Site icon Vistara News

Navaratri: ವಿದ್ಯಾದೇವತೆ ಸರಸ್ವತಿ ಪೂಜೆ; ಏನಿದರ ಮಹತ್ವ?

Goddess Saraswati being worshipped

ಕದಿಯಲಾರದ ಸಂಪತ್ತೆಂದರೆ ವಿದ್ಯೆ (Navaratri) ಎಂಬ ಮಾತಿದೆ. ಆರ್ಜಿಸಿಕೊಂಡ ವಿದ್ಯೆಯನ್ನು ಕಲಿತವನೇ ಮರೆಯಬೇಕೆ ಹೊರತು ಬೇರೆಯವರಿಂದ ಅದು ಲೂಟಿಯಾಗುವುದಿಲ್ಲ. ಜೀವ ಇರುವವರೆಗೂ ಕಳೆಯದ ಈ ಸಂಪತ್ತನ್ನು ಗಳಿಸಿಕೊಳ್ಳಲು, ಜ್ಞಾನದಾತೆ ಮತ್ತು ವಿದ್ಯಾಧಿದೇವತೆಯಾದ ಸರಸ್ವತಿಯ ಉಪಾಸನೆ ನಡೆಯುವ ದಿನಗಳಿವು. ಆಶ್ವಯುಜ ಶುದ್ಧ ಪ್ರತಿಪದೆಯ ದಿನದಿಂದ ಆರಂಭವಾಗುವ ಶರನ್ನವರಾತ್ರಿಯಲ್ಲಿ ಏಳನೇ ದಿನ ಸರಸ್ವತಿ ಪೂಜೆಗೆ ಮೀಸಲು. ಯುಗಾದಿಯ ಸಂದರ್ಭದಲ್ಲಿ ಬರುವ ವಸಂತ ನವರಾತ್ರಿಯಲ್ಲಿ ಪಂಚಮಿಯ ದಿನ ಸರಸ್ವತಿಯ ಆರಾಧನೆ ಮಾಡಲಾಗುತ್ತದೆ.

ವಾಣಿ, ಶಾರದೆ, ವಾಗ್ದೇವಿ, ಬ್ರಾಹ್ಮಿ, ವೀಣಾ, ಭಾರತಿ, ವಾಗೀಶ್ವರಿ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಸರಸ್ವತಿಯ ಹುಟ್ಟಿಗೊಂದು ಕಥೆಯಿದೆ. ಸೃಷ್ಟಿ ಕಾರ್ಯವನ್ನು ಆರಂಭಿಸಿದ ಬ್ರಹ್ಮನಿಗೆ, ಸಕಲ ವಿದ್ಯೆಗಳಿಗೊಂದು ಅಧಿದೇವತೆ ಬೇಕು ಎಂದು ಅನಿಸಿತು. ಇದಕ್ಕಾಗಿ ಸರ್ವಗುಣ ಸಂಪನ್ನೆಯಾದ ಸರಸ್ವತಿಯನ್ನು ಸೃಷ್ಟಿಸಿ, ಆಕೆಗೆ ಲೋಕದ ಸದ್ಗುಣಗಳು, ಸನ್ಮತಿ, ಸದ್ವಿದ್ಯೆಗಳೆಲ್ಲಾ ಒಲಿಯುವಂತೆ ಮಾಡಿದ. ಆನಂತರ ಬ್ರಹ್ಮನ ಅರ್ಧಾಂಗಿಯಾದ ಆಕೆ ಬ್ರಾಹ್ಮಿ ಎನಿಸಿಕೊಂಡಳು.

ಸಂಗೀತ, ನೃತ್ಯ ಸೇರಿದಂತೆ ಲಲಿತ ಕಲೆಗಳು, ಸಾಹಿತ್ಯ, ವೇದ ಸೇರಿದಂತೆ ಸರ್ವ ರೀತಿಯ ಜ್ಞಾನಗಳ ಪ್ರದಾಯಿನಿ ಈಕೆ. ಹಂಸವಾಹನೆ, ಶ್ವೇತಪದ್ಮಾಸನೆ, ಶ್ವೇತವಸನ ಧಾರಿಣಿ, ವೀಣಾಪಾಣಿ, ಕಮಲ ಮತ್ತು ಪುಸ್ತಕಹಸ್ತೆಯಾದ ಈಕೆ ಸ್ವಭಾವದಲ್ಲಿ ಉಗ್ರಳಲ್ಲ, ಶಾಂತ ಮತ್ತು ಕೋಮಲ ಸ್ವಭಾವದವಳು. ವಿದ್ಯೆ ಹತ್ತುವುದಕ್ಕೆ ವ್ಯಗ್ರತೆಯಲ್ಲ, ಶಾಂತ ಚಿತ್ತದ ಅಗತ್ಯವಿದೆ ಎನ್ನುವುದು ಹೀಗೆ ಪ್ರತಿಪಾದಿತವಾಗಿರಬಹುದು. ಜೊತೆಗೆ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಶ್ವೇತ ವಸ್ತ್ರಧಾರಣೆ, ಶ್ವೇತ ಪುಷ್ಟ ಸಮರ್ಪಣೆ, ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ದಾನವನ್ನು ಶ್ರೇಷ್ಠವೆಂದು ಭಾವಿಸಲಾಗುತ್ತದೆ. ಶ್ರೀಮಂತರಿಗೆ ಲಕ್ಷ್ಮೀಪುತ್ರ ಎನ್ನುವಂತೆಯೇ, ಸರಸ್ವತೀಪ್ರಸಾದ, ಸರಸ್ವತೀ ವರಪುತ್ರ ಮುಂತಾದ ನುಡಿಗಟ್ಟುಗಳು ಹೆಚ್ಚು ಬುದ್ಧಿವಂತಿಕೆ ಹೊಂದಿರುವವರ ಕುರಿತು ಬಳಕೆಯಲ್ಲಿರುವಂಥವು.

ಇದರ ಪ್ರಾಮುಖ್ಯತೆಯೇನು?

ಸರಸ್ವತಿ ಪೂಜೆಯ ದಿನದಂದು ದೇವಿಯ ಪ್ರತಿಷ್ಠಾಪನೆಯ ನಂತರ, ಪುಸ್ತಕಗಳನ್ನಿಟ್ಟು ಪೂಜೆ ಮಾಡುವ ಕ್ರಮ ದೇಶದ ಹಲವೆಡೆಗಳಲ್ಲಿ ಚಾಲ್ತಿ ಇದೆ. ವಿಜಯದಶಮಿಯ ಪೂಜೆಯ ನಂತರ ದೇವಿಯ ವಿಸರ್ಜನೆಯಾದ ಮೇಲೆ ಈ ಪುಸ್ತಕಗಳನ್ನು ತೆಗೆದುಕೊಂಡು ಓದುವುದು ಪದ್ಧತಿ. ಸಪ್ತಮಿಯಿಂದ ದಶಮಿವರೆಗಿನ ಈ ಮೂರು ದಿನಗಳು ಓದುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಮಕ್ಕಳು ಶಾಲೆಯ ಪುಸ್ತಕಗಳನ್ನೆಲ್ಲಾ ಒಂದೂ ಬಿಡದಂತೆ ಪೂಜೆಗಿಟ್ಟು ನಿರಾಳವಾಗುವ ಸನ್ನಿವೇಶಗಳು ಕಚಗುಳಿಯಿಡುತ್ತವೆ. ಬೇರೆಲ್ಲಾ ಪೂಜೆಗಳಿಗಿಂತ, ಸರ್ವವಿದ್ಯಾ ಪ್ರದಾಯಿನಿಯಾದ ಸರಸ್ವತಿಯ ಪೂಜೆಯನ್ನು ಬಹಳಷ್ಟು ಶಾಲೆಗಳಲ್ಲೂ ಮಾಡುವ ಕ್ರಮವಿದೆ. ಅದೇ ದಿನ ಪುಟ್ಟ ಮಕ್ಕಳಿಗೆ ವಿದ್ಯಾರಂಭ ಮಾಡುವ ಪದ್ಧತಿ ಹಲವಾರು ಸಂಸ್ಕೃತಿಗಳಲ್ಲಿ ಹಾಸುಹೊಕ್ಕಾಗಿದೆ. ಬಹಳಷ್ಟು ದೇವಾಲಯಗಳಲ್ಲಿ ಮತ್ತು ಶಕ್ತಿಪೀಠಗಳಲ್ಲಿ ಸರಸ್ವತಿ ಪೂಜೆಯಂದು ವಿದ್ಯಾರಂಭ ಮಾಡುವ ಸಂಪ್ರದಾಯವಿದೆ.

ಭಾರತಕ್ಕೆ ಮಾತ್ರ ಸೀಮಿತವಲ್ಲ

ನವರಾತ್ರಿಯ ಆಚರಣೆ ಕೇವಲ ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಹಲವು ದೇಶಗಳಲ್ಲಿ, ಹಲವು ಧರ್ಮಗಳಲ್ಲೂ ಮಹಿಷ ರೂಪದ ದುಷ್ಟಶಕ್ತಿಯನ್ನು ವಧಿಸುವ ಸ್ತ್ರೀರೂಪಿ ಚೇತನದ ಆರಾಧನೆಯಿದೆ. ಬಲಿಯ ಕೋಣ ಎನ್ನುವ ಕಲ್ಪನೆಯಂತೂ ಗ್ರೀಕ್‌, ಸುಮೇರಿಯನ್‌, ಬೌದ್ಧ, ಆಫ್ರಿಕನ್‌, ಚೀನಿ, ಜಪಾನ್‌, ಇಂಡೋನೇಷ್ಯನ್‌, ಮ್ಯಾನ್ಮಾರ್‌ ಮತ್ತು ಕಾಂಬೋಡಿಯನ್‌ ಸಂಸ್ಕೃತಿಗಳಲ್ಲೂ ಕಾಣಬಹುದು. ಇದಕ್ಕೆ ಪೂರಕವಾಗಿ ನೇಪಾಳ, ಮ್ಯಾನ್ಮಾರ್‌, ಜಪಾನ್‌, ಕಾಂಬೋಡಿಯಾ, ಥಾಯ್ಲೆಂಡ್‌, ಇಂಡೋನೇಷ್ಯಾ ಮುಂತಾದೆಡೆಗಳಲ್ಲಿ ಸರಸ್ವತಿ ಪೂಜೆಗೆ ಸ್ಥಾನವಿದೆ. ಪೂಜೆಯ ಕ್ರಮ, ಅದರ ಬೆನ್ನಿಗಿರುವ ಕಥೆಗಳು ಭಿನ್ನವೇ ಆದರೂ, ವಿದ್ಯೆಗೆ ಆಕೆ ಅಧಿಷ್ಠಾತ್ರಿ ಎನ್ನುವ ನಂಬಿಕೆ ಅನೂಚಾನವಾಗಿ ನಡೆದು ಬಂದಿದೆ. ಜೈನ ಧರ್ಮವು ಸರಸ್ವತಿಯನ್ನು ಎಲ್ಲಾ ಕಲಿಕೆಯ ಮೂಲವೆಂದು ಭಾವಿಸಿದರೆ, ಬೌದ್ಧ ಧರ್ಮದಲ್ಲೂ ವಾಣಿಗೆ ಮಣಿದವರಿದ್ದಾರೆ.

ವಿದ್ಯೆ ಹಂಚಬೇಕು

ನಾವು ಯಾವುದನ್ನು ಬಯಸುತ್ತೇವೋ ಅದನ್ನೇ ಇತರರಿಗೆ ನೀಡಬೇಕು ಎಂಬ ತತ್ವದಂತೆ, ವಿದ್ಯೆಯನ್ನು ಹಂಚಿದಷ್ಟಕ್ಕೂ ಹೆಚ್ಚು ಸಿದ್ಧಿಸುತ್ತದೆ. ಕೊಟ್ಟರೆ ಕರಗುತ್ತದೆ ಎಂಬ ಭೀತಿ ಇಲ್ಲವೇ ಇಲ್ಲ ಇದಕ್ಕೆ. ನವರಾತ್ರಿಯ ಈ ಸಂದರ್ಭದಲ್ಲಿ, ದೀಪದಿಂದ ದೀಪ ಹಚ್ಚಿ ಜಗವೆಲ್ಲಾ ಬೆಳಗುವಂತೆ, ವಿದ್ಯೆಯೆಂಬ ಜ್ಯೋತಿ ಲೋಕವನ್ನೆಲ್ಲಾ ಬೆಳಗಲಿ.

ಇದನ್ನೂ ಓದಿ: Navaratri: ಹುಲಿ ವೇಷ; ಕರಾವಳಿ ನವರಾತ್ರಿಯ ವಿಶೇಷ ಆಕರ್ಷಣೆ!

Exit mobile version