ಕಲಬುರಗಿ: ಜಿಲ್ಲೆಯ ಗಾಣಗಾಪುರದಲ್ಲಿರುವ ಪ್ರಸಿದ್ಧ ಶ್ರೀ ಗುರು ದತ್ತಾತ್ರೇಯ ದೇಗುಲದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ನಿರ್ಮಿಸಿಕೊಂಡು ಕೋಟ್ಯಂತರ ರೂ. ಕಾಣಿಕೆ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ದೇಗುಲದ ಐವರು ಅರ್ಚಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಜರಾಯಿ ಇಲಾಖೆಗೆ ಸೇರಿದ ಈ ದೇಗುಲದ ಹೆಸರಿನಲ್ಲಿ ಅರ್ಚಕರಾದ ವಲ್ಲಭ ದಿನಕರ್ ಭಟ್, ಅಂಕೂರ್ ಪೂಜಾರಿ, ಪ್ರತೀಕ್ ಪೂಜಾರಿ, ಗಂಗಾಧರ್ ಪೂಜಾರಿ, ಶರತ್ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ. ದೇಗುಲ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರ ಸೂಚನೆ ಮೇರೆಗೆ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ನಾಮದೇವ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?
ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ಸ್ವರೂಪವಾದ ಶ್ರೀ ಗುರು ದತ್ತಾತ್ರೇಯರ ಪಾದುಕೆ ಇರುವ ಪುಣ್ಯ ಕ್ಷೇತ್ರ ಅಫಜಲಪುರದಲ್ಲಿರುವ ಶ್ರೀ ಗುರು ದತ್ತಾತ್ರೇಯ ಕ್ಷೇತ್ರ. ದೇಶ ವಿದೇಶಗಳಿಂದ ಇಲ್ಲಿಗೆ ಭಕ್ತರು ಆಗಮಿಸಿ, ಪಾದುಕೆಯ ದರ್ಶನ ಪಡೆಯುತ್ತಾರೆ.
ಮುಜರಾಯಿ ಇಲಾಖೆಗೆ ಸೇರಿದ ಈ ದೇಗುಲ ರಾಜ್ಯದ ಅತ್ಯಂತ ಹೆಚ್ಚು ಕಾಣಿಕೆ ಸಂಗ್ರಹವಾಗುವ ದೇಗುಲಗಳಲ್ಲಿ ಒಂದಾಗಿದೆ. ಇಲ್ಲಿಯ ಈ ಐವರು ಅರ್ಚಕರು ಸೇರಿ ಶ್ರೀ ದತ್ತಾತ್ರೇಯ ದೇವಾಲಯದ ಹೆಸರಲ್ಲಿ ನಕಲಿ ವೆಬ್‌ಸೈಟ್ ಹಾಗೂ ಇ ಮೇಲ್ ಸೃಷ್ಟಿಸಿದ್ದಾರೆ. ಮುಜಾರಾಯಿ ಇಲಾಖೆ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಒಂದನ್ನು ಹೊಂದಿದೆ. ಆದರೆ, ಅರ್ಚಕರು ಈ ವೆಬ್‌ಸೈಟ್ ಅಲ್ಲದೆ, ದೇಗುಲದ ಹೆಸರಿನಲ್ಲಿ ಏಳೆಂಟು ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದಾರೆ. ಈ ನಕಲಿ ವೆಬ್‌ಸೈಟ್ ಮೂಲಕ ದೇವರ ಸೇವೆಗೆ ಭಕ್ತರಿಂದ ಆನ್‌ಲೈನ್ ಮೂಲಕ ಹಣ ಪಡೆಯಲಾಗುತ್ತಿತ್ತು. ದೇವಸ್ಥಾನಕ್ಕೆ ಸಲ್ಲಬೇಕಿದ್ದ ಕಾಣಿಕೆಯನ್ನು ಕೂಡ ಅರ್ಚಕರು ತಮ್ಮ ಖಾತೆಗಳಿಗೆ ಹಾಕಿಸಿಕೊಂಡು ಸರ್ಕಾರ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ ವಂಚಿಸಿದ್ದಾರೆ. ಅಂದಾಜಿನ ಪ್ರಕಾರ ೨೦ ಕೋಟಿ ರೂ.ಗೂ ಹೆಚ್ಚಿನ ವಂಚನೆ ನಡೆದಿದೆ.
ಅರ್ಚಕರ ಒಳಜಗಳದಿಂದಾಗಿ ಈ ಮಾಹಿತಿ ಜಿಲ್ಲಾಧಿಕಾರಿ ಗಮನಕ್ಕೆ ಬಂದಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕೇವಲ ಅರ್ಧ ಗಂಟೆಯಲ್ಲಿ ನಕಲಿ ವೆಬ್‌ಸೈಟ್‌ಗಳನ್ನು ಅರ್ಚಕರು ಡಿಲಿಟ್ ಮಾಡಿರಿವುದಾಗಿ ತಿಳಿದುಬಂದಿದೆ.
ವಿವಿಧ ಧಾರ್ಮಿಕ ಸೇವೆಗಳಿಗಾಗಿ ಈ ನಕಲ ವೆಬ್‌ಸೈಟ್ ಮೂಲಕ ಏನಿಲ್ಲವೆಂದರೂ ೨ ಸಾವಿರ ಭಕ್ತರು ಹಣ ಪಾವತಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಐವರು ಅರ್ಚಕರ ಖಾತೆಗಳಲ್ಲಿ ೨೦ ಕೋಟಿ ರೂ. ಹೆಚ್ಚು ಹಣ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ದರೆ, ಸುಮಾರು ಮೂರ್ನಾಲ್ಕು ವರ್ಷಗಳಿಂದ ವಂಚನೆ ನಡೆದಿದ್ದು, ದೇವಸ್ಥಾನದಿಂದ ಮುಜರಾಯಿ ಇಲಾಖೆಗೆ ಬರಬೇಕಾದ ಕೋಟ್ಯಂತರ ರೂಪಾಯಿ ಹೀಗೆ ವಂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ನಷ್ಟದ ಹಣವನ್ನು ಇವರಿಂದಲೇ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅರ್ಚಕರ ವಿರುದ್ಧ ಎಫ್‌ಐಆರ್ ಹಾಕಿರದ್ದಾರೆ.
ಇದನ್ನೂ ಓದಿ: ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಒಂದೇ ದಿನ ದಾಖಲೆಯ 10 ಕೋಟಿ ರೂ. ನಗದು ಕಾಣಿಕೆ ಸಲ್ಲಿಕೆ