ್ಶನ

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ವಾಪಸ್‌ ಮಂಗಳೂರು ಬಸ್‌ ನಿಲ್ದಾಣ. ಪ್ರಯಾಣ ದರ: ನಮ್ಮ ನಗರ ಸಾರಿಗೆಯಲ್ಲಿ: ವಯಸ್ಕರಿಗೆ: 400 ರೂ., ಮಕ್ಕಳಿಗೆ: 300 ರೂ.

ಹೆಚ್ಚಿನ ಮಾಹಿತಿಗೆ: 7760990702, 9663211553, 7760990720 ಸಂಖ್ಯೆಗೆ ಕರೆ ಮಾಡಬಹುದು. ಮುಂಗಡ ಟಿಕೆಟ್‌ ಅನ್ನು www.ksrtc.in. ವೆಬ್‌ಸೈಟ್‌ ಮೂಲಕ ಕಾಯ್ದಿರಿಸಬಹುದು.

ಇದನ್ನೂ ಓದಿ: Navaratri 2023: ಮಹಿಷಾಸುರನನ್ನು ಮಾತ್ರವಲ್ಲ, ಎಷ್ಟೊಂದು ರಕ್ಕಸರನ್ನು ಸಂಹರಿಸಿದ್ದಾಳೆ ದೇವಿ!

Exit mobile version