ಅಲಕಾ ಕೆ.
ಬೆಂಗಳೂರು: ನವರಾತ್ರಿಯೆಂದರೆ(Navaratri) ಶಕ್ತಿ ದೇವತೆಯ ಆರಾಧನಾ ಪರ್ವ. ಆರಾಧನೆ ಎಂಬುದು ಅವರವರ ಭಕುತಿಗೆ ಸಲ್ಲುವಂಥದ್ದು. ಉಪವಾಸವಿದ್ದು ಆರಾಧಿಸಿದರೂ, ಬಗೆಬಗೆಯ ಪ್ರಸಾದಗಳನ್ನು ಸ್ವೀಕರಿಸಿದರೂ, ಅವೆಲ್ಲ ಸಲ್ಲುವುದು ದೇವರಿಗೇ! ದಿನಕ್ಕೊಂದು ಬಣ್ಣಗಳನ್ನು ತೊಟ್ಟು ನಲಿದರೂ, ಕೋಲು ಹಿಡಿದು ಕುಣಿದರೂ, ಅವೆಲ್ಲ ದೇವರ ಸೇವೆಯೇ. ಒಂದು ಕುಡುತೆ ಹಾಲು, ಒಂದು ಅನ್ನದ ಅಗುಳು ಸಹ ದೇವರ ಹೊಟ್ಟೆ ತುಂಬಿಸಬಲ್ಲದು ಎಂಬುದನ್ನು ಭಗವಂತನೇ ಸಾಧಿಸಿದ ಕಥೆಗಳು ಅನನ್ಯ ಎನಿಸುವುದು ಈ ಕಾರಣಕ್ಕೆ. ಹಾಗಾಗಿ ಭಾವ-ಭಕುತಿಗಳು ದೇವರಷ್ಟೇ ನಿರ್ಗುಣ, ನಿರಾಕಾರ ತತ್ವಗಳು. ಇದೇ ಹಿನ್ನೆಲೆಯಲ್ಲಿ ಮಹತ್ವ ಪಡೆಯುವುದು ಕರಾವಳಿಯಲ್ಲಿ ಆಚರಣೆಯಲ್ಲಿರುವ ಪಿಲಿನಲಿಕೆ ಅಥವಾ ಹುಲಿಕುಣಿತದ ಆರಾಧನೆಗಳು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಸುಮ್ಮನೊಮ್ಮೆ ಸುತ್ತಾಡಿದರೆ ಸಾಕು, ಆರಾಧನೆಗಳಿಗಿರುವ ಮಹತ್ವ ಕಣ್ಣಿಗೆ ಎಸೆಯುತ್ತದೆ. ನಾಗರ ಕಲ್ಲುಗಳು, ದೇವಿಯ ದೇವಾಲಯಗಳು, ಕೋಲಗಳು, ಯಕ್ಷಗಾನ, ಹುಲಿವೇಷ… ಎಲ್ಲವೂ ಅಲ್ಲಿನ ಆರಾಧನೆಯ ಭಿನ್ನ ಸ್ವರೂಪಗಳು. ಕಟೀಲು, ಮಂದರ್ತಿ, ಕೊಲ್ಲೂರು, ಬಪ್ಪನಾಡು, ಪೊಳಲಿ, ಅಂಬಲಪಾಡಿ, ಮಂಗಳಾದೇವಿ ಮುಂತಾದವು ಇಲ್ಲಿನ ಪ್ರಸಿದ್ಧ ಶಕ್ತಿಪೀಠಗಳು. ಈ ದೇವಿಯರ ಸಮ್ಮುಖದಲ್ಲಿ ಹರಕೆಯ ರೂಪದಲ್ಲಿ ನವರಾತ್ರಿಯಲ್ಲಿ ಹುಲಿವೇಷ ಹಾಕುವುದು ದೀರ್ಘಕಾಲದಿಂದ ನಡೆದು ಬಂದ ಕ್ರಮ. ಇಷ್ಟಾರ್ಥ ಸಿದ್ಧಿಗಾಗಿ, ಯಾವುದೋ ಬೇಡಿಕೆಗೆ ಪ್ರತಿ ಹರಕೆಗಾಗಿ, ಎಂದೋ ತೊಟ್ಟ ಸಂಕಲ್ಪಕ್ಕಾಗಿ, ಸೇವಾರ್ಥವಾಗಿ- ಹೀಗೆ ಹುಲಿವೇಷ ಹಾಕುವುದಕ್ಕೆ ಕಾರಣಗಳು ಸಹ ಅವರವರ ಭಾವ-ಭಕುತಿಗೆ ಬಿಟ್ಟಿದ್ದು.
ಎಷ್ಟು ಹಳೆಯದು?
ಪಿಲಿನಲಿಕೆ (ತುಳುವಿನಲ್ಲಿ) ಅಥವಾ ಹುಲಿ ಕುಣಿತದ ಪದ್ಧತಿ ಎಂದಿನಿಂದ ಆರಂಭವಾಯ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದು ಕಷ್ಟ. ಸ್ವಾತಂತ್ರ್ಯಪೂರ್ವದಿಂದಲೇ ಈ ಕ್ರಮ ಚಾಲ್ತಿಯಲ್ಲಿರುವಂಥ ಮಾಹಿತಿ ದೊರೆಯುತ್ತದೆ. ತುಳುನಾಡಿನಲ್ಲಿ ಹೆಚ್ಚಾಗಿ ಆರಾಧಿಸಲ್ಪಡುವ ಶಕ್ತಿ ದೇವತೆಯ ವಾಹನ ಹುಲಿ. ಇದೇ ಹಿನ್ನೆಲೆಯಲ್ಲಿ ದೇವಿಯ ಸೇವೆಗೆ ಹುಲಿವೇಷ ಮಾಡುವುದು ಪ್ರಚಲಿತಕ್ಕೆ ಬಂದಂತೆ ಕಾಣುತ್ತದೆ. ಈ ವೇಷದ ಸೇವೆಯನ್ನು ನವರಾತ್ರಿಯಲ್ಲಿ ಹೆಚ್ಚಾಗಿ ಮಾಡಿದರೂ ಕೃಷ್ಣ ಜನ್ಮಾಷ್ಟಮಿಯಲ್ಲೂ ನಡೆಸಲಾಗುತ್ತದೆ.
ವೇಷದ ಸಿದ್ಧತೆ ಹೇಗೆ?
ಇದೊಂದು ಸರಳವಲ್ಲದ ಕೆಲಸ! ಹಿಂದಿನ ಕಾಲದಲ್ಲಿ ಮೊದಲಿಗೆ ಬಣ್ಣವನ್ನು ತಯಾರಿಸಿಕೊಳ್ಳುತ್ತಿದ್ದರು. ಇದ್ದಿಲು, ಅರಿಶಿನಗಳನ್ನು ಒಟ್ಟಿಗೆ ಅರೆದು, ಆ ಬಣ್ಣಕ್ಕೆ ಹೊಳಪು ನೀಡುವುದಕ್ಕೆ ಮೊಟ್ಟೆಯ ಚಿಪ್ಪಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸುತ್ತಿದ್ದರು. ಹೀಗೆ ತಯಾರಾಗುವ ಬಣ್ಣಗಳನ್ನು ಮೈಗೆ ಹಚ್ಚಿದಾಗ ವಿಪರೀತ ಉರಿಯ ಅನುಭವ ನೀಡುತ್ತಿದ್ದವು. ಈಗ ಬೇರೆ ರೀತಿಯ ಬಣ್ಣಗಳನ್ನೂ ಬಳಸಲಾಗುತ್ತದೆ. ಸಾಮಾನ್ಯವಾಗಿ ಕಡುಕಪ್ಪು ಬಣ್ಣದ ಚಲ್ಲಣ, ಉಳಿದ ಮೈಗೆಲ್ಲಾ ಹಳದಿ, ಬಿಳಿ ಮತ್ತು ಕಪ್ಪು ಬಣ್ಣಗಳ ಲೇಪ, ಮುಖಕ್ಕೆ ಬಣ್ಣ ಹಾಕುವವರೂ ಇದ್ದಾರೆ, ಮುಖವಾಡ ತೊಡುವವರೂ ಇದ್ದಾರೆ, ಜೊತೆಗೊಂದು ಬಾಲ. ಇವಿಷ್ಟು ಹುಲಿಗಳ ವೇಷ.
ಹುಲಿ ಬಣ್ಣವೇ ವಿಶಿಷ್ಟ
ಈ ಬಣ್ಣ ಬರೆಯುವುದೇ ದೊಡ್ಡ ಕತೆ. ಪಟ್ಟೆ ಹುಲಿ, ಚಿಟ್ಟೆ (ಚುಕ್ಕಿ) ಹುಲಿ, ಕರಿ ಹುಲಿ ಎಂಬಂಥ ಬಗೆಗಳಲ್ಲಿ ವೇಷ ಮಾಡಲಾಗುತ್ತದೆ. ಮೊದಲೆಲ್ಲಾ ಹುಲಿವೇಷ ಮಾಡುವವರು ಉಪವಾಸ ವ್ರತಗಳನ್ನೆಲ್ಲಾ ಮಾಡಬೇಕಿತ್ತು. ಬಣ್ಣಕ್ಕಾಗಿ ಆರೆಂಟು ತಾಸು ಕೈಯಗಲಿಸಿ ನಿಂತೇ ಇರಬೇಕಿತ್ತು. ನಂತರ ಹಾಕಿದ ಬಣ್ಣ ಒಣಗಬೇಕು. ಆವರೆಗೆ ಆಹಾರ-ಶೌಚಗಳ ಪರಿವೆಯನ್ನೂ ಬಿಡಬೇಕಿತ್ತು. ಆದರೀಗ ಬಣ್ಣ ಹಾಕುವ ಪ್ರಕ್ರಿಯೆ ಮೊದಲಿನಷ್ಟು ದೀರ್ಘವಲ್ಲದೆ ಚುರುಕಾಗಿದೆ. ಆದರೆ ಒಮ್ಮೆ ಹಾಕಿದ ಬಣ್ಣವನ್ನು ಒಂಬತ್ತು ದಿನಗಳ ಪರ್ಯಂತ ತೆಗೆಯುವುದಿಲ್ಲ! ಹೌದು, ಒಂಬತ್ತು ದಿನಗಳು ಈ ಬಣ್ಣ ಮೈಮೇಲೇ ಇರುತ್ತದೆ. ವೇಷ ಕಳಚುವಾಗ ಸಂಗ್ರಹವಾದ ಹಣದ ಒಂದು ಪಾಲನ್ನು ದೇವಿಗೆ ಕಾಣಿಕೆಯಾಗಿ ಒಪ್ಪಿಸಬೇಕು.
ಜನಪದೀಯ ಹಿನ್ನೆಲೆ
ಹುಲಿ ಕುಣಿತಕ್ಕಾಗಿಯೇ ಕೆಲವು ಜನಪದೀಯ ಲಯಗಳಿವೆ. ಇದಕ್ಕಾಗಿ ಬಳಕೆಯಲ್ಲಿರುವುದು ತಾಸೆ ಅಥವಾ ಡೊಳ್ಳು. ಈ ತಾಸೆಯ ಲಯಕ್ಕೆ ಸರಿಯಾಗಿ ಹುಲಿ ವೇಷಗಳು ನಿಧಾನ ಅಥವಾ ವೇಗದ ಹೆಜ್ಜೆ ಹಾಕಬೇಕು. ಇದರಲ್ಲಿ ಎರಡು ರೀತಿ- ಮೊದಲನೆಯದು, ಲಯಕ್ಕೆ ತಕ್ಕ ಹೆಜ್ಜೆ; ಎರಡನೆಯದು, ವಿಧವಿಧದ ಕಸರತ್ತುಗಳು. ಅಂದರೆ ನೆಲದ ಮೇಲಿದ್ದ ನೋಟನ್ನು ಹಿಂಬದಿಯಿಂದ ಬಾಗಿ ಬಾಯಲ್ಲಿ ಕಚ್ಚಿ ತೆಗೆಯುವುದು, ಸೋಡಾ ಬಾಟಲಿಯ ಮುಚ್ಚಳ ತೆಗೆಯುವುದು, ಅಕ್ಕಿ ಮೂಟೆಯನ್ನು ಬಾಯಲ್ಲಿ ಕಚ್ಚಿ ಎತ್ತಿಕೊಳ್ಳುವುದು, ಗಿರಕಿ ಹೊಡೆಯುವುದು- ಇಂಥ ಹಲವು ವಿಧದ ದೈಹಿಕ ಶ್ರಮವನ್ನಿಲ್ಲಿ ಕಾಣಬಹುದು. ಕಾಲು, ಬೆನ್ನು, ಸೊಂಟ, ಕತ್ತುಗಳು ನಿಜಕ್ಕೂ ಗಟ್ಟಿಯಿರಬೇಕು. ತಾಯಿ ಹುಲಿ ಮತ್ತು ಮರಿಹುಲಿಗಳೆರಡೂ ಕುಣಿತದಲ್ಲಿ ಆಕರ್ಷಣೆಯ ಕೇಂದ್ರ.
ವೇಷ ಕಳಚುವುದೂ ಸುಲಭವಲ್ಲ!
ಈ ವೇಷ ಕಳಚುವುದೂ ಒಂದು ಪ್ರಕ್ರಿಯೆ. ಒಂಬತ್ತು ದಿನಗಳ ಕುಣಿತದ ಪರ್ಯಂತ ದಣಿದ ಮೇಲೆ, ಕೊನೆಯ ದಿನದ ಮೆರವಣಿಗೆಯಲ್ಲಿ ಈ ಹುಲಿಗಳ ಅಬ್ಬರ ಜೋರು. ಕೊನೆಯಲ್ಲಿ ಶಾರದೆಯ ವಿಸರ್ಜನೆ ಆದ ಮೇಲೆ ವೇಷಧಾರಿಗಳ ಮಹಾಮಜ್ಜನ. ಎಳ್ಳೆಣ್ಣೆ, ತೆಂಗಿನೆಣ್ಣೆ ಅಥವಾ ತೆಂಗಿನ ಕಾಯಿ ಹಾಲನ್ನು ಮೈಗೆಲ್ಲಾ ತಿಕ್ಕಿಕೊಂಡು, ಅರ್ಧ-ಮುಕ್ಕಾಲು ಗಂಟೆಯ ನಂತರ ಅವರ ಸ್ನಾನ. ಇಷ್ಟೂ ದಿನಗಳಲ್ಲಿ ಕೈಗೆ ಬಂದ ಹಣದಲ್ಲಿ ಒಂದು ಪಾಲು ದೇವಿಯ ಕಾಣಿಕೆಯೆಂದು ತೆಗೆದಿರಿಸಬೇಕು. ಇದರಲ್ಲಿ ಲಾಭ-ನಷ್ಟದ ಮಾತಿಲ್ಲ.
ಜಾತಿಯ ಬೇಲಿಯಿಲ್ಲ
ಬಣ್ಣ ಹಾಕುವವರಲ್ಲಿ ಜಾತಿ, ವಯಸ್ಸು, ಲಿಂಗಭೇದವಿಲ್ಲ. ಕೆಲವೊಮ್ಮೆ ಆರೋಗ್ಯ ಸರಿಯಿಲ್ಲದ ಮಕ್ಕಳು ಗುಣಮುಖರಾದರೆ, ಅವರಿಂದ ಹುಲಿವೇಷದ ಸೇವೆ ಮಾಡಿಸುತ್ತೇವೆಂದು ಹೆತ್ತವರು ಹರಕೆ ಹೊರುತ್ತಾರೆ. ಇವೆಲ್ಲ ತೀರುವುದು ನವರಾತ್ರಿಯ ಸಂದರ್ಭದಲ್ಲಿ. ಆದರೆ ಹರಕೆ ತೀರಿಸುವ ಮಕ್ಕಳು ಒಂಬತ್ತು ದಿನಗಳ ಪರ್ಯಂತ ಬಣ್ಣದಲ್ಲಿ ಇರುವ ನಿಯಮವಿಲ್ಲ. ಅವರಿಗೆ ಒಂದೇ ದಿನ ಸಾಕು. ಹಿಂದೂಗಳು ಮಾತ್ರವೇ ಹುಲಿವೇಷದ ಹರಕೆ ತೀರಿಸಬೇಕೆಂದಿಲ್ಲ. ನಂಬಿದವರ ಜಾತಿ, ಧರ್ಮವನ್ನು ದೇವರೆಂದೂ ಪ್ರಶ್ನಿಸುವುದಿಲ್ಲ. ಅಲ್ಲದೆ, ಈಗೀಗ ʻಹೆಣ್ಣು ಹುಲಿʼಗಳ ಸಂಖ್ಯೆಯೂ ಸಾಕಷ್ಟು ಹೆಚ್ಚಿದೆ. ಗಂಡು ಮಕ್ಕಳಂತೆಯೇ ಕೈ-ಕಾಲುಗಳ ವೇಗದ ಚಲನೆಯಲ್ಲಿ ಹೆಣ್ಣು ಮಕ್ಕಳೂ ಹಿಂದಿಲ್ಲ. ಹುಡುಗರು ಬರಿಮೈಗೆ ಬಣ್ಣ ಬಳಿದುಕೊಂಡರೆ, ಹುಡುಗಿಯರು ಮೈತುಂಬಾ ಬಟ್ಟೆ ತೊಟ್ಟು, ಮುಖವಾಡಗಳನ್ನು ಧರಿಸಿ ಹುಲಿಗಳಂತೆ ಆರ್ಭಟಿಸುತ್ತಿದ್ದಾರೆ. ಇತ್ತೀಚೆಗೆ ಹುಲಿಕುಣಿತದ ತಂಡಗಳೇ ತಯಾರಾಗುತ್ತಿದ್ದು, ಇದೊಂದು ಪ್ರತಿಷ್ಠಿತ ಸ್ಪರ್ಧೆಯಾಗಿ ಮಾರ್ಪಾಡಾಗುತ್ತಿದೆ.
ಇದನ್ನೂ ಓದಿ: Navaratri: ಉದ್ಯಾನನಗರಿಯಲ್ಲಿ ಎಲ್ಲೆಡೆ ದಾಂಡಿಯಾ ಮೇನಿಯಾ!