Site icon Vistara News

Navavidha Bhakti : ಭಕ್ತಿಯ ಪರಾಕಾಷ್ಠೆಗೆ ಕೀರ್ತನವೆಂಬ ಸಾಧನ

navavidha bhakti-about Keertan bhakti you should know in kannada

navavidha bhakti-about Keertan bhakti you should know in kannada

ಡಾ. ಸಿ. ಆರ್. ರಾಮಸ್ವಾಮಿ
ಗುಣಗಾನವನ್ನು, ರೂಪದ ವರ್ಣನೆಯನ್ನು ಮೈಗೂಡಿಸಿ ಕಥನ ಮಾಡುವವರೆಲ್ಲರೂ ಭಕ್ತರೇ. ಭಗವಂತನ ಗುಣಕೀರ್ತನೆಯನ್ನು ಆಸ್ವಾದಿಸಿ ಅದನ್ನು ಮತ್ತೊಬ್ಬರಿಗೆ ಹೇಳುವುದೂ ಕೀರ್ತನೆಯೇ. ಹೀಗೆ ಕೀರ್ತನೆ ಮಾಡುತ್ತಾ ಕ್ರಮೇಣ ಭಕ್ತಿಯು ವೃದ್ಧಿಯಾಗುತ್ತದೆ. ಕೀರ್ತನ ಭಕ್ತಿಗೆ (Navavidha Bhakti) ಶುಕಬ್ರಹ್ಮರ್ಷಿಯನ್ನೇ ಉದಾಹರಣೆಯಾಗಿ ಕೊಡುತ್ತಾರೆ. ಭಾಗವತೋತ್ತಮರಾದ ಶುಕರು ಭಗವಂತನನ್ನು ನೇರವಾಗಿ ಒಳಗಣ್ಣಿನಿಂದ ನೋಡಿದವರಾಗಿ ಹಾಗೆಯೇ ಭಾಗವತವನ್ನು ಹಾಡಿಹೊಗಳಿದವರು.

ಕೀರ್ತನೆ ಎಂದರೆ ಭಗವಂತನ ವಿಷಯಗಳನ್ನು ಮಾತ್ರವೇ ಹೇಳಬೇಕೆಂದಿಲ್ಲ, ಭಗವಂತನಲ್ಲಿ ತಾದಾತ್ಮ್ಯವನ್ನು ಹೊಂದಿರುವ ಸಿದ್ಧಭಕ್ತರ ಕಥೆಯನ್ನು ಕೇಳುವುದೂ ಕೂಡ ಭಕ್ತಿಗೆ ಪೋಷಕವಾಗಿರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಭಕ್ತಿಶಾಸ್ತ್ರಗಳು ಸಾರುತ್ತವೆ. ನಾವು ಭಗವಂತನನ್ನು ನೇರವಾಗಿ ನೋಡದಿರಬಹುದು, ಆದರೆ ಭಕ್ತರನ್ನು ನೋಡುತ್ತೇವೆ. ಅವರ ಬಗೆಗಿನ ಅತ್ಯಂತ ರೋಚಕವಾದ ವೃತ್ತಾಂತಗಳನ್ನು ಕೇಳಿದರೂ ಕೂಡ ಭಕ್ತಿ ರಸವು ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಅಂತಹ ಭಕ್ತರ ವಿಸ್ತಾರವಾದ ಪಟ್ಟಿಯನ್ನೇ ಕೊಡಬಹುದು.

ದೇವರ್ಷಿ ನಾರದರು ಸದಾಕಾಲ ನಾರಾಯಣನ ನಾಮ ಸಂಕೀರ್ತನೆಯನ್ನು ಮಾಡುತ್ತಲೇ ತ್ರಿಲೋಕಸಂಚಾರಿ ಯಾಗಿ ಲೋಕಕಲ್ಯಾಣ ಮಾಡುವವರು. ಹಾಗೆಯೇ ತಮಿಳುನಾಡಿನ ಆಳ್ವಾರರುಗಳು. ಭಗವದ್ಭಾವದಲ್ಲಿ, ಭಗವದ್ಭಕ್ತಿಯಲ್ಲಿ ಆಳವಾಗಿ ಮುಳುಗಿದ್ದರಿಂದ ಅವರಿಗೆ ‘ಆಳ್ವಾರ್’ ಎಂಬ ಹೆಸರು ಎಂದು ವಿವರಿಸುತ್ತಾರೆ. ಆಳ್ವಾರರು ತಮ್ಮ ಒಳಗಣ್ಣಿನಿಂದ ಭಗವಂತನನ್ನು ನೋಡುತ್ತಲೇ ಕೊಂಡಾಡುತ್ತಾರೆ. ಅವರು ದೇವಸ್ಥಾನಗಳಲ್ಲಿನ ದೇವರ ವಿಗ್ರಹವನ್ನು ವೀಕ್ಷಿಸುತ್ತಾ ಭಕ್ತಿಭಾವಕ್ಕೆ ಆರೋಹಣ ಮಾಡಿದಾಗ ಪಾಶುರಗಳು(ಪದ್ಯಗಳು) ಸಹಜವಾಗಿ ಅವರಿಂದ ಹೊರಬರುತಿದ್ದವು. ಅವುಗಳನ್ನು ಹಾಗೆಯೇ ಗಾನಮಾಡುತ್ತಿದ್ದರು. ಅಂದರೆ ಅವರ ಅನುಭವಗಳೇ ಪದ್ಯರೂಪದಲ್ಲಿ ಹೊರಹೊಮ್ಮುತ್ತಿದ್ದವು.

“ಎಷ್ಟು ಪ್ರಕಾಶಮಯನಾಗಿದ್ದೀಯಪ್ಪಾ ನೀನು!” ಎಂಬುದಾಗಿ ವರ್ಣಿಸಿದರೆ, ಆ ವಿಗ್ರಹದಲ್ಲಿ ಪ್ರಕಾಶ ಕಾಣದಿರಬಹುದು. ಅವರು ಅಂತರಂಗದಲ್ಲಿ ದರ್ಶಿಸುವ ಭಗವಂತನು ಪ್ರಕಾಶಮಯನಾಗಿ ಗೊಚರಿಸಿದಾಗ ತಕ್ಷಣವೇ ಚಿಮ್ಮಿ ಬರುತ್ತದೆ ಆ ವರ್ಣನೆ. ಹೊರಗಿನ ವಿಗ್ರಹ ಸಹಾಯ ಮಾಡುತ್ತಿದೆ ಅಷ್ಟೇ. ವಾಸ್ತವವಾಗಿ ಅವರು ವಿವರಿಸುವುದು ಒಳಗಿನ ಮೂರ್ತಿಯನ್ನೇ. “ಒಳಗಿರುವುದು ನಿಧಿ; ಹೊರಗೆ ವಿಗ್ರಹ ರೂಪದಲ್ಲಿರುವುದು ಪ್ರತಿನಿಧಿ. ಪ್ರತಿನಿಧಿಯು ನಿಧಿಯಕಡೆ ಒಯ್ಯುವಂತಿರಬೇಕು” ಎಂಬ ಶ್ರೀರಂಗ ಮಹಾಗುರುವಿನ ವಾಣಿಯು ಸ್ಮರಣೆಗೆ ಬರುತ್ತದೆ. ಭಗವಂತನ ಗುಣಗಳನ್ನು, ವೀರ್ಯವನ್ನು, ಶೌರ್ಯವನ್ನು ವಿವರಿಸುವಾಗ ಶಿಲಾವಿಗ್ರಹದಲ್ಲಿ ಅವು ಯಾವುದೂ ಕಾಣದಿರಬಹುದು.

ಆದರೆ ವಿಗ್ರಹದಲ್ಲಿ ರಾಮನನ್ನು ನೋಡುವಾಗ, ಅವನು ಧನಸ್ಸನ್ನು ಹಿಡಿದಿರುವ ಭಂಗಿಯನ್ನು ನೋಡಿದಕೂಡಲೇ ಅವರ ಮನಸ್ಸು ಒಳಗೆಳೆದು, ಅಂತರಂಗದ ರಾಮನ ದರ್ಶನವಾಗಿ ಅವನ ವೀರ್ಯ-ಶೌರ್ಯ-ಪರಾಕ್ರಮಗಳ ಬಳಿ ನಯನ ಮಾಡುತ್ತದೆ. ಕವಿಗಳೂ ಆಗಿದ್ದರಿಂದ ತಾನಾಗಿಯೇ ಕಾವ್ಯಮಯವಾದ ಪದ್ಯಗಳು ಅವರಿಂದ ಹೊರಹೊಮ್ಮುವುದು.

ಹಾಗೆಯೇ ಬಂಗಾಳದ ಶ್ರೀಕೃಷ್ಣಚೈತನ್ಯರು. ಅವರು ಕಥೆಗಳನ್ನು ಹೇಳುತ್ತಿರಲಿಲ್ಲ, ಕೃಷ್ಣನನಾಮ ಸಂಕೀರ್ತನೆ ಮಾಡುತ್ತಲ್ಲೇ ಬೀದಿಬೀದಿಗಳಲ್ಲಿ ನಡೆದಾಡುತ್ತಿದ್ದವರು. ಅವರ ನಾಮ ಸಂಕೀರ್ತನೆಯ ಮಧುರ ಧ್ವನಿಯನ್ನು ಆಲಿಸುತ್ತ ಅವರನ್ನು ಹಿಂಬಾಲಿಸುತ್ತಿದ್ದವರು ನೂರಾರು ಮಂದಿ! ಅಷ್ಟು ಆಕರ್ಷಣೆ! ಅವರ ಸಂಕೀರ್ತನೆ ಕೇವಲ ಮನುಷ್ಯರನ್ನು ಆಕರ್ಷಿಸಿದ್ದಷ್ಟೆ ಅಲ್ಲ, ಪ್ರಾಣಿಗಳ ಮೇಲೂ ಅನಿರ್ವಚನೀಯವಾದ ಪರಿಣಾಮವನ್ನು ಉಂಟುಮಾಡುತ್ತಿತ್ತು ಎಂಬುದಾಗಿ ಅವರ ಜೀವನ ಚರಿತ್ರೆಯಲ್ಲಿ ನೋಡುತ್ತೇವೆ. ಒಮ್ಮೆ ಯಾತ್ರೆಯಲ್ಲಿ ದಟ್ಟವಾದ ಕಾಡಿನ ಮಧ್ಯೆ ಹುಲಿ, ಸಿಂಹ, ಆನೆ ಮುಂತಾದ ಅನೇಕ ಪ್ರಾಣಿಗಳು ಗುಂಪುಗುಂಪಾಗಿ ಬಂದಾಗ, ಅವರು ಯಾವುದಕ್ಕೂ ಹೆದರಲಿಲ್ಲ. ತನ್ಮಯರಾಗಿ ಭಗವದ್ಭಾವದಲ್ಲಿ ಮುಳುಗಿ ಸಂಕೀರ್ತನೆ ಮಾಡುವವರಿಗೆ ಭಯವೇ ಇರುವುದಿಲ್ಲ ಎಂಬ ಮಾತಿಗೆ ಉದಾಹರಣೆ ಶ್ರೀಕೃಷ್ಣಚೈತನ್ಯರೇ.

ಅವರ ಮಧುರವಾದ ಸಂಕೀರ್ತನೆಯನ್ನು ಆಲಿಸುತ್ತ ಅವುಗಳೂ ಕೂಡ ಕುಣಿಯಲಿಕ್ಕೆ ಆರಂಭಿಸಿದುವಂತೆ! ಯಾವ ಪ್ರಾಣಿಯೂ ಇವರಿಗೆ ಹಿಂಸೆಯನ್ನು ಮಾಡಲಿಲ್ಲ. ಅವುಗಳಿಗೆ ಏನರ್ಥವಾಯಿತೋ ಬಿಟ್ಟಿತೋ ತಿಳಿಯದು, ಆದರೆ ಈ ಪರಿಣಾಮವು ನಾಮಸಂಕೀರ್ತನೆಯ ಪ್ರಭಾವವನ್ನು ಎತ್ತಿತೋರಿಸುತ್ತದೆ.

ಹಾಗೆಯೇ ಮರಾಠಿಯ ತುಕಾರಾಮರು, ನಾಮದೇವರು, ಕರ್ನಾಟಕದ ಪುರಂದರದಾಸರು, ಕನಕದಾಸರು, ವಾಗ್ಗೇಯಕಾರರಾದ ತ್ಯಾಗರಾಜರು ಮುಂತಾದ ಅನೇಕಾನೇಕ ಭಕ್ತಶಿರೋಮಣಿಗಳ ಕೀರ್ತನೆಯ ಪ್ರಭಾವ ಸುಪ್ರಸಿದ್ಧ. ಇವರುಗಳ ಸಾಹಿತ್ಯ ರಾಶಿಯೂ ವಿಪುಲವಾಗಿವೆ. ಶತಮಾನಗಳಿಂದ ರಾಜ್ಯದಾದ್ಯಂತ ಭಕ್ತ ಗೋಷ್ಠಿಗಳು ಈ ಸಾಹಿತ್ಯದಿಂದ ಸ್ಫೂರ್ತಿಯನ್ನು ಪಡೆದು ಭಜನೆ, ಗಾನ, ನೃತ್ಯಗಳಲ್ಲೂ ನಿತ್ಯ ಜೀವನದಲ್ಲೂ ಅಳವಡಿಸಿಕೊಂಡು ತಮ್ಮ ಜೀವನವನ್ನು ಪಾವನ ಮಾಡಿಕೊಂಡಿರುವುದು ಸರ್ವ ವಿದಿತ.

ಕೀರ್ತನ ಭಕ್ತಿಯಲ್ಲಿ, ಭಜನೆಯಲ್ಲಿ ಉತ್ತರಭಾರತದ ಮೀರಾಭಾಯಿಯನ್ನು ಮೀರಿಸುವವರಿಲ್ಲ ಎನ್ನಬೇಕು. ಆಕೆಯ ಭಜನೆಯ ಪರವಶತೆಯಲ್ಲಿ ಅನೇಕ ಭಕ್ತರೂ ಸೇರಿ ರಾತ್ರಿಯೆಲ್ಲ ಭಜನೆಯಲ್ಲೇ ಕಳೆದುಬಿಡುತ್ತಿದ್ದರಂತೆ. ಭಜನೆಯು ಕ್ರಮೇಣ ನೃತ್ಯಕ್ಕೆ ತಿರುಗಿದುದೂ ಅಪರೂಪವೇನಲ್ಲ. ಎದುರುಗಿದ್ದ ಆ ರ್ಕೃಷ್ಣನ ವಿಗ್ರಹವು ಅವಳ ಪಾಲಿಗೆ ವಿಗ್ರಹವಲ್ಲ; ಸಾಕ್ಷಾತ್ ಕೃಷ್ಣನೇ ಆಗಿದ್ದು ಅವನ ಜೊತೆ ಸಂಭಾಷಣೆ ಮಾಡುತ್ತಿದ್ದುದೂ ಜನಜನಿತ ವಿಷಯವೇ ಅಗಿತ್ತು. ಆದರೆ ಕೃಷ್ಣನ ಮಾತುಗಳು ಮಾತ್ರ ಅವಳ ಕಿವಿಗಷ್ಟೇ, ಇತರರಿಗಲ್ಲ!

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇವರೆಲ್ಲರೂ ಸಿದ್ಧ ಭಕ್ತರುಗಳು. ಕೀರ್ತನ ಭಕ್ತಿಗೆ ಉದಾಹರಣೆಯಾಗಿ ಜ್ಞಾಪಿಸಿಕೊಳ್ಳ ಬಹುದು. ಆ ಭಕ್ತ ಶಿರೋಮಣಿಗಳ ಧ್ವನಿಗಳು ಎಷ್ಟು ಪ್ರಭಾವಶಾಲಿಯಾಗಿ ಇದ್ದಿರಬೇಕು. ದುರದೃಷ್ಟವಶಾತ್ ಆ ಧ್ವನಿ-ಮುದ್ರಣಗಳು ನಮಗೆ ಇಂದು ಲಭ್ಯವಿಲ್ಲ; ಸಾಹಿತ್ಯ ಮಾತ್ರವೇ ಉಪಲಬ್ದವಿರುವುದು.

ಕೀರ್ತನೆಯ ಕುರಿತ ಈ ಲೇಖನವನ್ನು ಇಲ್ಲಿ ನೋಡಿ!

ಆದರೆ, ನಮ್ಮ ಅಭಿಪ್ರಾಯದಲ್ಲಿ, ಆಧುನಿಕ ಯುಗದಲ್ಲಿನ ಅನೇಕಾನೇಕ ಯಂತ್ರೋಪಕರಣಗಳ ಸಹಾಯದಿಂದ ಉತ್ತಮವಾದ ಸಾಕ್ಷ್ಯ-ಚಿತ್ರಗಳ ತಯಾರಿಕೆ ಸಾಧ್ಯವಾಗಿವೆ. ಅವುಗಳ ಮೂಲಕ ರಾಮಾಯಣ, ಮಹಾಭಾರತ, ಭಾಗವತ ಮುಂತಾದವುಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಕೇವಲ ಶ್ರವಣ ಅಷ್ಟೇ ಅಲ್ಲ, ದೃಶ್ಯಮಾಧ್ಯಮವೂ ದೊರಕುವುದು ಇನ್ನೆಷ್ಟು ಪರಿಣಾಮಕಾರಿ. ಕೃಷ್ಣನ ಕಥೆಗಳನ್ನೆಲ್ಲಾ ಟಿವಿಯಲ್ಲಿ ನೋಡುತ್ತೇವೆ. ಎಷ್ಟು ಪರಿಣಾಮಕಾರಿಯಾಗಿರುತ್ತವೆ! ಎನ್ನುವುದು ಎಲ್ಲರ ಅನುಭವಕ್ಕೂ ಬಂದಿರುವ ವಿಷಯವೇ ಆಗಿದೆ. ಭಕ್ತಿಭಾವ ತುಂಬಿದ ಪಟುವಾದ ನಟನಾದರೆ ಭಗವದ್ರಸವನ್ನು ಉತ್ಕೃಷ್ಟ ರೀತಿಯಲ್ಲಿ ಬಿಂಬಿಸಲು ಸಾಧ್ಯವಾದೀತು. ಆಯಾ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸುವುದು ಅದೆಷ್ಟು ಪರಿಣಾಮಕಾರೀ ! ಭಕ್ತಿರಸ ಪ್ರವೃದ್ಧಿಗೆ ಅದೆಷ್ಟು ಪ್ರಯೋಜನಕಾರೀ !

ಇವೆಲ್ಲವೂ ಕೂಡ ಕೀರ್ತನ ಭಕ್ತಿಯ ವಿವಿಧ ರೂಪಗಳು. ಭಕ್ತಿಯನ್ನು ವೃದ್ಧಿ ಮಾಡುವಂತಹ ಉತ್ತಮೋತ್ತಮವಾದ ಮಾಧ್ಯಮಗಳು.
(ಮುಂದುವರಿಯುವುದು)

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಇದನ್ನೂ ಓದಿ: Navavidha Bhakti : ಭಕ್ತಿಯನ್ನು ವರ್ಧಿಸುವ ಕಥಾಶ್ರವಣ

Exit mobile version