Site icon Vistara News

Solar Eclipse 2022 | ಕೇತುಗ್ರಸ್ತ ಸೂರ್ಯ ಗ್ರಹಣ ಹಿನ್ನೆಲೆ ಸಾರ್ವಜನಿಕರಿಗಿಲ್ಲ ನಾಳೆ ಹಾಸನಾಂಬೆ ದರ್ಶನ

ಹಾಸನಾಂಬೆ

ಹಾಸನ: ಹಾಸನಾಂಬೆ ದರ್ಶನೋತ್ಸವ ಹತ್ತನೇ ದಿನಕ್ಕೆ ಕಾಲಿಟ್ಟಿದ್ದು, ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ದೀಪಾವಳಿ ಹಬ್ಬ ರಜೆ ಇದ್ದು ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಆದರೆ, ಮಂಗಳವಾರ (ಅ.೨೫) ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮಂಗಳವಾರ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಕಾರಣದಿಂದಾಗಿ ಸೋಮವಾರ ಮತ್ತು ಬುಧವಾರ ಮಾತ್ರ ಹಾಸನಾಂಬೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಗುರುವಾರ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಅಲ್ಲದೆ, ಕೊನೆಯ ದಿನವೂ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಈ ಕುರಿತು ಮಾತನಾಡಿರುವ ಹಾಸನಾಂಬೆ ದೇವಾಲಯದ ಪ್ರಧಾನ ಅರ್ಚಕ ನಾಗರಾಜು, ಮಂಗಳವಾರ ಸೂರ್ಯ ಗ್ರಹಣದ ಪ್ರಯುಕ್ತ ಹಾಸನಾಂಬ ದೇವಾಲಯ ಬಂದ್ ಆಗಲಿದೆ. ಎಲ್ಲರೂ ಶಾಂತ ರೀತಿಯಿಂದ ವರ್ತಿಸಬೇಕು. ನಿಮ್ಮ‌ ನಿಮ್ಮ ಮನೆಯಲ್ಲಿ‌ ಮನೆ ದೇವರಿಗೆ ಪ್ರಾರ್ಥನೆ ಮಾಡಿ. ಯಾರೂ ದೇವಸ್ಥಾನಕ್ಕೆ ಬಂದು ನಮ್ಮ ಕಾರ್ಯಕಲಾಪಗಳಿಗೆ ತೊಂದರೆ ಮಾಡಬೇಡಿ, ಅಡ್ಡಿಮಾಡಬೇಡಿ ಎಂದು ಮನವಿ ಮಾಡಿದರು.

ಮಂಗಳವಾರ ಪೂರ್ಣದಿನ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ನಮ್ಮ ಸಂಪ್ರದಾಯ ವಿಧಿ ವಿಧಾನದಂತೆ ನಾವು ಕೆಲಸ‌ ಮಾಡಿಕೊಳ್ಳುತ್ತೇವೆ. ಅನಾದಿ ಕಾಲದಿಂದ ಏನೇನು ಪೂಜಾ ಕೈಂಕರ್ಯ ಮಾಡುತ್ತಿದ್ದೆವೋ, ಅದನ್ನು ಮಾಡಿಕೊಂಡು ಬರುತ್ತಿದ್ದೇವೆ. ಈಗಾಗಲೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಎಲ್ಲ ದ್ವಾರಗಳನ್ನು ಬಂದ್ ಮಾಡಲಾಗುತ್ತಿದೆ. ಯಾರನ್ನೂ ಒಳಗೆ ಬಿಡವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | Solar Eclipse 2022 | ಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಕೇತು ನುಂಗುತ್ತಾನಾ? ಈ ಪುರಾಣ ಕಥೆ ಓದಿ

Exit mobile version