ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಸುದ್ದಿಯ ಬಳಿಕ ದೇಶಾದ್ಯಂತ ಎಲ್ಲಾ ಮಸೀದಿಗಳ ಒಳಗೆ ತಪಾಸಣೆ ನಡೆಸಬೇಕು ಎಂಬ ಕೂಗೆದ್ದಿದೆ. ಅದರ ನಡುವೆ, ಬಾವಿ ಮತ್ತು ಕೊಳ ಇರುವ ಎಲ್ಲ ಮಸೀದಿಗಳ ಗೌಪ್ಯ ಸರ್ವೆ ನಡೆಸಲು ಆದೇಶ ನೀಡಬೇಕು ಎಂದು ಮನವಿ ಮಾಡಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ.
ಯಾವೆಲ್ಲ ಮಸೀದಿಗಳ ಒಳಗೆ ಕೊಳ ಅಥವಾ ಬಾವಿ ಇದೆಯೋ? ಎಲ್ಲೆಲ್ಲ ಮಸೀದಿಯ ಒಳಗೇ ಕೈಕಾಲು ತೊಳೆಯುವ ʻವಾಜುʼಗಳಿವೆಯೋ ಅಲ್ಲೆಲ್ಲ ಪ್ರಾಚ್ಯ ವಸ್ತು ಇಲಾಖೆಯ ಮೂಲಕ ಗೌಪ್ಯವಾಗಿ ಸರ್ವೆ ಮಾಡಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ನೂರಾರು ವರ್ಷಗಳ ಇತಿಹಾಸ ಇರುವ ಮಸೀದಿಗಳ ಬಾವಿ ಮತ್ತು ಕೊಳಗಳ ಪಕ್ಕದಿಂದ ವಾಜು ಸ್ಥಾನವನ್ನು ತೆರವು ಮಾಡಬೇಕು ಎಂದು ಕೂಡಾ ಇದರಲ್ಲಿ ಕೇಳಿಕೊಳ್ಳಲಾಗಿದೆ.
ಗೌಪ್ಯ ಸರ್ವೆ ಯಾಕೆ?
ಎಲ್ಲರಿಗೂ ಗೊತ್ತಾಗುವಂತೆ ಸರ್ವೆ ಮಾಡಿದರೆ, ಅಲ್ಲೇನಾದರೂ ಹಿಂದುಗಳಿಗೆ ಸಂಬಂಧಿಸಿದ ಸಂಕೇತಗಳು ದೊರೆತರೆ ಅನಗತ್ಯವಾಗಿ ಧಾರ್ಮಿಕ ಸಾಮರಸ್ಯ ಕದಡುವ ಸಾಧ್ಯತೆಗಳಿವೆ. ಹಾಗಾಗಿ, ಪ್ರಾಚ್ಯವಸ್ತು ಇಲಾಖೆ ಮೂಲಕ ಸಮೀಕ್ಷೆ ನಡೆಸಿ ಮೊದಲೇ ಮಾಹಿತಿ ಪಡೆದಿಟ್ಟುಕೊಳ್ಳುವುದು ಉತ್ತಮ ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ.
ಅರ್ಜಿದಾರರು ಯಾರು?
ದಿಲ್ಲಿ ಮೂಲದ ನ್ಯಾಯವಾದಿಗಳಾದ ಶುಭಂ ಅವಸ್ಥಿ ಮತ್ತು ಸಪ್ತರ್ಷಿ ಮಿಶ್ರಾ ಎಂಬವರು ಇನ್ನೊಬ್ಬ ನ್ಯಾಯವಾದಿ ವಿವೇಕ್ ನಾರಾಯಣ ಶರ್ಮ ಅವರ ಮೂಲಕ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ʻʻವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ. ಮುಸ್ಲಿಮರು ಪ್ರಾರ್ಥನೆಗೆ ಮುನ್ನ ಕೈಕಾಲು ತೊಳೆಯುವ ಜಾಗದಲ್ಲಿ ಇದು ಸಿಕ್ಕಿರುವುದು ಆತಂಕಕಾರಿಯಾಗಿದೆ. ಈ ರೀತಿ ಶಿವಲಿಂಗ ಇರುವ ಜಾಗವನ್ನು ಕೈಕಾಲು ತೊಳೆಯುವ ಜಾಗವಾಗಿ ಮಾಡಿಕೊಂಡಿರುವುದು ಪವಿತ್ರ ಶಿವಲಿಂಗದ ಬಗ್ಗೆ ಇರುವ ಉದ್ದೇಶಪೂರ್ವಕ ದುಷ್ಟ ಯೋಚನೆ, ಹಿಂಧೂ ದೇವರುಗಳ ಬಗ್ಗೆ ಇರುವ ದ್ವೇಷದ ನಿಲುವನ್ನು ತೋರಿಸುತ್ತದೆ. ಮಾತ್ರವಲ್ಲ ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪ್ರಯತ್ನ ಎಂದೇ ಪರಿಗಣಿತವಾಗುತ್ತದೆ,ʼ ಎಂದು ದಾವೆಯಲ್ಲಿ ಹೇಳಲಾಗಿದೆ.
ಮಧ್ಯಯುಗೀಯ ಕಾಲದಲ್ಲಿ ಹಲವಾರು ಹಿಂದೂ, ಜೈನ, ಸಿಖ್ ಮತ್ತು ಬೌದ್ಧ ದೇವಾಲಯಗಳನ್ನು ಪೂಜಾ ಸ್ಥಳಗಳನ್ನು ಧ್ವಂಸಗೊಳಿಸಲಾಗಿದೆ. ಒಂದೊಮ್ಮೆ ಈಗ ಯಾವುದಾದರೂ ಹಳೆ ಮಸೀದಿಯಲ್ಲಿ ದೇವರ ಕುರುಹುಗಳು ಕಂಡುಬಂದರೆ ಅದು ಹಳೇ ದೇವಸ್ಥಾನದ್ದು ಎನ್ನುವುದು ಅತ್ಯಂತ ಸ್ಪಷ್ಟ. ಅದು ಇಸ್ಲಾಮೇತರ ಎನ್ನುವುದಂತೂ ಶತಸ್ಸಿದ್ಧ. ಹೀಗಾಗಿ ಇಂಥ ಕುರುಹುಗಳು ಕಂಡುಬಂದಾಗ ಮಸೀದಿ ಆಡಳಿತ ಮಂಡಳಿಗಳು ಕೂಡಾ ಅನ್ಯಧರ್ಮೀಯರ ಭಾವನೆಗಳನ್ನು ಗೌರವಿಸಬೇಕು ಎನ್ನುವುದು ಪಿಐಎಲ್ ವಾದ.
ಜ್ಞಾನವಾಪಿಯಲ್ಲಿ ಏನಾಗಿತ್ತು?
ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆದ ಸರ್ವೆ ವೇಳೆ ಅಲ್ಲಿನ ಗೋಡೆಗಳಲ್ಲಿ ದೇವರ ಚಿತ್ರಗಳಿರುವುದು ಮಾತ್ರವಲ್ಲ, ಕೊಳದಲ್ಲಿ ಶಿವಲಿಂಗ ಮಾದರಿಯ ಆಕೃತಿಯೊಂದು ಕಂಡಿದೆ. ಇದನ್ನು ಹಿಂದೂ ಪರ ವಾದಿಗಳು ಮೂಲ ಶಿವಲಿಂಗ ಎಂದು ವಾದಿಸಿದರೆ ಮುಸ್ಲಿಂ ಪರ ವಾದಿಗಳು ಕಾರಂಜಿ ಎನ್ನುತ್ತಿದ್ದಾರೆ. ಈ ನಡುವೆ, ಈ ಸಮೀಕ್ಷೆಯ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗಿದ್ದು, ಆಕ್ಷೇಪಗಳನ್ನು ಸಲ್ಲಿಸಲು ಎರಡೂ ಕಡೆಯವರಿಗೂ ಅವಕಾಶ ನೀಡಲಾಗಿದೆ.
ವಾರಾಣಸಿಯ ಸ್ಥಳೀಯ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಇದೀಗ ಸುಪ್ರೀಂಕೋರ್ಟ್‌ನ ಸೂಚನೆಯ ಮೇರೆಗೆ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಶುಕ್ರವಾರ ನಡೆದ ವಿಚಾರಣೆ ವೇಳೆ, ಸರ್ವೆ ವರದಿಯು ಬಹಿರಂಗಗೊಂಡಿರುವುದರಿಂದ ಎಲ್ಲ ಕಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇದು ದೇಶದ ಹಿತಕ್ಕೆ ಒಳ್ಳೆಯದಲ್ಲ ಎಂಬ ವಾದವನ್ನು ಮುಸ್ಲಿಂ ಅರ್ಜಿದಾರರು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?