Site icon Vistara News

Parshurama Jayanti 2023 : ಕ್ಷಾತ್ರ ತೇಜದ ಋಷಿಪುತ್ರ ಪರಾಕ್ರಮಿ ಪರಶುರಾಮ

Parshurama Jayanti 2023 Unraveling the mystique of Parshurama personality in kannada

#image_title

ವಿ. ಸುನಿಲ್ ಕುಮಾರ್
ನಮ್ಮಲ್ಲಿ ಏಳು ಜನ ಚಿರಂಜೀವಿಗಳಿದ್ದಾರೆ. ಅವರುಗಳೆಂದರೆ ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪ ಮತ್ತು ಪರಶುರಾಮ. ಈ ಬಗ್ಗೆ ಶ್ಲೋಕ ಹೀಗೆ ಹೇಳುತ್ತದೆ;
ಅಶ್ವತ್ಥಾಮೊ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ|
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ ||
ಹೀಗೆ ಚಿರಂಜೀವಿಯಾಗಿರುವ ಪರುಶುರಾಮನ ಜಯಂತಿ ಇಂದು (Parshurama Jayanti 2023). ಬಹಳ ವಿಶೇಷವಾದ ದಿನ. ನಮ್ಮ ಕರಾವಳಿ ಸೃಷ್ಟಿಯಾಗಿದ್ದೇ ಪರರಶುರಾಮನಿಂದ ಎಂಬುದು ಪುರಾಣ ಪ್ರತೀತಿ. ಹೀಗಾಗಿಯೇ ಕರಾವಳಿ ಪ್ರದೇಶವನ್ನು ಪರಶುರಾಮ ಕ್ಷೇತ್ರ ಎಂದೇ ಕರೆಯುತ್ತಾರೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.

ಸುಮಾರು 5000 ವರ್ಷಗಳಿಗಿಂತಲೂ ಹಿಂದೆ ಭಾರತದ ಪುಣ್ಯಭೂಮಿಯಲ್ಲಿ ಜೀವಿಸಿದ್ದ ಪರಶುರಾಮ, ಮಹರ್ಷಿ ಜಮದಗ್ನಿಯವರ ಪುತ್ರನಷ್ಟೇ ಅಲ್ಲ, ವಿಷ್ಣುವಿನ 6ನೇ ಅವತಾರ ಎಂದೇ ಪರಿಗಣಿಸಲಾಗಿದೆ. ಈ ಕಾರಣದಿಂದ ಪರಶುರಾಮನಿ “ಭಾರ್ಗವ’ ಎಂಬ ಹೆಸರೂ ಇದೆ. ತನ್ನ ತಂದೆಯನ್ನು ಕೊಂದ ಕಾರ್ತವೀರ್ಯಾರ್ಜುನನ್ನು ಒಳಗೊಂಡಂತೆ ಆ ಕಾಲದಲ್ಲಿ ಮಲೆತು ನಿಂತ ದುಷ್ಟ ಕ್ಷತ್ರಿಯರ ವಧೆಗಾಗಿ 21 ಭಾರಿ ಭೂ ಪ್ರದಕ್ಷಿಣೆ ಮಾಡಿದ ಪರಶುರಾಮ ಧರ್ಮ ಸ್ಥಾಪನೆ ಮಾಡಿದರು.

ಆದರೆ ತಾನು ಗೆದ್ದ ಸಮಸ್ತ ಭೂ ಮಂಡಲವನ್ನು ಕಶ್ಯಪ ಮಹಾಮುನಿಗಳಿಗೆ ದಾನ ಮಾಡಿಬಿಟ್ಟರು. ಅಲ್ಲಿಂದ ಮುಂದೆ ದಕ್ಷಿಣ ಭಾರತದತ್ತ ಬಂದ ಅವರು ತಾವು ನೆಲೆಗೊಳ್ಳುವುದಕ್ಕಾಗಿ ಪ್ರತ್ಯೇಕ ಸ್ಥಳ ನಿರ್ಮಾಣಕ್ಕೆ ಮುಂದಾದರು. ತಾನು ಎಸೆದ ಕೊಡಲಿ ಎಷ್ಟು ದೂರ ಹೋಗಿ ಬೀಳುತ್ತದೆಯೋ, ಅಷ್ಟು ವಿಸ್ತಾರದ ಪ್ರದೇಶದಿಂದ ಹಿಂದೆ ಸರಿದು ಆ ಭಾಗವನ್ನು ತಮಗೆ ಬಿಟ್ಟುಕೊಡುವಂತೆ ಸಮುದ್ರರಾಜನಿಗೆ ಮನವಿ ಮಾಡಿದರು. ಈ ರೀತಿ ಪರಶುರಾಮ ಕೊಡಲಿ ಎಸೆದು ಸಮುದ್ರವನ್ನು ಹಿಂದೆ ಸರಿಸಿ ಸೃಷ್ಟಿಸಿದ ಭೂ ಪ್ರದೇಶವೇ ತುಳುನಾಡನ್ನು ಒಳಗೊಂಡ ಕರಾವಳಿ.

ಪರಶುರಾಮ ಚಿರಂಜೀವಿ ಹೀಗಾಗಿ ಈಗಲೂ ಬದುಕಿದ್ದಾನೆ. ಮಹೇಂದ್ರ ಪರ್ವತದಲ್ಲಿ ಲೋಕಹಿತಕ್ಕಾಗಿ ತಪಸ್ಸು ಮಾಡುತ್ತಿದ್ದಾನೆ ಎಂಬ ನಂಬಿಕೆಯೂ ನಮ್ಮಲ್ಲಿದೆ. ಪರಶುರಾಮನ ವ್ಯಕ್ತಿತ್ವ, ನಡೆ-ನುಡಿ, ಜೀವನ, ಹೋರಾಟ ಎಲ್ಲವೂ ವಿಭಿನ್ನ. ಬಂಡಾಯದ ಮನೋಭಾವ. ತುಳಿತಕ್ಕೊಳಗಾದವರ, ಅಸಹಾಯಕರ ಪರ. ಆತನ ಆಯುಧದಂತೆ ಕೊಡಲಿಯಂತೆ ಆತನ ವ್ಯಕ್ತಿತ್ವವೂ ಆಕ್ರಮಣಕಾರಿ.

ಪರಶುರಾಮ ಶಿವನಿಗೆ ಪ್ರಿಯವಾದವರು. ತಪಸ್ಸು ಮಾಡಿ ಆತನನ್ನು ಒಲಿಸಿಕೊಂಡವರು. ಹೀಗಾಗಿಯೇ ಶಿವನಂಥ ಶಕ್ತಿ ಪರಶುರಾಮನಿಗಿದೆ! ಪರಶುರಾಮ ಅಪಾರ ಜ್ಞಾನಿ ಅಂತೆಯೇ ಓರ್ವ ಮಹಾನ್‌ ಯೋಧನೂ ಕೂಡ. ಅವರ ಆಯುಧ ಕೊಡಲಿ. ಇದನ್ನು ನೀಡಿದವರು ಬೇರೆ ಯಾರೂ ಅಲ್ಲ. ತ್ರಿಶೂಲಧಾರಿ ಶಿವನೇ. ʻಪರಶುʼ ಎಂದರೆ ಸಂಸ್ಕೃತದಲ್ಲಿ ಕೊಡಲಿ ಎಂಬರ್ಥ. ಪರಶುವನ್ನು ಆಯುಧವನ್ನಾಗಿ ಮಾಡಿಕೊಂಡ ರಾಮ ಎಂಬುದರಿಂದ ಆತನಿಗೆ ಪರಶುರಾಮ ಎಂದು ಹೆಸರು ಬಂದಿದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಋಷಿ ಕುಲದಲ್ಲಿ ಹುಟ್ಟಿಯೂ ಪರಶುರಾಮನಲ್ಲಿ ಕ್ಷಾತ್ರ ಗುಣವಿತ್ತು.

ಪರಶುರಾಮನ ಸುಂದರ ಪ್ರತಿಮೆ
ಕರಾವಳಿ ಪರಶುರಾಮನ ಸೃಷ್ಟಿ ಎಂದು ಹೆಸರಾಗಿದ್ದರೂ ಪರಶುರಾಮನಿಗೆ ಸಂಬಂಧಪಟ್ಟ ಯಾವುದೇ ಕುರುಹುಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಒಂದು ಪರಶುರಾಂ ಥೀಂ ಪಾರ್ಕ್‌ ನಿರ್ಮಾಣ ಮಾಡಬೇಕೆಂಬ ಯೋಚನೆ 2017ರಲ್ಲಿ ಮೂಡಿತು. ಪುಣೆಯಲ್ಲಿ ನಡೆದ ಕರಾವಳಿ ಬಂಧುಗಳ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಿದ್ದು ಮಾತ್ರವಲ್ಲ, ನಿರ್ಮಾಣ ಆರಂಭವಾದ ಎರಡು ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿಯೂ ಭರವಸೆ ಕೊಟ್ಟೆ. ಆ ವಾಗ್ದಾನ ಈಗ ಸಾಕಾರಗೊಂಡಿದೆ. ಕಾರ್ಕಳದ ಉಮ್ಮಿಕ್ಕಳ ಬೆಟ್ಟದಲ್ಲಿ ಸ್ಥಾಪನೆಗೊಂಡಿರುವ ಈ ಪ್ರತಿಮೆ ಇಡೀ ತುಳುನಾಡು ಹಾಗೂ ಕರಾವಳಿಯ ಪ್ರತೀಕ.
ಪರಶುರಾಂ ಥೀಂ ಪಾರ್ಕ್ ಮೂರು ಹಂತದಲ್ಲಿ ಅನುಷ್ಢಾನಗೊಳ್ಳುವ ಯೋಜನೆಯಾಗಿದೆ. ಈಗ ಪರಶುರಾಮನ ಪ್ರತಿಮೆ ನಿರ್ಮಾಣವಾಗಿದೆ. ಇದು ನೆಲದಿಂದ 57 ಅಡಿ ಎತ್ತರದಲ್ಲಿ 33 ಅಡಿಯ ಸುಂದರ ಕಂಚಿನ ಮೂರ್ತಿಯಾಗಿದೆ. ನೋಡುಗರ ಮನಸೆಳೆಯುತ್ತಿದೆ. ಇದರ ನಿರ್ಮಾಣಕ್ಕೆ 15 ಟನ್‌ ಕಂಚು ಮತ್ತು ಉಕ್ಕು ಬಳಸಲಾಗಿದೆ.
ಮೊದಲ ಹಂತದ ಯೋಜನೆಗೆ ಒಟ್ಟು 15 ಕೋಟಿ ರೂ. ವೆಚ್ಚವಾಗಿದೆ. ಪ್ರತಿಮೆಗೆ 2 ಕೋಟಿ ರೂ. ವಿನಿಯೋಗಿಸಲಾಗಿದೆ.
ಪ್ರತಿಮೆಯ ಜತೆಗೆ ಪಾರ್ಕ್‌ನಲ್ಲಿ ಆಡಿಯೋ ವಿಶ್ಯುವಲ್‌ ಕೊಠಡಿ, ಸುಸಜ್ಜಿತ ಆರ್ಟ್‌ ಮ್ಯೂಸಿಯಂ, ನೇಯ್ಗೆ ಡೆಕ್‌ ಗ್ಯಾಲರಿ, ಸಾವಿರ ಮಂದಿ ಆಸನ ಸಾಮರ್ಥ್ಯದ ಬಯಲು ರಂಗ ಮಂದಿರ, ಭಜನಾ ಮಂದಿರ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿದೆ.

ವಿಶಿಷ್ಟ ವ್ಯಕ್ತಿತ್ವದ ರಾಮ ಈ ಪರಶುರಾಮ!

ಪರಶುರಾಮನದು ಅತ್ಯಂತ ವಿಶಿಷ್ಟವಾದ ವ್ಯಕ್ತಿತ್ವ. ಅವರ ಜೀವನ ಚರಿತ್ರೆಯನ್ನೊಮ್ಮೆ ನೋಡಿದರೆ ಇದು ಅರ್ಥವಾಗುತ್ತದೆ. ತಂದೆಯ ಮಾತು ನಡೆಸಿಕೊಡಲು ಹೆತ್ತ ತಾಯಿಯ ತಲೆಯನ್ನೇ ಕಡಿದ ಪರಶುರಾಮ ಮಾತೃಹತ್ಯಾ ದೋಷ ಪರಿಹಾರಕ್ಕೆ ಒದ್ದಾಡಿದ್ದ. ಕಾಶಿರಾಜನ ಮಗಳು. ಅಂಬೆಗೆ ನ್ಯಾಯಕೊಡಿಸಲು ಭೀಷ್ಮನೊಂದಿಗೆ ಕಾಳಗಕ್ಕೆ ಇಳಿದಿದ್ದ. ಶಿವ ಧನಸ್ಪನ್ನು ಮುರಿದ ರಾಮನೊಂದಿಗೆ ಕಾದಾಡಲು ಮುಂದಾಗಿದ್ದ. ಕಾರ್ತವೀರ್ಯಾರ್ಜುನ ಎಂಬ ರಾಜ ತನ್ನ ತಂದೆಯ ಮಾತಿಗೆ ಬೆಲೆಕೊಡದೆ ತಮ್ಮ ಬಳಿ ಇದ್ದ ಕಾಮಧೇನುವನ್ನು ಹೊತ್ತುಕೊಂಡು ಹೋದಾಗ ಸಿಟ್ಟಿಗೆದ್ದು ಏಕಾಂಗಿಯಾಗಿ ರಾಜ ಸೇನೆಯ ವಿರುದ್ಧ ಹೋರಾಡಿ, ರಾಜನನ್ನೇ ಕೊಂದಿದ್ದ.

ಹೀಗೆ ಹೇಳುತ್ತಾ ಹೋದರೆ ನೂರಾರು ವಿಷಯಗಳಿವೆ. ಮುಂದೆ ತಂದೆಯನ್ನು ಹತ್ಯೆಮಾಡಿದ ಕ್ಷತ್ರಿಯರನ್ನು ಮಟ್ಟಹಾಕಲು ಅವರನ್ನು ದ್ವೇಷಿಸತೊಡಗಿದ. ಕ್ಷತ್ರಿಯನಲ್ಲ ಎಂದುಕೊಂಡು ಕರ್ಣನಿಗೆ ಧನುರ್ವಿದ್ಯೆಯನ್ನು ಕಲಿಸಿದರು. ಆತ ಕ್ಷತ್ರಿಯನೆಂದು ತಿಳಿದಾಗ ಕೋಪಗೊಂಡು ಶಾಪ ನೀಡಿದ್ದ. ಭೀಷ್ಮಾಚಾರ್ಯರು, ದ್ರೋಣಾಚಾರ್ಯರು ಕೂಡ ಈತನ ಶಿಷ್ಯರೇ. ಪರಶುರಾಮ ಸಾಹಸಿ, ವೀರಯೋಧ ಮಾತ್ರವಲ್ಲ ವಿವೇಕಿಯೂ ಆಗಿದ್ದರು.

ಮಹಾಭಾರತ ಯುದ್ಧಕ್ಕೆ ಮೊದಲು ಶ್ರೀಕೃಷ್ಣನು ಪಾಂಡವರ ರಾಯಭಾರಿಯಾಗಿ ದುರ್ಯೋಧನನ ಆಸ್ಥಾನಕ್ಕೆ ಹೋಗಿ ಯುದ್ಧ ಮಾಡದೆ, ಪಾಂಡವರಿಗೆ ನ್ಯಾಯವಾಗಿ ಸಲ್ಲಬೇಕಾದ ಅರ್ಧ ರಾಜ್ಯವನ್ನು ಕೊಟ್ಟುಬಿಡುವಂತೆ ಬುದ್ಧಿ ಮಾತು ಹೇಳಿದ್ದಾಗ ಪರಶುರಾಮನೂ ಕೃಷ್ಣನೊಂದಿಗಿದ್ದ.ʻʻಪಾಂಡವರು ಆಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಈಗ ನೀನು ನ್ಯಾಯವಾಗಿ ನಡೆದುಕೋ, ಅವರ ರಾಜ್ಯವನ್ನು ಅವರಿಗೆ ಕೊಟ್ಟುಬಿಡು. ಇಲ್ಲವಾದರೆ ನಾಶವಾಗುತ್ತಿ” ಎಂದು ದುರ್ಯೋಧನನಿಗೆ ಎಚ್ಚರಿಕೆ ನೀಡಿದ್ದರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಕ್ಷತ್ರಿಯರನ್ನು ಸದೆಬಡೆಯಲು ತನ್ನ ಆಯುಧ ಕೊಡಲಿಯೊಂದಿಗೆ 21 ಬಾರಿ ಭೂಮಿಯನ್ನು ಸುತ್ತಿದ್ದ ಪರಶುರಾಮ ದುಷ್ಟ ರಾಜರನ್ನೆಲ್ಲಾ ಸೋಲಿಸಿ, ರಾಜ್ಯವನ್ನು ವಶಕ್ಕೆ ಪಡೆದ. ಕೊನೆಗೆ ತಾನು ಬ್ರಾಹ್ಮಣ ತನಗೇಕೆ ರಾಜ್ಯ ಎಂದು ಸಿಕ್ಕ ರಾಜ್ಯವನ್ನೆಲ್ಲಾ ದಾನ ಮಾಡಿದ್ದರು. ಸ್ತ್ರೀ ಹತ್ಯೆ ಮಾಡಬಾರದು ಎಂದು ಓರ್ವ ಸ್ತ್ರೀಯನ್ನೂ ಕೊಲ್ಲಲಿಲ್ಲ. ಹೀಗೆ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದ ಪರಶುರಾಮ ದೇಶಾದ್ಯಂತ ದೇವರಾಗಿ ಪೂಜಿಸಲ್ಪಡುತ್ತಾರೆ. ಅನ್ಯಾಯವೆಸಗಿದವರಿಗೆ ಚಿರಂಜೀವಿಯಾ ಗಿರುವ ಇವರು ಈಗಲೂ ಶಿಕ್ಷೆ ನೀಡುತ್ತಾರೆ ಎಂದೇ ನಂಬಲಾಗುತ್ತಿದೆ. ಪರಶುರಾಮ ಜಯಂತಿಯ ಈ ಸಂದರ್ಭದಲ್ಲಿ ನಾವೆಲ್ಲರೂ ಶ್ರೀ ಪರಶುರಾಮನನ್ನು ಸ್ಮರಿಸೋಣ, ಪೂಜಿಸೋಣ.
ಅಗ್ರತಃ ಚತುರೋ ವೇದಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ||

ಶ್ರೀ ಪರಶುರಾಮ ಜಯಂತಿಯ ಶುಭಾಶಯಗಳು.

-ಲೇಖಕರು ಕನ್ನಡ- ಸಂಸ್ಕ್ರತಿ ಮತ್ತು ಇಂಧನ ಸಚಿವರು.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಕಾರ್ಕಳದ ಬೈಲೂರಿನಲ್ಲಿ ಜೀವ ತಳೆದಿದೆ ಪರಶುರಾಮ ಥೀಮ್‌ ಪಾರ್ಕ್‌, ಏನಿದರ ವಿಶೇಷ?

Exit mobile version