ಶುಕ್ಲ ಅಥವಾ ಕೃಷ್ಣ ಪಕ್ಷದ ತ್ರಯೋದಶಿಯ ಗೋಧೂಳಿಯ ಸಮಯವನ್ನು ‘ಪ್ರದೋಷ’ಎನ್ನುತ್ತಾರೆ (Pradosh vrat 2023). ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಪ್ರದೋಷಕಾಲ ಬರುತ್ತದೆ. ಪ್ರದೋಷ ವ್ರತಗಳಿಗೆ ವಾರದ ಮೇರೆಗೆ ಹೆಸರುಗಳಿರುತ್ತವೆ. ಉದಾಹರಣೆಗೆ; ಸೋಮ ಪ್ರದೋಷ, ಭೌಮ ಪ್ರದೋಷ, ಗುರುವಾರ ಪ್ರದೋಷ, ಭೃಗು ವಾರ ಪ್ರದೋಷ, ಶನಿ ಪ್ರದೋಷ ಹಾಗು ಭಾನುವಾರ ಪ್ರದೋಷ.
ಹಿಂದೂ ಧರ್ಮದಲ್ಲಿ ಪ್ರದೋಷ ಸಮಯಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಪೂರ್ಣ ಶ್ರದ್ಧೆ ಮತ್ತು ಭಕ್ತಿಯಿಂದ ಪ್ರದೋಷ ಸಮಯದಲ್ಲಿ ಶಿವನ ಉಪಾಸನೆ ಮಾಡಿದವರಿಗೆ ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ ಎಂದು ಶಾಸ್ತ್ರಗಳು ಹೇಳಿವೆ. ಜನವರಿ 4ರಂದು ಬುಧ ಪ್ರದೋಷವಿದೆ. ಇದು 2023ರ ಹೊಸ ವರ್ಷದಲ್ಲಿ ಬರುತ್ತಿರುವ ಮೊದಲ ಪ್ರದೋಷವಾಗಿದೆ (Pradosh vrat 2023). ಇದು ಪುಷ್ಯ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯಂದು ಆಚರಣೆ ಮಾಡಲಾಗುತ್ತದೆ. ಬುಧವಾರದಂದು ಈ ತಿಥಿ ಬಂದಿರುವ ಕಾರಣ ಇದಕ್ಕೆ ಬುಧ ಪ್ರದೋಷ ಎಂದು ಕರೆಯುತ್ತಾರೆ.
ಪ್ರದೋಷದ ಮಹತ್ವ
ಪ್ರದೋಷ ಸಮಯ ಶಿವನ ಉಪಾಸನೆಗೆ ಅತ್ಯಂತ ಪ್ರಶಸ್ತ ಸಮಯವಾಗಿರುತ್ತದೆ. ಇದು ಶಿವನ ವಿಶ್ರಾಂತಿಯ ಕಾಲವಾಗಿರುತ್ತದೆ. ದೇವರಿಗೆ ಒಂದು ರಾತ್ರಿ ಅಂದರೆ ಭೂಮಿಯ ಮೇಲಿನ ಒಂದು ವರ್ಷ. ಭೂಮಿಯ ಮೇಲೆ ಒಟ್ಟು ಎಂಟು ಪ್ರಹರಗಳಿರುತ್ತವೆ. ಅದರಲ್ಲಿ ದಿನದಲ್ಲಿ ನಾಲ್ಕು ಮತ್ತು ರಾತ್ರಿಯಲ್ಲಿ ನಾಲ್ಕು ಪ್ರಹರಗಳು ಹೀಗೆ ಇಪ್ಪತ್ನಾಲ್ಕು ಗಂಟೆಯಲ್ಲಿ ಒಟ್ಟು ಎಂಟು ಪ್ರಹರಗಳಾಗುತ್ತದೆ. ಒಂದು ಪ್ರಹರ ಎಂದರೆ ಮೂರು ಗಂಟೆಗಳಷ್ಟು ಸಮಯ. ಭೂಮಿಯ ಮೇಲೆ ಪೂರ್ಣ ಪ್ರಮಾಣದ ಪ್ರದೋಷ ಕಾಲವು ಸುಮಾರು ಒಂದರಿಂದ ಒಂದೂವರೆ ಗಂಟೆಗಳಷ್ಟು ಕಾಲ ಇರುತ್ತದೆ.ಒಂದು ಪ್ರಹರ ಅಂದ್ರೆ ಮೂರು ಗಂಟೆಗಳ ಕಾಲ. ಪ್ರದೋಷ ಕಾಲದಲ್ಲಿ ಮಾಡಿದ ಶಿವನ ಆರಾಧನೆಗೆ ಪೂರ್ಣ ಫಲ ಸಿಗುತ್ತದೆ. ಪ್ರದೋಷ ಕಾಲದಲ್ಲಿ ಶಿವೋಪಾಸನೆ ಮಾಡಿದರೆ, ಅದಕ್ಕೆ ನೂರರಷ್ಟು ಫಲ ಸಿಗುತ್ತದೆ.
ಈ ಪ್ರದೋಷ ಕಾಲದಲ್ಲಿ ಶಿವನಿಗೆ ಅಭೀಷೇಕ ಮಾಡಲಾಗುತ್ತದೆ. ಜೊತೆಗೆ ಶಿವ ನಾಮ ಜಪ ಮಾಡುವುದರಿಂದ ಕೆಟ್ಟ ಶಕ್ತಿಗಳಿಂದ ಆಗುವ ತೊಂದರೆ ನಿವಾರಣೆ ಆಗುತ್ತದೆ. ಪ್ರದೋಷ ಕಾಲದಲ್ಲಿ ಶಿವನು ಧ್ಯಾನ ಸ್ಥಿತಿಯಲ್ಲಿ ಇರುವುದರಿಂದ, ಬ್ರಹ್ಮಾಂಡದಲ್ಲಿ ತಮೋಗುಣಗಳು ಹೆಚ್ಚಾಗುತ್ತವೆ. ಹಾಗಾಗಿ ಈ ಸಮಯದಲ್ಲಿ ಕೆಟ್ಟ ಶಕ್ತಿಗಳಿಂದ ಆಗುವ ತೊಂದರೆಯನ್ನು ತಪ್ಪಿಸಿಕೊಳ್ಳಲು ಶಿವತತ್ವವನ್ನು ಆಕರ್ಷಿಸುವಂಥ ಬಿಲ್ವಪತ್ರೆ, ಬಿಳಿ ಹೂವು, ರುದ್ರಾಕ್ಷಿಗಳನ್ನು ಶಿವನಿಗೆ ಅರ್ಪಿಸುವುದರಿಂದ, ಶಿವನ ಕೃಪೆ ಪ್ರಾಪ್ತವಾಗುತ್ತದೆ.
ಪ್ರದೋಷ ವ್ರತದ ಮುಹೂರ್ತ
ಪುಷ್ಯ ಮಾಸದ ತ್ರಯೋದಶಿ ತಿಥಿಯಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ತ್ರಯೋದಶಿ ತಿಥಿಯು ಜನವರಿ 03ರ ರಾತ್ರಿ 10 ಗಂಟೆ 01 ನಿಮಿಷಕ್ಕೆ ಆರಂಭವಾಗಿ, ಜನವರಿ 04ರ ರಾತ್ರಿ 11ಗಂಟೆ 50 ನಿಮಿಷದ ವರೆಗೂ ಇರುತ್ತದೆ. ಹಾಗಾಗಿ ಬುಧ ಪ್ರದೋಷ ವ್ರತವನ್ನು 04ರಂದು ಆಚರಿಸಲಾಗುತ್ತದೆ. ವ್ರತದ ಶುಭ ಮುಹೂರ್ತವು ಬುಧವಾರ ಸಂಜೆ 5 ಗಂಟೆ 37 ನಿಮಿಷದಿಂದ 8 ಗಂಟೆ 21 ನಿಮಿಷದ ವರೆಗೂ ಇರಲಿದೆ. ಬುಧವಾರದಂದು ಸರ್ವಾರ್ಥ ಸಿದ್ಧಿ ಯೋಗವು ಇರಲಿದೆ.
ಬುಧ ಪ್ರದೋಷ ವ್ರತಾಚರಣೆಯ ಲಾಭ
ಬುಧವಾರದಂದು ತ್ರಯೋದಶಿ ಬಂದಿರುವ ಕಾರಣ ಇದನ್ನೂ ಬುಧ ಪ್ರದೋಷ ವ್ರತ ಎಂದು ಕರೆಯುತ್ತಾರೆ. ಬುಧ ಪ್ರದೋಷ ವ್ರತವನ್ನು ಆಚರಿಸುವುದರಿಂದ ಸರ್ವ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ. ಮನೆಯಲ್ಲಿ ಕಲಹಗಳು, ಭಿನ್ನಾಭಿಪ್ರಾಯಗಳು ಮತ್ತು ಕ್ಲೇಶಗಳಿದ್ದಲ್ಲಿ ನಿವಾರಣೆಯಾಗುತ್ತವೆ. ಬುಧ ಪ್ರದೋಷ ವ್ರತ ಆಚರಣೆಯಿಂದ ಶಿವನ ಕೃಪೆಯ ಜೊತೆಗೆ ಮಂಗಳಮೂರ್ತಿಯ ಕೃಪೆಗೆ ಸಹ ಪಾತ್ರರಾಗಬಹುದಾಗಿದೆ. ಸಂತಾನಕ್ಕಾಗಿ ಅಪೇಕ್ಷಿಸುವವರು ಬುಧ ಪ್ರದೋಷ ವ್ರತವನ್ನು ಆಚರಿಸುವುದರಿಂದ ಫಲ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೇ ಈ ವ್ರತವನ್ನು ಆಚರಿಸುವುದರಿಂದ ಸಾಲದಿಂದ ಸಹ ಮುಕ್ತಿ ಸಿಗಲಿದೆ.
ಇದನ್ನೂ ಓದಿ| Soma Pradosham 2022 | ಇಂದು ಸೋಮ ಪ್ರದೋಷ; ಇದರ ಮಹತ್ವವೇನು? ಪೂಜೆ ಹೇಗೆ?