ಡಾ. ಸಿ. ಆರ್. ರಾಮಸ್ವಾಮಿ
ಭಕ್ತಿಯಲ್ಲಿ ಮತ್ತೊಂದು ಪ್ರಸಿದ್ಧವಾದ ಪ್ರಕಾರ ‘ಸಖ್ಯಭಕ್ತಿ’ (Sakhya Bhakti). ಈ ಕುರಿತು ಕಳೆದ ವಾರ ಇಲ್ಲಿ ಓದಿದ್ದೇವೆ. ರಾಗ-ಸ್ನೇಹಭಾವದಿಂದ ಕೂಡಿ ಭಗವಂತನನ್ನು ಆರಾಧಿಸುವುದೇ ‘ಸಖ್ಯ-ಭಕ್ತಿ’ . ಈ ರೀತಿಯ ಭಕ್ತಿಗೆ ಹೆಸರಾದವರ ಪರಿಚಯವನ್ನು ಈ ವಾರ ಮಾಡಿಕೊಳ್ಳೋಣ.
ಕುಚೇಲ(ಸುದಾಮ)-ಕೃಷ್ಣ
ಸುದಾಮನು ಶ್ರೀಕೃಷ್ಣನ ಸಹಪಾಠೀ-ಜೊತೆಗಾರ. ಒಮ್ಮೆ ಗುರುಕುಲದಲ್ಲಿದ್ದಾಗ ಇವರಿಬ್ಬರೂ ಸೌದೆಗಾಗಿ ಅರಣ್ಯಕ್ಕೆ ಹೊರಟಿದ್ದರು. ಗುರುಮಾತೆ ಅವಲಕ್ಕಿಯನ್ನು ಕಟ್ಟಿಕೊಟ್ಟಳು. ಜೋರುಮಳೆಯ ಕಾರಣದಿಂದ ರಾತ್ರಿಯೆಲ್ಲಾ ಮರದ ಮೇಲೆ ವಾಸ. ಹಸಿವು ತಡೆಯಲಾಗದೇ ಕೃಷ್ಣನ ಪಾಲಿನ ಅವಲಕ್ಕಿಯನ್ನೂ ಸುದಾಮನೇ ಮುಗಿಸಿ, ನಂತರ ಕೃಷ್ಣನಬಳಿ ಕ್ಷಮಾಪಣೆ ಕೇಳಿಕೊಳ್ಳುತ್ತಾನೆ. ಆಗ ಕೃಷ್ಣನು ವಿನೋದವಾಗಿ “ನನಗೆ ಸೇರಬೇಕಾದ ಪದಾರ್ಥವನ್ನು ನಾನು ಬಿಡುವುದಿಲ್ಲ, ಸಮಯ ಬಂದಾಗ ತೆಗೆದುಕೊಳ್ಳುತ್ತೇನೆ” ಎನ್ನುತ್ತಾನೆ.
ಮುಂದೆ ಸುದಾಮನು ಗೃಹಸ್ಥಾಶ್ರಮದಲ್ಲಿ ದಟ್ಟದರಿದ್ರನಾಗಿರುತ್ತಾನೆ. ಒಮ್ಮೆ ಪತಿವ್ರತಾಶಿರೋಮಣಿಯಾದ ಪತ್ನಿಯ ಸಲಹೆಯಂತೆ ಗೆಳೆಯ ದ್ವಾರಕಾಧೀಶ ಮೋಕ್ಷಪ್ರದ ಮುಕುಂದನಲ್ಲಿ ಲೌಕಿಕಸಂಪತ್ತನ್ನು ಬೇಡುವುದು ಇಷ್ಟವಿಲ್ಲದಿದ್ದರೂ ಕಡುಬಡತನ ಬೇಡುವಂತೆ ಪ್ರೇರೇಪಿಸುತ್ತದೆ. ಪ್ರಿಯ ಸ್ನೇಹಿತನೂ ರಾಜನೂ ಆದ ಕೃಷ್ಣನ ಬಳಿ ರಿಕ್ತಹಸ್ತನಾಗಿ ಹೋಗುವ ಮನಸ್ಸಿಲ್ಲದೇ ಮೂರು ಹಿಡಿ ಅವಲಕ್ಕಿಯನ್ನು ಭಿಕ್ಷೆಬೇಡಿ ತೆಗೆದುಕೊಂಡು ಹೊರಡುತ್ತಾನೆ.
ಕೃಷ್ಣನು ಓಡಿಬಂದು ಅವನನ್ನು ಆಲಿಂಗಿಸಿ ಪಾದಪೂಜೆಗೈದು ತಲೆಗೆ ಪ್ರೋಕ್ಷಣೆ ಮಾಡಿಕೊಳ್ಳುತ್ತಾನೆ. ಸಕಲೋಪಚಾರಗಳನ್ನೂ ಮಾಡಿಸಿ ಏಕಾಂತದಲ್ಲಿ ಕರೆದೊಯ್ದು ಬಾಲ್ಯದ ಘಟನೆಗಳನ್ನೆಲ್ಲಾ ನೆನೆಪಿಸಿಕೊಂಡು ಸಂತೋಷಪಡುತ್ತಾನೆ. ಅವನು ತಂದ ಅವಲಕ್ಕಿಯಲ್ಲಿ ಒಂದು ಹಿಡಿಯನ್ನು ತೆಗೆದು ಕೃಷ್ಣನು ತನ್ನ ಬಾಯಿಗೆ ಹಾಕಿಕೊಳ್ಳುತ್ತಾ ಬಾಲ್ಯದ ಸಂಕಲ್ಪವನ್ನು ಪೂರೈಸಿಕೊಳ್ಳುತ್ತಾನೆ. ಮಧುರವಾದ ಮಾತುಗಳನ್ನಾಡುತ್ತಲೇ ರಾತ್ರಿಯು ಕಳೆಯಿತು. ಬಂದ ಕಾರಣವನ್ನು ಕೃಷ್ಣನು ಕೇಳಲಿಲ್ಲ; ಸುದಾಮನೂ ಹೇಳಲಿಲ್ಲ! ತನ್ನ ಕಷ್ಟಗಳನ್ನು ತೋಡಿಕೊಳ್ಳುವ ವಿಷಯ ಮರತೇಹೋಯಿತು; ಹಾಗೆಯೇ ಹೊರಟುಬಂದ! ಆದರೆ ಮನೆಯ ಕಡೆ ಹೋಗುತ್ತಿರುವಂತೆಯೇ ಪರಮಾಶ್ಚರ್ಯ! ಇವನ ಮನೆ-ಊರು ಎಲ್ಲವೂ ಪರಿವರ್ತನೆಯಾಗಿ ಸೇವಕರೊಂದಿಗೆ ಐಶ್ವರ್ಯವಂತನಾಗುತ್ತಾನೆ.
ಸಾಧ್ವಿನಿಯಾದ ಪತ್ನಿಯೂ ಸುಂದರ ಉಡಿಗೆ-ತೊಡಿಗೆಗಳಿಂದ ಅಲಂಕೃತಳಾಗಿರುತ್ತಾಳೆ. ಎಲ್ಲವೂ ಅವನ ನಿರೀಕ್ಷೆಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಡೆದುಹೋಗುತ್ತದೆ. ಆದರೂ ವಿವೇಕ-ವೈರಾಗ್ಯಗಳಿಂದ ಕೂಡಿದ ದಂಪತಿಗಳು ಎಲ್ಲವನ್ನೂ ಭಗವಂತನ ಪ್ರಸಾದ-ಅನುಗ್ರಹವೆಂದು ಸ್ವೀಕರಿಸಿ ಶುದ್ಧಜೀವನವನ್ನು ನಡೆಸುತ್ತಾರೆ. ಸಖ್ಯಭಕ್ತಿಭಾವವನ್ನು ಎತ್ತಿ ತೋರಿಸುವಂತಹ ಕೃಷ್ಣ-ಕುಚೇಲನ ಒಂದು ಸಮ್ಮಿಲನದ ವೃತ್ತಾಂತವಿದಾಗಿದೆ.
ಬಾಲ್ಯದಲ್ಲಿ ಕೃಷ್ಣನು ಸಮಾನವಯಸ್ಕರ ಜೊತೆಯಲ್ಲಿಯೇ ಆಟವಾಡುತ್ತಿರುತ್ತಾನೆ. “ಮಾಕನ್ ಕಾ ಚೋರ್”ಆಗಿ ಬೆಣ್ಣೆ ಕದಿಯುವಾಗ ಇವನು ಅವರುಗಳ ಬೆನ್ನು-ಹೆಗಲಮೇಲೆ ಹತ್ತುವುದರ ಮೂಲಕ ತನ್ನ ಪಾದಸ್ಪರ್ಶದಿಂದ ಅವರನ್ನು ಪಾವನರನ್ನಾಗಿಸುತ್ತಾನೆ. ಅವರ ಸಖನಾಗಿಯೂ ಬಾಲಸೇನಾನಾಯಕನಾಗಿಯೂ ಅಘಾಸುರ, ಬಕಾಸುರನಂತಹ ರಾಕ್ಷಸರುಗಳ ದೆಸೆಯಿಂದ ಇವರನ್ನು ರಕ್ಷಿಸುತ್ತಾನೆ.
ಶ್ರೀರಾಮನ ಸಖ-ಗುಹ
ಶ್ರೀರಾಮನು ಗಂಭೀರವ್ಯಕ್ತಿಯಾದರೂ ಮಿತ್ರನಂತೆ ಸುಲಭನಾಗಿ ವರ್ತಿಸಿದ ಕೆಲವು ಘಟನೆಗಳು: ಗುಹನು ಒಬ್ಬ ನಿಷಾದ. ವನವಾಸಕ್ಕೆ ರಾಮನ ಆಗಮನವನ್ನರಿತು ಓಡಿಬಂದು ಪೂಜಿಸಿ ಕೆಳಗೆ ಕೂರುತ್ತಾನೆ. ಆದರೆ ರಾಮನು “ನೀನು ನನ್ನ ಮಿತ್ರ” ಎಂದು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡು ಹೆಗಲಮೇಲೆ ಕೈಹಾಕಿ ಪ್ರೀತಿಯಿಂದ ಮಿತ್ರಭಾವವನ್ನು ವ್ಯಕ್ತಪಡಿಸಿಕೊಳ್ಳುತ್ತಾನೆ. ಮಿತ್ರಭಾವದಲ್ಲಿ ವಿಶೇಷವೆಂದರೆ ಪರಸ್ಪರ ಮಾತುಗಳಲ್ಲಿ ಹೆಚ್ಚುಕಮ್ಮಿಯಾದರೂ ಸಂತೋಷವಾಗಿ ಸ್ವೀಕರಿಸುತ್ತಾರೆ.
ರಾಮಚರಿತಮಾನಸದಲ್ಲಿ ಒಂದು ಸ್ವಾರಸ್ಯ ಪ್ರಸಂಗ. ರಾಮ-ಲಕ್ಷ್ಮಣ-ಸೀತೆಯರನ್ನು ದೋಣಿಯಲ್ಲಿ ಕೂರಿಸಿ ಸರಯೂ ನದಿಯನ್ನು ದಾಟಿಸಬೇಕಿತ್ತು. ಕೂರಿಸುವ ಮುನ್ನ ವಿನೋದವಾಗಿ ಒಂದು ಮಾತುಕೊಡಬೇಕೆನ್ನುತ್ತಾನೆ ಗುಹ – “ನನಗೊಂದು ಭಯವಿದೆ. ನಿನ್ನ ಪಾದದಲ್ಲಿ ಅದೇನೋ ಒಂದು ಮೂಲಿಕೆ ಇದೆಯಂತೆ. ಅದರ ಪ್ರಭಾವದಿಂದ ನಿನ್ನ ಪಾದಸ್ಪರ್ಶವಾದ ಕಲ್ಲು ಸ್ತ್ರೀಯಾಗಿಬಿಟ್ಟಿತಂತೆ. ಅಂತೆಯೇ ನನ್ನ ದೋಣಿಯೂ ಸ್ತ್ರೀಯಾಗಿಬಿಟ್ಟರೆ ನನ್ನ ಜೀವನೋಪಾಯವೇನಾಗುವುದು? ಸ್ತ್ರೀರಕ್ಷಣೆಯ ಹೊರೆಯೂ ಸೇರಿಕೊಳ್ಳುವುದಲ್ಲ! ಪರಿಹಾರವಾಗಿ ಮೊದಲು ನಿನ್ನ ಪಾದವನ್ನು ಚೆನ್ನಾಗಿ ತೊಳೆದು ಆ ಮೂಲಿಕೆಯನ್ನು ತೆಗೆದುಹಾಕಿಬಿಡುತ್ತೇನೆ” ಎಂದು ಪ್ರಾರ್ಥಿಸಿದ ಗುಹಸಖನ ಭಕ್ತಿಭಾವವನ್ನೂ ಚತುರತೆಯನ್ನೂ ಮೆಚ್ಚಿದ ಶ್ರೀರಾಮನು ಪಾದಗಳನ್ನು ನೀಡುತ್ತಾನೆ.
ಶ್ರೀರಾಮ- ಸುಗ್ರೀವ
ಸುಗ್ರೀವ-ಸಖ್ಯದಲ್ಲಿ ಕೈಹಿಡಿದು ಅಗ್ನಿಪ್ರದಕ್ಷಿಣೆ ಮಾಡುವುದರ ಮೂಲಕ ಮಿತ್ರತ್ವವನ್ನು ಸಾಬೀತುಪಡಿಸುತ್ತಾನೆ. ಕಿಷ್ಕಿಂಧೆಯಲ್ಲಿ ಆಂಜನೇಯನು ರಾಮ-ಲಕ್ಷ್ಮಣರನ್ನು ಪರಿಚಯಿಸಿದ ಕೂಡಲೇ ಹತ್ತಿರವಿದ್ದ ಒಂದು ವೃಕ್ಷವನ್ನು ಮುರಿದುಹಾಕಿ ರಾಮನನ್ನು ಕೂರಿಸಿ ತಾನೂ ಪಕ್ಕದಲ್ಲೇ ಕುಳಿತುಕೊಳ್ಳುತ್ತಾನೆ. ಇದು ಸುಗ್ರೀವನ ಉಪಚಾರ-ಮಿತ್ರಭಾವ.
ಇವನಿಗೆ ಭಕ್ತಿಯಿಲ್ಲವೆಂದಲ್ಲ. ರಾಮನಿಗೆ ಸಖ್ಯಭಾವದಲ್ಲೇ ಪರೀಕ್ಷೆ ಕೊಡುತ್ತಾನೆ. ಕಾರಣ ಅವನ ಮೇಲೆ ಅಪನಂಬಿಕೆಯಿಂದಲ್ಲ. ವಾಲಿಯನ್ನು ಸಂಹಾರ ಮಾಡಬೇಕಾದರೆ ರಾಮನ ಶಕ್ತಿಪರೀಕ್ಷೆ ಆಗಲೇಬೇಕೆಂದು ಒಂದು ಸಾಲವೃಕ್ಷವನ್ನು ಭೇದಿಸಲು ಯೋಜಿಸಿದ. ಪರೀಕ್ಷೆಯಲ್ಲಿ ಏಳು ಸಾಲವೃಕ್ಷಗಳನ್ನು ಒಂದೇ ಬಾಣದಿಂದ ಭೇದಿಸಿದ ಶೂರ ಶ್ರೀರಾಮ. ಮತ್ತೊಂದು, ಮಹಾಪರಾಕ್ರಮಿ ಅಸುರನಾದ ದುಂದುಭಿಯ ಅಸ್ಥಿಪಂಜರವನ್ನು ತನ್ನ ಪಾದಾಂಗುಷ್ಠದಿಂದ ಎಷ್ಟೋ ಯೋಜನ ದೂರ ಎಸೆದ ಧೀರ-ರಾಮನನ್ನು ಪೂರ್ಣವಾಗಿ ಒಪ್ಪಿಕೊಳ್ಳುತ್ತಾನೆ ಸುಗ್ರೀವ. ಶ್ರೀರಾಮನು ಮಿತ್ರಭಾವದಿಂದಲೇ ತನ್ನನ್ನು ಪರೀಕ್ಷೆಗೊಳಪಡಿಸಿಕೊಂಡನಲ್ಲವೇ?
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಶ್ರೀರಾಮ- ವಿಭೀಷಣ
‘ದೇಶ-ಹೆಂಡತಿ-ಮಕ್ಕಳು-ಐಶ್ವರ್ಯವೆಲ್ಲವನ್ನೂ ತ್ಯಾಗಮಾಡಿ ಶರಣಾಗತನಾಗಿ ಬಂದಿದ್ದೇನೆ ಸ್ವೀಕರಿಸುವುದು-ಬಿಡುವುದು ನಿನಗೆ ಸೇರಿದ್ದು’ ಎಂದು ಘೋಷಣೆಮಾಡಿ ಬಂದವನು ಭಕ್ತವಿಭೀಷಣ. ರಾಜ್ಯದಾಸೆ ಇಲ್ಲ ಇವನಿಗೆ. ನನ್ನ ಮಿತ್ರನಂತೆ ನೋಡಿಕೊಳ್ಳುತ್ತೇನೆ ಎಂದು ಅಭಯ ನೀಡುತ್ತಾನೆ ಶ್ರೀರಾಮ. ಇಂದ್ರಜಿತನು ಯುದ್ಧದಲ್ಲಿ ವಿಭೀಷಣನನ್ನು ನೋಡಿ ಕೋಪದಿಂದ ನಿಂದಿಸಿ ಅವನ ಸಂಹಾರಕ್ಕಾಗಿ ದಿವ್ಯಾಸ್ತ್ರ ಒಂದನ್ನು ಅವನಮೇಲೆ ಪ್ರಯೋಗಿಸುತ್ತಾನೆ. ಆಗ ತಕ್ಷಣವೇ ಪಕ್ಕದಲ್ಲಿದ್ದ ಶ್ರೀರಾಮ ಅವನನ್ನು ಪಕ್ಕಕ್ಕೆ ಸರಿಸಿ ಆ ಅಸ್ತ್ರವನ್ನು ತಾನು ಸ್ವೀಕರಿಸಿಬಿಡುತ್ತಾನೆ. ಅಮೋಘವಾದ ಅಸ್ತ್ರದಿಂದ ಒಂದು ಕ್ಷಣ ರಾಮನೇ ಮೂರ್ಛೆಬೀಳುವಂತಾದರೂ ನಂತರ ಚೇತರಿಸಿಕೊಂಡು ಹೇಳುತ್ತಾನೆ: “ಮಿತ್ರನಾದ ನಿನ್ನನ್ನು ಕಾಪಾಡುವ ಜವಾಬ್ದಾರಿ ನನಗಿದೆ; ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ನಿನ್ನನ್ನು ಕಾಪಾಡುವುದು ನನ್ನ ಧರ್ಮ.” ಇದೇ ಮಿತ್ರತ್ವದ ಆದರ್ಶ.
ಮಿತ್ರತ್ವವನ್ನು ವ್ಯಕ್ತಪಡಿಸುವುದರಲ್ಲಿ ರಾಮ-ಕೃಷ್ಣರು ನಿಸ್ಸೀಮರು. ಇಬ್ಬರನ್ನೂ ಮಿತ್ರರನ್ನಾಗಿ ಆರಿಸಿಕೊಂಡವರೆಲ್ಲರೂ ನಿಜಕ್ಕೂ ಧನ್ಯರು. ಸಖ್ಯದಲ್ಲಿರುವ ಸ್ನೇಹವೇ(ಅಂಟೇ) ಭಕ್ತಿಗೆ ಕಾರಣ. ಇದು ಒಂದು ತರಹದ ದಾಸ್ಯಭಕ್ತಿಯೇ. ಇವರೆಲ್ಲರೂ ಶರಣಾಗತರಾಗಿರುವುದನ್ನೂ ಗಮನಿಸಬಹುದು. ಈ ಹಂತದಲ್ಲಿ ದಾಸ್ಯಭಕ್ತಿಗೂ, ಸಖ್ಯಭಕ್ತಿಗೂ, ಶರಣಾಗತಭಕ್ತಿಗೂ ಹೆಚ್ಚು ಅಂತರವಿರುವುದಿಲ್ಲ.
– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ, ಬೆಂಗಳೂರು
ಇದನ್ನೂ ಓದಿ : Prerane : ಕಿವುಡ, ಕುರುಡ ಮತ್ತು ಮೂಕ; ಎಲ್ಲರೂ ದೃತರಾಷ್ಟ್ರರೇ!