ಬೆಂಗಳೂರು : ಇಸ್ಲಾಮಿಕ್ ಕ್ಯಾಲೆಂಡರ್ನ ಪವಿತ್ರ ತಿಂಗಳಾದ ರಂಜಾನ್ (Ramadan 2024) ಭಾನುವಾರ ಸೌದಿ ಅರೇಬಿಯಾದಲ್ಲಿ ಅರ್ಧಚಂದ್ರ ಕಾಣಿಸಿಕೊಂಡ ನಂತರ ವಿಶ್ವದ ಅನೇಕ ಭಾಗಗಳಲ್ಲಿ ಅಧಿಕೃತವಾಗಿ ಪ್ರಾರಂಭವಾಯಿತು. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದ ಮುಸ್ಲಿಮರು ನಾಳೆಯಿಂದ (ಮಾರ್ಚ್ 12) ಉಪವಾಸ ಆರಂಭಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಇಸ್ಲಾಂ ಅನುಯಾಯಿಗಳಿಗೆ ರಂಜಾನ್ ಶುಭಾಶಯ ಕೋರಿದ್ದಾರೆ.
Wishing everyone a blessed Ramzan. May this holy month bring joy, good health and prosperity in everyone’s lives.
— Narendra Modi (@narendramodi) March 11, 2024
“ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು. ಈ ಪವಿತ್ರ ಮಾಸವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ದೇಶದ ಮತ್ತು ವಿಶ್ವದಾದ್ಯಂತದ ಮುಸ್ಲಿಮರಿಗೆ ರಂಜಾನ್ ಶುಭಾಶಯಗಳನ್ನು ಕೋರಿದ್ದಾರೆ.
Tonight – as the new crescent moon marks the beginning of the Islamic holy month of Ramadan – Jill and I extend our best wishes and prayers to Muslims across our country and around the world. pic.twitter.com/oLC4Rmq0mA
— President Biden (@POTUS) March 11, 2024
ರಂಜಾನ್ ಚಂದ್ರನನ್ನು ಏಷ್ಯಾ ಮತ್ತು ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿ ನೋಡಿದ ಒಂದು ದಿನದ ನಂತರ ನೋಡಲಾಗುತ್ತದೆ. ಹೀಗಾಗಿ ಭಾರತೀಯರಿಗೆ ಮಂಗಳವಾರದಿಂದ ಉಪವಾಸ ಆರಂಭವಾಗಲಿದೆ.
ಇದನ್ನೂ ಓದಿ : Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
ರಂಜಾನ್ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸವನ್ನು ಆಚರಿಸುತ್ತಾರೆ. ರಂಜಾನ್ ಸಮಯದಲ್ಲಿ ಉಪವಾಸವನ್ನು ಆಚರಿಸುವುದು ಇಸ್ಲಾಂನ ಐದು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಮುಸ್ಲಿಮರು 29 ಅಥವಾ 30 ದಿನಗಳ ಉಪವಾಸಗಳನ್ನು ಆಚರಿಸುತ್ತಾರೆಯೇ ಎಂಬುದು ಚಂದ್ರನ ದರ್ಶನವನ್ನು ಆಧರಿಸಿದೆ. ರಂಜಾನ್ ತಿಂಗಳ ಅಂತ್ಯದ ನಂತರ ಮುಸ್ಲಿಮರು ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸುತ್ತಾರೆ.
ರಂಜಾನ್ ತಿಂಗಳಲ್ಲಿ ದೇಹ ತಂಪಾಗಿರಿಸಲು ಕುಡಿಯಲೇ ಬೇಕಾದ ಪಾನೀಯಗಳಿವು!
ದಿನವಿಡೀ ನೀರನ್ನೂ ಸಹಿತ ಕುಡಿಯದೆ ಉಪವಾಸ ಮಾಡುವುದೆಂದರೆ ಖಂಡಿತವಾಗಿಯೂ ಸವಾಲೀನ ಕೆಲಸವೇ. ಯಾಕೆಂದರೆ ಈಗ ಇನ್ನೇನು ಬೇಸಗೆಯ ಆರಂಭವಾಗಿರುವಾಗ ದೇಹಕ್ಕೆ ನೀರು ಅತ್ಯಂತ ಅವಶ್ಯಕ. ನೀರು ನಮ್ಮನ್ನು ಬಹಳ ಹೊತ್ತು ಕ್ರಿಯಾಶೀಲವಾಗಿ ಇರಿಸುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸದಿದ್ದರೆ ಹಲವಾರು ಆರೋಗ್ಯದ ಸಮಸ್ಯೆಗಳೂ ಬರುತ್ತವೆ. ಈಗ ರಂಜಾನ್ ತಿಂಗಳಾದ್ದರಿಂದ ಬಹಳಷ್ಟು ಮಂದಿಗೆ ಈಗ ಇಂತಹ ಉಪವಾಸದ ಸಮಯ. ಹಾಗಾಗಿ ಉಪವಾಸದ ಸಮಯದ ಹೊರತಾಗಿ ದೇಹಕ್ಕೆ ನೀರಿನಂಶದ ಅಗತ್ಯ ಸಾಕಷ್ಟಿದೆ. ಹೀಗಾಗಿ ಸೆಹ್ರಿ ಹಾಗೂ ಇಫ್ತಾರ್ ಸಂದರ್ಭಗಳಲ್ಲಿ ಕುಡಿಯಬಹುದಾದ ಕೆಲವು ಶಕ್ತಿವರ್ಧಕ ಬೇಸಿಗೆಯ ತಂಪು ಪಾನೀಯಗಳು ಇಲ್ಲಿವೆ.
- ಎಳನೀರು: ಪ್ರಕೃತಿದತ್ತವಾದ ಎಳನೀರಿನಷ್ಟು ಅತ್ಯುತ್ತಮ ತಂಪು ಪಾನೀಯ ಇನ್ನೊಂದಿಲ್ಲ. ಸಾಕಷ್ಟು ಖನಿಜ, ಲವಣ, ಜೀವಸತ್ವಗಳಿರುವ ಎಳನೀರು ದೇಹಕ್ಕೆ ಅಗತ್ಯವಾದ ನೀರಿನಂಶವನ್ನು ನೀಡುತ್ತದೆ. ಶಕ್ತಿಹೀನರಾದಾಗ, ಉಪವಾಸದಿಂದ ಬಳಲಿದಾಗ ಶಕ್ತಿದಾಯಕವಾಗಿ ಅತ್ಯುತ್ತಮ ಪರಿಹಾರವೆಂದರೆ ಅದು ಎಳನೀರು. ಎಳನೀರಿಗೆ ಅದರ ಗಂಜಿ ಹಾಕಿ, ಅಥವಾ ನಿಂಬೆಹಣ್ಣನ್ನು ಹಿಂಡಿಯೂ ಎಳನೀರಿನ ಜ್ಯೂಸ್ ಮಾಡಿಯೂ ಹೀರಬಹುದು.
- ಜಲ್ಲಬ್: ಮಧ್ಯ ಪೌರಾತ್ಯ ದೇಶಗಳ ಅತ್ಯಂತ ಪ್ರಸಿದ್ಧವಾದ ಪಾನೀಯಗಳಲ್ಲಿ ಜಲ್ಲಬ್ ಕೂಡಾ ಒಂದು. ಇದನ್ನು ಖರ್ಜೂರ, ದ್ರಾಕ್ಷಿ ಹಾಗೂ ಗುಲಾಬಿ ನೀರಿನಿಂದ ಮಾಡಲಾಗುತ್ತದೆ. ರಂಜಾನ್ ಆಚರಿಸುವ ಮಂದಿಯ ಮನೆಗಳಲ್ಲಿ ಸಾಮಾನ್ಯವಾಗಿ ಈ ಪಾನೀಯವನ್ನು ಪೂರ್ತಿ ತಿಂಗಳು ಇಟ್ಟಿರುತ್ತಾರೆ. ಕೊಂಚ ಹುಳಿ ರುಚಿಯ ಈ ಪಾನೀಯ ಅತ್ಯಂತ ಶಕ್ತಿದಾಯಕವಾದ ಪೇಯ. ಇದರಲ್ಲಿ ನೈಸರ್ಗಿಕವಾದ ಸಿಹಿ ಇರುವುದರಿಂದ ಪ್ರತ್ಯೇಕವಾಗಿ ಸಕ್ಕರೆಯನ್ನು ಹಾಕುವ ಅವಶ್ಯಕತೆಯೂ ಬಾರದು.
- ರೂಹ್ ಅಫ್ಜಾ ಶರಬತ್ತು: ರಂಜಾನ್ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಕುಡಿಯಲ್ಪಡುವ ಶರಬತ್ತು ಎಂದರೆ ರೂಹ್ ಅಫ್ಜಾ. ಮಾರುಕಟ್ಟೆಯಲ್ಲಿ ಸಿಗುವ ರೂಹ್ ಅಫ್ಜಾ, ತನ್ನ ಪಿಂಕ್ ಬಣ್ಣದಿಂದಲೂ ಮಂತ್ರಮುಗ್ಧಗೊಳಿಸುತ್ತದೆ. ಗುಲಾಬಿಯ ಹಿತವಾದ ಗಂಧದ ಈ ಶರಬತ್ತು ಬೇಸಿಗೆಯ ದಾಹವನ್ನು ಕ್ಷಣ ಮಾತ್ರದಲ್ಲಿ ದೂರವಿರಿಸುತ್ತದೆ. ಹಾಲು ಹಾಕಿಯೂ ಮಾಡಬಹುದಾದ ಗುಲಾಬಿ ಬಣ್ಣದ ಸುಂದರ ಪೇಯವಿದು. ಇದಕ್ಕೆ ಕಲ್ಲಂಗಡಿಯ ತುಂಡುಗಳನ್ನು ಹಾಕಿ ಕುಡಿದರೆ ಅದ್ಭುತ ರುಚಿ. ದಾಹವೂ ಮಾಯ.
- ಖರ್ಜೂರದ ಸ್ಮೂದಿ: ಖರ್ಜೂರ ಶಕ್ತಿವರ್ಧಕ. ಇದು ರೋಗನಿರೋಧಕವೂ ಹೌದು. ಸಂಜೆಯ ಸೂರ್ಯಾಸ್ತದ ನಂತರ ಉಪವಾಸ ಬಿಡುವ ಸಂದರ್ಭದಲ್ಲಿ ತಿನ್ನುವ ಹಣ್ಣುಗಳ ಪೈಕಿ ಖರ್ಜೂರವೂ ಒಂದು. ಒಂದೆರಡು ಹಣ್ಣುಗಳನ್ನು ಬಾಯಿಗಿಟ್ಟರೆ ಇನ್ಸ್‌ಟಾಂಟ್ ಎನರ್ಜಿ ನೀಡುವ ಈ ಹಣ್ಣನ್ನು ಹಾಲಿನ ಜೊತೆಗೆ ಸೇರಿಸಿ ಸ್ಮೂದಿ ಮಾಡುವ ಮೂಲಕವೂ ಸೇವಿಸಬಹುದು. ಹಸಿವೆಯನ್ನು ತತ್‌ಕ್ಷಣಕ್ಕೆ ಕಡಿಮೆ ಮಾಡುವ ತಾಕತ್ತು ಇರುವುದರಿಂದ ರಂಜಾನ್ ಮಾಸದಲ್ಲಿ ಎಲ್ಲರ ಮನೆಗಳಲ್ಲಿರುವ ಹಣ್ಣಿದು.
- ಹಣ್ಣುಗಳ ಜ್ಯೂಸ್: ಯಾವುದೇ ಹಣ್ಣಿನ ಜ್ಯೂಸ್ ಕೂಡಾ ಉಪವಾಸ ಬಿಡುವ ಸಂದರ್ಭ ಅತ್ಯುತ್ತಮ ಶಕ್ತಿದಾಯಕ ಪಾನೀಯವಾಗಬಲ್ಲದು, ಕಲ್ಲಂಗಡಿ ಹಣ್ಣು, ಖರ್ಬೂಜಾ, ದಾಳಿಂಬೆ, ಕಿತ್ತಳೆ, ಮೂಸಂಬಿ, ದ್ರಾಕ್ಷಿ , ಅನನಾಸು ಇತ್ಯಾದಿಗಳ ಜ್ಯೂಸು ಶಕ್ತಿವರ್ಧಕ. ಇಷ್ಟೇ ಅಲ್ಲದೆ, ಹಲವು ಹಣ್ಣುಗಳನ್ನು ಮಿಕ್ಸ್ ಮಾಡಿಯೂ ಜ್ಯೂಸ್ ಮಾಡುವ ಮೂಲಕ ಪ್ರಯೋಜನ ಪಡೆಯಬಹುದು.