Site icon Vistara News

New Year 2024: ಹಿಂದೂಗಳ ಹೊಸ ವರ್ಷಾರಂಭ ಜ.1ರಿಂದ ಅಲ್ಲ! ಹಾಗಾದರೆ ಯಾವಾಗ?

happy new year

happy new year

ಬೆಂಗಳೂರು: 2023ಕ್ಕೆ ಗುಡ್‌ಬೈ ಹೇಳುವ ಕ್ಷಣ ಬಂದೇ ಬಿಟ್ಟಿದೆ. ವರ್ಷದ ಕೊನೆಯ ದಿನದ ಹೊಸ್ತಿಲಿನಲ್ಲಿ ನಿಂತಿದ್ದೇವೆ. ಹೊಸ ವರ್ಷಾಚರಣೆಗೆ ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದೆ (New Year 2024). ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಇದು ವರ್ಷದ ಕೊನೆ ಅಲ್ಲ ಎನ್ನುವುದು ನಿಮಗೆ ಗೊತ್ತೆ? ಹಾಗಾದರೆ ಹಿಂದೂ ನಂಬಿಕೆಯ ಪ್ರಕಾರ ಹೊಸ ವರ್ಷ ಯಾವುದು? ಇದನ್ನು ಯಾವಾಗ ಆಚರಿಸಲಾಗುತ್ತದೆ? ಈ ಬಗ್ಗೆ ಧಾರ್ಮಿಕ ಗ್ರಂಥ ಏನು ಹೇಳುತ್ತದೆ? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಯುಗಾದಿಯೇ ಹೊಸ ವರ್ಷ

ಹಿಂದೂಗಳು ಹೊಸ ವರ್ಷವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನದಂದು ಆಚರಿಸುತ್ತಾರೆ. ಅಂದರೆ ಇದು ಯುಗಾದಿ ಹಬ್ಬ. ಇದು ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಬರುತ್ತದೆ. ಹಿಂದೂ ಕ್ಯಾಲೆಂಡರ್ 12 ಚಂದ್ರಮಾನ ತಿಂಗಳುಗಳನ್ನು ಒಳಗೊಂಡಿದೆ. ಈ ಹೊಸ ವರ್ಷದ ಆಚರಣೆ ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ ಎನ್ನುವುದು ವಿಶೇಷ. ಯುಗಾದಿ ಎಂದರೆ ಒಂದು ವರ್ಷದ ಆರಂಭ ಎಂದರ್ಥ. ಯುಗ ಎಂದರೆ ಅವಧಿ ಮತ್ತು ಆದಿ ಎಂದರೆ ಆರಂಭ. ಇದು ಚಳಿಗಾಲದ ಕಠೋರವಾದ ಚಳಿಯ ನಂತರ ವಸಂತಕಾಲದ ಆರಂಭ ಮತ್ತು ಸೌಮ್ಯವಾದ ಹವಾಮಾನವನ್ನು ಸೂಚಿಸುವ ಹಬ್ಬ. ಇದು ವಸಂತ ಋತುವನ್ನು ಸ್ವಾಗತಿಸಲು ಆಚರಿಸುವ ಹಬ್ಬವೂ ಹೌದು.

ವಿವಿಧ ಹೆಸರು

ಮೊದಲೇ ಹೇಳಿದಂತೆ ನಾವು ಯುಗಾದಿ ಎಂದು ಕರೆಯುವ ಈ ಹೊಸ ವರ್ಷವನ್ನು ವಿವಿಧ ಕಡೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ, ದಕ್ಷಿಣ ಭಾರತದಲ್ಲಿ ಪುತಂಡು, ವಿಷು, ಬಿಸು ಮತ್ತು ಒಡಿಶಾದಲ್ಲಿ ಮಹಾ ವಿಷುಭ ಸಂಕ್ರಾಂತಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಪ್ರತಿಯೊಂದು ಪ್ರದೇಶಕ್ಕೆ ಅನುಗುಣವಾಗಿ ವಿಶಿಷ್ಟ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಇದು ಹೊಂದಿದೆ. ಇನ್ನು ಗುಜರಾತ್‌ನಲ್ಲಿ ದೀಪಾವಳಿಯ ಮರುದಿನ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಇದನ್ನು ಬೆಸ್ತು ವರಸ್ ಎಂದು ಕರೆಯುತ್ತಾರೆ.

ಸಮೃದ್ಧಿಯ ಸಂಕೇತ

ವಿಶಿಷ್ಟವಾಗಿ ಹಿಂದೂ ಹೊಸ ವರ್ಷವು ವಸಂತಕಾಲದ ಆರಂಭವನ್ನು ಸೂಚಿಸುತ್ತದೆ. ಇದು ಬೆಳವಣಿಗೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಕುಟುಂಬ ಸದಸ್ಯರೆಲ್ಲ ಕಲೆತು ವಿವಿಧ ಆಚರಣೆಗಳು, ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಹಬ್ಬದ ಕೆಲವು ದಿನಗಳ ಮೊದಲೇ ಸಿದ್ಧತೆ ಆರಂಭವಾಗುತ್ತದೆ. ಮನೆಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಲಾಗುತ್ತದೆ. ಹಬ್ಬದ ದಿನ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ವಿಶೇಷ ಭಕ್ಷ್ಯ, ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ತಯಾರಿಸಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಹಂಚಲಾಗುತ್ತದೆ. ಮುಂಬರುವ ವರ್ಷಕ್ಕೆ ಆಶೀರ್ವಾದ ಪಡೆಯಲು ದೇವಾಲಯಗಳಿಗೆ ಭೇಟಿ ನೀಡುವ ವಾಡಿಕೆಯೂ ಇದೆ.

ಲೆಕ್ಕಾಚಾರ ಹೇಗೆ?

ಯುಗಾದಿ ಸೇರಿದಂತೆ ಹಿಂದೂ ಹಬ್ಬಗಳ ದಿನಾಂಕಗಳು ಖಗೋಳಶಾಸ್ತ್ರದ ಲೆಕ್ಕಾಚಾರಗಳ ಆಧಾರದ ಮೇಲೆ ಪ್ರತಿ ವರ್ಷ ಬದಲಾಗುತ್ತಿರುತ್ತವೆ. ಹಿಂದೂ ಕ್ಯಾಲೆಂಡರ್ ಚಂದ್ರ ಮತ್ತು ಸೌರ ಚಲನೆಗಳನ್ನು ಆಧರಿಸಿದೆ. ಹೀಗಾಗಿ ಇದು ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತ ಭಿನ್ನ. ಈ ಸಲ ಯುಗಾದಿಯನ್ನು 2024ರ ಏಪ್ರಿಲ್‌ 9ರಂದು ಆಚರಿಸಲಾಗುತ್ತದೆ. ಅಂದರೆ ಹಿಂದೂಗಳ ಪಾಲಿನ ಹೊಸ ವರ್ಷ ಅಂದೇ.

ಇದನ್ನೂ ಓದಿ: New Year 2024: ಜ. 1ರಿಂದ ಜಾರಿಯಾಗುವ ಹೊಸ ರೂಲ್ಸ್‌ಗಳು ಏನೇನು?

Exit mobile version