ಸ್ವಾಮಿ ಧ್ಯಾನ್ ಉನ್ಮುಖ್
“ಸತ್ಯ ಯಾವಾಗಲೂ ಸರಿ ಬಾಗಿಲ ಮೂಲಕವೇ, ಕಣ್ಣಿನ ಮೂಲಕ, ನಿಮ್ಮ ಸ್ವಂತ ಅನುಭವವಾಗಿ ನಿಮಗೆ ದಕ್ಕಬೇಕುʼʼ ಎಂದು ಹೇಳಿದ ಭಾರತದ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕ ಆಚಾರ್ಯ ಓಶೋ ರಜನೀಶ್ (Osho Rajneesh) ಅವರ ಜನ್ಮದಿನ ಇಂದು. ಓಶೋ ರಜನೀಶ್ ಅನೇಕ ಬಗೆಯಲ್ಲಿ ನಮ್ಮ ಜ್ಞಾನದ ಪರಿಧಿಯನ್ನು ಹಿಗ್ಗಿಸಲು ಯತ್ನಿಸಿದವರು. ಸರಳ ಕತೆಗಳಲ್ಲಿ ಆಧ್ಯಾತ್ಮಿಕ ಸ್ಪರ್ಶ ನೀಡುತ್ತಿದ್ದವರು.
ಅವರ ಚಿಂತನೆಗಳು ವಿಭಿನ್ನವಾಗಿದ್ದವು. ಹೊಸ ಹೊಳಹುಗಳಿಗೆ ದಾರಿ ಮಾಡಿಕೊಡುತ್ತಿದ್ದವು. ಮನುಕುಲವನ್ನೇ ರೂಪಾಂತರಿಸುವ ಗುರಿ ಹೊಂದಿದ ಅವರಿಗೆ “ಯಾವುದೇ ಸರ್ಕಾರ ನಿಮ್ಮನ್ನು ಸಹಿಸಿಕೊಳ್ಳುತ್ತಿಲ್ಲ, ಯಾವುದೇ ರಾಜಕಾರಣಿಗಳು ತಮ್ಮ ದೇಶದ ಗಡಿಯಲ್ಲೂ ಸಹ ಬಿಟ್ಟುಕೊಳ್ಳುತ್ತಿಲ್ಲ, ಯಾವುದೇ ಚರ್ಚ್, ಯಾವುದೇ ಧರ್ಮ ನಿಮ್ಮನ್ನು ಕ್ಷಮಿಸುತ್ತಿಲ್ಲ, ವಿಶ್ವದ ತೊಂಬತ್ತೆಂಟು ಪ್ರತಿಶತ ಜನ ನಿಮ್ಮನ್ನು ಸ್ವೀಕರಿಸಿಲ್ಲ. ಹೀಗಿರುವಾಗ ಇಷ್ಟು ದೊಡ್ಡ ಮನುಕುಲವನ್ನು ಹೇಗೆ ರೂಪಾಂತರಿಸುವಿರಿ, ವಿಶ್ವದ ಚಿತ್ರಣ ಹೇಗೆ ಬದಲಾಯಿಸುವಿರಿ?ʼʼ ಎಂದು ನೇಪಾಳದಲ್ಲಿ ನೆಲೆಸಿದ್ದ ಅವರನ್ನು ಕೇಳಿದಾಗ ನೀಡಿದ ಉತ್ತರ ಹೀಗಿದೆ;
ಹೌದು, ಇದು ಸತ್ಯವಾಗಿದೆ, ಯಾವುದೇ ಸರ್ಕಾರ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ. ಯಾವುದೇ ಧರ್ಮ ನನ್ನ ಸಹಾಯಕ್ಕೆ ಬರಲಿಲ್ಲ. ಯಾರು ಸಹ ಸಹಾಯದ ಹಸ್ತ ಚಾಚಲಿಲ್ಲ. ಯಾರು ಅಧಿಕಾರದಲ್ಲಿರುವವರೋ ಕನಿಷ್ಠ ಪಕ್ಷ ಅವರು ನನ್ನನ್ನು ಕೇಳಿಸಿಕೊಳ್ಳುವ ಸೌಜನ್ಯವನ್ನು ಸಹ ತೋರಲಿಲ್ಲ.
ಇದನ್ನು ನಾನು ದೊಡ್ಡ ವಿಜಯವೆಂದು ಪರಿಗಣಿಸುತ್ತೇನೆ, ಈ ಮೊದಲು ಯಾರು ಸಹ ಇವರನ್ನು ಇಷ್ಟೊಂದು ಭಯ ಭೀತಿಗೊಳಿಸಿರಲಿಲ್ಲ. ಅವರಲ್ಲಿನ ಭಯವೇ ನನ್ನ ಸತ್ಯಕ್ಕೆ ಪುರಾವೆಯಾಗಿದೆ. ನಾನು ಸುಳ್ಳಾಗಿದ್ದರೆ ನನ್ನ ಕಂಡು ಹೆದುರುವ ಅವಶ್ಯಕತೆಯಿಲ್ಲ. ಅವರು ನನ್ನನ್ನು ಬಹಿರಂಗ ಚರ್ಚೆಗೆ ಕರೆಯಬಹುದಿತ್ತು, ವಾದಿಸಬಹುದಿತ್ತು, ಅವರಿಗೆ ಎಲ್ಲಾ ಮಾರ್ಗಗಳು ಮುಕ್ತವಾಗಿದ್ದವು. ನಾನು ತಪ್ಪೆಂದು ಅವರು ಇಡೀ ಜಗತ್ತಿಗೆ ಸಾಬೀತು ಪಡಿಸಬಹುದಿತ್ತು. ನನ್ನಲ್ಲಿ ಯಾವುದೇ ತಪ್ಪಿಲ್ಲ ಎಂಬುದು ಅವರಿಗೆ ಗೊತ್ತು ಅದೇ ಅವರಿಗೆ ಭಯ ಹಾಗೂ ಸತ್ಯಕ್ಕೆ ಎಂದಿಗೂ ಸೋಲುವುದಿಲ್ಲ, ಬಹುಶಃ ಗೆಲುವು ವಿಳಂಬವಾಗಬಹುದು,ಆದರೆ ಅದು ಸೋಲುವುದಿಲ್ಲ.
ನೀವು ಹೇಳಿದ ಶೇ. ೯೮ ಜನ ಪಂಡಿತ, ಪುರೋಹಿತ ಮತ್ತು ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಬಂಧಿತರಾಗಿದ್ದಾರೆ. ಹೀಗಿರುವಾಗ ಇಷ್ಟು ದೊಡ್ಡ ಮನುಕುಲದ ಧಾರಣೆಯನ್ನು ಹೇಗೆ ಬದಲಾಯಿಸುವಿರಿ, ಹೇಗೆ ರೂಪಾಂತರಿಸುವಿರಿ? ನೀವು ಉಳಿದ ಶೇ. ೨ ಜನರನ್ನು ಮರೆತಿರುವಿರಿ. ನಿಮ್ಮನ್ನು ನೀವು ಮರೆತಿರುವಿರಿ. ಕಾರ್ಲ್ ಮಾರ್ಕ್ಸ್ ಕಮ್ಯುನಿಸ್ಟ್ ಸಿದ್ಧಾಂತದ ಬಗ್ಗೆ ಯೋಚಿಸಲು ಪ್ರಾರಂಭಿಸಿದಾಗ, ಅವನು ಏಕಾಂಗಿ; ಈಗ ಅರ್ಧ ದಷ್ಟು ಪ್ರಪಂಚವು ಕಮ್ಯುನಿಸ್ಟ್ ಆಗಿದೆ. ಈ ೨% ಜನರು ಸಾಕು. ೯೮% ಜನ ಬಹುಮತದಂತೆ ಕಾಣಬಹುದು. ಸತ್ಯವನ್ನು ಬಹುಮತ ದಿಂದ ನಿರ್ಧರಿಸಲಾಗದು. ಯಾರ ಬಳಿ ಸತ್ಯವಿದೆ ಎನ್ನುವುದರ ಮೂಲಕ ನಿರ್ಧರಿಸಬಹುದು.
ಸತ್ಯಕ್ಕೆ ತನ್ನದೇ ಆದ ಸೂಕ್ಷ್ಮ ಮಾರ್ಗಗಳಿವೆ. ಮಹೋನ್ನತ ಕ್ರಾಂತಿಗೆ ಈ ೨% ಜನರೇ ಸಾಕು. ಈ ೨% ಜನರ ಹೃದಯವನ್ನು ಗೆದ್ದಿರುವೆ ಇಷ್ಟು ಸಾಕು. ಉಳಿದ ೯೮% ಜನ ಸತ್ಯದೊಂದಿಗೆ ಇಲ್ಲ, ಮೃತ ಸಂಗತಿಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಅಸತ್ಯದೊಂದಿಗೆ ನಿಂತಿದ್ದಾರೆ, ಮೂಢನಂಬಿಕೆಗಳ ಪರ ನಿಂತಿದ್ದಾರೆ. ಈ ೨% ಬುದ್ಧಿವಂತ ಯುವಕರು ಸಾಕು ಇಡೀ ವಿಶ್ವವನ್ನು ಪ್ರಕಾಶಿಸಲು. ಇದರಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ.
ನಾನು ಎಲ್ಲಾ ಜನಾಂಗದವರೊಂದಿಗೆ, ಎಲ್ಲಾ ರಾಷ್ಟ್ರಗಳೊಂದಿಗೆ, ವಿಭಿನ್ನ ಸಂಸ್ಕೃತಿಗಳೊಂದಿಗೆ ಮಾತನಾಡಿದ್ದೇನೆ . ನನ್ನ ಮತ್ತು ಬುದ್ಧಿವಂತ ಜನರ ನಡುವೆ ನಾನು ಅನೂಹ್ಯ ಅನುಬಂಧವಿದೆ . ವಿಶ್ವಾದ್ಯಂತ ಇರುವ ಬುದ್ಧಿವಂತ ಜನರೊಡನೆ ಸಾಮರಸ್ಯ ಘಟಿಸಿದೆ. ಕೇವಲ ಮೂರ್ಖರು ಮಾತ್ರ ನನ್ನೊಂದಿಗಿಲ್ಲ, ನನ್ನೊಟ್ಟಿಗೆ ಬರಲಿ ಎಂದು ಸಹ ಬಯಸುವುದಿಲ್ಲ. ನನಗೆ ಕೇವಲ ಬುದ್ಧಿವಂತ ಜನರು ಮಾತ್ರ ಬೇಕಾಗಿದ್ದಾರೆ; ಹಾಗೂ ಅವರು ನನ್ನೊಡನೆ ಇದ್ದಾರೆ. ಅವರು ನನ್ನನ್ನು ಅರ್ಥಮಾಡಿ ಕೊಳ್ಳಬಲ್ಲರು, ಇಡೀ ವಿಶ್ವವನ್ನೇ ಬದಲಾಯಿಸ ಬಲ್ಲರು. ಯಾರು ಬಹುಸಂಖ್ಯಾತರೋ ಅವು ಸಕ್ರಿಯವಾಗಿರುವುದಿಲ್ಲ, ಅವರ ಶಕ್ತಿ ಸುಪ್ತಾವಸ್ಥೆಯಲ್ಲಿರುತ್ತದೆ. ಯಾರನ್ನು ನೀವು ಅಲ್ಪಸಂಖ್ಯಾತರು ಎನ್ನುವಿರೋ ಅವರು ಬಾಣದ ತುದಿಯಂತೆ ಕೆಲಸ ಮಾಡುವರು…ಒಮ್ಮೆ ಏನಾದರೂ ಅಲ್ಪಸಂಖ್ಯೆಯಲ್ಲಿರುವ ಬುದ್ಧಿವಂತ ಜನ ವಿಚಾರವನ್ನು ಸ್ವೀಕರಿಸಿದರೆ, ಬಹುಸಂಖ್ಯಾತರು ಅವರನ್ನು ಅನುಸರಿಸುವರು. ಯಾರು ಅಸತ್ಯದ ಹಿಂದೆ ಕುರಿಮಂದೆಗಳಂತೆ ಹೋಗುತ್ತಿರುವರೋ, ಸತ್ಯದ ಹಿಂದೆ ಬರುವುದಿಲ್ಲವೇ?
ನನಗೆ ಯಾವುದೇ ಸರ್ಕಾರಗಳ ಕುರಿತು ಆಸಕ್ತಿಯೂ ಇಲ್ಲ ಚಿಂತೆಯೂ ಇಲ್ಲ, ಯಾವುದೇ ಪೋಪ್, ಶಂಕರಾ ಚಾರ್ಯ, ಮುಲ್ಲಗಳ ಕುರಿತು ಆಸಕ್ತಿಯಿಲ್ಲ. ನನ್ನ ಆಸಕ್ತಿ ಇರುವುದು ಯುವಕರೆಡೆಗೆ. ಅವರ ವಯಸ್ಸಿನೊಂದಿಗೆ ಯಾವುದೇ ಸಂಬಂಧವಿಲ್ಲ. ಅವಶ್ಯವಿರುವುದು ಕೇವಲ ಬುದ್ಧಿವಂತಿಕೆ ಮಾತ್ರ. ಅಂಥವರು ನನ್ನ ಜೊತೆಗೆ ಇದ್ದರೆ ಇಡೀ ವಿಶ್ವದ ಚಿತ್ರಣವನ್ನೇ ಬದಲಾಯಿಸ ಬಲ್ಲೆ. ನಮ್ಮನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ನನ್ನೊಡನೆ ಚರ್ಚೆಗೆ ಯಾರು ಸಿದ್ಧರಿಲ್ಲ. ನನ್ನ ವಿರುದ್ಧ ಕೇವಲ ವದಂತಿಗಳಿವೆ ಹಾಗೂ ವದಂತಿಗಳು ಏನನ್ನು ಮಾಡುವುದಿಲ್ಲ, ಅವು ಅವರ ಸೋಲಿನ ಸೂಚನೆಗಳು. ಬಹುಪಾಲು ಜನರು ಮಾನಸಿಕವಾಗಿ ಕುಸಿದು ಹೋಗಿದ್ದಾರೆ. ಒಂದು ದಿನ ನೇಪಾಳದಲ್ಲಿ ವಾಯುವಿಹಾರ ಮುಗಿಸಿ ಮನೆಗೆ ಹಿಂತಿರುಗುತ್ತಿರುವಾಗ ಒಬ್ಬ ವ್ಯಕ್ತಿ ಸಿಟ್ಟಿನಿಂದ ಕೂಗುತ್ತಾನೆ, “ನೇಪಾಳಕ್ಕೆ ಬಂದಿರುವ ಉದ್ದೇಶವಾದರೂ ಏನು”ಎಂದು.
ನಾನು ಆ ವ್ಯಕ್ತಿಗೆ ಹೀಗೆ ಕೇಳಿದೆ, “ನೀನು ಸಹ ನೇಪಾಳದಲ್ಲಿಯೇ ಇರುವೆ, ಅದರ ಕಾರಣವೇನು? ನೀನಿಲ್ಲಿ ಹುಟ್ಟಿರುವ ಉದ್ದೇಶವಾದರೂ ಏನು?”. ನನ್ನ ಉದ್ದೇಶ ಸ್ಪಷ್ಟವಾಗಿದೆ- ಜನರನ್ನು ಭ್ರಷ್ಟಗೊಳಿಸುವುದು. ಯಾರಲ್ಲಿ ಧೈರ್ಯ ವಿದೆಯೋ ಅವರನ್ನು ಭ್ರಷ್ಟಗೊಳಿಸುವುದು. ಹಿಂದೆಯೂ ಸಾಕ್ರೇಟಿಸ್, ಪೈಥಾಗೋರಸ್, ಹೆರಾಕ್ಲಿಟಸ್ ಜನರನ್ನು ಭ್ರಷ್ಟಗೊಳಿಸಿದ್ದಾರೆ. ನಾನು ಸಹ ಅವರ ವರ್ಗಕ್ಕೆ ಸೇರಿದ್ದೇನೆ. ನಾನು ಸಹ ಅವರಂತೆ ಜನರನ್ನು ಭ್ರಷ್ಟಗೊಳಿಸುತ್ತಿರುವೆ. ಸಾಕ್ರೇಟಿಸ್ ನಂತಹ ವ್ಯಕ್ತಿಗಳಿಂದ ಭ್ರಷ್ಟಗೊಳ್ಳುವುದೇ ಒಳ್ಳೆಯದು ಏಕೆಂದರೆ ಅದರಿಂದ ನಿಮ್ಮಲ್ಲಿ ಒಬ್ಬ ಕ್ರಾಂತಿಕಾರಿ ಜನಿಸುವನು, ನಿಮ್ಮಿಂದ ಕ್ರಾಂತಿ ಘಟಿಸುವುದು. ನಿಮ್ಮಿಂದ ಪಡೆಯಬೇಕದುದ್ದು ಏನು ಇಲ್ಲ. ನನ್ನ ಬಳಿ ಏನಿದೆಯೋ ಅದನ್ನು ಕೊಡಬಲ್ಲೆ.
ಹೀಗೆ ಓಶೋ ಹೊಸ ಯೋಚನೆಗೆ ಹಚ್ಚುವಂತೆ ಈ ಪ್ರಶ್ನೆಗೆ ಉತ್ತರ ನೀಡಿದ್ದರು. 1960 ರ ದಶಕದಲ್ಲಿ ಹೊಸ ಸಂಚಲನಕ್ಕೆ ಕಾರಣರಾಗಿದ್ದ ಓಶೋ, ಮಹಾನ್ ಋಷಿಮುನಿಗಳು ತೋರಿದ ಹಾದಿ, ಧಾರ್ಮಿಕ ಗ್ರಂಥಗಳ ವಿಶ್ಲೇಷಣೆಗಳನ್ನು ಅವರು ಸುಮಾರು 30ಕ್ಕೂ ವರ್ಷಗಳ ಕಾಲ ನೀಡಿದ್ದರು.
ಇದನ್ನೂ ಓದಿ | Sunday read | ಓಶೋ ರಜನೀಶ್ ಹೇಳಿದ ದೃಷ್ಟಾಂತ ಕತೆಗಳು