Site icon Vistara News

ರಾಮನ ಕರೆ ಇದ್ದವರು ಬರ್ತಾರೆ; ‘ಅಯೋಧ್ಯೆ’ ಆಮಂತ್ರಣ ನಿರಾಕರಿಸಿದ ಸಿಪಿಎಂಗೆ ಬಿಜೆಪಿ ಚಾಟಿ

Ram Mandir Inauguration

Only those called by Lord Ram: BJP jibe at CPI(M) over Ayodhya remark

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ (Ram Mandir) ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾನ ಮೂರ್ತಿಯನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ದೇಶದ ಗಣ್ಯರ ಜತೆಗೆ ಎಲ್ಲ ಪಕ್ಷಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಇನ್ನು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರೂ ಪಾಲ್ಗೊಳ್ಳುವುದಿಲ್ಲ ಎಂದು ಸಿಪಿಎಂ ಘೋಷಿಸಿದ್ದು, ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಪಿಎಂನಿಂದ ಯಾರೂ ಪಾಲ್ಗೊಳ್ಳುವುದಿಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಹೇಳಿರುವುದಕ್ಕೆ ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತಿರುಗೇಟು ನೀಡಿದ್ದಾರೆ. “ದೇಶಾದ್ಯಂತ ಸಾವಿರಾರು ಗಣ್ಯರಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಮಂತ್ರಣ ನೀಡಲಾಗಿದೆ. ಆದರೆ, ರಾಮನ ಕರೆ ಇದ್ದವರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಮೀನಾಕ್ಷಿ ಲೇಖಿ ತಿರುಗೇಟು ಕೊಟ್ಟಿದ್ದಾರೆ.

ಸೀತಾರಾಮ್‌ ಯೆಚೂರಿ ಹೇಳಿದ್ದೇನು?

“ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಧರ್ಮವು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯಾಗಿದೆ. ನಾವು ಎಲ್ಲರ ವೈಯಕ್ತಿಕ ಆಯ್ಕೆಯನ್ನು ಗೌರವಿಸುತ್ತದೆ. ಆದರೆ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿ ಬದಲಾಗಿದೆ. ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಸ್ಥಾನ ಹೊಂದಿದವರು ಉದ್ಘಾಟನೆ ಮಾಡುತ್ತಿದ್ದಾರೆ. ಧಾರ್ಮಿಕ ನಂಬಿಕೆಯನ್ನು ರಾಜಕೀಯಕ್ಕೆ ಎಳೆದು ತರಲಾಗಿದೆ. ಸಿಪಿಎಂ ಪಕ್ಷವು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದೆ” ಎಂದು ಸೀತಾರಾಮ್‌ ಯೆಚೂರಿ ಹೇಳಿದ್ದರು.

ಯಾವೆಲ್ಲ ಸೆಲೆಬ್ರಿಟಿಗಳಿಗೆ ಆಹ್ವಾನ?

ಸ್ಯಾಂಡಲ್‌ವುಡ್‌ನ ಯಶ್‌ ಹಾಗೂ ರಿಷಬ್‌ ಶೆಟ್ಟಿ ಅವರಿಗೆ ರಾಮಮಂದಿರ ಟ್ರಸ್ಟ್‌ ಆಹ್ವಾನ ನೀಡಿದೆ ಎಂದು ತಿಳಿದುಬಂದಿದೆ. ಇನ್ನು ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಮಾಧುರಿ ದೀಕ್ಷಿತ್‌, ಅಕ್ಷಯ್‌ ಕುಮಾರ್‌, ಆಲಿಯಾ ಭಟ್‌, ಆಯುಷ್ಮಾನ್‌ ಕುರಾನ, ಅಜಯ್‌ ದೇವಗನ್‌, ಅನುಪಮ್‌ ಖೇರ್‌, ಸಂಜಯ್‌ ಲೀಲಾ ಬನ್ಸಾಲಿ ಸೇರಿ ಹಲವು ನಟ-ನಟಿಯರು, ನಿರ್ದೇಶಕರಿಗೆ ಆಹ್ವಾನಿಸಲಾಗಿದೆ.

ದಕ್ಷಿಣ ಭಾರತದ ಚಿತ್ರರಂಗದ ಗಣ್ಯರಾದ ರಜನಿಕಾಂತ್‌, ಚಿರಂಜೀವಿ, ಮೋಹನ್‌ಲಾಲ್‌, ಧನುಶ್‌, ಪ್ರಭಾಸ್ ಅವರಿಗೂ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ದೇಶದ ಸುಮಾರು 4 ಸಾವಿರ ಸಂತರು ಪಾಲ್ಗೊಳ್ಳಲಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಸುಮಾರು 10-15 ಸಾವಿರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್​ ಶಾ ಹೇಳಿಕೆಗೊಂದು ಕಾರಣವಿದೆ

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version