ಒಂಬತ್ತು ದಿನಗಳ ನವರಾತ್ರಿ ಹಬ್ಬ (Navaratri Festival) ಈಗಾಗಲೇ ಆರಂಭವಾಗಿ ಇನ್ನೇನು ಕೊನೆಗೊಳ್ಳಲಿದೆ. ನಮ್ಮ ಭಾರತದ ವಿವಿಧ ರಾಜ್ಯಗಳ ಬೇರೆ ಬೇರೆ ಪ್ರಾಂತ್ಯದ ಜನರು ಅವರದೇ ಆದ ವಿಶೇಷ ಬಗೆಯಲ್ಲಿ, ಹಬ್ಬವನ್ನು ಆಚರಿಸುತ್ತಾರೆ. ಆಯಾ ಊರಿನ ವಿಶೇಷ ಸಂಸ್ಕೃತಿಯ ಜೊತೆಗೆ ದಸರಾ (Dasara Festival) ನೋಡುವುದೇ ಕಣ್ಣಿಗೆ ಹಬ್ಬ. ನಮ್ಮ ವಿಶ್ವವಿಖ್ಯಾತ ಮೈಸೂರು ದಸರಾ ನಮಗೆ ಹೆಮ್ಮೆಯ ಸಂಗತಿಯಾದರೆ, ನಮ್ಮದೇ ರಾಜ್ಯದ ಹಲವಾರು ಊರುಗಳಲ್ಲಿ ದಸರಾವನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಮಡಿಕೇರಿಯ ದಸರಾ, ಕೊಲ್ಲೂರಿನಲ್ಲಿ ನಡೆಯುವ ದಸರಾ, ದೇವಿಯ ದೇವಸ್ಥಾನಗಳಲ್ಲಿ ನಡೆಯುವ ವಿಶೇಷ ಪೂಜೆಗಳು ಹೀಗೆ ಪ್ರತಿ ಊರೂ ಕೂಡಾ ಹಬ್ಬದ ಕಳೆಯಲ್ಲಿ ಮಿಂಚುತ್ತದೆ. ತಮಿಳುನಾಡಿನಲ್ಲಿ ಪ್ರತಿ ಮನೆಗಳೂ ಗೊಂಬೆಗಳನ್ನು ಕೂರಿಸುವ ಆಚರಣೆಯ ಮೂಲಕ ಹಬ್ಬ ಆಚರಿಸಿಕೊಂಡರೆ, ಮತ್ತೊಂದು ರಾಜ್ಯದಲ್ಲಿ ಇನ್ನೊಂದು ಬಗೆಯಲ್ಲಿ ಹಬ್ಬ ಆಚರಿಸಲಾಗುತ್ತದೆ. ಬನ್ನಿ, ನವರಾತ್ರಿಯ ಈ ವಿಶೇಷ ಸಂದರ್ಭದಲ್ಲಿ ಭಾರತದಲ್ಲಿ ಆಚರಿಸಲ್ಪಡುವ ವಿಶೇಷ ನವರಾತ್ರಿಯ ಆಚರಣೆಗಳಾವುವು (Navaratri rituals) ಎಂಬುದನ್ನು ನೋಡೋಣ ಬನ್ನಿ.
1. ಮೈಸೂರು: ಮೈಸೂರಿನ ದಸರಾದ ವಿಜ್ರಂಭಣೆಯನ್ನು ನೋಡುವುದೇ ಸೊಗಲು, ಆನೆಯ ಮೇಲೆ ಅಂಬಾರಿಯಲ್ಲಿ ತಾಯಿ ಚಾಮುಂಡಿಯ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿಗಳು, ಆಹಾರ ಮೇಳಗಳು ಹೀಗೆ ಒಂದೇ ಎರಡೇ! ಮೈಸೂರು ದಸರಾ ಎಂದರೆ ಸಾಕು, ಪ್ರತಿ ವರ್ಷವೂ ದೇಶವಿದೇಶಗಳಿಂದ ಜನರು ಆಗಮಿಸಿ ಈ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.
2. ವಡೋದರಾ: ಗುಜರಾಥ್‌ನ ಬರೋಡಾ ಅಥವಾ ವಡೋದರಾ ನಗರದ ದಸರಾ ಕೂಡಾ ಭಾರತದ ಅದ್ಭುತ ದಸರಾಗಳಲ್ಲಿ ಒಂದು. ಗುಜರಾತಿನ ದಸರಾದ ಶೈಲಿಯೇ ಭಿನ್ನ. ಇಲ್ಲಿ ನೃತ್ಯ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ. ತಾಯಿಯನ್ನು ಆರಾಧಿಸುವ ಜೊತೆಗೆ, ರಾತ್ರಿಗಳೆಲ್ಲ, ದಾಂಡಿಯಾ ಹಾಗೂ ಗರ್ಭಾ ನೃತ್ಯಗಳಲ್ಲಿ ಕಳೆಗಟ್ಟುತ್ತವೆ. ಹೆಂಗಳೆಯರು ಮಕ್ಕಳು ಎಲ್ಲರೂ ಸಾಂಪ್ರದಾಯಿಕ ದಿರಿಸನಲ್ಲಿ ಅಲಂಕೃತ ಕೋಲುಗಳನ್ನು ಹಿಡಿದು ದಾಂಡಿಯಾ, ಗರ್ಭಾ ನೃತ್ಯ ಮಾಡುತ್ತಿರುವುದನ್ನು ನೋಡುವುದೇ ಚಂದ.
3. ಕೋಲ್ಕತ್ತಾ: ರಸಗುಲ್ಲಾ, ಫುಟ್‌ಬಾಲ್ ಹಾಗೂ ದುರ್ಗಾ ಪೂಜೆ, ಈ ಮೂರು ಪದಗಳಷ್ಟೇ ನವರಾತ್ರಿಗಳಲ್ಲಿ ಕೋಲ್ಕತ್ತಾದ ವಿವರಣೆಗೆ ಸಾಕು. ನವರಾತ್ರಿಗೂ ಬಹಳ ಮೊದಲೇ ಅಂದರೆ ತಿಂಗಳುಗಳಷ್ಟು ಮೊದಲೇ ಕೋಲ್ಕತಾದಲ್ಲಿ ದುರ್ಗೆಯ ಮೂರ್ತಿಗಳು ತಯಾರಾಗುವ ಸಂಭ್ರಮ ಶುರುವಾಗುತ್ತದೆ. ವರ್ಣರಂಜಿತ ಅಲಂಕೃತ ದುರ್ಗೆಯೇ ಇಲ್ಲಿ ನವರಾತ್ರಿಯ ವಿಶೇಷ ಆಕರ್ಷಣೆ. ಧುನುಚಿ ನೃತ್ಯ ಸೇರಿದಂತೆ ಸಾಂಪ್ರದಾಯಿಕ ಆಚರಣೆ, ಪೂಜೆಗಳು ಈ ಸಂದರ್ಭ ನಡೆಯುತ್ತವೆ.
4. ವಾರಣಾಸಿ: ಕಾಶಿ ಎಂದ ಮೇಲೆ ನವರಾತ್ರಿಯ ಸಂಭ್ರಮವಿಲ್ಲದಿದ್ದೀತೇ? ಇಂತಹ ಕಾಶಿಯೆಂಬ ವಾರಣಾಸಿಯಲ್ಲಿ ಬರೋಬ್ಬರಿ ಒಂದು ತಿಂಗಳ ಕಾಲ ನವರಾತ್ರಿಯ ಆಚರಣೆ ಮುಂದುವರಿಯುತ್ತದೆ. ಈ ಅತ್ಯಂತ ಹಳೆಯ ನಗರಿಯಲ್ಲಿ ರಾಮನನ್ನೇ ಕೇಂದ್ರೀಕೃತವಾಗಿ ನವರಾತ್ರಿಯ ಆಚರಣೆ ನಡೆಯುತ್ತದೆ. ರಾಮಲೀಲಾ, ರಾವಣ ಪ್ರತಿಕೃತಿ ದಹನದಂತಹ ಆಚರಣೆಗಳು ಗಂಗಾತೀರದಲ್ಲಿ ನಡೆಯುತ್ತದೆ. ವಾರಣಾಸಿಯಲ್ಲಿ ದಸರಾವನ್ನು ನೋಡುವುದೇ ಒಂದು ವಿಭಿನ್ನ ಅನುಭವ.
5. ಕೋಟಾ: ರಾಜಸ್ಥಾನದ ಕೋಟಾದಲ್ಲಿ ನವರಾತ್ರಿಯ ಆಚರಣೆಯೇ ಭಿನ್ನ. ರಾಜಸ್ಥಾನದ ಸಾಂಪ್ರದಾಯಿಕ ಶೈಲಿಯಲ್ಲಿ ದುರ್ಗೆಯನ್ನು ಪೂಜಿಸುವ ಇಲ್ಲಿ, ಜನಪದ ಶೈಲಿ ಕರಕುಶಲ ಕಲೆಗಳು, ಸಂಗೀತ, ನೃತ್ಯ ಇತ್ಯಾದಿಗಳು ಮೇಳೈಸುತ್ತವೆ. ಒಂಟೆಗಳು, ಕುದುರೆಗಳು, ಆನೆಗಳು ಸಾಂಪ್ರದಾಯಿಕವಾಗಿ ಅಲಂಕೃತಗೊಂಡು ಹಬ್ಬದ ಕಳೆಯನ್ನು ಹೆಚ್ಚಿಸುತ್ತವೆ. ಇಲ್ಲೂ ಕೂಡಾ, ರಾಮನನ್ನು ಈ ಸಂದರ್ಭ ಪೂಜಿಸುವ, ರಾವಣನ ಪ್ರತಿಕೃತಿ ದಹನದ ಆಚರಣೆಗಳು ಮುಖ್ಯವಾಗಿವೆ.
ಇದನ್ನೂ ಓದಿ: Navaratri Pink Colour Styling Tips: ಹೆಣ್ಣುಮಕ್ಕಳನ್ನು ಆಕರ್ಷಕವಾಗಿ ಬಿಂಬಿಸಬಲ್ಲ ನವರಾತ್ರಿಯ 9ನೇ ದಿನದ ಗುಲಾಬಿ ಬಣ್ಣ
6. ಕುಲು: ಹಿಮಾಚಲ ಪ್ರದೇಶದ ಕುಲುವಿನಲ್ಲಿ ನವರಾತ್ರಿಯ ಆಚರಣೆಯನ್ನು ನೋಡುವುದೇ ಒಂದು ವಿಭಿನ್ನ ಅನುಭವ. ಇಲ್ಲಿನ ಮಂದಿ, ಸಾಂಪ್ರದಾಯಿಕ ಶೈಲಿಯಲ್ಲಿ ದುರ್ಗಾ ಪೂಜೆಯನ್ನು ಮಾಡುವ ಜೊತೆಗೆ ಜನಪದ ಸೊಗಡಿನ ಸಂಗೀತ ನೃತ್ಯಗಳೂ ಹಬ್ಬದ ಪ್ರಮುಖ ಭಾಗವಾಗುತ್ತದೆ. ಇಲ್ಲಿಯೂ ರಾವಣ ದಹನ, ರಾಮಲೀಲಾ ಮುಖ್ಯ ಅಂಶಗಳು.
7. ಕೇರಳ: ಕೇರಳದ ನವರಾತ್ರಿಯ ಬಹುತೇಕ ಕರ್ನಾಟಕದ ಶೈಲಿಯನ್ನೇ ಹೋಲುವಂತಿದ್ದು, ಮುಖ್ಯವಾಗಿ ಸರಸ್ವತಿ ಪೂಜೆ, ಆಯುಧ ಪೂಜೆ ವಿಜಯದಶಮಿಯನ್ನು ಪ್ರಮುಖವಾಗಿ ಆಚರಿಸಲಾಗುತ್ತದೆ. ತಾಯಿ ಸರಸ್ವತಿಯನ್ನು ವಿದ್ಯೆಗಾಗಿ ಪ್ರಾರ್ಥಿಸಿ ದುರ್ಗೆಯ ವಿವಿಧ ರೂಪಗಳನ್ನು ಒಂದೊಂದು ದಿನವೂ ಪೂಜಿಸಲಾಗುತ್ತದೆ.
ಇದನ್ನೂ ಓದಿ: Navaratri: ನವರಾತ್ರಿಯ 9 ದಿನ ದುರ್ಗೆಯ 9 ರೂಪ! ಏನಿದರ ಹಿನ್ನೆಲೆ?