Site icon Vistara News

Navavidha Bhakti : ನಮಸ್ಕಾರ ಕೂಡ ಭಕ್ತಿಯ ಒಂದು ಪ್ರಕಾರ!

navavidha bhakti about Vandana bhakti you should know in kannada

#image_title

ಡಾ. ಸಿ. ಆರ್. ರಾಮಸ್ವಾಮಿ
ನವವಿಧ ಭಕ್ತಿಯಲ್ಲಿ (Navavidha Bhakti ) ಒಂದಾದ ‘ವಂದನಂ’ ಎನ್ನುವುದಕ್ಕೆ ನಮನ, ಪ್ರಣಾಮ, ನಮಸ್ಕಾರ ಮುಂತಾದ ಬೇರೆ ಬೇರೆ ಪದಗಳುಂಟು. ಈಗ ನಮಸ್ಕಾರ ಎನ್ನುವುದು ಪ್ರಸಿದ್ಧವಾಗಿದೆ. ವಂದನದಲ್ಲಿ ಹಲವು ಪ್ರಭೇದಗಳಿವೆ. ಉದಾಹರಣೆಗೆ ಉತ್ತರಭಾರತದಲ್ಲಿ ಹಿರಿಯರನ್ನು ನೋಡಿದೊಡನೆಯೇ ಒಂದು ಕೈಯಲ್ಲಿ ಅವರ ಪಾದವನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವ ರೂಢಿಯಿದೆ. ದಕ್ಷಿಣದಲ್ಲಿ ಸಾಷ್ಟಾಂಗನಮಸ್ಕಾರ, ಅರ್ಧನಮಸ್ಕಾರ, ಪಂಚಾಂಗನಮಸ್ಕಾರ ಮುಂತಾಗಿ ರೂಢಿಗಳಿವೆ.

ಅಷ್ಟೂ ಆಗದಿದ್ದಾಗ ನಿಂತಲ್ಲೇ ಎರಡು ಕೈಗಳನ್ನೂ ಹೃದಯದ ನೇರದಲ್ಲಿ ಜೋಡಿಸಿ ನಮಸ್ಕಾರ ಮಾಡುವುದುಂಟು. ಒಂದೇ ಕೈಯನ್ನು ಹೃದಯಕ್ಕೆ ಸೇರಿಸಿ ಮಾಡುವ ರೂಢಿಯೂ ಉಂಟು. ಈಗ ಕೈಕುಲುಕುವುದು, ತಬ್ಬಿಕೊಳ್ಳುವುದು ಮುಂತಾಗಿ ಅನೇಕ ರೀತಿಯ ಗೌರವ-ಸೂಚಕವಾದ ಕ್ರಿಯೆಗಳು ಕಾಣಿಸುತ್ತಿವೆ.

ನಮಸ್ಕಾರ ಎಂದರೇನು?

ನಮ್ಮ ಸಂಸ್ಕೃತಿಯಲ್ಲಿ ‘ನಮಸ್ಕಾರ’ದ ಲಕ್ಷಣ ಹೀಗಿದೆ: “ನಮಸ್ತ್ವೈಕ್ಯಂ ಪ್ರಚಕ್ಷತೇ.” ಯಾವ ಕ್ರಿಯೆಯಿಂದ ಭಗವಂತನಲ್ಲಿ ಐಕ್ಯಭಾವ (ಗಾಢವಾದ ಸೇರುವೆ) ಉಂಟಾಗುವುದೋ, ನಮ್ಮ ಮನಸ್ಸು ಏಕೀಭೂತವಾಗುವುದೋ ಆ ಕ್ರಿಯೆಯೇ ನಮಸ್ಕಾರ. ಆಗ ಏರ್ಪಡುವ ಮದ್ರೆಯೇ ‘ನಮಸ್ಕಾರಮುದ್ರೆ’ ಎನಿಸಿಕೊಳ್ಳುತ್ತದೆ.

ದೇವರಿಗಾಗಲಿ, ಗುರುಹಿರಿಯರಿಗಾಗಲಿ ಸಾಷ್ಟಾಂಗನಮಸ್ಕಾರ (ಎಂಟು ಅಂಗಗಳಿಂದ ಕೂಡಿದ ನಮಸ್ಕಾರ)ವನ್ನು ಮಾಡಬೇಕು. ದೋರ್ಭ್ಯಾಂ ಪದ್ಭ್ಯಾಂ ಚ ಜಾನುಭ್ಯಾಂ ಉರಸಾ ಶಿರಸಾ ದೃಶಾ ಮನಸಾ ವಚಸಾ ಚೇತಿ ಪ್ರಣಾಮೋ ಅಷ್ಟಾಂಗ ಈರಿತಃ. ಅಂದರೆ ತೋಳುಗಳು, ಕಾಲುಗಳು, ಮೊಣಕಾಲುಗಳು, ಎದೆ, ಶಿರಸ್ಸು, ಕಣ್ಣು ಇಷ್ಟೂ ನಮಸ್ಕಾರದ ಕ್ರಿಯೆಯಲ್ಲಿ ಭೂಮಿಗೆ ಸ್ಪರ್ಶವಾಗಿರಬೇಕು. ಮನಸ್ಸು-ವಾಕ್ ಗಳು ಸೇರಿರಬೇಕು. ಇಲ್ಲಿ, ಭಗವಂತನಲ್ಲಿ ಏಕೀಭಾವ ವನ್ನು ಹೊಂದಬೇಕು ಎಂದಾಗ ಮೊದಲು ಈ ಜೀವವು ಭಗವಂತನಲ್ಲಿ ಹೋಗಿ ಸೇರಬೇಕೆನ್ನುವ ಮನಸ್ಸಾಗದಿದ್ದರೆ ಸಾಧ್ಯವಿಲ್ಲ. ಆದ್ದರಿಂದ ಮನಸ್ಸು ಅತಿಮುಖ್ಯವಾದದ್ದು. ಮನಸ್ಸಿನಲ್ಲಿ ಉಂಟಾಗುವುದು ಮುಂದೆ ಹರಿದು ಮಾತಿಗೆ ಬರಬೇಕು. ನಂತರ ಅದು ದೇಹದಲ್ಲಿ ಹರಿದುಬರಬೇಕು. ಇದಿಷ್ಟೂ ಆದಾಗ ಸಾಷ್ಟಾಂಗನಮಸ್ಕಾರದಲ್ಲಿ ಸಂಪೂರ್ಣವಾದ ಐಕ್ಯಭಾವವು ಉಂಟಾಗುವುದು ಸಾಧ್ಯವಾಗುತ್ತದೆ.

navavidha bhakti about Vandana bhakti you should know in kannada

ಸಿದ್ಧಪುರುಷರ ಮನಸ್ಸು ಭಗವಂತನಲ್ಲಿ ಐಕ್ಯಭಾವವನ್ನು ಹೊಂದಿದಾಗ ಅದು ವಿಕಾಸವಾಗುತ್ತ ಅವರ ಅರಿವಿಲ್ಲದೆಯೇ ನಮಸ್ಕಾರಮುದ್ರೆಯು ಏರ್ಪಡಬಹುದು. ಮನಸ್ಸು-ವಾಕ್ಕುಗಳು ಸೇರದೆ ಅಡ್ಡಬೀಳುವ ಕ್ರಿಯೆ ಕೇವಲ ಚೇಷ್ಟೆಯಾಗುತ್ತದೆ. ಇದಲ್ಲದೇ, ಪಂಚಾಂಗ ನಮಸ್ಕಾರ, ಪ್ರದಕ್ಷಿಣ ನಮಸ್ಕಾರಗಳನ್ನೂ ಸಂಪ್ರದಾಯದಲ್ಲಿ ಕಾಣುತ್ತೇವೆ.

ಕೈಜೋಡಿಸುವುದರ ತಾತ್ತ್ವಿಕ ನೋಟ

ಸಾಮಾನ್ಯವಾಗಿ ನಮಸ್ಕಾರವೆಂದರೆ ಕೈಜೋಡಿಸುವುದು ಎಂದಷ್ಟೇ ಅರ್ಥೈಸುತ್ತೇವೆ. ಕೈಜೋಡಿಸುವುದಾದರೂ ಏಕೆ? ಇಲ್ಲಿ ಎರಡು ಕೈಗಳು ಒಟ್ಟಿಗೆ ಸೇರಿಕೊಳ್ಳುವುದು ಎರಡು ತತ್ತ್ವಗಳು ಒಟ್ಟಿಗೆ ಸೇರುವುದನ್ನು ಸೂಚಿಸುತ್ತದೆ. ಒಂದು ಕೈ ಪ್ರಕೃತಿಯನ್ನು ಸೂಚಿಸಿದರೆ, ಮತ್ತೊಂದು ಪರಮಪುರುಷನನ್ನು ಸೂಚಿಸುವುದು. ನಮ್ಮಲ್ಲಿ ಪಂಚಭೂತಗಳೆಲ್ಲವೂ ಕೆಳಮುಖವಾಗಿ, ಪ್ರಕೃತಿಯ ಕಡೆ ಕೆಲಸ ಮಾಡುತ್ತಿವೆ. ಅದನ್ನು ಬಿಟ್ಟು ನಾವು ಪರಮಪುರುಷನ ಕಡೆಗೆ ಹೋಗಬೇಕಾದರೆ ಪ್ರಕೃತಿಯನ್ನು ಪರಮಪುರುಷನಲ್ಲಿ ಸೇರಿಸಿಕೊಂಡು, ಪ್ರಕೃತಿ-ಪುರುಷರ ಪ್ರತಿನಿಧಿಗಳಾದ ಕೈಗಳನ್ನು ಒಟ್ಟಿಗೆ ಸೇರಿಸಿಕೊಂಡು ಕೈಯನ್ನು ಮೇಲ್ಮುಖವಾಗಿ ಇಟ್ಟುಕೊಳ್ಳಬೇಕು. ಹೀಗೆ ಜೀವವು ಪರಮಾತ್ಮನಲ್ಲಿ ಒಂದಾಗಿ ಕಲೆತುಬಿಡುವುದಕ್ಕೆ ಯಾವ ಮುದ್ರೆ ಪೋಷಕವಾಗಿದೆಯೋ ಆ ಮುದ್ರೆಗೆ ನಮಸ್ಕಾರ-ಅಂಜಲಿಮುದ್ರೆಯೆಂಬ ಹೆಸರು.

ನಮಸ್ಕಾರ ಮುದ್ರೆ

ಮುದ್ರೆಯೆನ್ನುವುದು ಸಹಜವಾಗಿ ತಾನೇ ತಾನಾಗಿ ಉಂಟಾಗುವಂತಹ ಶರೀರದ-ಅಂಗಾಂಗಗಳ ಒಂದು ವಿನ್ಯಾಸ. ಅಂತಹ ಒಂದು ವಿನ್ಯಾಸವನ್ನು ನೋಡುವುದೇ ಸಂತೋಷವನ್ನು ಉಂಟು ಮಾಡುತ್ತದೆ. ವಾಸ್ತವವಾಗಿ ಜ್ಞಾನಿಯಾದವನಿಗೆ ಅಥವಾ ಭಕ್ತನಾದವನಿಗೆ ಆ ಭಾವವು ಉಂಟಾದಾಗ ತಾನಾಗಿಯೇ ಈ ಮುದ್ರೆಯು ಏರ್ಪಡುತ್ತದೆ.

ಲೌಕಿಕವಾದ ಉದಾಹರಣೆಯ ಮೂಲಕ ವಿವರಿಸುವುದಾದರೆ, ಉತ್ಕಟವಾದ ಕೋಪ ಬಂದಾಗ ಕಣ್ಣುಗಳು ಕೆಂಪಾಗುವುದು, ತುಟಿ ಅದುರುವುದು, ಹಲ್ಲು ಕಚ್ಚಿಕೊಳ್ಳುವುದು ಇವೆಲ್ಲವೂ ಮುಖದಲ್ಲಿ ಸಹಜವಾಗಿ ಮೂಡಿಬರುವುವು. ಆದರೆ ಯಾರನ್ನಾದರೂ “ಈಗ ಕೋಪ ಮಾಡಿಕೊಳ್ಳಿ ನೋಡೋಣ” ಎಂದು ಹೇಳಿದಾಗ ಆ ಲಕ್ಷಣಗಳನ್ನು ತಂದುಕೊಂಡರೆ ಅಲ್ಲಿ ಸಹಜತೆಯು ಇರುವುದಿಲ್ಲವಾದ್ದರಿಂದ ಅದನ್ನು ಕೃತಕವೆಂಬುದಾಗಿ ಗುರುತಿಸಿಬಿಡಬಹುದು. ಅಂತೆಯೇ ಸಾಧಕನಲ್ಲಿ, ಸಮಾಧಿಸ್ಥಿತಿಯಲ್ಲಿ ಐಕ್ಯ-ಭಾವವು ಏರ್ಪಟ್ಟಾಗ ನಮಸ್ಕಾರ ಮುದ್ರೆಯು ಸಹಜವಾಗಿ ಕಾಣಿಸಿಕೊಳ್ಳುತ್ತದೆ.

navavidha bhakti about Vandana bhakti you should know in kannada

ಸಮಾಧಿಸ್ಥಿತಿಗೆ ಹೋಗಬೇಕೆನ್ನುವ ಅಭಿಲಾಷೆಯುಳ್ಳವರಿಗೆ ಇಂತಹ ಮುದ್ರೆಯನ್ನು ಅಭ್ಯಾಸ ಮಾಡಿಸಿದಾಗ ಆ ಸ್ಥಿತಿಗೆ ನಯನಮಾಡುತ್ತದೆ ಎಂಬುದು ಜ್ಞಾನಿಗಳ ಮತ. ಅಭ್ಯಾಸವೇ ಕಾಲಕ್ರಮದಲ್ಲಿ ಭಕ್ತಿಭಾವವನ್ನು ಉಕ್ಕಿಸಿ ನಮಸ್ಕಾರ ಭಾವವು ಮೂಡಿಬರುವ ಅವಕಾಶವಿದೆ. ಹಾಗೆ ಮುದ್ರೆಯನ್ನು ಅಭ್ಯಾಸ ಮಾಡಿಸಿ ಮುದ್ರಾಸ್ಥಿತಿಗೆ ಕರೆದೊಯ್ಯುವ ಒಂದು ವಿಜ್ಞಾನ ಇಲ್ಲಿದೆ. ಇಂತಹ ವಂದನವೂ ಭಕ್ತಿಯ ಒಂದು ಪ್ರಕಾರವೇ ಆಗುತ್ತದೆ.

ನಮಸ್ಕಾರಮುದ್ರೆಯು ಸೃಷ್ಟಿಸಹಜವಾದದ್ದು ಎಂಬುದನ್ನು ಜ್ಞಾನ-ವಿಜ್ಞಾನ ತೃಪ್ತಾತ್ಮರಾದ ಶ್ರೀರಂಗಮಹಾಗುರುಗಳು ವಿವರಿಸುತ್ತಿದ್ದರು. ಗರ್ಭಸ್ಥ ಶಿಶುವು ಎಂಟನೆಯ ತಿಂಗಳಲ್ಲಿ ಭಗವಂತನ ದರ್ಶನ ಮಾಡುವುದಾಗಿ ಗರ್ಭೋಪನಿಷತ್ತು ತಿಳಿಸುತ್ತದೆ. ಆ ಸನ್ನಿವೇಶದ ಚಿತ್ರದಲ್ಲಿ ನಮಸ್ಕಾರಮುದ್ರೆಯ ವಿನ್ಯಾಸವನ್ನು ತೋರಿಸಿ ಅವರು ವಿವರಿಸುತ್ತಿದ್ದುದು ಇಲ್ಲಿ ಸ್ಮರಣೀಯ.

ಉಪಚಾರ

ನಮಸ್ಕಾರವು ಭಗವಂತನ ಪೂಜೆಯಲ್ಲಿ ಮಾಡುವ ಉಪಚಾರಗಳಲ್ಲಿ ಮುಖ್ಯವಾದದ್ದಾಗಿ ಪರಿಗಣಿಸಲ್ಪಟ್ಟಿದೆ. ಶ್ರೀರಂಗಮಹಾಗುರುಗಳ ವಿವರಣೆಯಂತೆ ಪೂಜೆಯಲ್ಲಿ ಉಪಚಾರವೆಂದರೆ ಪೂಜ್ಯನಾದ ಭಗವಂತನನ್ನು ಪೂಜಕನ (ಉಪ)ಸಮೀಪಕ್ಕೆ ಬರುವಂತೆ ಮಾಡಿಕೊಳ್ಳುವ ಕ್ರಿಯೆಯಾಗುತ್ತದೆ. ಪೂಜಕನ ಮನಸ್ಸು ಪ್ರಾರಂಭದಲ್ಲಿ ಭಗವಂತನ ಕಡೆ ಒಲಿದು-ಬಾಗಿ-ಸಮೀಪಿಸಿ ಕೊನೆಯಲ್ಲಿ ಐಕ್ಯವಾಗುವ ಪರಿಯೇ ನಮಸ್ಕಾರವಾಗುತ್ತದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

’ಅಕ್ರೂರಸ್ತು ಅಭಿವಂದನೇ’

ನಮಸ್ಕಾರಭಕ್ತಿಗೆ ಅಕ್ರೂರನನ್ನೇ ಉದಾಹರಣೆಯಾಗಿ ಕೊಡುತ್ತಾರೆ. ಇವನು ಪರಮ ಭಾಗವತೋತ್ತಮ. ಕೃಷ್ಣ ಬಲರಾಮರನ್ನು ಮಥುರೆಗೆ ಕರೆತರಲು ದುಷ್ಟನಾದ ಕಂಸನಿಂದ ಈತನೇ ಆಜ್ಞಪ್ತನಾದವನು. ನಂದಗೋಕುಲಕ್ಕೆ ಶೀಘ್ರಗತಿಯ ರಥದಲ್ಲಿ ಅಕ್ರೂರನು ಪ್ರಯಾಣ ಮಾಡುತ್ತಾನೆ. ದಾರಿಯುದ್ದಕ್ಕೂ, ಜಗತ್ಪತಿಯಾದ ಕೃಷ್ಣನ ಸ್ಮರಣೆಯಲ್ಲಿಯೇ ಕಳೆಯುತ್ತಾನೆ. ಗೋಕುಲದ ಸಮೀಪದಲ್ಲಿ ದಾರಿಯಲ್ಲೇ ಶ್ರೀಕೃಷ್ಣನ ಶಂಖ-ಚಕ್ರ-ಪದ್ಮ ಮುಂತಾದ ಗುರುತುಗಳಿಂದ ಕೂಡಿದ ಪಾದಚಿಹ್ನೆಗಳನ್ನು ನೋಡುತ್ತಾನೆ. ಈ ಚಿಹ್ನೆಗಳೆಲ್ಲವೂ ಮಹಾಪುರುಷನಲ್ಲಿ ಇರುವಂತಹ ಲಕ್ಷಣಗಳು. ನೋಡಿದೊಡನೆಯೇ ಆನಂದಪುಳಕಿತನಾಗಿ ನಮಿಸುತ್ತಾನೆ, ಸ್ತೋತ್ರಮಾಡುತ್ತಾನೆ, ಅದರಮೇಲೆ ಬಿದ್ದು ಹೊರಳಾಡುತ್ತಾನೆ, ನಮಸ್ಕರಿಸಿ ಸಂತೋಷಪಡುತ್ತಾನೆ. ಹೊರ ಚಿಹ್ನೆಗಳಿಗಷ್ಟೇ ಅಲ್ಲದೇ ಬಾಹ್ಯವಾಗಿಯೂ ಕೃಷ್ಣ ಬಲರಾಮರ ಪಾದಸ್ಪರ್ಶದ ಸೌಖ್ಯವನ್ನು ಅನುಭವಿಸಿದ ಮಹಾಪುರುಷ ಈತನು.
(ಮುಂದುವರಿಯುವುದು)

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಇದನ್ನೂ ಓದಿ: Navavidha Bhakti : ಭಕ್ತಿಗೊಂದು ಸಾಧನ – ಅರ್ಚನೆ

Exit mobile version