ನವರಾತ್ರಿಯ (Navaratri) ಹತ್ತನೇ ದಿನವಾದ ವಿಜಯದಶಮಿಯ ದಿನಕ್ಕೆ ರಾಮಾಯಣದ ಕಥೆಯೂ ನಂಟು ಹಾಕಿಕೊಂಡಿದೆ. ಸ್ವರ್ಣಲಂಕೆಯ ಅಧೀಶ ರಾವಣನನ್ನು ಶ್ರೀರಾಮ ಯುದ್ಧದಲ್ಲಿ ಮಣಿಸಿದ ಎನ್ನುತ್ತವೆ ಪುರಾಣಗಳು. ಹಾಗಾಗಿ ದೇಶದ ಹಲವೆಡೆ ವಿಜಯದಶಮಿಯಂದು ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿಯನ್ನು ದಹಿಸಲಾಗುತ್ತದೆ. ಕೆಡುಕಿನ ಮೇಲೆ ಒಳಿತಿನ ಜಯ ಎಂಬುದನ್ನು ಈ ರೀತಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗುತ್ತದೆ.
ಇದಕ್ಕಾಗಿ ಸಾಮಾನ್ಯವಾಗಿ ಆಯಾ ಊರುಗಳ ದೊಡ್ಡ ಮೈದಾನಗಳಲ್ಲಿ ರಾವಣ ದಹನದ ಕಾರ್ಯಕ್ರಮವನ್ನು ಇರಿಸಿಕೊಳ್ಳುವುದು ವಾಡಿಕೆ. ಹತ್ತು ತಲೆಯ ದೈತ್ಯನ ಪ್ರತಿಕೃತಿಯ ಜೊತೆಗೆ, ಸದಾ ನಿದ್ರಿಸುವ ಕುಂಭಕರ್ಣ ಮತ್ತು ಇಂದ್ರಜಿತು ಅಥವಾ ಮೇಘನಾದನ ಬೃಹದಾಕಾರದ ಬೊಂಬೆಗಳನ್ನೂ ಇರಿಸಲಾಗುತ್ತದೆ. ಒಳಗೆ ಸುಡುವಂಥ ವಸ್ತುಗಳನ್ನು, ಹೆಚ್ಚಿನ ಬಾರಿ ಪಟಾಕಿಗಳನ್ನು, ತುಂಬುವುದು ಪದ್ಧತಿ. ಇವುಗಳಿಗೆ ಬೆಂಕಿಯ ಬಾಣವನ್ನು ಬಿಟ್ಟು, ದಹಿಸುವುದನ್ನು ನೋಡಲು ಸಾವಿರಾರು ಜನ ಸೇರುತ್ತಾರೆ. ಮಕ್ಕಳಿಗಂತೂ ಇದೊಂದು ಮೋಜಿನ ದೃಶ್ಯ. ವಿಜಯದಶಮಿಯ ಆಚರಣೆ ಮಾಡುವುದು ಸರಿ, ಆದರೆ ಹೀಗೆ ರಾಮಲೀಲೆಯನ್ನು ಆಚರಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷಾ ಕ್ರಮಗಳು ಯಾವುವು?
ದೂರ ಇರಿ
ಪಟಾಕಿಯ ಸದ್ದಿಗೆ ಮಕ್ಕಳು, ಮುದುಕರೆನ್ನದೆ ಎಲ್ಲರ ಉತ್ಸಾಹವೂ ಗರಿಗೆದರುವುದು ಸಾಮಾನ್ಯ. ಆದರೆ ಇದನ್ನು ದೂರದಿಂದಲೇ ವೀಕ್ಷಿಸುವುದು ಕ್ಷೇಮ. ಇದಕ್ಕಾಗಿ ಪಟಾಕಿ ಸಿಡಿಯುವ ಸ್ಥಳದ ಹತ್ತಿರಕ್ಕೆ ಹೋಗುವುದು ಸೂಕ್ತವಲ್ಲ. ಅಪಾಯವನ್ನು ಆಹ್ವಾನಿಸಿದಂತಾದರೆ ಕಷ್ಟ.
ಜನ ಹೆಚ್ಚಾಗುತ್ತಿದ್ದರೆ ನಿರ್ಗಮಿಸಿ
ಮೈದಾನಕ್ಕೆ ಅಪಾರ ಪ್ರಮಾಣದಲ್ಲಿ ಜನ ಸೇರುತ್ತಿದ್ದಾರೆಂದು ಭಾಸವಾದರೆ, ಸ್ಥಳದಿಂದ ನಿರ್ಗಮಿಸಿ. ರಾವಣನ ಗೊಂಬೆಯನ್ನು ಸಾಮಾನ್ಯವಾಗಿ ದೊಡ್ಡದಾಗಿಯೇ ನಿರ್ಮಿಸಿರುತ್ತಾರಾದ್ದರಿಂದ, ಮೈದಾನದ ಹೊರಗೂ ಕಾಣುವಂತೆ ಇರುತ್ತದೆ. ಸಮೀಪದ ಮನೆಯವರ ಪರಿಚಯವಿದ್ದರೆ, ಅವರ ಮನೆಗಳ ಮಹಡಿಯಿಂದ ವೀಕ್ಷಿಸುವುದು ಇನ್ನೂ ಉತ್ತಮ. ಕಾರಣ, ಜನ ಅಪಾರ ಪ್ರಮಾಣದಲ್ಲಿ ಸೇರಿದಾಗ ಕಾಲ್ತುಳಿತದ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ನಿರ್ಗಮನದ ದಾರಿ ಗಮನಿಸಿ
ಒಂದೊಮ್ಮೆ ಇದಕ್ಕಾಗಿ ಪೆಂಡಲ್‌ಗಳನ್ನು ಹಾಕಿದ್ದರೆ, ನಿರ್ಗಮನದ ದ್ವಾರಗಳನ್ನು ಗಮನಿಸಿ. ಸಿಡಿಮದ್ದುಗಳು, ಬೆಂಕಿ ಇತ್ಯಾದಿಗಳು ಇರುವ ಸ್ಥಳದಲ್ಲಿ ಅವಘಡಗಳು ಸಂಭವಿಸಲು ಸಣ್ಣ ಕಾರಣವೂ ಸಾಕಾಗುತ್ತದೆ
ಮಾಸ್ಕ್ ಧರಿಸಿ
ಹೆಚ್ಚಿನ ಹೊಗೆ ಬರುವಂಥ, ಧೂಳು ಇರುವಂಥ ಜಾಗಕ್ಕೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಇದರಿಂದ ಧೂಳು, ಹೊಗೆ ಮಾತ್ರವೇ ಅಲ್ಲ, ಜನದಟ್ಟಣೆ ಇರುವ ಜಾಗದಲ್ಲಿ ಅಂಟಿಕೊಳ್ಳುವ ವಾಯುಜನ್ಯ ಸೋಂಕುಗಳನ್ನು ತಡೆಯಲೂ ನೆರವಾಗುತ್ತದೆ.
ಲೇಸರ್ ಬಳಕೆ
ಇತ್ತೀಚಿನ ವರ್ಷಗಳಲ್ಲಿ ಕೆಲವೆಡೆ ಲೇಸರ್ ಬಳಕೆ ಮಾಡಲಾಗುತ್ತಿದೆ. ನಿಜವಾದ ಪ್ರತಿಕೃತಿಯನ್ನು ದಹಿಸುವಾಗ ಅಪಾರ ಪ್ರಮಾಣದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಸೃಷ್ಟಿಯಾಗುತ್ತದೆ. ಇವುಗಳನ್ನು ತಡೆಯುವ ಉದ್ದೇಶದಿಂದ, ಲೇಸರ್ ಬೆಳಕಿನಲ್ಲೇ ರಾವಣ, ಮೇಘನಾದ ಮತ್ತು ಕುಂಭಕರ್ಣರನ್ನು ಸೃಷ್ಟಿ ಮಾಡಿ, ಲೇಸರ್ ಬಾಣದಿಂದಲೇ ಬೆಂಕಿ ಹಚ್ಚಲಾಗುತ್ತದೆ. ಇದು ಎಲ್ಲ ದೃಷ್ಟಿಯಿಂದಲೂ ಸುರಕ್ಷಿತ. ಆದರೆ ಪಟಾಕಿಯ ನೈಜ ಗದ್ದಲ, ಸಿಡಿಮದ್ದಿನ ಬೆಳಕಿನ ವೈಭವ ಬೇಕಿದ್ದವರಿಗೆ ನಿರಾಸೆಯಾದೀತು.
ಸಂಘಟಕರಲ್ಲಿ ಜಾಗರೂಕತೆ
ಇಂಥ ಕಾರ್ಯಕ್ರಮವನ್ನು ಸಂಘಟಿಸುವಾಗ ರೈಲು ಹಳಿಯಿಂದ ದೂರ ವ್ಯವಸ್ಥೆ ಮಾಡಬೇಕು. ಅನಗತ್ಯವಾಗಿ ವಿದ್ಯುತ್ ಬಳಕೆ ಸಲ್ಲದು. ಪೆಂಡಲ್‌ನಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ವಯರ್‌ಗಳು ಹಾದು ಹೋಗುತ್ತಿದ್ದರೆ ಕಿಡಿ ಹೊತ್ತಿಕೊಳ್ಳಲು ಹೆಚ್ಚಿನ ಕಾರಣಗಳು ದೊರೆತಂತಾಗುತ್ತವೆ. ಈ ಕಾರ್ಯಕ್ರಮದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿದಿರಬೇಕು. ಪೊಲೀಸರೊಂದಿಗೆ ಸೂಕ್ತ ಸಹಕಾರವನ್ನೂ ತೋರಬೇಕಾಗುತ್ತದೆ.
ಇದನ್ನೂ ಓದಿ: Navaratri: ನವರಾತ್ರಿಯ 9 ದಿನ ದುರ್ಗೆಯ 9 ರೂಪ! ಏನಿದರ ಹಿನ್ನೆಲೆ?