Site icon Vistara News

Navavidha Bhakti : ನವವಿಧಗಳಲ್ಲಿ ಭಗವಂತನನ್ನು ಪ್ರೀತಿಸೋಣ

about 9 ways of bhakti you should know in kannada

bhakti

ಡಾ. ಸಿ. ಆರ್. ರಾಮಸ್ವಾಮಿ
ಭಕ್ತಿಯಲ್ಲಿ ವಿಮರ್ಶೆಗೆ ಅವಕಾಶವಿಲ್ಲ. ವಿಮರ್ಶೆ ಮಾಡುವುದು ಬುದ್ಧಿ. ಭಕ್ತಿಯಲ್ಲಿ ಅತ್ಯಂತಪ್ರೀತಿ-ಪ್ರೇಮಗಳಿರುವಾಗ ಮನಸ್ಸೇ ವಿಶೇಷವಾಗಿ ಕೆಲಸ ಮಾಡುತ್ತದೆ. ಅದು ಭಕ್ತಿಯ ಒಂದು ವಿಶೇಷ ಲಕ್ಷಣವಾಗುತ್ತದೆ.

ಭಗವಂತನಲ್ಲಿ ಪ್ರೀತಿ ಇಡುವುದೆಂದರೇನು?

ಪ್ರೀತಿಯಲ್ಲಿ ಮುಖ್ಯಗುಣವೆಂದರೆ ಮನಸ್ಸು ತನ್ನ ಪ್ರಿಯತಮನಲ್ಲಿ ರತಿಯನ್ನು ಹೊಂದಿ, ಲಗ್ನವಾಗಿರುವುದು. ಅವನ ಬಗ್ಗೆಯೇ ಚಿಂತಿಸುವುದು, ಬೇರಾವುದನ್ನೂ ಚಿಂತಿಸಲಿಷ್ಟಪಡುವುದಿಲ್ಲ, ಮನಸ್ಸು ಅಲ್ಲಿಂದ ಹೊರಬರಲೂ ಅಪೇಕ್ಷಿಸುವುದಿಲ್ಲ. ಅಂತೆಯೇ ಭಗವಂತನಲ್ಲಿ ಅಷ್ಟು ಗಾಢವಾಗಿ ಮನಸು ಲಗ್ನವಾದರೆಮಾತ್ರ ಅದು ಭಕ್ತಿಯೆನಿಸಿಕೊಳ್ಳುತ್ತದೆ.

ಎಷ್ಟರಮಟ್ಟಿಗೆ ಲಗ್ನವಾಗಬೇಕೆನ್ನುವುದು ಸುಲಭವಾಗಿ ಅರ್ಥವಾಗಲೆಂಬ ದೃಷ್ಟಿಯಿಂದ ಶಾಸ್ತ್ರಗಳಲ್ಲಿ ಕೆಲವು ಉದಾಹರಣೆಗಳನ್ನು ಕೊಡುತ್ತಾರೆ. ಪ್ರೇಮಿಗಳಲ್ಲಿ ಪರಸ್ಪರ ಹೇಗೆ ಅನುರಕ್ತಿ ಇರುತ್ತದೆಯೋ, ನೆನಪಿನಲ್ಲಿಯೂ ಒಬ್ಬರನ್ನು ಬಿಟ್ಟೊಬ್ಬರು ಇರುವುದಿಲ್ಲವೋ ಹಾಗೆ; ಹಾಗೆಯೇ, ಒಬ್ಬ ಲೋಭಿಯು ಸರ್ವದಾ ಧನದ ಚಿಂತನೆಯಲ್ಲೇ ಇದ್ದು ಅದರಲ್ಲಿ ಸ್ವಲ್ಪಭಾಗವನ್ನೂ ಇತರರಿಗೆ ಹಂಚಿಕೊಳ್ಳಲು ಅವನ ಮನಸ್ಸು ಒಪ್ಪುವುದಿಲ್ಲವಷ್ಟೆ.

ಕೋಟೀಶ್ವರನಾಗಿದ್ದರೂ ಎಲ್ಲವನ್ನೂ ತಾನೇ ಭೋಗಿಸವವನಾಗುತ್ತಾನೆ. ಪುರಂದರದಾಸರ ಪೂರ್ವಾಶ್ರಮದ ಲೋಭತ್ವದಕಥೆಯನ್ನು ಸ್ಮರಿಸಿಕೊಳ್ಳಬಹುದು. ಅಂತೆಯೇ ಭಕ್ತನೂ ಸಹ ಭಗವಂತನನ್ನು ಪೂರ್ಣವಾಗಿ ತಾನೆ ಅನುಭವಿಸಬೇಕೆಂದು ಅಪೇಕ್ಷಿಸುತ್ತಾನೆ.

ಆಧುನಿಕ ವ್ಯವಹಾರದಲ್ಲೂ, ವಾಹನ ಚಲಿಸುವ ಒಬ್ಬ ಡ್ರೈವರ್‌ಗೆ ರಸ್ತೆಯ ಮೇಲೆಯೇ ಗಮನವಿರುತ್ತದೆ. ಹತ್ತಿರದಲ್ಲಿರುವವರು ಮಾತನಾಡಿಸಿದೆಲ್ಲವನ್ನೂ ಗಮನಿಸಬಹುದು, ಪ್ರತಿಕ್ರಿಯಿಸಲೂಬಹುದು. ಆದರೆ ಅವನ ಗಮನಮಾತ್ರ ಸ್ವಲ್ಪವೂ ರಸ್ತೆಯನ್ನುಬಿಟ್ಟು ಹೋಗುವುದಿಲ್ಲ, ಮೊಬೈಲ್-ಮೆಸೇಜ್ ಕಡೆ ಒಂದುಕ್ಷಣ ಏನಾದರೂ ತಿರುಗಿದರೂ ದೊಡ್ಡ ವಿಪತ್ತೇ ಆಗಿಬಿಡಬಹುದು, ಆದರೆ ನಿಪುಣನಾದ ಚಾಲಕನು ಹಿಂತಿರುಗಿ ಮಾತನಾಡಿದರೂ ಕ್ಷಣಮಾತ್ರದಲ್ಲಿ ರಸ್ತೆಯಕಡೆ ಗಮನ ಹರಿಸುತ್ತಾನೆ. ಯಾವಾಗಲೂ ಒಂದು ಗಮನ ಅವನಿಗೆ ರಸ್ತೆಯ ಕಡೆಯೇ ಇದ್ದೇ ಇರುತ್ತದೆ.

ಅಂತೆಯೇ ಭಕ್ತನ ಮನಸ್ಸೂ ಸಹ ಸದಾಕಾಲವೂ ಏಕಾಗ್ರತೆಯಿಂದ ಭಗವಂತನನ್ನು ಆಶ್ರಯಿಸಿಯೇ ಇರುತ್ತದೆ. ತಾನು ಯಾವುದೇ ದೈನಂದಿನಕೆಲಸದಲ್ಲಿ ನಿರತನಾಗಿದ್ದರೂ ಮನಸ್ಸುಮಾತ್ರ ಭಗವಂತನನ್ನು ಸ್ಪರ್ಶಿಸಿಯೇ ಇರುವುದು. ಅಂದರೆ ಎಷ್ಟರಮಟ್ಟಿಗೆ ಆಭಿಮುಖ್ಯ-ಅನುರಕ್ತಿ ಇರುತ್ತದೆ ಎಂಬುದನ್ನು ಈ ಉದಾಹರಣೆಗಳ ಮೂಲಕ ತಿಳಿದುಕೊಳ್ಳಬಹುದು. ಸಮಯವಾದಾಗ ಆಗೊಮ್ಮೆ ಈಗೊಮ್ಮೆ ಭಗವಂತನನ್ನು ಸ್ಮರಿಸಿಕೊಳ್ಳುವುದಷ್ಟೇ ಭಕ್ತಿಯಲ್ಲ. ಅವನನ್ನು ಪ್ರೀತಿಸಿ, ಅವನಲ್ಲಿ ಲಯವಾಗುವುದೇ ನಿಜವಾದ ಪೂರ್ಣಭಕ್ತಿ.

ಭಕ್ತಿ ವೃದ್ಧಿಯಾಗುವುದು ಹೇಗೆ?

ಮನುಷ್ಯರಂತೆ ದೇವತೆಗಳನ್ನು ನಾವು ನೇರವಾಗಿ ನೋಡುವುದಿಲ್ಲ, ಪರೋಕ್ಷವಷ್ಟೇ, ಆದ್ದರಿಂದ ಇವರಲ್ಲಿ ಪ್ರೀತಿಯು ಹೇಗೆ ವೃದ್ಧಿಯಾಗುತ್ತದೆಂಬ ಪ್ರಶ್ನೆಯು ಉದ್ಭವಿಸುತ್ತದೆ. ಅದಕ್ಕೆ ಅನೇಕ ವಿಧಾನಗಳನ್ನು ಹೇಳುತ್ತಾರೆ. ಅವುಗಳಲ್ಲಿ ಪ್ರಧಾನವಾಗಿ ಒಂಬತ್ತು ವಿಧಾನಗಳನ್ನು-ಭಕ್ತಿಮಾರ್ಗಗಳನ್ನು ಪ್ರಹ್ಲಾದನು ಉಪದೇಶಿಸುತ್ತಾನೆ.
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ l
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮ ನಿವೇದನಮ್ ll

ಭಗವಂತನ ಕಥಾ-ಶ್ರವಣ-ಅವನ ಕೀರ್ತನೆ-ಅವುಗಳ ಸ್ಮರಣೆ-ಭಗವಂತನ ಪಾದಸೇವೆ-ಅರ್ಚನೆ-ನಮಸ್ಕಾರ-ಭಗವಂತನಲ್ಲಿ ದಾಸ್ಯವೃತ್ತಿ-ಅವನ ಸ್ನೇಹ-ಅವನಿಗೆ ತನ್ನನ್ನು ಪೂರ್ಣವಾಗಿ ಒಪ್ಪಿಸಿಕೊಳ್ಳುವಿಕೆ ಎಂಬ ಈ ಒಂಬತ್ತು ವಿಧವಾದ ಭಕ್ತಿಮಾರ್ಗಗಳಿಗೆ ನವಧಾಭಕ್ತಿ ಎಂಬುದಾಗಿ ಹೆಸರು. ಇವುಗಳಲ್ಲಿ ಯಾವುದಾದರೂ ಒಂದು ಮಾರ್ಗವನ್ನು ಹಿಡಿದುಕೊಂಡರೂ ಕೂಡ ಫಲವಾದ ಮುಕ್ತಿಯನ್ನು ಪಡೆಯಬಹುದು. ಒಂಬತ್ತನ್ನೂ ಒಬ್ಬರೇ ಸಾಧಿಸಬೇಕೆಂದಲ್ಲ. ಸಾಧಿಸಿದರೆ ಉತ್ತಮವೇ. ಪ್ರಕೃತಿಭೇದೇನ ಒಂದೊಂದು ವಿಧಾನವು ಸುಲಭವಾಗಿರುವುದು. ಪ್ರಕೃತಿಯೇ ತನಗೆ ಸೂಕ್ತವಾದ ಮಾರ್ಗಕ್ಕೆ ಪ್ರಚೋದನೆಯನ್ನು ನೀಡಬಹುದು; ಗುರುವಾದವನು ಮಾರ್ಗದ ಆಯ್ಕೆಯಲ್ಲಿ ಮಾರ್ಗದರ್ಶನ ನೀಡುವನು.

ಭಗವತ್ಕಥಾಶ್ರವಣ ಮಾಡುತ್ತಾ ತಟಸ್ಥನಾಗಲು ಸಾಧ್ಯವಿಲ್ಲ. ತಾನು ಅನವರತ ಕೇಳಿದ್ದನ್ನು ಕೀರ್ತನೆಮಾಡೋಣ ಎಂದೆನಿಸುವುದು ಸಹಜ. ಕೀರ್ತನೆಮಾಡಿದ್ದನ್ನು ಮತ್ತೆಮತ್ತೆ ಸ್ಮರಣೆಗೆ ತಂದುಕೊಳ್ಳುತ್ತಾನೆ. ನಂತರ ಅದು ಅರ್ಚನೆಗೆ ಪ್ರೋತ್ಸಾಹ ಕೊಡಬಹುದು. ಕೊನೆಗೆ ಅದೇ ದಾಸ್ಯಕ್ಕೆ ನಯನ ಮಾಡಿ ಮತ್ತೆ ಆತ್ಮನಿವೇದನವನ್ನೂ ಮಾಡಿಸಬಹುದು. ಘಙ ಹಂತಹಂತವಾಗಿ ಮನಸ್ಸನ್ನು ಒಯ್ದು ಕೊನೆಗೆ ಆತ್ಮನಿವೇದನೆಯಲ್ಲಿಯೇ ನಿಲ್ಲಿಸಲೂ ಬಹುದು. ಅಂದರೆ ತನ್ನನ್ನು ಸಂಪೂರ್ಣವಾಗಿ ಭಗವಂತನಲ್ಲಿ ಒಪ್ಪಿಸಿಕೊಳ್ಳುವುದು. ಇಷ್ಟಾದರೆ ಭಕ್ತಿ ಪೂರ್ಣವಾಗುತ್ತದೆ ಎನ್ನುತ್ತಾರೆ. ಅದು ಭಕ್ತಿಯ ಒಂದು ಸಿದ್ಧಿ, ಭಕ್ತ ಸಿದ್ಧ-ಭಕ್ತನಾಗುತ್ತಾನೆ. ಅಲ್ಲಿಯವರೆವಿಗೂ ಅವನು ಸಾಧಕಭಕ್ತನೇ.

ಕೀರ್ತನಂ ಎನ್ನುವುದು ಭಕ್ತರ ಪ್ರಾರಂಭದ ಅವಸ್ಥೆಯಲ್ಲಿ ಕ್ರಿಯಾರೂಪವಾಗಿರುತ್ತದೆ. ಶ್ರವಣಂ, ಕೀರ್ತನಂ, ಸ್ಮರಣಂ, ಪಾದಸೇವನo, ಅರ್ಚನಂ, ವಂದನಂ ಈ ಆರೂ ಕೂಡ ಕ್ರಿಯೆಗೆ ಸಂಬಂಧಪಟ್ಟವು. ಇವೆಲ್ಲವೂ ಕ್ರಿಯೆಯ ಮೂಲಕ ಭಕ್ತಿಯನ್ನು ಉಂಟುಮಾಡಿಕೊಳ್ಳುವ ವಿಧಾನಗಳು. ದಾಸ್ಯಂ, ಸಖ್ಯಂ, ಆತ್ಮನಿವೇದನಂ ಎನ್ನುವ ಮೂರೂ ಭಾವಕ್ಕೆ ಸಂಬಂಧಪಟ್ಟವು. ಅಲ್ಲಿ ಕ್ರಿಯೆಗಿಂತ ವಿಶೇಷವಾಗಿ ಭಾವವೇ ಪ್ರಧಾನವಾಗಿರುತ್ತದೆ. ಸಂಪೂರ್ಣವಾಗಿ ತನ್ನನ್ನು ತಾನು ಭಗವಂತನಿಗೆ ಸಮರ್ಪಣೆ ಮಾಡಿಕೊಳ್ಳಬೇಕೆಂಬ ಭಾವ ಉಂಟಾದಾಗ ದಾಸ್ಯಂ, ಸಖ್ಯಂ, ಆತ್ಮನಿವೇದನಂ ಎಂಬುದು ತಾನಾಗಿಯೇ ಪ್ರಬೊಧಗೊಳ್ಳುತ್ತದೆ. ಇಲ್ಲಿ ಗಮನಾರ್ಹವಾದ ಅಂಶವೆಂದರೆ ಕಾಲಕ್ರಮದಲ್ಲಿ ಶ್ರವಣಂ, ಕೀರ್ತನಂ ಮುಂತಾದವೂಕೂಡ ತಾದಾತ್ಮ್ಯವನ್ನು ಉಂಟು ಮಾಡಿಬಿಡುವುದು. ತಾದಾತ್ಮ್ಯದಲ್ಲಿಯೇ ಅವರು ಶ್ರವಣ ಮಾಡುತ್ತಾರೆ, ಕೀರ್ತನೆ ಮಾಡುತ್ತಾರೆ, ಸ್ಮರಣೆ ಮಾಡಿಕೊಳ್ಳುತ್ತಾರೆ. ಎಲ್ಲಿ ತಾದಾತ್ಮ್ಯ ಉಂಟಾಗುತ್ತದೆಯೋ ಅಲ್ಲಿ ಭಕ್ತಿ ಸಾಧ್ಯಭಕ್ತಿಯಾಗುತ್ತದೆ, ಅವರು ಸಿದ್ಧಭಕ್ತರಾಗುತ್ತಾರೆ.

ಭಕ್ತಿಯಲ್ಲಿ ಈ ಒಂಬತ್ತು ವಿಧಗಳಷ್ಟೇ ಎಂದೇನಲ್ಲ. ಭಗವಂತನನ್ನೇ ಪತಿಯಂತೆ, ತಂದೆಯಂತೆ, ತಾಯಿಯಂತೆ ಸಖನಂತೆ, ಸಖಿಯಂತೆ ಭಾವಿಸಿದ ಭಕ್ತ ಮಹಾಶಯರೂ ಅನೇಕಾನೇಕ ಮಂದಿ ಉಂಟು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಭಕ್ತರಲ್ಲಿ ವಿವಿಧ ಹಂತಗಳು

ಭಕ್ತರಲ್ಲಿ ಎರಡು ವಿಧ. ಒಂದು ಸಾಧಕಭಕ್ತ ಮತ್ತೊಂದು ಸಿದ್ಧಭಕ್ತ. ಆರಂಭದಲ್ಲಿ ಸಾಧಕರಾಗಿರುತ್ತಾರೆ, ನಂತರ ಪೂರ್ಣಸಿದ್ಧಿಯನ್ನು ಪಡೆದಾಗ ಸಿದ್ಧಭಕ್ತರಾಗುತ್ತಾರೆ. ಸಿದ್ಧ ಭಕ್ತರನ್ನು ಭಕ್ತರು, ಭಾಗವತರು ಎನ್ನುತ್ತಾರೆ. ಅದರಲ್ಲೂ ಉನ್ನತಮಟ್ಟದವರು ಪರಮಭಾಗವತರು.

ಪ್ರಹ್ಲಾದ-ನಾರದ-ಪರಾಶರ-ಪುಂಡರೀಕ-ವ್ಯಾಸ-ಅಂಬರೀಶ-ಶುಕ-ಶೌನಕ- ಭೀಷ್ಮ-ದಾಲ್ಭ್ಯ-ಋಕ್ಮಾಂಗದ-ಅರ್ಜುನ-ವಸಿಷ್ಠ-ವಿಭೀಷಣ ಎಂಬಿವರನ್ನು ಪರಮಭಾಗವತರೆಂದು ಕೊಂಡಾಡುತ್ತಾರೆ. ಒಬ್ಬೊಬ್ಬರೂಕೂಡ ಪರಮಭಾಗವತರೇ ಆಗಿರುತ್ತಾರೆ. ಪ್ರಹ್ಲಾದನ ವಿಷಯ ಸುಪರಿಚಿತ. ನಾರದ ಮಹರ್ಷಿಗಳು ಸದಾ ಕಾಲವೂ ಭಗವಂತನ ಗುಣಗಾನವನ್ನು ಮಾಡುತ್ತಾ ಕೀರ್ತನ ಭಕ್ತಿಯಲ್ಲಿ ತ್ರಿಲೋಕ ಸಂಚಾರಿಯಾಗಿರುವವರು. ಪರಾಶರರು, ವ್ಯಾಸರು, ಶುಕರು, ವಸಿಷ್ಠರು ಬ್ರಹ್ಮರ್ಷಿಗಳು. ಭೀಷ್ಮರು ಮಹಾಧಾನುಷ್ಕರು ಅಂತೆಯೇ ಸದಾಕಾಲವೂ ಶ್ರೀಕೃಷ್ಣನ ಅವತಾರ ವೈಭವವನ್ನು ಮರೆಯದೆ-ಮೆರೆಸುವ ಪರಮಭಾಗವತರು. ಹೀಗೆ ಒಬ್ಬೊಬ್ಬರೂ ಕೂಡ ಒಂದಲ್ಲ ಒಂದು ತರಹದಲ್ಲಿ ಭಗವಂತನಲ್ಲಿ ಮುಳುಗಿದವರು.

ಮುಂದೆ ಈ ನವವಿಧವಾದ ಭಕ್ತಿಗಳನ್ನೂ ಪ್ರತ್ಯೇಕವಾಗಿ ಉದಾಹರಣೆಗಳ ಸಹಿತವಾಗಿ ವಿಮರ್ಶಿಸೋಣ.
(ಮುಂದುವರಿಯುವುದು)

ಲೇಖಕರ ಪರಿಚಯ : ಡಾ. ರಾಮಸ್ವಾಮಿಯವರು ಪರಮಾಣು ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನಂತರ ಸುಮಾರು 30 ವರ್ಷಗಳ ಕಾಲ ಭೌತಶಾಸ್ತ್ರದ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಭೌತಶಾಸ್ತ್ರದಂತೆಯೇ, ಅವರಿಗೆ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಶಾಸ್ತ್ರದಲ್ಲಿಯೂ ಆಸಕ್ತಿ. ಮಹಾಯೋಗಿಗಳಾದ ಶ್ರೀ ಶ್ರೀರಂಗಮಹಾಗುರುಗಳ ಮಾರ್ಗದರ್ಶನದಲ್ಲಿ ಆಧ್ಯಾತ್ಮಮಾರ್ಗದಲ್ಲಿ ತೊಡಗಿಕೊಂಡಿದ್ದಾರೆ. ಶ್ರೀ ಶ್ರೀರಂಗಪ್ರಿಯಸ್ವಾಮಿಯವರು ಅವರ ಗುರುಗಳಾದ ಶ್ರೀ ಶ್ರೀ ರಂಗಮಹಾ ಗುರುಗಳೊಂದಿಗೆ ನಡೆಸಿದ ಸಂಭಾಷಣೆಯ ಆಂಗ್ಲ ತರ್ಜಮೆಯ ಲೇಖನಗಳು, ‘ಆರ್ಯಸಂಕೃತಿ’ ಕನ್ನಡ ಮಾಸಿಕದಲ್ಲಿ ಕಳೆದ 12 ವರ್ಷಗಳಿಂದಲೂ ಪ್ರಕಟವಾಗಿವೆ. ಅಷ್ಟಾಂಗ ಯೋಗ ವಿಜ್ಞಾನಮಂದಿರದಿಂದ ಕನ್ನಡದಲ್ಲಿ ಹೊರಹೊಮ್ಮಿದ ‘ಶ್ರೀರಂಗ ವಚನಾಮೃತ’ ಎಂಬ ಪುಸ್ತಕಗಳು ‘Nectarine Nuggets of Shriranga Mahaguru’ ಎಂಬ ಹೆಸರಿನಲ್ಲಿ ಪುಸ್ತಕ ರೂಪವಾಗಿ ಪ್ರಕಾಶಗೊಂಡಿವೆ. ಇವಲ್ಲದೆ, ಅಷ್ಟಾಂಗ ಯೋಗ ವಿಜ್ಞಾನಮಂದಿರ ಪ್ರಕಾಶ ಪಡಿಸಿರುವ ಅನೇಕ ಕನ್ನಡ ಹಾಗೂ ಆಂಗ್ಲ ಪುಸ್ತಕ- ಲೇಖನಗಳ ಸಂಪಾದಕರಾಗಿದ್ದಾರೆ. ಶ್ರೀಮಂದಿರದ ಯೌಟ್ಯೂಬ್ ಚಾನೆಲ್‌ನಲ್ಲಿ ಹಾಗೂ ವಿಸ್ತಾರ ಓಂಕಾರ ಚಾನೆಲ್ ನಲ್ಲಿ ಇವರ ಪ್ರವಚನವು ಪ್ರಸಾರವಾಗುತ್ತಿದೆ. ಪ್ರಸ್ತುತ ಅಷ್ಟಾಂಗಯೋಗ ವಿಜ್ಞಾನಮಂದಿರಂ ಬೆಂಗಳೂರು ಶಾಖೆಯ ಕಾರ್ಯದರ್ಶಿಯಾಗಿದ್ದಾರೆ.

ಇದನ್ನೂ ಓದಿ: Navavidha Bhakti : ಮುಕ್ತಿ ನೀಡುವ ಭಕ್ತಿ

Exit mobile version