Site icon Vistara News

Navratri: ಕರ್ನಾಟಕ ಮಾತ್ರವಲ್ಲ ದೇಶದ ಇಲ್ಲೆಲ್ಲ ನವರಾತ್ರಿಯ ವೈಭವ ಜೋರು

navarathri devi

navarathri devi

ಬೆಂಗಳೂರು: ನವರಾತ್ರಿ ಹಬ್ಬ (Navratri) ದೇಶದೆಲ್ಲೆಡೆ ಕಳೆಗಟ್ಟಿದೆ. ದೇವಿಯ ನಾನಾ ರೂಪಗಳನ್ನು ಆರಾಧಿಸುವ ಹಬ್ಬ ಇದು. ಜತೆಗೆ ಕೆಡುಕಿನ ವಿರುದ್ಧದ ಒಳಿತಿನ ವಿಜಯದ ಸಂಕೇತವಾಗಿಯೂ ಇದನ್ನು ಆಚರಿಸಲಾಗುತ್ತದೆ. ನವರಾತ್ರಿಯನ್ನು ವಿವಿಧ ಕಡೆ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂತಹ ದೇಶದ 10 ಸ್ಥಳಗಳ ಪರಿಚಯ ಇಲ್ಲಿದೆ.

ಕರ್ನಾಟಕ

ನವರಾತ್ರಿ ಬಂತೆಂದರೆ ಸಾಕು ನಮ್ಮ ರಾಜ್ಯ ಕಳೆಗಟ್ಟುತ್ತದೆ. ವಾರಕ್ಕೂ ಮೊದಲೇ ಸಿದ್ಧತೆ ಆರಂಭವಾಗುತ್ತದೆ. ಅದರಲ್ಲೂ ಮೈಸೂರು ದಸರಾ ವಿಶ್ವದಲ್ಲೇ ಪ್ರಸಿದ್ಧ. ಈ ದಿನಕ್ಕಾಗಿ ಕಾಯುವ ಪ್ರವಾಸಿಗರ ದಂಡೇ ಮೈಸೂರಿಗೆ ಆಗಮಿಸುತ್ತದೆ. ನಾಡಹಬ್ಬ ಎಂದೇ ದಸರಾವನ್ನು ಕರೆಯಲಾಗುತ್ತದೆ. ಈ ನಾಡಹಬ್ಬಕ್ಕೇ ದೇಶದಲ್ಲೇ ವಿಶೇಷ ಸ್ಥಾನವಿದೆ. ಇದಕ್ಕಾಗಿ ಚಾಮುಂಡಿ ಬೆಟ್ಟ ಮತ್ತು ಮೈಸೂರು ಅರಮನೆ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ, ಅರಮನೆಯ ಅಲಂಕಾರ ಎಲ್ಲವೂ ಸೂಜಿಗಲ್ಲಿನಂತೆ ಗಮನ ಸೆಳೆಯುತ್ತದೆ. ವಿಜಯ ದಶಮಿಯಂದು ನಡೆಯುವ ಜಂಬೂ ಸವಾರಿ ಅಕ್ಷರಶಃ ಹಿಂದಿನ ರಾಜ ವೈಭವವನ್ನು ತೆರೆದಿಡುತ್ತದೆ. ರಾಜ್ಯದ ಕೆಲವು ಭಾಗದ ಮನೆ ಮನೆಗಳಲ್ಲಿ ಇಂದಿಗೂ ಗೊಂಬೆ ಕೂರಿಸುವ ಸಂಪ್ರದಾಯವಿದೆ.

ಪಶ್ಚಿಮ ಬಂಗಾಳ

ನವರಾತ್ರಿದ ವೈಭವ ತೆರೆದುಕೊಳ್ಳುವ ಇನ್ನೊಂದು ರಾಜ್ಯ ಪಶ್ಚಿಮ ಬಂಗಾಳ. ಗಲ್ಲಿ ಗಲ್ಲಿಗಳಲ್ಲಿ ಬೃಹತ್‌ ಪೆಂಡಾಲ್‌ ಹಾಕಿ, ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವ ದೃಶ್ಯ ನವರಾತ್ರಿ ದಿನಗಳಲ್ಲಿ ಇಲ್ಲಿ ಸಾಮಾನ್ಯ. ದುರ್ಗಾ ಆರತಿ ಇಲ್ಲಿನ ವಿಶೇಷ. ಬೆಳಗ್ಗೆ ಮತ್ತು ಸಂಜೆ ದುರ್ಗೆಯ ಪೂಜೆ ಮತ್ತು ಆರತಿಯನ್ನು ಮಾಡಲಾಗುತ್ತದೆ. ವಿವಿಧ ರೀತಿಯ ನೈವೇದ್ಯಗಳನ್ನು ದೇವಿಗೆ ಇಟ್ಟು ಬಳಿಕ ಅದನ್ನು ವಿತರಿಸಲಾಗುತ್ತದೆ. ದುರ್ಗಾ ಪೆಂಡಾಲ್‌ಗಳಲ್ಲಿ ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿತ್ಯ ನಡೆಯುತ್ತಿರುತ್ತವೆ. ದೇವಿಯ ಶಕ್ತಿಯನ್ನು ಪ್ರತಿರೂಪಿಸುವಂತಹ ವಿಗ್ರಹಗಳು, ಮಹಿಷಾಸುರನನ್ನು ಸಂಹಾರ ಮಾಡುತ್ತಿರುವ ದುರ್ಗಾದೇವಿಯ ಪ್ರತಿಮೆಗಳು ಕಂಡುಬರುವುದು ಈ ದಿನಗಳಲ್ಲಿ ಇಲ್ಲಿ ಸಾಮಾನ್ಯ.

ಗುಜರಾತ್‌

ಗುಜರಾತ್‌ನ ರಾಜಧಾನಿ ಅಹಮದಾಬಾದ್ ಕೂಡ ನವರಾತ್ರಿ ಆಚರಣೆಗೆ ಬಹಳ ಪ್ರಸಿದ್ಧ. ಹಬ್ಬದ ದಿನಗಳಲ್ಲಿ ಇಲ್ಲಿ ಸಾಂಪ್ರದಾಯಿಕ ಗಾರ್ಭಾ ಮತ್ತು ದಾಂಡಿಯಾ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಸಾಂಪ್ರದಾಯಿಕ ಉಡುಗೆ, ಶಾಸ್ತ್ರಬದ್ಧ ಸಂಗೀತದ ಮೂಲಕ ನೃತ್ಯಗಾರರು ಭವ್ಯವಾಗಿ ಅಲಂಕರಿಸಿದ ವೇದಿಕೆಗೆ ಕಳೆ ತುಂಬುತ್ತಾರೆ. ದೇವಾಲಯಗಳನ್ನು ವೈಭವದಿಂದ ಅಲಂಕರಿಸುವುದು ಇಲ್ಲಿನ ಸಂಪ್ರದಾಯ. ಬರೋಡಾ, ಗಾಂಧಿನಗರ, ಸೂರತ್‌ ಮುಂತಾದ ಸ್ಥಳಗಳಲ್ಲಿಯೂ ನವರಾತ್ರಿಯ ಸಡಗರ ಕಾಣಬಹುದು.

ಮಹಾರಾಷ್ಟ್ರ

ಮಹಾರಾಷ್ಟ್ರವೂ ನವರಾತ್ರಿ ಸಂದರ್ಭದಲ್ಲಿ ಕಳೆಗಟ್ಟುತ್ತದೆ. ಇಲ್ಲಿ ಸಾಮೂಹಿಕ ಆಚರಣೆಗಿಂತ ಖಾಸಗಿಯಾಗಿ ಪೂಜಿಸುವುದೇ ಹೆಚ್ಚು. ವಾಣಿಜ್ಯ ರಾಜಧಾನಿ ಮುಂಬೈಯಲ್ಲಿಯೂ ಹಬ್ಬವನ್ನು ಸಂಭ್ರಮದಿಂದ ಸ್ವಾಗತಿಸಲಾಗುತ್ತದೆ. 9 ದಿನಗಳ ಕಾಲ ನಡೆಯುವ ಆಚರಣೆಯಲ್ಲಿ ಹಣ್ಣು, ಹೂವು, ಪತ್ರೆಗಳನ್ನು ದೇವಿಗೆ ಅರ್ಪಿಸಲಾಗುತ್ತದೆ. ಹಲವೆಡೆ ಕಾಳಿ ಪೂಜೆಯನ್ನೂ ನಡೆಸುವ ಸಂಪ್ರದಾಯವೂ ಇದೆ. ದುರ್ಗಾ ಪೂಜೆಯನ್ನೂ ನಡೆಸಲಾಗುತ್ತದೆ.

ಆಂಧ್ರ ಪ್ರದೇಶ

ಆಂಧ್ರಪ್ರದೇಶದ ವಿವಿಧೆಡೆಯ ದೇವಿಯನ್ನು ಆರಾಧಿಸಲಾಗುತ್ತದೆ. ಅದರಲ್ಲೂ ವಿಜಯವಾಡದಲ್ಲಿ ಸಡಗರ ತುಸು ಹೆಚ್ಚು ಎಂದೇ ಹೇಳಬಹುದು. ಈ ದಿನಗಳಲ್ಲಿ ಭಕ್ತರು ಕನಕದುರ್ಗಾ ದೇವಸ್ಥಾನಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಮಂಗಳಗಿರಿ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೂ ಆಸ್ತಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ದೇಗುಲಗಳನ್ನು ವಿಶೇಷವಾಗಿ ಅಲಂಕರಿಸಿರುತ್ತಾರೆ. ಪೂಜೆ, ಹೋಮ, ಸೇವೆಗಳನ್ನು ನಡೆಸಲಾಗುತ್ತದೆ.

ಛತ್ತೀಸ್‌ಗಢ

ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ವಿಶಿಷ್ಟ ಶೈಲಿಯ ನವರಾತ್ರಿ ಆಚರಣೆ ನಡೆಯುತ್ತದೆ. ಇಲ್ಲಿನ ನಂಬಿಕೆ ಪ್ರಕಾರ ನವರಾತ್ರಿಯ ದಿನಗಳಲ್ಲಿ ಇವರ ದೇವಿ ಮೌಲಿ ತನ್ನ ಸಹೋದರಿಯನ್ನು ಭೇಟಿಯಾಗುತ್ತಾಳಂತೆ. ಇಲ್ಲಿ ಹಬ್ಬ ಸುಮಾರು 75 ದಿನಗಳವರೆಗೆ ನಡೆಯುತ್ತದೆ. ಈ ಸಂದರ್ಭದಲ್ಲಿ ನಡೆಯುವ ವೈಭವದ ಮೆರವಣಿಗೆ ಎಲ್ಲರ ಗಮನ ಸೆಳೆಯುತ್ತದೆ.

ತೆಲಂಗಾಣ

ತೆಲಂಗಾಣದ ಹೈದಾರಾಬಾದ್‌ನಲ್ಲಿ ನವರಾತ್ರಿಯನ್ನು ಬಹಳ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ನವರಾತ್ರಿ ಅಂಗವಾಗಿ ಬಾತುಕಮ್ಮ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಇಲ್ಲಿ ಮಹಾಲಯ ಅಮಾವಾಸ್ಯೆಯಂದು ನವರಾತ್ರಿ ಆರಂಭವಾಗಿ ದುರ್ಗಾಷ್ಟಮಿಯಂದು ಕೊನೆಯಾಗುತ್ತದೆ.

ಉತ್ತರ ಪ್ರದೇಶ

ಉತ್ತರ ಪ್ರದೇಶದ ವಾರಾಣಸಿಯಲ್ಲಿ ದೇವಿಯನ್ನು ವಿಶಿಷ್ಟವಾಗಿ ಆರಾಧಿಸಲಾಗುತ್ತದೆ. ವಾರಾಣಸಿ ನಗರವೇ ಬೆಳಕಿನಿಂದ ಕಂಗೊಳಿಸುತ್ತದೆ. ರಾವಣನ ವಿರುದ್ಧ ರಾಮ ವಿಜಯ ಗಳಿಸಿದ ಸಂಕೇತವೂ ಆಗಿರುವುದರಿಂದ ರಾಮ ಚರಿತೆಯನ್ನು ಅಲ್ಲಲ್ಲಿ ಆಡಿ ತೋರಿಸಲಾಗುತ್ತದೆ.

ನವದೆಹಲಿ

ದೇಶದ ರಾಜಧಾನಿ ನವದೆಹಲಿಯೂ ನವರಾತ್ರಿಯಂದು ರಂಗೇರುತ್ತದೆ. ಅದರಲ್ಲೂ ನವದೆಹಲಿಯ ಹೃದಯಭಾಗದಲ್ಲಿರುವ ರಾಮ್‌ಲೀಲಾ ಮೈದಾನದಲ್ಲಿ ಹಬ್ಬದ ಆಚರಣೆ ಜೋರಾಗಿರುತ್ತದೆ. ಹಬ್ಬದ ದಿನಗಳಲ್ಲಿ ಅಲ್ಲಲ್ಲಿ ಗರ್ಬಾ ಮತ್ತು ದಾಂಡಿಯಾ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಕೆಟ್ಟದರ ಸಂಕೇತವಾದ ರಾವಣನ ಪ್ರತಿಕೃತಿ ದಹಿಸುವ ಆಚರಣೆ ಇಲ್ಲಿನ ವಿಶೇಷ.

ತಮಿಳುನಾಡು

ದೇವಿಯ ದುರ್ಗಾ, ಲಕ್ಷ್ಮೀ, ಸರಸ್ವತಿ ಈ ಮೂರು ರೂಪಗಳನ್ನು ಪೂಜಿಸಲಾಗುತ್ತದೆ. ಪ್ರತಿ ದೇವಿ ಶಕ್ತಿಗೂ ಮೂರು ದಿನಗಳ ಪೂಜೆ ಮೀಸಲು. ಬೊಂಬೆಗಳನ್ನು ಇಟ್ಟು ಸಂಭ್ರಮಿಸುವ ಸಂಪ್ರದಾಯವೂ ಇಲ್ಲಿ ಕಂಡುಬರುತ್ತದೆ. ದುರ್ಗಾ ಕೋಲು ಎನ್ನುವ ವಿಶಿಷ್ಟ ಆಚರಣೆಯೂ ಇಲ್ಲಿದೆ. ಗೊಂಬೆಗಳು ಮತ್ತು ಪ್ರತಿಮೆಗಳ ಅಲಂಕೃತ ಪ್ರದರ್ಶನ ಇದು. ತಮಿಳುನಾಡಿನ ನವರಾತ್ರಿಯ ಪ್ರಮುಖ ಲಕ್ಷಣವಾದ ಕೋಲು ವಿಸ್ಮಯಕಾರಿ ನೋಟವನ್ನು ನೀಡುತ್ತದೆ. ಈ ಗೊಂಬೆಗಳು ಮಹಿಷಾಸುರನ ವಿರುದ್ಧದ ಶೌರ್ಯಯುತ ಯುದ್ಧಕ್ಕಾಗಿ ಹೋರಾಡುವ ದುರ್ಗಾ ದೇವಿಯ ದೈವಿಕ ಸೈನ್ಯ ಅಥವಾ ಆಸ್ಥಾನವನ್ನು ಪ್ರತಿನಿಧಿಸುತ್ತವೆ. ಈ ಗೊಂಬೆಗಳು ದೈವಿಕ ವಿಜಯದ ಕಥೆಗಳನ್ನು ನಿರೂಪಿಸುತ್ತವೆ, ಆಧ್ಯಾತ್ಮಿಕ ಶಕ್ತಿಯನ್ನು ಹೊರಸೂಸುತ್ತವೆ ಎನ್ನುವ ನಂಬಿಕೆ ಭಕ್ತರದ್ದು.

ಇದನ್ನೂ ಓದಿ: Navaratri: ದಸರಾ ರಜೆಯಲ್ಲಿ ಮನೆಯಲ್ಲೇಕೆ ರೆಸ್ಟು; ಈ ಪ್ರವಾಸಿ ತಾಣಗಳಿಗೆ ಹೋಗೋದೇ ಬೆಸ್ಟು!

Exit mobile version