Site icon Vistara News

Navaratri: ಇಲ್ಲಿವೆ, ನವದುರ್ಗೆಯರು ಅಸುರರನ್ನು ಕೊಂದ ಕುತೂಹಲಕರ ಕತೆಗಳು!

Durga is killing mahishasura Indian culture images

ಜಗತ್ತಿನಲ್ಲಿ ಒಳಿತನ್ನು ಪೋಷಿಸಿ ಕೆಡುಕನ್ನು (Navaratri) ನಾಶ ಮಾಡುವುದಕ್ಕೆ ಕಾಲಕಾಲಕ್ಕೆ ದೈವಿಶಕ್ತಿಗಳು ಅವತಾರ ಅಥವಾ ಅವತರಣ ತಾಳುವುದು ಹಲವು ಸಂಸ್ಕೃತಿಗಳಲ್ಲಿ ಹಾಸುಹೊಕ್ಕಾಗಿದೆ. ದೇವ- ದೇವಿಯೆನ್ನದೆ ನಂಬಿದವರ ರಕ್ಷಣೆಗಾಗಿ ಧಾವಿಸುವ ಚಿತ್ರಣವೇ ದೈವೀ ಶಕ್ತಿಗಳಿಗೆ ಇರುವ ಮಹತ್ವವನ್ನು ಇಮ್ಮಡಿಕೊಳಿಸುತ್ತದೆ. ನವರಾತ್ರಿಯಲ್ಲಿ ಪೂಜೆಗೊಳ್ಳುವ ದೇವಿಯ ಕಥಾನಕದಲ್ಲಿ ಸರ್ವಶಕ್ತಿಯನ್ನು ಎದುರಿಸುವ ರಕ್ಕಸರ ಪಡೆಯೇ ಇದೆ. ತಮ್ಮ ದುಷ್ಟತನದಿಂದ ಲೋಕಕಂಟಕರಾಗಿ, ವಧಿಸಲ್ಪಟ್ಟ ಇವರೆಲ್ಲ ಯಾರು? ಇವರ ಕಥೆಗಳೇನು? ಇಲ್ಲಿದೆ ಅವರ ಪ್ರವರ.

ಮಹಿಷ

ಮೊದಲಿಗೆ ಈ ಅಸುರನ ಕಥೆಯಿಂದಲೇ ಪ್ರಾರಂಭಿಸೋಣ. ಬ್ರಹ್ಮ ಮಾನಸ ಪುತ್ರರಾದ ಕಶ್ಯಪ ಋಷಿಗಳಿಗೆ ಇಬ್ಬರು ಮಡದಿಯರು- ದಿತಿ ಮತ್ತು ಅದಿತಿ. ದಿತಿದೇವಿಯ ಮಕ್ಕಳೆಲ್ಲ ಅಸುರರು ಎನಿಸಿಕೊಂಡರೆ ಅತಿದಿ ದೇವಿಯ ಮಕ್ಕಳೆಲ್ಲ ಸುರರು ಎನಿಸಿದರು. ದಿತಿಗೆ ಮಾಲಿನಿ ಎಂಬ ಮಗಳಿದ್ದಳು. ಆಕೆಯನ್ನು ಪಾತಾಳಲೋಕದ ವಿದ್ಯುನ್ಮಾಲಿ ಎಂಬ ದೈತ್ಯನಿಗೆ ವಿವಾಹ ಮಾಡಲಾಗಿತ್ತು. ಮುನಿಯೊಬ್ಬನ ಶಾಪದಿಂದ, ಅತಿ ಬಲಾಢ್ಯನಾದ ಆದರೆ ಮಹಿಷ ರೂಪದ ಮಗನೊಬ್ಬ ಇವರಿಗೆ ಜನಿಸಿದ. ಇತ್ತ, ಸ್ವರ್ಗವನ್ನು ಗೆಲ್ಲುವುದಕ್ಕೆಂದು ಹೋದ ವಿದ್ಯುನ್ಮಾಲಿಯು ಇಂದ್ರನನ್ನು ಬಡಿದೋಡಿಸಿ, ಸ್ವರ್ಗವನ್ನು ಆಳತೊಡಗಿದ. ಅಲ್ಲಿಯೇ ಯುದ್ಧವೊಂದರಲ್ಲಿ ಆತ ಸತ್ತ ನಂತರ, ಮಹಿಷಾಸುರ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಸ್ತ್ರೀಯೊಬ್ಬಳಿಂದ ಮಾತ್ರವೇ ತನಗೆ ಸಾವು ಬರುವಂಥ ವರವನ್ನು ಪಡೆದ. ವರಬಲವನ್ನು ಹೊಂದಿದ ಮೇಲೆ ಸುರಸುರರನ್ನೆಲ್ಲ ತನ್ನ ಅಧೀನರಾಗಿಸಿಕೊಂಡು ಮೂರು ಲೋಕವನ್ನೂ ಆಳತೊಡಗಿದ.

ಮಹಿಷಾಸುರ ಕಾಟ ತಾಳಲಾರದ ದೇವತೆಗಳು ತ್ರಿಮೂರ್ತಿಗಳ ಮೊರೆ ಹೋದರು. ಬಲಾಢ್ಯನೂ ವರಬಲನೂ ಆದ ಮಹಿಷನನ್ನು ಮಣಿಸುವುದಕ್ಕಾಗಿ ತ್ರಿಮೂರ್ತಿಗಳು, ಇಂದ್ರ ಸೇರಿದಂತೆ ದೇವತೆಗಳ ತೇಜಸ್ಸಿನ ಭಾಗವೊಂದು ಚಂದ್ರಕಾಂತ ಶಿಲೆಯ ಮೇಲೆ ಬಿದ್ದು, ಅತೀವ ತೇಜಸ್ಸಿನ ಸ್ತ್ರೀ ಚೇತನವಾಗಿ ರೂಪುಗೊಂಡಿತು. ಶಿವನಿಂದ ತ್ರಿಶೂಲ, ವಿಷ್ಣುವಿನಿಂದ ಚಕ್ರ, ಬ್ರಹ್ಮನಿಂದ ಬ್ರಹ್ಮದಂಡ, ಇಂದ್ರನಿಂದ ವಜ್ರಾಯುಧ, ಪರ್ವತನಿಂದ ಸಿಂಹವಾಹನ- ಹೀಗೆ ಎಲ್ಲಾ ದೇವಾಧಿದೇವತೆಗಳು ವಿಧವಿಧದ ಶಕ್ತಿ, ತೇಜಸ್ಸು ಮತ್ತು ಆಯುಧಗಳನ್ನು ದೇವಿಗೆ ನೀಡಿದರು. ಅತೀವ ಶಕ್ತಿವಂತನಾದ ಮಹಿಷಾಸುರನನ್ನು ಮರ್ದಿಸಲು, ಲೋಕೋತ್ತರ ತೇಜಸ್ಸು, ಶಕ್ತಿ, ಶೌರ್ಯಗಳನ್ನು ಹೊಂದಿದ ಪ್ರಚಂಡಶಕ್ತಿಯೊಂದು ಹೀಗೆ ಆವಿರ್ಭವಿಸಿತು. ಇದೇ ಶಕ್ತಿಯಿಂದ ಮಹಿಷಾಸುರ ಮತ್ತವನ ಅಸುರ ಸೇನೆಯ ಸಂಹಾರ ನಡೆಯಿತು.

ಚಂಡ-ಮುಂಡ

ಮಹಿಷಾಸುರ ಕಾಲವಾದ ನಂತರ ದೇವತೆಗಳೆಲ್ಲ ನೆಮ್ಮದಿಯ ಉಸಿರು ಬಿಟ್ಟರು. ಆದರೆ ಕಾಲಾನಂತರದಲ್ಲಿ, ಮಾಹಿಷ್ಮತಿ ರಾಜ್ಯವನ್ನು ಶುಂಭ-ನಿಶುಂಭರೆಂಬ ರಕ್ಕಸರು ಆಳತೊಡಗಿದರು. ಅವರು ಸಾವಿರಾರು ವರ್ಷಗಳ ತಪಸ್ಸಿನಿಂದ ವರಸಿದ್ಧಿಯನ್ನು ಪಡೆದು, ಯಾರೂ ಹಿಡಿಯುವವರಿಲ್ಲದಷ್ಟು ಬಲಶಾಲಿಗಳಾದರು. ಸ್ವರ್ಗಕ್ಕೂ ಲಗ್ಗೆ ಇಟ್ಟು, ಮೂರು ಲೋಕಗಳನ್ನೂ ತಮ್ಮ ಅಂಕೆಯಲ್ಲಿ ಇರಿಸಿಕೊಂಡರು. ಚೋರ ಗುರುವಿಗೆ ಚಂಡಾಲ ಶಿಷ್ಯರೆಂಬಂತೆ, ಸಹಸ್ರಾರು ದಾನವರು ಇವರ ಬಳಿ ಸೇರಿ ತಮ್ಮ ಅಟಾಟೋಪ ನಡೆಸಿದ್ದರು. ಅವರಲ್ಲಿ ಚಂಡ-ಮುಂಡರೆಂಬ ಅಣ್ಣ ತಮ್ಮಂದಿರೂ ಸೇರಿದ್ದರು. ತಪಸ್ಸಿನ ಮೂಲಕ ದೇವರಿಂದ ವರ ಪಡೆದಿದ್ದ ಅವರು, ಶುಂಭ-ನಿಶುಂಭರ ಬಲಗೈಯಂತಿದ್ದರು.

ಈ ದಾನವರ ಉಪಟಳವನ್ನು ನಿವಾರಿಸುವಂತೆ ದೇವತೆಗಳೆಲ್ಲ ತ್ರಿಮೂರ್ತಿಗಳಲ್ಲಿ ಮೊರೆ ಇಟ್ಟರು. ತ್ರಿಮೂರ್ತಿಗಳು ಭಕ್ತಿಯಿಂದ ದೇವಿಯನ್ನು ಸ್ಮರಿಸಿಕೊಂಡಾಗ, ಇವರೆಲ್ಲದ ತೇಜಸ್ಸಿನಿಂದ ಸೃಷ್ಟಿಗೊಂಡಿದ್ದ ದೇವಿ ಮತ್ತೆ ಮೈದಳೆದಳು. ಎಲ್ಲ ದೈತ್ಯರನ್ನು ಸದೆ ಬಡಿಯುವುದಾಗಿ ತನ್ನನ್ನು ನಂಬಿದವರಿಗೆ ಅಭಯವಿತ್ತಳು. ಅಂತೆಯೇ ಕದಂಬ ವನದಲ್ಲಿ ಕೌಶಿಕೆಯಾಗಿ ಕಾಣಿಸಿಕೊಂಡು ವಿಹರಿಸತೊಡಗಿದಳು. ಮೊದಲಿಗೆ ಈ ದೇವಿಯನ್ನು ಕಂಡ ಚಂಡ-ಮುಂಡರು ಅವರ ಚೆಲುವಿಗೆ, ತೇಜಸ್ಸಿಗೆ ಮನಸೋತು, ಹೀಗೊಂದು ಸೌಂದರ್ಯದ ಖನಿಯಿದೆ. ಇಂಥ ಸೌಂದರ್ಯ ಮೂರು ಲೋಕದಲ್ಲಿ ಮತ್ತೆಲ್ಲೂ ಇರುವುದಕ್ಕೆ ಸಾಧ್ಯವಿಲ್ಲ. ಅವಳನ್ನೀಗ ನಿಮ್ಮ ವಶ ಮಾಡಿಕೊಳ್ಳಬೇಕು ಎಂಬ ವಿಚಾರವನ್ನು ತಮ್ಮ ಒಡೆಯರಾದ ಶುಂಭ-ನಿಶುಂಭರಿಗೆ ತಿಳಿಸಿದರು.

ಆಕೆಯ ಮನವಿಲಿಸಲೆಂದು ಸುಗ್ರೀವನೆಂಬ ಅಸುರನನ್ನು ಶುಂಭ ಮೊದಲಿಗೆ ಕಳುಹಿಸಿದ. ಆದರೆ ಆತನ ನಯವಾದ ಮಾತಿಗೆ ಪ್ರತ್ಯುತ್ತರ ನೀಡಿ, ತನ್ನೊಂದಿಗೆ ಯುದ್ಧದಲ್ಲಿ ಗೆದ್ದವರನ್ನು ಮಾತ್ರವೇ ವಿವಾಹ ಆಗುವುದಾಗಿ ಹೇಳಿ ಕಳುಹಿಸಿದಳು ಕೌಶಿಕೆ ಅಥವಾ ಅಂಬಿಕೆ. ಇದಕ್ಕೆ ಪ್ರತಿಯಾಗಿ ಶುಂಭ, ತನ್ನ ರಕ್ಕಸರನ್ನು ಒಬ್ಬೊಬ್ಬರನ್ನಾಗಿ ಆಕೆಯನ್ನು ಹಿಡಿದು ತರಲು ಕಳುಹಿಸಿದ. ಹೀಗೆ ಯುದ್ಧಕ್ಕೆ ಹೋದ ಚಂಡ-ಮುಂಡರ ಸಂಹಾರಕ್ಕೆ ಕೌಶಿಕೆಯು ಘೋರ ರೂಪ ಧರಿಸಿ ಕಾಳಿಯಾದಳು. ಅವರಿಬ್ಬರನ್ನೂ ವಧಿಸಿ ಚಾಮುಂಡಿ ಎನಿಸಿಕೊಂಡಳು.

ಧೂಮ್ರಲೋಚನ

ಕೌಶಿಕೆಯ ಮನವೊಲಿಸುವುದಕ್ಕೆ ಸಾಧ್ಯವಾಗದೇ ಹೋದಾಗ, ಶುಂಭ-ನಿಶುಂಭರು ಮೊದಲಿಗೆ ದೇವಿಯನ್ನು ಹಿಡಿದು ತರುವುದಕ್ಕೆ ಕಳುಹಿಸಿದ್ದು ಧೂಮ್ರಲೋಚನ ಅಥವಾ ಧೂಮ್ರಾಕ್ಷ ಎಂಬ ರಕ್ಕಸನನ್ನು. ಆತನೊಂದಿಗೆ ಸುಮಾರು ೬೦ ಸಾವಿರ ಅಸುರರ ಪಡೆಯೇ ಹಿಮ ಪರ್ವತದ ತುದಿಯಲ್ಲಿದ್ದ ಕೌಶಿಕೆಯತ್ತ ಮುನ್ನಡೆಯಿತು. ತನ್ನೊಡೆಯರಾದ ಶುಂಭ-ನಿಶುಂಭರ ಮಾತಿಗೆ ಒಪ್ಪಿ ಬಾರದಿದ್ದರೆ, ನಿನ್ನ ನೀಳ ಕೂದಲನ್ನು ಹಿಡಿದು ಎಳೆದು ಕರೆದೊಯ್ಯುವುದಾಗಿ ಧೂಮ್ರಲೋಚನ ಬೆದರಿಕೆ ಹಾಕುತ್ತಾನೆ ಕೌಶಿಕೆಗೆ.

ಮೊದಲಿಗೆ ಹೆದರಿದಂತೆ ತೋರಿಸಿಕೊಳ್ಳುವ ಅಂಬಿಕೆ, ಇಷ್ಟೊಂದು ಸೇನೆಯನ್ನು ನಾನೊಬ್ಬಳೇ ಎದುರಿಸುವುದು ಹೇಗೆ ಎಂದೆಲ್ಲಾ ಕೇಳುತ್ತಾಳೆ. ಆಕೆಯ ಮಾತಿನಿಂದ ಉತ್ತೇಜಿತನಾದ ಧೂಮ್ರಲೋಚನ, ದೇವಿಯನ್ನು ಹಿಡಿಯುವುದಕ್ಕಾಗಿ ಪರ್ವತವನ್ನು ಏರತೊಡಗುತ್ತಾರೆ. ಆತ ಏರಿ ಮೇಲೆ ಬರುತ್ತಿದ್ದಂತೆ, ಕೇವಲ ಒಂದು ಘನವಾದ ʻಹೂಂʼಕಾರದಿಂದ ರಕ್ಕಸನ್ನು ಬೂದಿ ಮಾಡಿಬಿಡುತ್ತಾಳೆ ಅಂಬಿಕೆ. ಆತನ ಬೆನ್ನಿಗಿದ್ದ ೬೦ ಸಾವಿರ ರಕ್ಕಸರು ಒಮ್ಮೆಲೆ ಮುಗಿಬಿದ್ದಾಗ, ದೇವಿ ಮತ್ತು ಆಕೆಯ ಸಿಂಹವಾಹನಗಳೆರಡೂ ಹೋರಾಟ ನಡೆಸಿ, ಎಲ್ಲ ದುಷ್ಟ ಶಕ್ತಿಗಳನ್ನೂ ನಿರ್ಮೂಲನ ಮಾಡುತ್ತಾರೆ.

ರಕ್ತಬೀಜ

ವರಗಳನ್ನು ಬೇಡುವಾಗೆಲ್ಲ ರಕ್ಕಸರು ಬುದ್ಧಿವಂತರೇ. ಎಲ್ಲರಿಗೂ ತಮಗೆ ಮರಣ ಬಾರದಿರಲಿ ಎಂಬ ಆಸೆಯೇ ಇದ್ದರೂ, ಅದನ್ನೇ ನೇರವಾಗಿ ದೇವರಲ್ಲಿ ಕೇಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಪರೋಕ್ಷವಾಗಿ ಅದೇ ಅರ್ಥ ಬರುವಂಥ ವರಗಳನ್ನು ಕೇಳುತ್ತಿದ್ದರು. ರಕ್ತಬೀಜನೆಂಬ ರಕ್ಕಸ ಇದಕ್ಕೆ ಉತ್ತಮ ಉದಾಹರಣೆ. ಆತನ ತನುವಿನಿಂದ ಒಂದು ಹನಿ ರಕ್ತ ನೆಲಕ್ಕೆ ಬಿದ್ದರೂ, ಆ ರಕ್ತವೇ ಬೀಜವಾಗಿ ಅವನಂಥದ್ದೇ ಆದ ಇನ್ನೊಂದು ರಕ್ಕಸನಿಗೆ ಜನ್ಮ ನೀಡುತ್ತಿತ್ತು. ಒಂದೊಂದು ಹನಿ ರಕ್ತ ನೆಲಕ್ಕೆ ಬಿದ್ದಂತೆಯೇ ಇನ್ನೊಂದು ರಕ್ತಬೀಜ ಜನ್ಮ ತಾಳುತ್ತಿದ್ದ. ಅಂತೂ ರಕ್ತಬೀಜನ ಶೇಷ ಅಳಿಯುತ್ತಲೇ ಇರಲಿಲ್ಲ. ಶುಂಭ-ನಿಶುಂಭರ ಪರವಾಗಿ ಕೌಶಿಕೆಯೊಂದಿಗೆ ಯುದ್ಧಕ್ಕೆ ನಿಂತ ಮತ್ತೊಬ್ಬ ದಾನವನೀತ

ಇಂದ್ರನಿಗೆ ಸಮಾನನಾದ ಶಕ್ತಿ-ಸಾಮರ್ಥ್ಯದಿಂದ ಯುದ್ಧ ಮಾಡುತ್ತಿದ್ದ ಈತನನ್ನು ಮಹಾಮಾಯೆಯ ಕೈಯಲ್ಲಿದ್ದ ಆಯುಧಗಳು ಘಾಸಿ ಮಾಡುತ್ತಿದ್ದಂತೆಯೇ ರಕ್ತ ನೆಲಕ್ಕೆ ಚೆಲ್ಲುತ್ತಿತ್ತು. ಇದರಿಂದ ಸಹಸ್ರಾರು ಸಂಖ್ಯೆಯಲ್ಲಿ ರಕ್ತಬೀಜರು ಉದ್ಭವವಾಗಿ, ಅಷ್ಟೇ ಸಾಮರ್ಥ್ಯದಿಂದ ಯುದ್ಧಕ್ಕೆ ತೊಡಗುತ್ತಿದ್ದರು. ಆತ ಪಡೆದಿದ್ದ ಈ ವರದ ಮಹಿಮೆಯಿಂದ ಲೋಕದಲ್ಲೆಲ್ಲಾ ರಕ್ತಬೀಜರೇ ತುಂಬಬಹುದೆಂಬ ಭೀತಿ ದೇವತೆಗಳನ್ನು ಕಾಡತೊಡಗಿತು. ಇದರಿಂದ ಪಾರಾಗುವ ದಾರಿ ಕಾಣದ ದೇವತೆಗಳು ಕಂಗಾಲಾದರು.

ಈ ರಕ್ಕಸರ ಸಂಹಾರಕ್ಕಾಗಿ ಈಗಾಗಲೇ ಹಲವಾರು ಅವತಾರಗಳನ್ನು ತಾಳಿದ್ದ ದೇವಿ, ರಕ್ತಬೀಜನ ಸಂಹಾರಕ್ಕಾಗಿ ತನ್ನ ಈವರೆಗಿನ ಎಲ್ಲಾ ರೂಪಗಳಿಗಿಂತ ಘೋರವಾದ ಕಾಳರಾತ್ರಿಯ ರೂಪವನ್ನು ತಳೆಯುತ್ತಾಳೆ. ನೋಡುವುದಕ್ಕೆ ಭೀಕರಾಕೃತಿಯ ಜೊತೆಗೆ ಅಸಾಧಾರಣ ಶಕ್ತಿಯನ್ನೂ ಹೊಂದಿದ್ದ ದೇವಿ, ರಕ್ತಬೀಜನೊಂದಿಗೆ ಯುದ್ಧ ಮುಂದುವರಿಸುತ್ತಾಳೆ. ಹೋರಾಟದಲ್ಲಿ ಒಂದು ಹನಿ ರಕ್ತವೂ ನೆಲಕ್ಕೆ ಬೀಳಲು ಬಿಡದಂತೆ ತನ್ನ ಬೃಹತ್ತಾದ ನಾಲಿಗೆಯನ್ನು ಹೊರಚಾಚಿ, ಅಸುರನ ರಕ್ತವನ್ನು ಕುಡಿಯುತ್ತಾಳೆ. ಆಕೆಯ ಆಯುಧಗಳ ಪ್ರಹಾರಕ್ಕೆ ರಕ್ತಬೀಜ ಹತನಾಗುತ್ತಾನೆ.

ಶುಂಭ-ನಿಶುಂಭ

ತಾವು ಈವರೆಗೆ ಅಟ್ಟಿದ ಎಲ್ಲಾ ದಾನವರು ಹಾಗೂ ಅಸುರ ಸೈನ್ಯ ದೇವಿಯ ಕೈಯಲ್ಲಿ ಸಾಯುತ್ತಿದ್ದಾರೆ ಎಂಬುದನ್ನು ತಿಳಿದ ಶುಂಭ-ನಿಶುಂಭರು ಕೆಂಡಾಮಂಡಲವಾಗುತ್ತಾರೆ. ಸಾವಿರಾರು ವರ್ಷಗಳ ಕಾಲ ಸೃಷ್ಟಿಕರ್ತ ಬ್ರಹ್ಮನ ಕುರಿತು ಘೋರ ತಪಸ್ಸನ್ನು ಮಾಡಿ, ಯಾವುದೇ ಪುರುಷರಿಂದ- ಮನುಷ್ಯನಾಗಲೀ ಪ್ರಾಣಿಯಾಗಲೀ, ತಮಗೆ ಸಾವಿಲ್ಲದಂಥ ವರವನ್ನು ಅವರು ಪಡೆದಿದ್ದರು. ಆದರೆ ಸ್ತ್ರೀಯೊಬ್ಬಳಿಂದ ಸಾವು ಬರಬಹುದು ಎಂಬ ಕಲ್ಪನೆ ಅವರಿಗೆ ಇರಲೇಇಲ್ಲ.

ತಮ್ಮ ನೆರವಿಗಿದ್ದ ಅಸುರರೆಲ್ಲಾ ಹತರಾದ ಮೇಲೆ, ದೇವಿಯೊಂದಿಗೆ ನೇರವಾಗಿ ಯುದ್ಧಕ್ಕಿಳಿದರು ಶುಂಭ-ನಿಶುಂಭರು. ಮೊದಲಿಗೆ ನಿಶುಂಭಾಸುರ ದೇವಿಯನ್ನು ಎದುರಿಸಿ ಸಾಯುತ್ತಾನೆ. ಈ ಯುದ್ಧದಲ್ಲಿ ಹಲವು ಅವತಾರಗಳನ್ನು ಎತ್ತಿದ್ದ ದೇವಿಯ ಶಕ್ತಿಸ್ವರೂಪಗಳು ಕೌಶಿಕೆಯೊಂದಿಗೆ ಯುದ್ಧಕ್ಕೆ ನಿಲ್ಲುವುದನ್ನು ನೋಡಿದ ಶುಂಭ, ಇದನ್ನು ಆಕ್ಷೇಪಿಸುತ್ತಾನೆ. ಆಕೆ ಒಬ್ಬಳೇ ತನ್ನೊಂದಿಗೆ ಹೋರಾಡಬೇಕೆಂದು ಸವಾಲೆಸೆಯುತ್ತಾನೆ. ಆಗ ಅವಳ ಎಲ್ಲಾ ಅವತಾರಗಳೂ ಸೇರಿ ಒಂದು ಶಕ್ತಿಯಾಗಿ ಮಾರ್ಪಟ್ಟು ಯುದ್ಧಕ್ಕಿಳಿಯುತ್ತವೆ. ನಡೆದಂಥ ಸಮರದಲ್ಲಿ ಶುಂಭಾಸುರ ಸತ್ತು, ಮೂರು ಲೋಕದ ಜನರೆಲ್ಲಾ ನೆಮ್ಮದಿಯ ಉಸಿರು ಬಿಡುವಂತಾಗುತ್ತದೆ.

ಇದನ್ನೂ ಓದಿ: Navaratri: ವಿದ್ಯಾದೇವತೆ ಸರಸ್ವತಿ ಪೂಜೆ; ಏನಿದರ ಮಹತ್ವ?

Exit mobile version