Site icon Vistara News

Amarnath Yatra: ಅಮರನಾಥ ಯಾತ್ರೆ ವೇಳೆ ದೋಸೆ ಸೇರಿ 40 ತಿಂಡಿ ನಿಷೇಧ, ನಾನ್‌ವೆಜ್‌ ಅಲ್ಲದಿದ್ದರೂ ಏಕೆ ಕ್ರಮ?

Some Food Items Banned During Amarnath Yatra

Over 40 food items, including dosa banned at Amarnath Yatra

ಶ್ರೀನಗರ: ಹಿಂದುಗಳ ಪವಿತ್ರ ʼಅಮರನಾಥ ಯಾತ್ರೆʼ (Amarnath Yatra) ಜುಲೈ 1ರಿಂದ ಆರಂಭವಾಗಲಿದೆ. ಕಾಶ್ಮೀರದ ಶಿಖರ ಪ್ರದೇಶದಲ್ಲಿರುವ ಅಮರನಾಥನ ದರ್ಶನಕ್ಕೆ ಲಕ್ಷಾಂತರ ಜನ ಯಾತ್ರೆ ಕೈಗೊಳ್ಳುತ್ತಾರೆ. ಈಗಾಗಲೇ ಯಾತ್ರಿಕರು ನೋಂದಣಿಯನ್ನೂ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ಯಾತ್ರಿಕರ ದೃಷ್ಟಿಯಿಂದ ದೇವಾಲಯದ ಆಡಳಿತ ಮಂಡಳಿಯು ಪಲಾವ್‌, ದೋಸೆ ಸೇರಿ 40 ತಿಂಡಿ ಅಥವಾ ಆಹಾರವನ್ನು ಯಾತ್ರಿಕರು ತೆಗೆದುಕೊಂಡು ಹೋಗುವಂತಿಲ್ಲ ಎಂದು ಸೂಚಿಸಿದೆ.

ಕಾಶ್ಮೀರದ ಹಿಮಾಲಯ ಪ್ರದೇಶದಲ್ಲಿ 3,880 ಮೀಟರ್‌ ಎತ್ತರದಲ್ಲಿ ಅಮರನಾಥ ಗುಹೆ ಇದೆ. ಯಾತ್ರೆ ಕೈಗೊಳ್ಳಲು ಜುಲೈ 1ರಿಂದ ಎರಡು ಮಾರ್ಗಗಳನ್ನು ತೆರೆಯಲಾಗುತ್ತದೆ. ನುನ್ವಾನ್‌-ಪಹಲ್‌ಗಾಮ್‌ ಮೂಲಕ 48 ಕಿ.ಮೀ ಹಾಗೂ ಬಲ್ತಾಳ್‌ ಮೂಲಕ 18 ಕಿ.ಮೀ ಯಾತ್ರೆ ಕೈಗೊಳ್ಳಬಹುದಾಗಿದೆ. 14 ಕಿ.ಮೀ ಯಾತ್ರೆಯನ್ನು ಟ್ರೆಕ್ಕಿಂಗ್‌ ಮೂಲಕ ಕೈಗೊಳ್ಳಬಹುದಾಗಿದ್ದು, ಬೆಟ್ಟಗಳ ಕಡಿದಾದ ಹಾದಿಯಲ್ಲಿ ಸಾಗಬೇಕು. ನಿತ್ಯ 4-5 ಕಿ.ಮೀ ನಡೆಯಬೇಕು. ಹೀಗೆ, ನಿತ್ಯ ಯಾತ್ರಿಕರು ನಾಲ್ಕೈದು ಕಿ.ಮೀ ನಡೆಯಬೇಕಾದ ಕಾರಣ ಶ್ರೀ ಅಮರನಾಥ ಯಾತ್ರಾ ಮಂಡಳಿಯು 40 ಆಹಾರ ಪದಾರ್ಥಗಳನ್ನು ನಿಷೇಧಿಸಿದೆ.

“ಯಾತ್ರಕರು ನಿತ್ಯ ಬೆಳಗ್ಗೆ ಹಾಗೂ ಸಾಯಂಕಾಲ ಸೇರಿ ನಾಲ್ಕೈದು ಕಿ.ಮೀ ನಡೆಯಬೇಕು. ಹೀಗೆ ನಡೆಯಬೇಕಾದರೆ ಅವರ ಆರೋಗ್ಯ ಸರಿಯಾಗಿರಬೇಕು. ದೈಹಿಕ ಫಿಟ್‌ನೆಸ್‌ ಹೆಚ್ಚು ಮುಖ್ಯವಾಗಿರುತ್ತದೆ. ಹಾಗಾಗಿ, ದೋಸೆ, ಪಲಾವ್‌, ಬರ್ಗರ್‌ ಸೇರಿ 40 ತಿಂಡಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ನಿಷೇಧಿತ 40 ತಿಂಡಿಗಳನ್ನು ಹೊರತುಪಡಿಸಿ ಯಾತ್ರಿಕರು ಯಾವ ತಿಂಡಿಯನ್ನಾದರೂ ತೆಗೆದುಕೊಂಡು ಹೋಗಬಹುದು” ಎಂದು ಮಂಡಳಿ ಮಾಹಿತಿ ನೀಡಿದೆ.

ಯಾವ ತಿಂಡಿ ನಿಷೇಧ?

ದೋಸೆ, ಪಲಾವ್‌, ಬರ್ಗರ್‌, ಫ್ರೈಡ್‌ ರೈಸ್‌, ಪುರಿ, ಬಟುರಾ, ಸ್ಟಫ್ಡ್‌ ಪರೋಟ, ಫ್ರೈಡ್‌ ರೋಟಿ, ಬ್ರೆಡ್‌, ಬಟರ್‌, ಉಪ್ಪಿನ ಕಾಯಿ, ಚಟ್ನಿ, ಫ್ರೈಡ್‌ ಪಾಪಡ್‌ ಸೇರಿ ಹಲವು ತಿಂಡಿಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಿದೆ. ಇವುಗಳ ಬದಲಾಗಿ, ನಡೆಯಲು, ಟ್ರೆಕ್‌ ಮಾಡಲು ಹೆಚ್ಚಿನ ಶಕ್ತಿ ನೀಡುವ ಕಾಳುಗಳು, ತರಕಾರಿ, ಸಲಾಡ್‌ ಹಾಗೂ ಕೆಲ ರೈಸ್‌ ಐಟಂಗಳನ್ನು ತೆಗೆದುಕೊಂಡು ಹೋಗುವುದು ಒಳಿತು ಎಂದು ಕೂಡ ಮಂಡಳಿ ಸಲಹೆ ನೀಡಿದೆ.

ಇದನ್ನೂ ಓದಿ: Viral News: ಹಜ್‌ ಯಾತ್ರೆಗೆಂದು 8,600 ಕಿ.ಮೀ. ನಡೆದ ಕೇರಳಿಗ! ಅಲ್ಲಿಗೆ ಹೋಗಲು ತೆಗೆದುಕೊಂಡ ಟೈಮ್ ಎಷ್ಟು?

ಬೆಟ್ಟಗಳ ಕಡಿದಾದ ಹಾದಿಯಲ್ಲಿ ನಡೆದುಕೊಂಡು ಹೋಗುವ ಜತೆಗೆ ಅತಿಯಾದ ಚಳಿಯು ಯಾತ್ರಿಕರು ಬಸವಳಿಯುವಂತೆ ಮಾಡುತ್ತದೆ. 2-5 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಯಾತ್ರೆ ಕೈಗೊಳ್ಳಬೇಕಾಗುತ್ತದೆ. ಅದರಲ್ಲೂ, ಹಿರಿಯ ನಾಗರಿಕರು ಟ್ರೆಕ್‌ ಮಾಡುವಾಗ ಹೈಪೋಥರ್ಮಿಯಾಗೆ (ದೇಹದ ಉಷ್ಣತೆ ಅತಿಯಾಗಿ ಕಡಿಮೆಯಾಗುವುದು) ತುತ್ತಾಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆಹಾರ ಪದಾರ್ಥಗಳನ್ನು ನಿಷೇಧಿಸಲಾಗಿದೆ ಎಂದು ಮಂಡಳಿ ಮಾಹಿತಿ ನೀಡಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version