ನವದೆಹಲಿ: ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಅವರ ಬಗ್ಗೆ ಆಡಿದ ಅಪಮಾನಕಾರಿ ಮಾತುಗಳ ವಿರುದ್ಧದ (ನೂಪುರ್ ವಿವಾದ) ಆಕ್ರೋಶ ಇನ್ನೂ ತಗ್ಗುವಂತೆ ಕಾಣುತ್ತಿಲ್ಲ. ಮುಸ್ಲಿಂ ರಾಷ್ಟ್ರಗಳ ಪ್ರಬಲ ಒತ್ತಡಕ್ಕೆ ಮಣಿದ ಬಿಜೆಪಿ ನೂಪುರ್ ಶರ್ಮ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದಲ್ಲದೆ, ದಿಲ್ಲಿ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದಿಂದಲೇ ವಜಾ ಮಾಡಿದ ಹೊರತಾಗಿಯೂ ಪ್ರತಿಭಟನೆಗಳು ಮುಂದುವರಿದಿವೆ. ಶುಕ್ರವಾರ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿದ ಬೆನ್ನಿಗೇ ಭಾರಿ ಸಂಖ್ಯೆಯಲ್ಲಿ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ನೂಪುರ್ ಶರ್ಮಾ ಅವರನ್ನು ಬಂಧಿಸಬೇಕು ಎಂದು ಪ್ರಮುಖವಾಗಿ ಒತ್ತಾಯಿಸಲಾಗುತ್ತಿದೆ. ದಿಲ್ಲಿ, ಉತ್ತರ ಪ್ರದೇಶ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರಮುಖವಾಗಿ ಪ್ರತಿಭಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗುತ್ತಿದೆ.
ದಿಲ್ಲಿ ಜಾಮಿಯಾ ಮಸೀದಿ ಮುಂದೆ
ದಿಲ್ಲಿಯಲ್ಲಿ ಪ್ರಸಿದ್ಧ ಜಾಮಿಯಾ ಮಸೀದಿಯ ಹೊರಗಡೆ ಸಾವಿರಾರು ಮಂದಿ ಜಮಾಯಿಸಿದ್ದು ನೂಪುರ್ ಶಮಾ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೈಯಲ್ಲಿ ಪ್ಲಕಾರ್ಡ್‌ಗಳನ್ನು ಹಿಡಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದರಾದರೂ ಹೆಚ್ಚಿನವರು ಕದಲದೆ ಅಲ್ಲೇ ಉಳಿದರು.
ಮಸೀದಿ ಸಮಿತಿ ವತಿಯಿಂದ ಪ್ರತಿಭಟನೆಗೆ ಯಾವುದೇ ಕರೆ ನೀಡಲಾಗಿರಲಿಲ್ಲ. ಇದು ಏಕಾಏಕಿ ಹುಟ್ಟಿಕೊಂಡ ಪ್ರತಿಭಟನೆ, ಇದನ್ನು ಸಂಘಟಿಸಿದವರು ಯಾರು ಎನ್ನುವುದು ಗೊತ್ತಿಲ್ಲ ಎಂದು ಶಾಹಿ ಇಮಾಮ್ ಬುಖಾರಿ ಅವರು ಹೇಳಿದ್ದಾರೆ. ಸಿಲ್ಲಿ ಪೊಲೀಸರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ 31 ಮಂದಿಯ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ…
ಹೌರಾ ಜಿಲ್ಲೆಯ ಉಲುಬೇರಿಯಾದಲ್ಲಿ ಕೆಲವರು ರಸ್ತೆ ತಡೆ ನಡೆಸಲು ಯತ್ನಿಸಿದಾಗ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ರಸ್ತೆ ತಡೆ ತೆರವು ಮಾಡಲು ಮುಂದಾದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಯಿತು. ಆಗ ಪೊಲೀಸರು ಲಘು ಲಾಠೀಪ್ರಹಾರ ನಡೆಸಿದರು. ಸುಮಾರು 10 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಹಲವು ಕಡೆ ಪ್ರತಿಭಟನೆ, ರಸ್ತೆ ತಡೆ ನಡೆದಿತ್ತು.
ಉತ್ತರ ಪ್ರದೇಶದಲ್ಲಿ
ಉತ್ತರ ಪ್ರದೇಶದಲ್ಲಿ ಹಲವು ಕಡೆಗಳಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಲಖನೌ, ಸಹರಣ್‌ಪುರ, ಮೊರಾದಾಬಾದ್, ರಾಮಪುರಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ಪ್ರಯಾಗ್ ರಾಜ್‌ನ ಅಟಾಲಾ ಪ್ರದೇಶದಲ್ಲಿ ಪ್ರಾರ್ಥನೆ ಮುಗಿಸಿ ಹೊರಬಂದವರು ಘೋಷಣೆಗಳನ್ನು ಕೂಗುತ್ತಾ ಕಲ್ಲುತೂರಾಟ ನಡೆಸಿದರು. ಪೊಲೀಸರು ತಕ್ಷಣವೇ ಬಿಗಿ ಕ್ರಮಗಳನ್ನು ಕೈಗೊಂಡರು.
ಕಠಿಣ ಕ್ರಮಕ್ಕೆ ಯೋಗಿ ಸೂಚನೆ
ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಅಹಿತಕರ ಘಟನೆ, ಕಲ್ಲು ತೂರಾಟ ನಡೆದರೂ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಖಿಸಿದ್ದಾರೆ. ಕಳೆದ ವಾರ ಕಾನ್ಪುರದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿ ದೊಡ್ಡ ಮಟ್ಟದ ಗಲಭೆ ನಡೆದ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.
ತೆಲಂಗಾಣದಲ್ಲೂ ಪ್ರತಿಭಟನೆ
ಹೈದರಾಬಾದ್‌ನ ಮೆಕ್ಕಾ ಮಸೀದಿಯ ಹೊರಗಡೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯಿತು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಪ್ರದೇಶದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಲಾಗಿದೆ.
ಕರ್ನಾಟಕದಲ್ಲೂ ಆಕ್ರೋಶ
ಕರ್ನಾಟಕದ ಬೆಳಗಾವಿಯ ಫೋರ್ಟ್ ರೋಡ್‌ನ ಮಸೀದಿಯ ಮುಂದೆ ಶುಕ್ರವಾರ ನೂಪುರ್ ಶರ್ಮಾ ಅವರ ಭಾವಚಿತ್ರವನ್ನು ವಿದ್ಯುತ್ ಕಂಬಕ್ಕೆ ನೇತು ಹಾಕಲಾಗಿತ್ತು. ಶರ್ಮ ಅವರಿಗೆ ಮರಣದಂಡನೆ ವಿಧಿಸಲಾಗಿದೆ ಎಂಬಂತೆ ಪ್ರತಿಭಟನೆ ನಡೆಸಲಾಯಿತು. ಪೊಲೀಸರು ಕೂಡಲೇ ಧಾವಿಸಿ ಆ ಭಾವ ಚಿತ್ರವನ್ನು ತೆರವುಗೊಳಿಸಿದರು. ಶಾಂತಿ, ಸುವ್ಯವಸ್ಥೆ ಕದಡುವವರರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.