Site icon Vistara News

Ram Mandir : ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ರಾಮೇಶ್ವರದಲ್ಲಿ ಪುಣ್ಯ ಸ್ನಾನ ಮಾಡಿದ ಮೋದಿ, ಇಲ್ಲಿದೆ ವಿಡಿಯೊ

Narendra modi

ರಾಮೇಶ್ವರಂ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕಾಗಿ ಅನುಷ್ಠಾನ ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನದ ಅಗ್ನಿತೀರ್ಥ ಬೀಚ್ ನಲ್ಲಿ ಪುಣ್ಯ ಸ್ನಾನ ಮಾಡಿದರು.. ಬಳಿಕ ಅವರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರುದ್ರಾಕ್ಷಿ ಮಾಲೆ ಧರಿಸಿದ ಪ್ರಧಾನಿ ಮೋದಿ ತಮಿಳುನಾಡಿನ ಪ್ರಾಚೀನ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರಿಗೆ ಅಲ್ಲಿನ ಅರ್ಚಕರು ಸಾಂಪ್ರದಾಯಿಕ ಗೌರವಗಳನ್ನು ಸಲ್ಲಿಸಿದರು.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದಲ್ಲಿರುವ ಶಿವ ದೇವಾಲಯವು ರಾಮಾಯಣದೊಂದಿಗೆ ಸಂಪರ್ಕವನ್ನು ಹೊಂದಿದೆ, ಏಕೆಂದರೆ ಇಲ್ಲಿನ ಶಿವಲಿಂಗವನ್ನು ಶ್ರೀ ರಾಮನು ಸ್ಥಾಪಿಸಿದ್ದು, ರಾಮ ಮತ್ತು ಸೀತಾ ದೇವಿ ಇಲ್ಲಿ ಪ್ರಾರ್ಥನೆಯೂ ಸಲ್ಲಿಸಿದ್ದರು.

ಈ ದೇಗುಲ ಭಾರತದ ಚಾರ್ ಧಾಮ್ ಗಳಲ್ಲಿ (ನಾಲ್ಕು ಧಾಮಗಳು) ಒಂದಾಗಿದೆ. ಬದರೀನಾಥ್, ದ್ವಾರಕಾ, ಪುರಿ ಜಗನ್ನಾಥ ಮತ್ತು ರಾಮೇಶ್ವರಂ. ಅಲ್ಲದೆ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಮಧ್ಯಾಹ್ನ 2.10 ಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ರಾಮೇಶ್ವರಂ ಪಕಾರುಂಬುವಿನ ಅಮೃತಾನಂದ ಶಾಲಾ ಆವರಣಕ್ಕೆ ಆಗಮಿಸಿದರು. ಅಲ್ಲಿಂದ ಮಧ್ಯಾಹ್ನ 3.10ಕ್ಕೆ ಅಗ್ನಿತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿದರು. ನಂತರ ಪ್ರಧಾನಿ ಮೋದಿ ದೇವಾಲಯದಲ್ಲಿ ರಾಮಾಯಣ ಪಥ ಮತ್ತು ಭಜನಾ ಸಂಧ್ಯಾದಲ್ಲಿ ಭಾಗವಹಿಸಿದರು.

ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮದವರೆಗೆ 11 ದಿನಗಳ ಅನುಷ್ಠಾನ ಆಚರಿಸುತ್ತಿರುವ ಪ್ರಧಾನಿ ಮೋದಿ ಶನಿವಾರ ತಿರುಚಿರಾಪಳ್ಳಿಗೆ ಆಗಮಿಸಿದ್ದರು. ತಿರುಚಿರಾಪಳ್ಳಿಯ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ಮೋದಿ ತಮ್ಮ ಭೇಟಿಯ ವೇಳೆ ದೇವಾಲಯದ ಆವರಣದಲ್ಲಿ ‘ಆಂಡಾಳ್’ ಎಂಬ ಆನೆಯಿಂದ ಆಶೀರ್ವಾದ ಪಡೆದರು.

ಇದನ್ನೂ ಓದಿ : Ram Mandir : ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರತಿಷ್ಠಾಪನೆ: ಯಾವ ರಾಶಿಯವರಿಗೆ ಏನೆಲ್ಲ ಫಲಗಳಿವೆ ಗೊತ್ತಾ?

ತಿರುಚ್ಚಿಯ ಶ್ರೀರಂಗಂನಲ್ಲಿರುವ ಈ ದೇವಾಲಯವು ದೇಶದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಪುರಾಣಗಳು ಮತ್ತು ಸಂಗಮ ಯುಗದ ಧರ್ಮಗ್ರಂಥಗಳು ಸೇರಿದಂತೆ ವಿವಿಧ ಪ್ರಾಚೀನ ಗ್ರಂಥಗಳಲ್ಲಿ ದೇಗುಲದ ಬಗ್ಗೆ ಉಲ್ಲೇಖವಿದೆ. ಇದು ವಾಸ್ತುಶಿಲ್ಪದ ಭವ್ಯತೆ ಮತ್ತು ಹಲವಾರು ಅಪ್ರತಿಮ ಗೋಪುರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪೂಜಿಸಲ್ಪಡುವ ಮುಖ್ಯ ದೇವತೆ ಶ್ರೀ ರಂಗನಾಥ ಸ್ವಾಮಿಗೆ ಭಾರೀ ಸಂಖ್ಯೆಯ ಭಕ್ತರಿದ್ದಾರೆ.

ಭಾನುವಾರ ಧನುಷ್ಕೋಡಿಗೆ ಭೇಟಿ

ಪ್ರಧಾನಿ ಮೋದಿ ಅವರು ಭಾನುವಾರ ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ದರ್ಶನ ಪಡೆಯಲಿದ್ದಾರೆ. ಅಲ್ಲದೆ ‘ರಾಮ ಸೇತು’ ನಿರ್ಮಿಸಿದ ಸ್ಥಳವೆಂದು ಹೇಳಲಾಗುವ ಅರಿಚಲ್ ಮುನೈಗೆ ಭೇಟಿ ನೀಡಲಿದ್ದಾರೆ. ಕಳೆದ ಹಲವಾರು ದಿನಗಳಿಂದ ಮೋದಿ ಅವರು ಹಲವಾರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಮರಾಠಿ, ಮಲಯಾಳಂ ಮತ್ತು ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ‘ರಾಮಾಯಣ’ ಮಹಾಕಾವ್ಯದ ಶ್ಲೋಕಗಳ ಪಠಣ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಭಾನುವಾರ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನದಲ್ಲಿ ‘ಶ್ರೀ ರಾಮಾಯಣ ಪಾರಾಯಣ’ದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ, ಎಂಟು ವಿಭಿನ್ನ ಸಾಂಪ್ರದಾಯಿಕ ಮಂಡಳಿಗಳು ಸಂಸ್ಕೃತ, ಅವಧಿ, ಕಾಶ್ಮೀರಿ, ಗುರುಮುಖಿ, ಅಸ್ಸಾಮಿ, ಬಂಗಾಳಿ, ಮೈಥಿಲಿ ಮತ್ತು ಗುಜರಾತಿ ರಾಮಕಥೆಗಳನ್ನು ಪಠಿಸಲಿವೆ (ಭಗವಾನ್ ರಾಮನು ಅಯೋಧ್ಯೆಗೆ ಮರಳಿದ ಪ್ರಸಂಗವನ್ನು ವಿವರಿಸುತ್ತದೆ). ಅಯೋಧ್ಯೆಯಲ್ಲಿ ಜನವರಿ 22ರಂದು ಭವ್ಯ ರಾಮ ಮಂದಿರ ಉದ್ಘಾಟನೆ ನಡೆಯಲಿದ್ದು, ಪ್ರಧಾನಿ ಮೋದಿ ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳದ ಹಲವಾರು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

Exit mobile version