Site icon Vistara News

Adichunchanagiri mutt : ಭವ್ಯ ಕರ್ನಾಟಕ ನಿರ್ಮಾಣದಲ್ಲಿ ಆದಿಚುಂಚನಗಿರಿ ಮಠದ ಪಾತ್ರ ದೊಡ್ಡದು: ಸಿಎಂ ಬೊಮ್ಮಾಯಿ

#image_title

ಬೆಂಗಳೂರು: ಆದಿಚುಂಚನಗಿರಿ ಮಠ (Adichunchanagiri mutt) ತನ್ನದೇ ಇತಿಹಾಸ ಹೊಂದಿದ್ದು, ಭವ್ಯ ಕರ್ನಾಟಕ ಕಟ್ಟುವಲ್ಲಿ ಮಠದ ಪಾತ್ರ ತುಂಬಾ ದೊಡ್ಡದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಮಂಗಳವಾರ ಆದಿಚುಂಚನಗಿರಿ ಪೀಠಾಧ್ಯಕ್ಷ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭಿಷೇಕದ ದಶಮಾನೋತ್ಸವ ಸಮಾರಂಭ, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಜ್ಯೋತಿರ್ದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ʻʻಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭಿಷೇಕವಾಗಿ ಒಂದು ದಶಕ ಕಳೆದಿದ್ದು, ಇದು ಆತ್ಮಾವಲೋಕನ ಹಾಗೂ ಸಿಂಹಾವಲೋಕನ ಮಾಡಿಕೊಳ್ಳುವ ಘಟ್ಟ. ಹತ್ತು ವರ್ಷಗಳಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳು ಅಪಾರ ಸಾಧನೆ ಮಾಡಿದ್ದಾರೆ. ಬಾಲಗಂಗಾಧರನಾಥ ಸ್ವಾಮಿಗಳು ಬಿತ್ತಿದ ಬೀಜ ಹೆಮ್ಮರವಾಗಿ ಬೆಳೆದಿದೆ. ನಿರ್ಮಲಾನಂದನಾಥ ಸ್ವಾಮೀಜಿಗಳ ಕಾಲದಲ್ಲಿ ಸಂಸ್ಥೆ ಬೆಳೆಯುತ್ತಿದೆ. ಪ್ರಕಾಶನಾಥ ಸ್ವಾಮೀಜಿ ಕೂಡ ಬೆಂಗಳೂರಿನ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ. ಕಷ್ಟಪಟ್ಟು ನಿರ್ಮಾಣವಾಗಿರುವ ಸಂಸ್ಥೆಗಳನ್ನು ಅಂತರರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡು ಬೆಳೆಸಿರುವುದು ಸಂಸದ ಸಂಗತಿʼʼ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಸ್ವಾಗತಿಸಿದ ಕ್ಷಣ

ವೈಜ್ಞಾನಿಕ ಮನೋಧರ್ಮ ಹೊಂದಿದ ಸ್ವಾಮೀಜಿ

ʻʻನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಜ್ಞಾನ ಮತ್ತು ತತ್ವಜ್ಞಾನ ಮಿಳಿತಗೊಂಡ ಮಹಾಸಾಧಕ. ಅವೆರಡನ್ನೂ ಆಳವಾಗಿ ಅಧ್ಯಯನ ಮಾಡಿ ಸಮಾಜಕ್ಕೆ ನೀಡುವ ದೊಡ್ಡ ಸಾಧನೆ ಅವರದ್ದು. ವಿಚಾರಗಳನ್ನು ವೈಜ್ಞಾನಿಕವಾಗಿ ನೋಡಿ ತತ್ವಜ್ಞಾನ ಅಳವಡಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ವಿಧಿವಿಧಾನ ಸ್ವಾಮೀಜಿಗಳಲ್ಲಿ ಇದ್ದರೆ ಇಡೀ ಸಮಾಜಕ್ಕೆ ದಾರಿದೀಪವಾಗಬಹುದು ಎಂಬುದಕ್ಕೆ ಇವರೇ ಉದಾಹರಣೆ ಎಂದರು ಮುಖ್ಯಮಂತ್ರಿ.

ಬಿಜಿಎಸ್ ಎಂಬ ದೊಡ್ಡ ಬ್ರಾಂಡ್

ʻʻ೧.೫ ಲಕ್ಷ ಮಕ್ಕಳು ಬಿಜಿಎಸ್ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ, ಆಸ್ಪತ್ರೆಯಿಂದ ಪಬ್ಲಿಕ್ ಶಾಲೆಯವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ‌. ತಮ್ಮದೇ ಆದ ಬ್ರಾಂಡ್ ಸೃಷ್ಟಿಸಿರುವುದು ಕರ್ನಾಟಕದ ಹೆಮ್ಮೆ. ಕರ್ನಾಟಕದಾದ್ಯಂತ ಸಂಸ್ಥೆಯ ಸೇವೆಗಳು ಲಭ್ಯವಾಗಬೇಕೆನ್ನುವುದು ಸ್ವಾಮೀಜಿಗಳ ಇಚ್ಛೆ. ಉತ್ತರ ಕರ್ನಾಟಕದಲ್ಲಿ ಈ ಸಂಸ್ಥೆಗಳನ್ನು ತೆರೆದು ಅಭಿವೃದ್ದಿ ಮಾಡುತ್ತಿದ್ದಾರೆ. ಕಿಡ್ನಿ, ಲಿವರ್ ಕಸಿ ಮಾಡಿಸಿಕೊಳ್ಳಲು ಇತ್ತರ ಕರ್ನಾಟಕದ ಜನ ಬಿಜಿಎಸ್ ಆಸ್ಪತ್ರೆಗೆ ನೇರವಾಗಿ ಬರುವಷ್ಟು ಸೌಲಭ್ಯಗಳು ದೊರೆಯುತ್ತಿವೆ ಎಂದರು. ಬಿಜಿಎಸ್ ಸಂಸ್ಥೆಗಳು ಉತ್ತರ ಮತ್ತು ದಕ್ಷಿಣ ಬೆಸೆಯುವ ಕೇಂದ್ರವಾಗಿದೆ‌ʼʼ ಎಂದು ಬೊಮ್ಮಾಯಿ ತಿಳಿಸಿದರು.

ಮಕ್ಕಳಿಗೆ ಕಿವಿ ಮಾತು ಹೇಳಿದ ಬೊಮ್ಮಾಯಿ

ಮಕ್ಕಳ ಪ್ರೌಢಶಾಲೆ ಜೀವನ ಅತ್ಯಂತ ಮಹತ್ವದದ ಘಟ್ಟ. ಮಕ್ಕಳನ್ನು ನೋಡಿದಾಗ ನಾನು ನಮ್ಮ ರಾಜ್ಯ ಹಾಗೂ ದೇಶದ ಭವಿಷ್ಯದ ಬಗ್ಗೆ ಆಶಾದಾಯಕವಾಗಿ ಆಲೋಚಿಸುತ್ತೇನೆ. ಭವಿಷ್ಯ ನಿಮ್ಮಲ್ಲೇ ಅಡಗಿದ್ದು, ದೇಶವನ್ನು ಯುವಜನಾಂಗ ಕಟ್ಟಬೇಕು. ಶೇ 40% ರಷ್ಟು ಯುವ ಸಮೂಹವಿರುವ ಈ ದೇಶಕ್ಕೆ ಅತ್ಯಂತ ದೊಡ್ಡ ಭವಿಷ್ಯವಿದೆ ಎಂದರು ಸಿಎಂ ಬೊಮ್ಮಾಯಿ. ನಿರಂತರ ಪ್ರಯತ್ನ ಮಾಡಬೇಕು. ಪರಿಶ್ರಮದಲ್ಲಿ ನಂಬಿಕೆಯಿಡಿ. ಸೋಲುಗಳಿಗೆ ಎದೆಗುಂದಬೇಡಿ. ಪರಮ ಹಂಸ ಪಕ್ಷಿಯಂತೆ ಎತ್ತರಕ್ಕೆ ಹಾರುವ ಕನಸು ಕಾಣಿರಿ ಎಂದು ಮುಖ್ಯಮಂತ್ರಿಗಳು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ್ , ಡಾ. ಕೆ.ಸುಧಾಕರ್, ಶಾಸಕ ಸತೀಶ್ ರೆಡ್ಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ, ಸಾಹಿತಿ ದೊಡ್ಡರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮೊದಲಾದವರು ಉಪಸ್ಥಿತರಿದ್ದರು.

Exit mobile version