Site icon Vistara News

ಬೆಂಗಳೂರಿನಲ್ಲಿ ಈ ಬಾರಿಯೂ ವಾರ್ಡ್‌ಗೊಂದೇ ಗಣೇಶ ಕೂರಿಸಲು ಅವಕಾಶ

Ganesha

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಂಭ್ರಮದಿಂದ ಗಣೇಶೋತ್ಸವ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿ ಕೊರೊನಾ ಕಾಟ ಕಡಿಮೆ ಆಗಿದೆ. ಹಾಗಾಗಿ ಅದ್ಧೂರಿಯಾಗಿ ಆಚರಿಸಬಹುದು ಎಂದು ಭಾವಿಸಿದ್ದವರಿಗೆಲ್ಲ ಬಿಬಿಎಂಪಿ ಶಾಕ್‌ ನೀಡಿದೆ. ಕಳೆದ ವರ್ಷದಂತೆ ಈ ಬಾರಿಯೂ ಒಂದು ವಾರ್ಡ್‌ನಲ್ಲಿ ಒಂದೇ ಗಣೇಶ ಮೂರ್ತಿ ಕೂರಿಸಲು ಅವಕಾಶ ಎಂದು ಬಿಬಿಎಂಪಿ ಶನಿವಾರ ಹೇಳಿದೆ. ಈ ವರ್ಷ ಆಗಸ್ಟ್‌ ೩೧ರಂದು ಗಣೇಶ ಚತುರ್ಥಿ ಇದೆ. ಅಲ್ಲಿಂದ ಮುಂದೆ ಮೂರು ದಿನದಿಂದ ೧೦ ದಿನಗಳವರೆಗೆ ಆಚರಣೆ ನಡೆಯುತ್ತದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿಕೆ ನೀಡಿ, ಗಣೇಶ ಚತುರ್ಥಿಗೆ ಈ ಬಾರಿಯೂ ಬಿಬಿಎಂಪಿ‌ಯಿಂದ ಹಲವು ನಿಯಮಗಳನ್ನು ಜಾರಿ ಮಾಡಲಿದೆ. ಕಳೆದ ಬಾರಿಯ ನಿಯಮಗಳನ್ನೇ ಈ ಬಾರಿಯೂ ಹಾಕಲಾಗುತ್ತದೆ. ಕಳೆದ ಬಾರಿ ವಾರ್ಡಿಗೆ ಒಂದು ಗಣಪ ಅನ್ನೊ ನಿಯಮವಿತ್ತು. ಈ ಬಾರಿಯೂ ಕಳೆದ ವರ್ಷದ ನಿಯಮವೇ ಜಾರಿಯಲ್ಲಿರಲಿದೆʼʼ ಎಂದಿದ್ದಾರೆ.

ಸಾಮಾನ್ಯ ಸಂದರ್ಭದಲ್ಲಿ ಕೆಲವು ಕಡೆ ಮನೆ, ಓಣಿಗೊಂದು ಮಾತ್ರವಲ್ಲ, ಒಂದು ಓಣಿಯಲ್ಲೇ ಹಲವು ಮೂರ್ತಿಗಳನ್ನು ಸ್ಥಾಪಿಸಿ ಜನರು ಸಂಭ್ರಮ ಆಚರಿಸುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಇದಕ್ಕೆ ಕಡಿವಾಣ ಹಾಕಿ ಒಂದು ವಾರ್ಡ್‌ನಲ್ಲಿ ಒಂದೇ ಗಣಪತಿ ಇಡುವಂತೆ ಸೂಚಿಸಲಾಗಿತ್ತು. ಈ ಬಾರಿಯೂ ಅದೇ ನಿಯಮ ಜಾರಿಗೆ ತರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಪಿಒಪಿ ಮೂರ್ತಿ ನಿಷೇಧ
ಈ ಬಾರಿ ಪ್ಲಾಸ್ಟರ್‌ ಅಫ್‌ ಪ್ಯಾರಿಸ್‌ನಿಂದ ತಯಾರಿಸಿದ ಮೂರ್ತಿಗಳನ್ನು ಇಡುವಂತಿಲ್ಲ, ಮಾರುವಂತಿಲ್ಲ ಎಂಬ ನಿಯಮ ಜಾರಿಯಲ್ಲಿರಲಿದೆ. ಯಾರೂ ಸಹ ಪಿಒಪಿ ವಿಗ್ರಹಗಳನ್ನು ತಯಾರು ಮಾಡಿ ಮಾರಾಟ ಮಾಡಬಾರದು, ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿ ಈ ನಿಟ್ಟಿನಲ್ಲಿ ದಾಳಿಗಳನ್ನು ನಡೆಸಲಿದೆ ಎಂದರು.

ಬೆಂಗಳೂರಿನಲ್ಲಿ ಈಗಾಗಲೇ ಗಣೇಶ ಮೂರ್ತಿಗಳ ಮಾರಾಟ ಆರಂಭಗೊಂಡಿದ್ದು, ವ್ಯಾಪಾರಿಗಳು ಕೂಡಾ ಚೆನ್ನಾಗಿ ವ್ಯವಹಾರವಾಗುವ ನಿರೀಕ್ಷೆ ಹೊಂದಿದ್ದರು. ಕಳೆದೆರಡು ವರ್ಷಗಳಲ್ಲಿ ಭಾರಿ ಸಮಸ್ಯೆ ಎದುರಿಸಿದ್ದ ಅವರಿಗೆ ಈ ಬಾರಿಯ ವಾತಾವರಣ ಹಿತ ನೀಡಿತ್ತು. ಮಳೆಯೊಂದು ಕಡಿಮೆಯಾದರೆ ಯಾವುದೇ ಸಮಸ್ಯೆ ಆಗದು ಅಂದುಕೊಂಡಿದ್ದರು. ಆದರೆ, ಬಿಬಿಎಂಪಿ ಆಯುಕ್ತರ ಹೇಳಿಕೆ ಅವರ ಉತ್ಸಾಹಕ್ಕೆ ತಣ್ಣೀರು ಎರಚಿದೆ.

Exit mobile version