Site icon Vistara News

ಕಾಶ್ಮೀರದಲ್ಲಿ ಶ್ರೀ ಶಾರದಾ ದೇಗುಲ ನಿರ್ಮಾಣ ಕಾರ್ಯ ಆರಂಭಿಸಿದ ರಾಜ್ಯದ ಕಾರ್ಮಿಕರು

kashmira puravasini sharada temple in kashmir

ಶ್ರೀನಗರ: ವಿದ್ಯಾಧಿದೇವತೆ ಶ್ರೀ ಶಾರದಾ ದೇವಿಯ ವಾಸಸ್ಥಾನ ಕಾಶ್ಮೀರ. ʼನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ|ʼ ಎಂದೇ ಆಕೆಯನ್ನು ಪೂಜಿಸಲಾಗುತ್ತದೆ. ಈ ಕಾಶ್ಮೀರದಲ್ಲಿ ಈಗ ಶಾರದಾದೇವಿಯ ಭವ್ಯ ದೇಗುಲವೊಂದು ನಿರ್ಮಾಣವಾಗಲಿದೆ.

ವಿಶೇಷವೆಂದರೆ ಈ ದೇಗುಲ ನಿರ್ಮಿಸುತ್ತಿರುವವರು ಕರ್ನಾಟಕದ ಕಾರ್ಮಿಕರು. ಕರ್ನಾಟಕದಿಂದ ಸಾಗಿಸಲಾಗಿರುವ ಗ್ರಾನೈಟ್‌ ಕಲ್ಲುಗಳನ್ನು ಬಳಸಿಯೇ ಈ ದೇಗುಲದ ಗರ್ಭಗುಡಿ ನಿರ್ಮಿಸಲಾಗುತ್ತಿದೆ. ಮಾತ್ರವಲ್ಲ ಇಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಶಾರದಾಂಬೆಯ ವಿಗ್ರಹವು ನಮ್ಮ ಶೃಂಗೇರಿಯ ಶಾರದಾಂಬೆಯ ವಿಗ್ರಹವನ್ನೇ ಹೋಲಲಿದ್ದು, ಶೃಂಗೇರಿಯ ಶ್ರೀ ಶಾರದಾ ಪೀಠವೇ ಪಂಚಲೋಹದ ಈ ವಿಗ್ರಹವನ್ನು ಸಿದ್ಧಪಡಿಸಿ ನೀಡಲಿದೆ.

ದೇಗುಲದ ನೀಲಿ ನಕ್ಷೆ ಮತ್ತು ಮಾದರಿಗೆ ಶೃಂಗೇರಿಯ ಶ್ರೀಗಳು ಅನುಮತಿ ನೀಡಿದ್ದಾರೆ. ಅವರ ಮಾರ್ಗದರ್ಶನ ಪಡೆದೇ ಈ ದೇಗುಲ ನಿರ್ಮಿಸಲಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದ್ದು, ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ ಎಂದು ದೇಗುಲ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಾರದಾ ಸೇವಾ ಸಮಿತಿಯ ಮುಖ್ಯಸ್ಥ ರವೀಂದ್ರ ಪಂಡಿತ್‌ ತಿಳಿಸಿದ್ದಾರೆ.

ಎಲ್ಲಿ ನಿರ್ಮಾಣ?

ಭಾರತ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಗಡಿಯಲ್ಲಿರುವ ಕುಪ್ವಾರ ಜಿಲ್ಲೆಗೆ ಸೇರಿದ, ಕಿಶನ್‌ ಗಂಗಾ ನದಿ ತೀರದಲ್ಲಿರುವ ತೀತ್ವಾಲ್‌ ಎಂಬ ಚಿಕ್ಕ ಹಳ್ಳಿಯಲ್ಲಿ (ಶ್ರೀನಗರದಿಂದ 168 ಕಿ.ಮೀ. ದೂರದಲ್ಲಿದೆ) ಈ ದೇಗುಲ ನಿರ್ಮಾಣವಾಗುತ್ತಿದೆ. ಇದು ಸದ್ಯ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಮೂಲ ಶ್ರೀ ಶಾರದಾ ಸರ್ವಜ್ಞ ಪೀಠಕ್ಕೆ ಹತ್ತಿರದಲ್ಲಿದೆ. ಹಿಂದೆ ಇಲ್ಲಿಂದಲೇ‌ ಶ್ರೀ ಶಾರದಾ ಸರ್ವಜ್ಞ ಪೀಠಕ್ಕೆ ಪ್ರತಿ ವರ್ಷ ʼಚಾರಿ ಮುಬಾರಕ್‌ʼ ಎಂಬ ಯಾತ್ರೆ ಕೈಗೊಳ್ಳಲಾಗುತ್ತಿತ್ತು. ಹೀಗಾಗಿ ಈ ಜಾಗ ಐತಿಹಾಸಿಕವಾಗಿಯೂ ಗುರುತಿಸಲ್ಪಟ್ಟಿದೆ.

ತೀತ್ವಾಲ್‌ ಗ್ರಾಮದಲ್ಲಿ ದೇಗುಲ ನಿರ್ಮಾಣವಾಗುತ್ತಿರುವ ಸ್ಥಳ

ಈ ದೇಗುಲ ನಿರ್ಮಾಣಕ್ಕೆ ಸ್ಥಳೀಯ ಮುಸ್ಲೀಮರು ಜಾಗ ನೀಡಿದ್ದು, ನಿರ್ಮಾಣ ಕಾರ್ಯದಲ್ಲಿ ಅವರೂ ಭಾಗಿಯಾಗುತ್ತಿದ್ದಾರೆ. ಶಾರದಾ ದೇಗುಲದ ಜತೆಗೆ ಈ ಹಿಂದೆ ಇದ್ದ ಗುರುದ್ವಾರ ಮತ್ತು ಮಸೀದಿಯನ್ನೂ ನಿರ್ಮಿಸಲು ಉದ್ದೇಶಿಸಲಾಗಿದೆ. ಕಾಶ್ಮೀರದಲ್ಲಿದ್ದ ಸೌಹಾರ್ದತೆಯ ಬಗ್ಗೆ ಇಲ್ಲಿಂದಲೇ ನಾವು ಜಗತ್ತಿಗೆ ಸಂದೇಶ ರವಾನಿಸಲಿದ್ದೇವೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೇಗಿರಲಿದೆ ದೇಗುಲ?

ಹೀಗಿರಲಿದೆ ಹೊಸ ದೇಗುಲ

ಈ ಹಿಂದೆ ಇದ್ದ ಶ್ರೀ ಶಾರದಾ ಸರ್ವಜ್ಞ ಪೀಠದ ಮಾದರಲ್ಲಿಯೇ ಈ ದೇಗುಲವನ್ನು ನಿರ್ಮಿಸಲಾಗುತ್ತಿದ್ದು, ದೇಗುಲಕ್ಕೆ ನಾಲ್ಕ ದಿಕ್ಕುಗಳಲ್ಲಿಯೂ ಬಾಗಿಲುಗಳಿರಲಿವೆ. ವಾಸ್ತು ಶಿಲ್ಪದ ವೈಭವದೊಂದಿಗೆ ಕಂಗೊಳಿಸುವಂತೆ ದೇಗುಲ ನಿರ್ಮಿಸಲಾಗುತ್ತಿದೆ. ಹೊರ ಭಾಗದ ಗೋಡೆ ನಿರ್ಮಾಣ ಕಾರ್ಯ ಕೂಡ ಈಗ ನಡೆಯುತ್ತಿದೆ.

ಇದನ್ನೂ ಓದಿ| ರಾಮ ಮಂದಿರವೇ ರಾಷ್ಟ್ರ ಮಂದಿರ ಎಂದ ಯೋಗಿ, ಅಯೋಧ್ಯೆಯಲ್ಲಿ ಗರ್ಭಗುಡಿಗೆ ಅಡಿಗಲ್ಲು

Exit mobile version