ಬೆಂಗಳೂರು: ನವರಾತ್ರಿಯ(Navaratri) ಸಂಭ್ರಮ ಎಲ್ಲೆಡೆ ಕಳೆಕಟ್ಟಿದೆ. ನಾಳೆ(ಅಕ್ಟೋಬರ್ 15)ಯಿಂದ ದೇವಿಯನ್ನು ವಿವಿಧ ರೂಪದಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಇನ್ನೊಂದು ವಿಶೇಷ ಎಂದರೆ 9 ದಿನಗಳಿಗೆ 9 ಬಣ್ಣದ ಬಟ್ಟೆ. ಒಂದೊಂದು ದಿನ ಒಂದೊಂದು ಬಣ್ಣದ ಬಟ್ಟೆ ಧರಿಸುವುದು ವಾಡಿಕೆ. ಹಾಗಾದರೆ ಈ ಬಣ್ಣದ ಮಹತ್ವವೇನು? ಯಾವ ದಿನ ಯಾವ ಬಟ್ಟೆ? ದೇವಿಯ ಯಾವ ಅವತಾರಕ್ಕೆ ಯಾವ ಬಟ್ಟೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಕಿತ್ತಳೆ
ಕಿತ್ತಳೆ ಬಣ್ಣ ಶಕ್ತಿ ಮತ್ತು ಉತ್ಸಾಹದ ಸಂಕೇತ. ಇದು ದೇವಿಯ ಕೂಷ್ಮಾಂಡಾ ಅವತಾರವನ್ನು ಪ್ರತಿನಿಧಿಸುತ್ತದೆ. ಕೂಷ್ಮಾಂಡಾ ದೇವಿ ಬೆಳಕಿನ ಸಂಕೇತ. ಹೀಗಾಗಿ ಭಕ್ತರು ಕಿತ್ತಳೆ ಬಣ್ಣದ ಬಟ್ಟೆ ಧರಿಸುತ್ತಾರೆ ಮತ್ತು ಕೇಸರಿ ಬಣ್ಣದ ಹೂವಿನ ಮೂಲಕ ದೇವಿಯನ್ನು ಆರಾಧಿಸಲಾಗುತ್ತದೆ.
ಬಿಳಿ
ಶ್ವೇತ ವರ್ಣ ಮಾತಾ ಬ್ರಹ್ಮಚಾರಿಣಿಯನ್ನು ಸಂಕೇತಿಸುತ್ತದೆ. ಶಾಂತಿ ಮತ್ತು ಸಕಾರಾತ್ಮಕತೆಯ ಸಂಕೇತ ಬಿಳಿ. ಸುಖ, ಸಮೃದ್ಧಿ, ವಿದ್ಯೆ ಕರುಣಿಸಲು ಭಕ್ತರು ಬ್ರಹ್ಮಚಾರಿಣಿಯನ್ನು ಪೂಜಿಸುತ್ತಾರೆ. ದುಂಡು ಮಲ್ಲಿಗೆ ಬ್ರಹ್ಮಚಾರಿಣಿಗೆ ಬಹು ಪ್ರಿಯವಾದ ಹೂ ಎಂದು ಪರಿಗಣಿಸಲಾಗಿದೆ.
ಕೆಂಪು
ನವರಾತ್ರಿಯ ಮೂರನೇ ದಿನ ಮಾತಾ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಈ ಅವತಾರದಲ್ಲಿ ದೇವಿ ಕೆಂಪು ಬಣ್ಣದ ಉಡುಗೆ ಧರಿಸಿರುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಕೆಂಪು ಧೈರ್ಯ ಮತ್ತು ಶಕ್ತಿಯ ಸಂಕೇತ.
ನೀಲಿ
ಕಡು ನೀಲಿ ಬಣ್ಣವು ಕಾಳರಾತ್ರಿ ದೇವಿಗೆ ಸಂಬಂಧಿಸಿದ ಬಣ್ಣ. ತಾಯಿ ಕಾಳರಾತ್ರಿಗೆ ಕಡು ನೀಲಿ ಬಣ್ಣವನ್ನು ಮತ್ತು ಹೂವುಗಳನ್ನು ಅರ್ಪಿಸುವವರನ್ನು ಶತ್ರುಗಳು ಮತ್ತು ದುಷ್ಟ ಶಕ್ತಿಗಳಿಂದ ತಾಯಿಯು ರಕ್ಷಿಸುತ್ತಾಳೆ ಎನ್ನುವ ನಂಬಿಕೆ ಇದೆ.
ಹಳದಿ
ಕಾರ್ತಿಕೇಯನನ್ನು ತನ್ನ ಮಡಿಲಿನಲ್ಲಿ ಕೂರಿಸಿಕೊಂಡಿರುವ ಸ್ಕಂದಮಾತೆಯ ನೆಚ್ಚಿನ ಬಣ್ಣ ಹಳದಿ. ಸ್ಕಂದ ಮಾತೆ ಯಾವತ್ತೂ ಹಳದಿ ಬಟ್ಟೆಯನ್ನು ಧರಿಸಲು ಇಷ್ಟ ಪಡುತ್ತಾಳೆ. ತಾಯಿಯ ಪಾಲನಾತ್ಮಕ ಗುಣವನ್ನು ಹಳದಿ ಪ್ರತಿನಿಧಿಸುತ್ತದೆ. ಆದ್ದರಿಂದ ಭಕ್ತರು ಸ್ಕಂದಮಾತೆಗೆ ಹಳದಿ ಪುಷ್ಪಗಳನ್ನು ಅರ್ಪಿಸಬೇಕು ಎಂದು ಸಲಹೆ ನೀಡಲಾಗುತ್ತದೆ.
ಹಸಿರು
ಹೃದಯ ಮತ್ತು ಆತ್ಮವನ್ನು ಶುದ್ಧೀಕರಿಸುವ ಗೌರಿ ದೇವಿಯನ್ನು ಪ್ರತಿನಿಧಿಸುವುದು ಹಸಿರು ಬಣ್ಣ. ಹಸಿರು ಬಣ್ಣದ ಬಟ್ಟೆಯನ್ನು ಧರಿಸಿ ಗೌರಿಯನ್ನು ಆರಾಧಿಸಿದರೆ ವೈವಾಹಿಕ ಜೀವನ ಸುಗಮವಾಗುತ್ತದೆ ಎನ್ನುವ ನಂಬಿಕೆ ಇದೆ.
ಬೂದು
ಮಾತಾ ಕಾತ್ಯಾಯಿನಿಗೆ ಬೂದು ಬಣ್ಣವನ್ನು ಸಮರ್ಪಿಸಲಾಗಿದೆ. ಅವಳನ್ನು ಯುದ್ಧದ ದೇವತೆ ಎಂದು ಪರಿಗಣಿಸಲಾಗುತ್ತದೆ. ಮಾತಾ ಕಾತ್ಯಾಯನಿಯನ್ನು ಪೂಜಿಸುವಾಗ ಬೂದು ಬಣ್ಣದ ಬಟ್ಟೆಗಳನ್ನು ಧರಿಸಿ. ಈ ಬಣ್ಣ ದುಶ್ಚಟಗಳನ್ನು ತೊಡೆದುಹಾಕುತ್ತದೆ ಮತ್ತು ಧನಾತ್ಮಕತೆಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.
ನೇರಳೆ
ದುರ್ಗಾ ದೇವಿಗೆ ಮೀಸಲಾಗಿರುವ ದಿನದಂದು ಆಯುಧ ಪೂಜೆ ಸಹ ಮಾಡಲಾಗುತ್ತದೆ. ಆ ದಿನ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಿ ದೇವಿಯನ್ನು ಪೂಜಿಸಿದರೆ ಉತ್ತಮ.
ಗುಲಾಬಿ
ಗುಲಾಬಿ ಬಣ್ಣವು ಸಂತೋಷ, ಸಂತೃಪ್ತಿ ಮತ್ತು ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಶೈಲಪುತ್ರಿ ದೇವಿಯು ಹಿಮಾಲಯ ರಾಜನ ಮಗಳು. ಅವಳು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾಳೆ ಎಂದು ಪುರಾಣ ಹೇಳುತ್ತದೆ. ಭಕ್ತರು ಶೈಲಪುತ್ರಿ ದೇವಿಗೆ ಗುಲಾಬಿ ಬಣ್ಣದ ಹೂವುಗಳನ್ನು ಅರ್ಪಿಸುವುದು ವಾಡಿಕೆ.
ಇದನ್ನೂ ಓದಿ: Navaratri 2023: ದಸರಾ ರಜೆಯಲ್ಲಿ ಇಲ್ಲೆಲ್ಲ ಸುತ್ತಾಡಿ; ಕೆಎಸ್‌ಆರ್‌ಟಿಸಿ ಟೂರ್ ಪ್ಯಾಕೇಜ್ ಘೋಷಣೆ