ಬೆಂಗಳೂರು: ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಶಾಖೆಯನ್ನು ತೆರೆಯಲು ಶ್ರೀ ಮಠವು ನಿರ್ಧರಿಸಿದೆ. ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಗುರು ಪೂರ್ಣಿಮೆಯಂದು ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಈ ವಿಷಯವನ್ನು ಶ್ರೀ ಮಠದ ಆಡಳಿತಾಧಿಕಾರಿ ವಿ. ಆರ್. ಗೌರಿಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೀ ರಾಮನ ಜನ್ಮಭೂಮಿಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಜಗತ್ತಿನ ಗಮನ ಸೆಳೆದಿದೆ. ಮಂದಿರ ನಿರ್ಮಾಣ ಕಾರ್ಯಪೂರ್ಣಗೊಂಡ ನಂತರ ಇಲ್ಲಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಶ್ರೀ ಮಠವು ತನ್ನ ಶಾಖೆಯನ್ನು ತೆರೆಯುವ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಈಗ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮಮಂದರಿದ ಸಮೀಪವೇ ಇರುವ ರಾಮ್‌ಕೋಟ್‌ನಲ್ಲಿರುವ ಸಂದರ್ ಸದನ್ ಅನ್ನು ಶ್ರೀಮಠವು ತೆಗೆದುಕೊಂಡಿದ್ದು, ಅಲ್ಲಿಯೇ ಮಠದ ಶಾಖೆಯನ್ನು ತೆರೆಯಲಾಗುತ್ತದೆ. ಸುಂದರ್ ಸದನ್‌ನಲ್ಲಿ ಈಗಿರುವ ಶ್ರೀ ರಾಮ ಪರಿವಾರ್ ಮತ್ತು ಶ್ರೀ ರಾಧಾಕೃಷ್ಣ ದೇಗುಲವನ್ನು ಶ್ರೀ ಮಠ ಪುನರುಜ್ಜೀವನಗೊಳಿಸುವುದರ ಜತೆಗೆ ಅಲ್ಲಿಯೇ ಶ್ರೀ ಶಾರದಾದೇವಿ ಹಾಗೂ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ದೇಗುಲಗಳನ್ನು ನಿರ್ಮಿಸಲಾಗುತ್ತದೆ.
ಅಯೋಧ್ಯೆಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗಾಗಿ ಇಲ್ಲಿ ಧರ್ಮಶಾಲೆ (ಊಟ ಮತ್ತು ವಸತಿ ವ್ಯವಸ್ಥೆ) ತೆರೆಯಲಾಗುತ್ತದೆ. ಈಗಾಗಲೇ ದೇಶದ ಪ್ರಮುಖ ತೀರ್ಥಕ್ಷೇತ್ರಗಳಾದ ಕಾಶಿ, ರಾಮೇಶ್ವರ, ಪ್ರಯಾಗ್, ಮಥುರಾ, ನಾಸಿಕ್, ಶ್ರೀಶೈಲ, ತಿರುಪತಿ ಮತ್ತಿತರ ಕಡೆ ಶ್ರೀ ಮಠವು ಯಾತ್ರಾರ್ಥಿಗಳಿಗೆ ವ್ಯವಸ್ಥೆ ಮಾಡಿರುವಂತೆಯೇ ಇಲ್ಲಿಯೂ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀಮಠದ ಶಾಖೆಯಲ್ಲಿ ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಗುವುದು. ಹೋಮ, ವಿಶೇಷ ಪೂಜೆಗಳಿಗೆ ಅವಕಾಶವಿರುತ್ತದೆ. ಪ್ರವಚನಗಳು ಕೂಡ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಗೌರಿಶಂಕರ್, ಅಗತ್ಯ ಪರವಾನಿಗೆಗಳು ದೊರೆತ ನಂತರ ಕೂಡಲೇ ಶ್ರೀ ಮಠದ ಮತ್ತು ದೇಗುಲಗಳ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ | ಶೃಂಗೇರಿ ಮಠ ಎಂದಿಗೂ ರಾಜಕೀಯ ಮಾಡುವುದಿಲ್ಲ: ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ