Site icon Vistara News

Navaratri: ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆಯುವ, ಭೇಟಿ ನೀಡಲೇಬೇಕಾದ ದೇಗುಲಗಳಿವು

navarathri

navarathri

ಬೆಂಗಳೂರು: ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಆರಂಭವಾಗಿದೆ. ಅಕ್ಟೋಬರ್‌ 15ರಂದು ನವರಾತ್ರಿ (Navaratri) ಶುರುವಾಗಲಿದೆ. ಮುಂದಿನ ಹತ್ತು ದಿನಗಳು ಆಚರಣೆ ಕಳೆಕಟ್ಟುತ್ತದೆ. ಕೆಟ್ಟದರ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸುವ ರಾಜ್ಯದ ವಿವಿಧ ದೇವಿ ದೇವಸ್ಥಾನಗಳ ಪರಿಚಯ ಇಲ್ಲಿದೆ.

ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು. ದಸರಾ ಹಬ್ಬ ಆಚರಣೆಗೆ ಮೈಸೂರು ವಿಶ್ವ ವಿಖ್ಯಾತ. ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಬಹಳ ಮಹತ್ವದ ಸ್ಥಾನ ಪಡೆದುಕೊಂಡಿದೆ. ಈ ದೇವಾಲಯವು ದೇಶದ 18 ಮಹಾ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಮಹಿಷ ಎಂಬ ರಾಕ್ಷಸನನ್ನು ಸಂಹರಿಸಿದ ಶಿವನ ಪತ್ನಿ ಪಾರ್ವತಿಯ ಅವತಾರವೆಂದು ನಂಬಲಾದ ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ ದೇವಿಗೆ ಈ ದೇಗುಲವು ಸಮರ್ಪಿತವಾಗಿದೆ. ಮೂಲತಃ ಚಿಕ್ಕ ದೇಗುಲವಾಗಿದ್ದ ಈ ಮಂದಿರ ಮೈಸೂರು ಮಹಾರಾಜರ ಆಶ್ರಯದಲ್ಲಿ ವಿಸ್ತಾರವಾಗಿ ಬೆಳೆಯಿತು ಎಂದು ಇತಿಹಾಸ ತಿಳಿಸುತ್ತದೆ. ಮೈಸೂರು ದಸರಾವನ್ನು ನಾಡಹಬ್ಬ ಎಂದೂ ಕರೆಯಲಾಗುತ್ತದೆ. ನವರಾತ್ರಿಯ ಸಮಯದಲ್ಲಿ, ದೇವಿಯ ಒಂಬತ್ತು ವಿಭಿನ್ನ ಅಂಶಗಳನ್ನು ಚಿತ್ರಿಸಲು ಇಲ್ಲಿ ದೇವಿಯನ್ನು 9 ವಿಧಗಳಲ್ಲಿ ಅಲಂಕರಿಸಲಾಗುತ್ತದೆ. ನವರಾತ್ರಿಯ 7ನೇ ದಿನದಂದು ಮೈಸೂರಿನ ಜಿಲ್ಲಾ ಖಜಾನೆಯಿಂದ ಮಹಾರಾಜರು ಕೊಡುಗೆಯಾಗಿ ನೀಡಿದ ಅಮೂಲ್ಯ ಆಭರಣಗಳನ್ನು ತಂದು ಚಾಮುಂಡಿ ದೇವಿಗೆ ಅರ್ಪಿಸಲಾಗುತ್ತದೆ. ವಿಜಯ ದಶಮಿಯಂದು ನಡೆಯುವ ಜಂಬೂ ಸವಾರಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಮೆರವಣಿಗೆ ಜತೆ ಸಾಗುವ ಕಲಾತಂಡಗಳು, ಕವಾಯತು, ಅಶ್ವ ಪಡೆ, ಪೋಲಿಸ್‌ ವಾದ್ಯಗೋಷ್ಠಿ, ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಭ ಚಿತ್ರಗಳು ಸಂಭ್ರಮವನ್ನು ಹೆಚ್ಚಿಸುತ್ತವೆ. ಅಂಬಾರಿಯಲ್ಲಿ ಚಾಮುಂಡಿ ದೇವರ ವಿಗ್ರಹವನ್ನು ಇಟ್ಟು ಪೂಜಿಸಲಾಗುತ್ತದೆ.

ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇಗುಲ ದೇಶದ ನಾನಾ ಕಡೆಗಳ ಭಕ್ತರನ್ನು ಸೆಳೆಯುತ್ತದೆ. ಪರಶುರಾಮನು ಸೃಷ್ಟಿಸಿದ ಮೋಕ್ಷದ ಏಳು ವಾಸಸ್ಥಾನಗಳಲ್ಲಿ ಇದು ಒಂದು ಎನ್ನುವ ನಂಬಿಕೆ ಇದೆ. ಈ ದೇವಾಲಯವು ಕಲೆ ಮತ್ತು ಜ್ಞಾನಕ್ಕೆ ಸಮರ್ಪಿತವಾಗಿದೆ. ಮೂಕಾಂಬಿಕಾ ದೇವಿಯನ್ನು ಮಾತು ಮತ್ತು ಅಕ್ಷರಗಳ ದೇವತೆ ಎಂದು ಪರಿಗಣಿಸಲಾಗುತ್ತದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಮಹಾನ್ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರಾಚಾರ್ಯರು ವಹಿಸಿದ್ದರು ಎಂದು ಹಿರಿಯರು ಹೇಳುತ್ತಾರೆ. ದೇವಾಲಯದಲ್ಲಿ ವಾರ್ಷಿಕ ಹಬ್ಬವನ್ನು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಆಚರಿಸಲಾಗುತ್ತದೆ.

ಶಾರದಾಂಬ ದೇವಸ್ಥಾನ, ಶೃಂಗೇರಿ

ಕರ್ನಾಟಕದ ಪ್ರಸಿದ್ದ ಧಾರ್ಮಿಕ ಸ್ಥಳವಾಗಿ ಗುರುತಿಸಿಕೊಂಡಿರುವ ಶೃಂಗೇರಿ ಶಾರದಾಂಬ ದೇವಸ್ಥಾನ ಪ್ರತಿನಿತ್ಯ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಅದರಲ್ಲೂ ನವರಾತ್ರಿ ಸಮಯದಲ್ಲಂತೂ ಭಕ್ತರ ಪ್ರವಾಹವೇ ಹರಿದು ಬರುತ್ತದೆ. ಇದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿದೆ. 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಈ ದೇಗುಲವನ್ನು ಸ್ಥಾಪಿಸಿದರು ಎನ್ನುತ್ತದೆ ಐತಿಹ್ಯ. ಶೃಂಗೇರಿ ಎಂದರೆ ಋಷಿಶೃಂಗ ಗಿರಿ ಎನ್ನುವ ಅರ್ಥವಿದೆ. ತುಂಗಾ ನದಿ ತೀರದಲ್ಲಿ ನೆಲೆಸಿರುವ ಈ ತಾಯಿ ಎಲ್ಲರ ಕಷ್ಟ ಪರಿಹರಿಸುತ್ತಾಳೆ ಎನ್ನುವ ನಂಬಿಕೆ ಭಕ್ತರದ್ದು.

ಮಕ್ಕಳ ವಿದ್ಯಾಭ್ಯಾಸದ ಆರಂಭಕ್ಕೂ ಮುನ್ನ ಪೋಷಕರು ತಾಯಿಯ ಆಶೀರ್ವಾದ ಪಡೆದು ಹೋಗುತ್ತಾರೆ. ಮಗುವಿಗೆ ಸರಿಯಾಗಿ ಮಾತನಾಡಲು ಬರದಿದ್ದರೆ ಅಥವಾ ಮಾತು ಬರುವುದು ತಡವಾದರೆ ತಾಯಿಯ ದರ್ಶನ ಮಾಡಿಸುತ್ತಾರೆ. ಇಲ್ಲಿ ನವರಾತ್ರಿಗೆ ವಿಶೇಷ ಪೂಜೆ ಹಾಗೂ ಅಲಂಕಾರಗಳು ನೆರವೇರುತ್ತವೆ. ನವರಾತ್ರಿಯಂದು ಶಾರದೆಗೆ ಪ್ರತಿದಿನವೂ ಒಂದೊಂದು ಅಲಂಕಾರ ನಡೆಯುತ್ತದೆ. ಹಂಸವಾಹನ ಅಲಂಕಾರ, ವೃಷಭವಾಹನ ಅಲಂಕಾರ, ಮಯೂರವಾಹನ ಅಲಂಕಾರ, ಗರುಡವಾಹನ ಅಲಂಕಾರ, ಇಂದ್ರಾಣಿ ಅಲಂಕಾರ, ವೀಣಾಶಾರದಾ ಅಲಂಕಾರ, ಮೋಹಿನಿ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಸಿಂಹವಾಹನ ಅಲಂಕಾರ, ಗಜಲಕ್ಷ್ಮೀ ಅಲಂಕಾರಗಳನ್ನು ಮಾಡಲಾಗುತ್ತದೆ. ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆ, ಮಹಾಭಿಷೇಕ, ಶತರುದ್ರಾಭಿಷೇಕ ನಡೆಯುತ್ತದೆ.

ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಹೊರನಾಡು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡಿನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿಯೂ ನವರಾತ್ರಿ ವಿಶೇಷವಾಗಿ ಆಚರಿಸಲಾಗುತ್ತದೆ. ಭದ್ರಾ ನದಿಯ ದಡದಲ್ಲಿರುವ ಇದನ್ನು ಆದಿಶಕ್ತಿಯಾತ್ಮಿಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಎಂದೂ ಕರೆಯುತ್ತಾರೆ. ಇಲ್ಲಿರುವ ವಿಗ್ರಹವನ್ನು 8ನೇ ಶತಮಾನದಲ್ಲಿ ಅಗಸ್ತ್ಯ ಋಷಿ ಸ್ಥಾಪಿಸಿದರು ಎಂದು ಪುರಾಣ ಹೇಳುತ್ತದೆ. ಹೊರನಾಡು ದೇಗುಲ ಅನ್ನದಾನದಕ್ಕೆ ಹೆಸರುವಾಸಿ. ಚತುರ್ಭುಜೆಯಾದ ಅನ್ನಪೂರ್ಣೇಶ್ವರಿ ದೇವಿ ಮೇಲಿನ ಎರಡೂ ಕೈಗಳಲ್ಲಿ ಶಂಖಚಕ್ರ, ಇನ್ನೊಂದು ಕೈಯಲ್ಲಿ ಶ್ರೀಚಕ್ರ, ನಾಲ್ಕನೇ ಕೈಯಲ್ಲಿ ಗಾಯತ್ರಿ ಹಿಡಿದಿರುವುದು ವಿಶೇಷ. ಇಲ್ಲಿಂದ ಶೃಂಗೇರಿಗೆ ಕೇವಲ 40 ಕಿ.ಮೀ ದೂರ.

ಬನಶಂಕರಿ ದೇವಸ್ಥಾನ, ಬಾದಾಮಿ

ಬನಶಂಕರಿ ಅಮ್ಮನವರ ದೇವಸ್ಥಾನವನ್ನು ಬನಶಂಕರಿ ದೇವಸ್ಥಾನ ಎಂದೂ ಕರೆಯುತ್ತಾರೆ. ಇದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಗುಹೆಯಿಂದ ಕೇವಲ 8 ಕಿ.ಮೀ. ದೂರದಲ್ಲಿದೆ. ಮಲಪ್ರಭಾ ನದಿಯ ದಡದಲ್ಲಿರುವ ಚೋಳಚಗುಡ್ಡ ಎಂಬ ಸಣ್ಣ ಹಳ್ಳಿಯಲ್ಲಿ ಈ ದೇಗುಲವಿದೆ. ಬನಶಂಕರಿ ದೇವಸ್ಥಾನವು ಮಾತಾ ಪಾರ್ವತಿಯ ಅವತಾರವಾದ ಬನಶಂಕರಿ ಅಮ್ಮನಿಗೆ ಸಮರ್ಪಿತವಾಗಿದೆ. ದೇವಾಲಯದ ದೇವತೆಯನ್ನು ಶಾಕಂಭರಿ ಅಥವಾ ವನಶಂಕರಿ ಅಥವಾ ಬನಶಕರಿ ಎಂದೂ ಕರೆಯಲಾಗುತ್ತದೆ. ಈ ದೇವಾಲಯವನ್ನು 17ನೇ ಶತಮಾನದಲ್ಲಿ ದ್ರಾವಿಡ ಶೈಲಿಯ ವಾಸ್ತುಶಿಲ್ಪದೊಂದಿಗೆ ನಿರ್ಮಿಸಲಾಗಿದೆ. ಸ್ಕಂದ ಪುರಾಣದಲ್ಲಿ ದೇವಿಯ ಉಲ್ಲೇಖವಿದೆ. ನವರಾತ್ರಿಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ದುರ್ಗಾ ಪರಮೇಶ್ವರಿ ದೇವಸ್ಥಾನ, ಕಟೀಲು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಸುಮಾರು 29 ಕಿ.ಮೀ ದೂರದಲ್ಲಿರುವ ಕಟೀಲಿನಲ್ಲಿ ಈ ದುರ್ಗಾ ಪರಮೇಶ್ವರಿ ದೇಗುಲವಿದೆ. ನಂದಿನಿ ನದಿ ದಡದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇಲ್ಲಿ ಭಕ್ತರಿಗೆ ದಿನಕ್ಕೆ ಎರಡು ಬಾರಿ ಅನ್ನ ಪ್ರಸಾದ ನೀಡಲಾಗುತ್ತದೆ. ಜತೆಗೆ ದೇವಾಲಯವು ಐದು ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮೂಲಕ ವಿದ್ಯಾ ದಾನವನ್ನೂ ಕೈಗೊಂಡಿದೆ. ಯಕ್ಷಗಾನ ಹರಕೆ ಸೇವೆ ದೇವಿಗೆ ಬಹಳ ಪ್ರಿಯ ಎನ್ನುವ ನಂಬಿಕೆ ಇದೆ. ಜತೆಗೆ ಭಕ್ತರು ದೇವಿಗೆ ಸೀರೆಯನ್ನೂ ಸಮರ್ಪಿಸುತ್ತಾರೆ. ಈ ದೇವಾಲಯದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಉತ್ಸವದ ಭಾಗವಾಗಿ ‘ಲಲಿತ ಪಂಚಮಿ’, ‘ಮಹಾನವಮಿ’, ‘ವಿಜಯದಶಮಿ’ ಹಾಗೂ ‘ಮಧ್ವ ಜಯಂತಿ’ಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: Mahisha Dasara : ಮಹಿಷ ದಸರಾಕ್ಕೆ ಷರತ್ತುಬದ್ಧ ಅನುಮತಿ, ಸಭಾ ಕಾರ್ಯಕ್ರಮ ಓಕೆ, ಸೆಕ್ಷನ್‌ 144 ಜಾರಿ

Exit mobile version