Site icon Vistara News

ರಾಮ ಭಕ್ತರಿಗೆ ಮಾತ್ರ ಮಂದಿರ ಉದ್ಘಾಟನೆಗೆ ಆಹ್ವಾನ; ಉದ್ಧವ್ ಠಾಕ್ರೆಗೆ ಸಂತನ ಟಾಂಗ್!

Acharya Satyendra Das

Only To Devotees Of Ram: Ram Temple Priest On Uddhav Thackeray's No Invite Remark

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. 2024ರ ಜನವರಿ 22ರಂದು ರಾಮಮಂದಿರ ಉದ್ಘಾಟನೆ ನೆರವೇರಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಮತ್ತೊಂದೆಡೆ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು, ಕೆಲವೊಬ್ಬರಿಗೆ ನೀಡದಿರುವುದು ಕೂಡ ವಿವಾದಕ್ಕೆ ಕಾರಣವಾಗಿದೆ. ಇದರ ಭಾಗವಾಗಿಯೇ, “ನನಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿಲ್ಲ” ಎಂದು ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ (Uddhav Thackeray) ಹೇಳಿದ್ದಾರೆ. ಈಗ ಉದ್ಧವ್‌ ಠಾಕ್ರೆ ಅವರಿಗೆ ರಾಮಜನ್ಮಭೂಮಿ ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿರುವ ಆಚಾರ್ಯ ಸತ್ಯೇಂದ್ರ ದಾಸ್‌ (Acharya Satyendra Das) ಅವರು ತಿರುಗೇಟು ನೀಡಿದ್ದಾರೆ. “ರಾಮನ ಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ” ಎಂದು ಹೇಳಿದ್ದಾರೆ.

“ಯಾರು ರಾಮನ ಭಕ್ತರಾಗಿದ್ದಾರೋ ಅವರಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಭಗವಾನ್‌ ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬುದಾಗಿ ಹೇಳುವುದು ತಪ್ಪು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲೆಡೆಯೂ ಗೌರವ ಸಿಗುತ್ತಿದೆ. ಅವರು ತಮ್ಮ ಆಡಳಿತದ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಮಮಂದಿರ ನಿರ್ಮಾಣಕ್ಕೂ ಅವರ ಕೊಡುಗೆ ಇದೆ. ಇದು ರಾಜಕೀಯ ಅಲ್ಲ, ರಾಮನ ಮೇಲೆ ಅವರು ಹೊಂದಿರುವ ಭಕ್ತಿ” ಎಂದು ಆಚಾರ್ಯ ಸತ್ಯೇಂದ್ರ ದಾಸ್‌ ತಿಳಿಸಿದ್ದಾರೆ.

“ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಭಗವಾನ್‌ ಶ್ರೀರಾಮನೇ ಬಿಜೆಪಿ ಅಭ್ಯರ್ಥಿ ಎಂಬುದಾಗಿ ಘೋಷಿಸುವುದು ಒಂದೇ ಬಾಕಿ ಇದೆ” ಎಂದು ಶಿವಸೇನೆ ನಾಯಕ ಸಂಜಯ್‌ ರಾವತ್‌ ನೀಡಿದ ಹೇಳಿಕೆಗೂ ಆಚಾರ್ಯ ಸತ್ಯೇಂದ್ರ ದಾಸ್‌ ತಿರುಗೇಟು ನೀಡಿದರು. “ಸಂಜಯ್‌ ರಾವತ್‌ ಅವರಿಗೆ ರಾಮಮಂದಿರವು ಹೇಳಿಕೊಳ್ಳಲು ಆಗದಂತಹ ನೋವುಂಟು ಮಾಡಿದೆ. ಒಂದು ಕಾಲದಲ್ಲಿ ಶಿವಸೇನೆಯು ರಾಮನ ಹೆಸರಿನಲ್ಲಿ ಚುನಾವಣೆ ಸ್ಪರ್ಧಿಸುತ್ತಿತ್ತು. ರಾಮನ ಮೇಲೆ ನಂಬಿಕೆ ಇಟ್ಟವರು ಈಗ ಅಧಿಕಾರದಲ್ಲಿದ್ದಾರೆ. ಸಂಜಯ್‌ ರಾವತ್‌ ಅವರು ಅಪದ್ಧ ನುಡಿಯುವ ಮೂಲಕ ರಾಮನಿಗೆ ಅವಮಾನ ಮಾಡಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಗೆ ಮಮತಾ ಬ್ಯಾನರ್ಜಿಯೂ ಗೈರು; ಏನು ಕಾರಣ?

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರತಿಪಕ್ಷಗಳಿಗೂ ಆಹ್ವಾನ ನೀಡಲಾಗಿದೆ. ಆದರೆ, ಮಮತಾ ಬ್ಯಾನರ್ಜಿ ಅಥವಾ ಟಿಎಂಸಿಯ ಯಾವುದೇ ಪ್ರತಿನಿಧಿಗಳು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಬಿಜೆಪಿಯು ರಾಜಕೀಯಕ್ಕೆ ಎಳೆದುತಂದಿದೆ. ಇದನ್ನು ಬಿಜೆಪಿಯು ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸುತ್ತಿದೆ. ಹಾಗಾಗಿ ಪಾಲ್ಗೊಳ್ಳದಿರಲು ಮಮತಾ ಬ್ಯಾನರ್ಜಿ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅತ್ತ ಸಿಪಿಎಂ ಕೂಡ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಿಂದ ದೂರ ಉಳಿಯಲು ತೀರ್ಮಾನಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version