:: ಗಣೇಶ ಭಟ್ಟ, ಸಂಸ್ಕೃತ ಉಪನ್ಯಾಸಕರು, ಕುಮಟಾ
ಪಿತೃಗಳ ಕುರಿತಾದ ಕೃತಜ್ಞತೆಯ ಮಹಾಪರ್ವವೇ ಪಿತೃಪಕ್ಷ (Pitru Paksha 2023). ನಮ್ಮ ಕುಲದಲ್ಲಿ ಗತಿಸಿದ ಪೂರ್ವಜರನ್ನು ಉದ್ದೇಶಿಸಿ ಅವರ ಹಸಿವು-ತೃಷೆಯ ನಿವೃತ್ತಿಗಾಗಿ ಶೃದ್ಧಾ-ಭಕ್ತಿಯಿಂದ ಪಿಂಡದಾನ ಹಾಗೂ ಜಲದಾನ (ತರ್ಪಣ) ವನ್ನು ಶ್ರಾದ್ಧ ಎಂದು ಕರೆಯುತ್ತೇವೆ. ನಮ್ಮ ಪೂರ್ವಜರನ್ನು ವರ್ಷದಲ್ಲಿ ಒಮ್ಮೆಯಾದರೂ ಸ್ಮರಿಸಿ ಇವುಗಳನ್ನು ನೀಡುವುದು ಕೃತಜ್ಞತೆಯ ಒಂದು ಭಾಗದ ಜೊತೆಗೆ ವಿಶೇಷ ಕರ್ತವ್ಯ ಕೂಡ ಆಗಿದೆ. ವಿಶೇಷವಾಗಿ ಇದಕ್ಕೋಸ್ಕರವೇ ಮೀಸಲಾಗಿ ಇರುವ ಪಿತೃಪಕ್ಷದ ದಿನಗಳಲ್ಲಿ ಅಥವಾ ಪಿತೃಪಕ್ಷದ ಅಮಾವಾಸ್ಯೆಯಂದು ಈ ಕಾರ್ಯವನ್ನು ಖಂಡಿತ ಮಾಡಬಹುದು.
ಪಿತೃಪಕ್ಷ ಯಾವಾಗ ?
ಆಷಾಢೀಮವಧಿಂ ಕೃತ್ವಾ ಪಂಚಮಂ ಪಕ್ಷಮಾಶ್ರಿತಾಃ |
ಕಾಂಕ್ಷಂತಿ ಪಿತರಃ ಕ್ಲಿಷ್ಟಾ ಅನ್ನಮಪ್ಯನ್ವಹಂ ಜಲಮ್ || (ನಿರ್ಣಯಸಿಂಧು)
ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯುವರು. ಆಶ್ವಿಜ ಶುಕ್ಲ ಪ್ರತಿಪತ್ ಸೇರಿ ಈ ಹದಿನಾರು ದಿನಗಳು ಪಿತೃಗಳು ತಮ್ಮವರಿಂದ ಪಿಂಡದಾನ-ತರ್ಪಣವನ್ನು ಬಯಸಿ ಬರುವರು. ಆಗ ಅವರನ್ನು ಉದ್ದೇಶಿಸಿ, ಶ್ರಾದ್ಧಾದಿಗಳನ್ನು ಮಾಡಿದರೆ, ಪಿತೃಗಳು ತೃಪ್ತರಾಗುವರು. ಮಾಡದಿದ್ದರೆ ನಿರಾಸೆಯಿಂದ ಹಿಂತಿರುಗುವರು.
ವರ್ಷದಲ್ಲಿ ಗತಿಸಿದ ತಂದೆ-ತಾಯಿಯರ ಶ್ರಾದ್ಧವನ್ನು ಮಾಡುತ್ತೇವೆ, ಮತ್ತೆ ಈ ಪಿತೃಪಕ್ಷದಲ್ಲಿ ಅವರಿಗೆ ಶ್ರಾದ್ಧ ಮಾಡಬೇಕೆ? ಎಂದರೆ ವರ್ಷದಲ್ಲಿ ಶ್ರಾದ್ಧ ಮಾಡುವುದು ಗತಿಸಿದ ತಂದೆ-ತಾಯಿಯರ ಮೂರು ತಲೆಮಾರಿನವರನ್ನು ಮಾತ್ರ. ಆದರೆ ಪಿತೃಪಕ್ಷದಲ್ಲಿ ಅವರನ್ನೂ ಸೇರಿಸಿ ಗತಿಸಿದ ನಮ್ಮ ಜೀವನದಲ್ಲಿ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ-ಸಹಕಾರ ಮಾಡಿದ ಸರ್ವರನ್ನೂ ನೆನೆದು ಶ್ರಾದ್ಧವನ್ನು ಮಾಡುವುದೇ ‘ಮಹಾಲಯ ಶ್ರಾದ್ಧ’. ಮಹತಾಂ ಜನನಾಂ ಆಲಯಂ, ಮಹದಾದೀನಾಂ ಆಲಯಮ್ ಮಹಾಲಯಮ್. ಸರ್ವ ಪಿತೃಗಳನ್ನು ಉದ್ದೇಶಿಸಿ, ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧವೇ ಮಹಾಲಯ ಶ್ರಾದ್ಧ.
ಪಿತೃಗಳೆಂದರೆ ಯಾರು?
ಪಾತಿ (ರಕ್ಷತಿ) ಅಪತ್ಯಮ್, ತಮ್ಮ ಸಂತತಿಯನ್ನು ರಕ್ಷಿಸುವವರು ಪಿತೃಗಳು. ಪಾ (ರಕ್ಷಣೆ) ಧಾತುವಿನಿಂದ ಪಿತೃ ಶಬ್ದ ಬಂದಿದೆ, ಅಂದರೆ ನಮ್ಮನ್ನು ಯಾರು ಪಾಲಿಸುವರೊ, ರಕ್ಷಿಸುವರೊ ಅವರು ಪಿತೃಗಳು. ಅಂತೆಯೆ ಪಾ(ಪಾನೆ) ಶಬ್ದದಿಂದ ಪಿತೃ ಶಬ್ದ ಬಂದಿದೆ. ಬದುಕಿರುವಾಗ ನಮ್ಮನ್ನು ರಕ್ಷಿಸುವ ನಮ್ಮ ಪಿತೃಗಳು, ಮರಣ ಹೊಂದಿದ ನಂತರ ನಾವು ಕೊಟ್ಟ ತರ್ಪಣಾದಿಗಳನ್ನು ಪಾನ ಮಾಡಿ ನಮ್ಮನ್ನು ರಕ್ಷಿಸುವವರೂ ಪಿತೃಗಳು. ಪಿತೃಗಳೆಂದರೆ ಮೂಲದಲ್ಲಿ ಅವರು ದೇವತೆಗಳೆ ಬ್ರಹ್ಮನ ಅನುಗ್ರಹದಿಂದ ಪಿತೃಗಳಾದವರು.
ಪಿತೃನ್ ಪ್ರೀಣಾತಿ ಯೋ ವಂಶ್ಯಃ ಪಿತರಃ ಪ್ರೀಣಯಂತಿ ತಮ್ |
ಪಿತರಃ ಪುಷ್ಟಿಕಾಮಸ್ಯ ಪ್ರಜಾಕಾಮಸ್ಯ ವಾ ಪುನಃ ||
ಪುಷ್ಟಿಂ ಪ್ರಜಾಸ್ತಥಾ ಸ್ವರ್ಗಂ ಪ್ರಯಚ್ಛಂತಿ ನ ಸಂಶಯಃ |
ದೇವಕಾರ್ಯಾದಪಿ ಸದಾ ಪಿತೃಕಾರ್ಯಂ ವಿಶಿಷ್ಯತೇ || (ಬ್ರಹ್ಮಾಂಡ ಪುರಾಣ)
ಪಿತೃಗಳು ತಮ್ಮ ವಂಶದಲ್ಲಿ ಜನಿಸಿರುವ ಪುತ್ರರು ಕೊಟ್ಟಿರುವ ಶ್ರಾದ್ಧಾನ್ನದಿಂದ ತೃಪ್ತರಾಗಿ ಆಯುಷ್ಯ, ಸಂತಾನ, ಸಂಪತ್ತು, ವಿದ್ಯೆ, ಸುಖ-ಭೋಗಗಳನ್ನು ನಿಸ್ಸಂಶಯವಾಗಿ ನೀಡುವರು. ಆದ್ದರಿಂದ ದೇವತಾರಾಧನೆ ಕರ್ಮಕ್ಕಿಂತ ಪಿತೃ ಸಮಾರಾಧನೆಯು ಅತ್ಯುತ್ತಮವಾದುದು, ಶ್ರೇಷ್ಟವಾದುದು. ಯಾರು ಶ್ರದ್ಧೆಯಿಂದ ಪಿತೃಗಣವನ್ನು ಆರಾಧಿಸುತ್ತಾರೋ, ಅದರಿಂದ ಪಿತೃಗಣವು ಒಂದು ವರ್ಷ ತೃಪ್ತಿ ಹೊಂದಿ ಹರಸುವರು. ಪುರಾಣಗಳ ಪ್ರಕಾರ ದೇವತೆಗಳಿಗಿಂತ ಪಿತೃಗಳ ಸ್ಥಾನ-ಮಾನ ಶ್ರೇಷ್ಠವಾದುದು. ದೇವತೆಗಳನ್ನು ಪೂಜಿಸುವ ಮೊದಲು ಪಿತೃಕಾರ್ಯ ಮಾಡುವುದು ಅಗತ್ಯವೆಂದು, ದೇವಕಾರ್ಯಕಿಂತ ಪಿತೃಕಾರ್ಯವು ಶ್ರೇಷ್ಠವೆಂದು ಪರಿಗಣಿತವಾಗಿದೆ.
ಹಾಗಾದರೆ ಈ ಪಿತೃಗಳು ಎಷ್ಟಿದ್ದಾರೆ? ಪಿತೃಗಳು ಅನಂತ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಸುಕಲಾ, ಅಂಗಿರಸ, ಸುಸ್ವಧಾ, ಸೋಮ, ವೈರಾಜ,ಅಗ್ನಿಷ್ವಾತ್ತ,ಬರ್ಹಿಷದರೆಂಬ ಏಳು ಪಿತೃಗಳು ಪ್ರಮುಖರಾದವರು. ವಸು-ರುದ್ರ-ಆದಿತ್ಯರು ಇವರ ಅಧಿಪತಿಗಳು. ನಂಬಿಕೆಯ ಪ್ರಕಾರ ನಮ್ಮ ಪಿತೃಗಳನ್ನು ಸ್ಮರಿಸಿದ ತಕ್ಷಣ ಆಗಮಿಸಿ, ಶ್ರಾದ್ಧವನ್ನು ಸ್ವೀಕರಿಸಿ, ಅವರ ವಂಶ-ಪರಂಪರೆಯನ್ನು ರಕ್ಷಿಸಿ, ವೃದ್ಧಿಸುವರು. ನಮ್ಮ ವಂಶದಲ್ಲಿ ಗತಿಸಿದ ಪಿತೃಗಳು ಒಂದು ವೇಳೆ ಮೋಕ್ಷವನ್ನು ಹೊಂದಿದ್ದರೂ, ವಸು-ರುದ್ರ-ಆದಿತ್ಯರು ಶ್ರಾದ್ಧವನ್ನು ಸ್ವೀಕರಿಸಿ ಕುಲಕ್ಕೆ ಒಳಿತನ್ನು ಹರಸುವರು.
ಪೌರಾಣಿಕ ಹಿನ್ನೆಲೆಯೇನು?
ರಾಜಾ ದಶರಥನು ಮರಣ ಹೊಂದಿದ ನಂತರ ಭರತನು ಯಥೋಚಿತವಾಗಿ ದಶರಥನ ಶ್ರಾದ್ಧ ತರ್ಪಣಾದಿ ಕ್ರಿಯೆಗಳನ್ನು ಮಾಡಿ, ವಿಧಿಯುಕ್ತವಾಗಿ ಹೇರಳವಾಗಿ ದಾನಮಾಡಿದ. ಶ್ರೀರಾಮನು ವನವಾಸದ ಸಂದರ್ಭದಲ್ಲಿ ಚಿತ್ರಕೂಟದಲ್ಲಿರುವಾಗ ತಂದೆಯ ಮರಣದ ವಾರ್ತೆಯನ್ನು ಕೇಳಿ, ಕೂಡಲೇ ಮಂದಾಕಿನಿ ನದಿ ತಟಕ್ಕೆ ತೆರಳಿ ತಂದೆಯನ್ನು ನೆನೆದು ವೇದೋಕ್ತವಾಗಿ ಶ್ರಾದ್ಧ-ತರ್ಪಣಾದಿ ಕ್ರಿಯೆಗಳನ್ನು ಮಾಡಿದನು. ಭಗವಾನ್ ಶ್ರೀಕೃಷ್ಣನು ತನ್ನ ತಂಗಿ ಸುಭದ್ರಾಳ ಮೃತ ಹೊಂದಿದ ಮಗನಾದ ಅಭಿಮನ್ಯುವಿನ ಶ್ರಾದ್ಧವನ್ನು ವಿಧಿಯುಕ್ತವಾಗಿ ಮಾಡಿದನೆಂದು ಮಹಾಭಾರತ ಗ್ರಂಥ ನಮಗೆ ತಿಳಿಸಿ ಕೊಡುವುದು. ಮಹಾಭಾರತದ ಆಶ್ವಮೇಧಿಕ ಪರ್ವ ಹಾಗೂ ಶಾಂತಿ ಪರ್ವದ ಪ್ರಕಾರ ಧರ್ಮರಾಯ ಯುಧಿಷ್ಠಿರನು ಮಹಾಭಾರತದ ಯುದ್ಧದಲ್ಲಿ ಮೃತ ಹೊಂದಿದ ಎಲ್ಲಾ ಸೈನಿಕರ ಸಹಿತ ಭೀಷ್ಮ, ದ್ರೋಣ, ದುರ್ಯೋಧನ, ಕರ್ಣ ಮುಂತಾದವರಿಗೆ ಅಂತ್ಯೇಷ್ಠಿ ಕ್ರಿಯೆ ನಡೆಸಿ, ಪ್ರತಿಯೊಬ್ಬರಿಗೂ ತರ್ಪಣಾದಿಗಳನ್ನು ನೀಡಿ, ಪ್ರತಿಯೊಬ್ಬರ ಹೆಸರಿನಲ್ಲೂ ಸರೋವರ, ಭವನಗಳನ್ನು ನಿರ್ಮಿಸಿದ. ಹರಿವಂಶ ಪುರಾಣದ ಪ್ರಕಾರ ಒಮ್ಮೆ ಭೀಷ್ಮನು ಮೃತ ಹೊಂದಿದ ತನ್ನ ತಂದೆಯ ಶ್ರಾದ್ಧ ಮಾಡುತ್ತಿದ್ದ. ತಂದೆಯ ಹೆಸರು ಹೇಳಿ ಪಿಂಡ ಇಡಲು ಮುಂದಾದಾಗ ಪಿಂಡ ಸ್ವೀಕರಿಸಲು ಸ್ವತಃ ತಂದೆ ಶಂತನುವಿನ ಕೈ ಭೂಮಿಯಿಂದ ಮೇಲಕ್ಕೆ ಬಂತು. ತಂದೆ ಶಂತನು ಹೇಳಿದ- ‘ನನ್ನ ಕೈಯಲ್ಲೇ ಪಿಂಡ ನೀಡು’. ಭೀಷ್ಮನು ತಂದೆಯ ಕೈ ಗುರುತು ಹಿಡಿದ. ಆದರೆ ತಂದೆಯ ಕೈಯಲ್ಲಿ ಪಿಂಡ ನೀಡಲಿಲ್ಲ. ಶ್ರಾದ್ಧದಲ್ಲಿ ಬರ್ಹಿಸ್ಸಿ(ದರ್ಭೆಕಟ್ಟು)ನಲ್ಲಿಯೇ ಪಿಂಡ ನೀಡಬೇಕು ಎಂಬುದು ಶಾಸ್ತ್ರ. ತಂದೆಯನ್ನೇ ಉದ್ದೇಶಿಸಿ ಶ್ರಾದ್ಧದಲ್ಲಿ ಸ್ವತಃ ತಂದೆಯೇ ಪ್ರತ್ಯಕ್ಷವಾಗಿ ಬಂದು ಸ್ವೀಕರಿಸಲು ಇಚ್ಛಿಸಿದರೂ ನೀಡತಕ್ಕದ್ದಲ್ಲ, ಈ ರೀತಿ ಮಾಡಿದರೆ ಮುಂದೆ ಇದೇ ಪರಂಪರೆಯಾಗಬಹುದು. ತಂದೆಯೇ ಸ್ವತಃ ಬಂದು ಸ್ವೀಕರಿಸಿದರೆ ಮಾತ್ರ ಪಿಂಡ ನೀಡುವೆ ಎಂದು ಭಾವಿಸಿ, ಬರದೇ ಇದ್ದಾಗ ಮುಂದೆ ಶ್ರಾದ್ಧಕರ್ಮವೇ ಸಮಾಪ್ತಿಯಾಗಬಹುದು. ಹಾಗಾಗಿ ಬರ್ಹಿಸ್ಸಿ (ದರ್ಭೆಕಟ್ಟು)ನಲ್ಲಿಯೇ ನೀಡುವುದು ಉಚಿತ ಎಂದು ಭೀಷ್ಮ ಹಾಗೆ ಮಾಡಿದನು. ಆತನ ಶಾಸ್ತ್ರನಿಷ್ಠೆ ನೋಡಿ, ಪಿತೃದೇವತೆ ಆತನಿಗೆ ಇಚ್ಛಾಮರಣಿಯಾಗೆಂದು ವರ ನೀಡಿದರು.
ಆಚರಣೆ ಹೇಗೆ? ಲಾಭವೇನು?
ಮಹಾಭಾರತದ ಅನುಶಾಸನ ಪರ್ವದ ಪ್ರಕಾರ ಪಿತೃಪಕ್ಷದ ದಿನಗಳಲ್ಲಿ ಪಿತೃಗಳು ಆತ್ಮೀಯ ಬಂಧುಗಳು ಮನೆಗೆ ಆಗಮಿಸುವಂತೆ ಪಿತೃಗಳು ತಮ್ಮ ಸಮೀಪದವರಲ್ಲಿಗೆ ಬರುವರು. ತಮ್ಮ ಕುಟುಂಬದಲ್ಲಿ ಹಿಂದೆ ಶಸ್ತ್ರದಿಂದ, ವಿಷದಿಂದ, ಅಗ್ನಿಗೆ ತುತ್ತಾಗಿ, ಸನ್ಯಾಸಿಯಾಗಿ ಅಥವಾ ಅಕಾಲಿಕವಾಗಿ ಮರಣ ಹೊಂದಿದ್ದರೆ ಹೀಗೆ ಕುಲದಲ್ಲಿ ವಿವಿಧ ರೀತಿಯಲ್ಲಿ ಗತಿಸಿದ ಸರ್ವರನ್ನೂ ನೆನೆದು ಶ್ರಾದ್ಧವನ್ನು ಮಾಡುವುದು ಶ್ರೇಯಸ್ಕರ. ಈ ಪಿತೃಪಕ್ಷದಂದು ಮೃತ ಹೊಂದಿದ ತಂದೆ-ತಾಯಿಯರ ಶ್ರಾದ್ಧವನ್ನು ಮಕ್ಕಳು, ಹೆಣ್ಣುಮಕ್ಕಳು, ಮಕ್ಕಳಿಲ್ಲದ ವಿಧವೆ, ತನ್ನ ಪತಿಯ ಶ್ರಾದ್ಧವನ್ನು ಮಾಡಲು ನಿರ್ಣಯಸಿಂಧು ಮುಂತಾದ ಗ್ರಂಥಗಳು ಸೂಚಿಸಿವೆ. ಸಂಪನ್ನತೆ ಇರುವವರು ಮನೆಯಲ್ಲಿ ಅಥವಾ ತೀರ್ಥಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ಶ್ರಾದ್ಧವನ್ನು ಮಾಡುವುದು. ಈ ದಿನಗಳಲ್ಲಿ ಏನೂ ಇಲ್ಲದ, ಶ್ರಾದ್ಧ ಮಾಡಲು ಅಶಕ್ಯನಾದ ಬಡವನೂ ಸಹ, ನದಿ-ಜಲಾಶಯ-ಸಮುದ್ರ-ತೀರ್ಥಕ್ಷೇತ್ರಗಳಿಗೆ ತೆರಳಿ ಪಿತೃಗಳನ್ನು ಉದ್ದೇಶಿಸಿ ಒಂದು ಹನಿ ನೀರು ನೀಡಿದರೂ ಪಿತೃಗಳು ಆಶೀರ್ವದಿಸುವರು.
ಪಿತೃಪಕ್ಷದ ಈ ದಿನಗಳಲ್ಲಿ ಪ್ರಯಾಣದಲ್ಲಿ ಇರುವವರು, ಸಾಧನಶೀಲರಾದವರು, ಅನಿವಾರ್ಯ ಕಾರಣಗಳಿಂದ ಶ್ರಾದ್ಧ ಮಾಡಲು ಅಶಕ್ಯರಾದವರು ಶೃದ್ಧೆಯಿಂದ ಪಿತೃಗಳನ್ನು ನೆನೆದು, ತನ್ನೆರಡು ಕೈಗಳನ್ನು ಮೇಲಕ್ಕೆತ್ತಿ, ತನ್ನ ಅಸಹಾಯಕ ಸ್ಥಿತಿಯನ್ನು ಹೇಳಿಕೊಂಡು, ಭಕ್ತಿ-ಶ್ರದ್ಧೆಯನ್ನು ಸಮರ್ಪಿಸಿಕೊಂಡರೂ ಅದರಿಂದಲೇ ಪಿತೃಗಳು ಪ್ರಸನ್ನರಾಗಿ ತೃಪ್ತರಾಗುವರು. ಒಟ್ಟಿನಲ್ಲಿ ಈ ದಿನಗಳಲ್ಲಿ ಪಿತೃಗಳನ್ನು ಉದ್ದೇಶಿಸಿ, ಯಾರು ಶ್ರದ್ಧೆಯಿಂದ ಪಿಂಡ-ತಿಲೋದಕಗಳ ಮೂಲಕ ಪಿತೃಗಳನ್ನು ಆರಾಧಿಸುತ್ತಾರೋ ಅದರಿಂದ ಪಿತೃಗಳು ಒಂದು ವರ್ಷದವರೆಗೆ ತೃಪ್ತಿ ಹೊಂದಿ ಆರೋಗ್ಯ, ಆಯುಷ್ಯ, ಸಂತಾನ, ಸಂಪತ್ತು, ವಿದ್ಯೆ, ಸುಖ-ಭೋಗಗಳನ್ನು ಕುಟುಂಬದವರಿಗೆ ಹರಸುವರು. ಅಸಂತುಷ್ಟರಾದ ಪಿತೃಗಳು ನಮ್ಮ ಭವಿಷ್ಯದ ಭಾಗ್ಯವನ್ನು, ವಂಶಾಭಿವೃದ್ಧಿಯನ್ನು ತಡೆಗಟ್ಟುವರೆಂಬ ನಂಬಿಕೆ ನಮ್ಮ ಭಾರತೀಯ ಪರಂಪರೆಯಲ್ಲಿದೆ.
ಪಿತೃಪಕ್ಷದ ದಿನಗಳಲ್ಲಿ ಅಥವಾ ಮಹಾಲಯ ಪರ್ವದಿನದಂದು ಶ್ರದ್ಧೆಯಿಂದ ಗತಿಸಿದ ಸರ್ವಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡಿ, ನಮ್ಮ ಪೂರ್ವಜರು ನಮಗೆ ಮಾಡಿದ ತ್ಯಾಗಗಳನ್ನು ನೆನೆದು ಅವರು ತೋರಿದ ದಾರಿಯಲ್ಲಿ ವರ್ಷವಿಡಿ ಸಾಗುವುದು ಸುಸಂಸ್ಕೃತವಂತ ಸಮಾಜದ ವ್ಯಕ್ತಿಯ ಆದ್ಯ ಕರ್ತವ್ಯವಾಗಿದೆ.
ಇದನ್ನೂ ಓದಿ: Astrology Tips : ಮದುವೆಗೆ ಕಂಕಣ ಬಲ ಕೂಡಿ ಬರುತ್ತಿಲ್ಲವೇ?; ಜ್ಯೋತಿಷ್ಯ ಶಾಸ್ತ್ರದಲ್ಲಿದೆ ಪರಿಹಾರ