ಟಿ.ಆರ್. ಪ್ರೇಮ, ತುಮಕೂರು
ಎಷ್ಟೋ ಸಲ ನಮ್ಮಷ್ಟಕ್ಕೆ ನಾವಿದ್ದರೂ ಸದಾ ಒಳ್ಳೆಯದನ್ನೇ ಮಾಡುತ್ತಲಿದ್ದರೂ ನಮ್ಮ ಬಗ್ಗೆ ಆಡಿಕೊಳ್ಳುವ ಜನರಿರುತ್ತಾರೆ. ನಮ್ಮ ಬೆಳವಣಿಗೆ ಸಹಿಸಿಕೊಳ್ಳದೆಯೋ ಅಥವಾ ನಮ್ಮ ಬಗೆಗಿನ ತಪ್ಪು ಕಲ್ಪನೆಯಿಂದಲೋ ಜನರು ನಿಂದೆಯ ನುಡಿಗಳನ್ನು ಆಡಿದಾಗ ಸಹಜವಾಗಿಯೇ ಖಿನ್ನರಾಗುತ್ತೇವೆ. ಎಷ್ಟೋ ಸಲ ನಮ್ಮನ್ನು ನೋಯಿಸುವವರಿಗೆ ಪ್ರತಿಯಾಗಿ ಮಾತಿನಿಂದ ಉತ್ತರಿಸಬೇಕೆ ಅಥವಾ ಮಾಡುವ ಕೆಲಸವನ್ನೇ ನಿಲ್ಲಿಸಬೇಕೆ, ಗೊತ್ತಾಗುವುದಿಲ್ಲ.
ಭಗವಾನ್ ಬುದ್ಧ ತಮ್ಮ ಸಿದ್ದಾಂತಗಳ ಜೊತೆಗೆ ಅಪಾರ ಜ್ಞಾನವನ್ನು ಇತರರಿಗೆ ಧಾರೆ ಎರೆಯುವುದರ ಮೂಲಕ “ಲೋಕಗುರು’ ಎನಿಸಿಕೊಂಡವರು. ಅವರ ಬಳಿ ಸಮಸ್ಯೆಗೆ ಪರಿಹಾರ ಕೇಳಿಕೊಂಡು ಸಾವಿರಾರು ಜನರು ಬರುತ್ತಿದ್ದರು. ಹಾಗೆ ಬಂದವರಿಗೆ ಸಮಾಧಾನವಾಗುವ ಹಾಗೆ ಉಪದೇಶಿಸಿಸುವುದು ಅವರ ನಿತ್ಯದ ಕಾಯಕವಾಗಿತ್ತು. ಒಮ್ಮೆ ಅವರ ಬಳಿ ಸಮಸ್ಯೆಗೆ ಪರಿಹಾರ ಕೇಳಿಕೊಂಡು ಬಂದ ವ್ಯಕ್ತಿಯೋರ್ವನಿಗೆ ಬುದ್ಧ ಸೂಚಿಸಿದ ಪರಿಹಾರವು ಸರಿ ಕಾಣಲಿಲ್ಲ. ಆತ ಬುದ್ಧನನ್ನೇ ಪ್ರಶ್ನಿಸಲು ಆರಂಭಿಸಿದ; “ನಿನ್ನಷ್ಟಕ್ಕೆ ನೀನು ದೊಡ್ಡ ಜ್ಞಾನಿ ಎಂದುಕೊಂಡು ಬಿಟ್ಟಿದ್ದೀಯಾ? ಉಪದೇಶದ ಹೆಸರಲ್ಲಿ ಅಮಾಯಕರ ಹಾದಿ ತಪ್ಪಿಸುತ್ತಿದ್ದೀಯಾ?” ಹೀಗೆ ಬಗೆ ಬಗೆಯಾಗಿ ನಿಂದಿಸಲು ಆರಂಭಿಸಿದ.
ಗೌತಮ ಬುದ್ಧ ಕಿಂಚಿತ್ತೂ ವಿಚಲಿತರಾಗದೆ ಆತ ಹೇಳುತ್ತಿರುವುದನ್ನೆಲ್ಲ ಶಾಂತಚಿತ್ತದಿಂದ ಕೇಳಿಸಿಕೊಳ್ಳುತ್ತಿದ್ದರು. ಆ ವ್ಯಕ್ತಿ ತನ್ನ ಮಾತನ್ನು ಮುಂದುವರಿಸಿದ; “ನೀನು ಹೇಳುತ್ತಿರುವುದೆಲ್ಲ ಸುಳ್ಳು, ಇದನ್ನೆಲ್ಲ ನಂಬಿದರೆ ಅಧೋಗತಿಯೇ ಸರಿ” ಎಂದೆಲ್ಲ ಹೇಳುತ್ತ ಬುದ್ಧರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಅಲ್ಲಿದ್ದ ಜನರಿಗೆಲ್ಲ ಗಾಬರಿಯಾಯಿತು. ಈ ವ್ಯಕ್ತಿ ಯಾರು? ಯಾಕೆ ಹೀಗೆ ಹೇಳುತ್ತಿದ್ದಾನೆ, ಏನು ಅನರ್ಥವಾಗುತ್ತಿದೆ, ಒಂದೂ ತೋಚಲಿಲ್ಲ. ಆ ವ್ಯಕ್ತಿ ತನ್ನ ಮಾತುಗಳನ್ನು ಮುಗಿಸುವವರೆಗೂ ಭಗವಾನ್ ಬುದ್ಧ ಅತ್ಯಂತ ಶಾಂತರಾಗಿಯೇ ಇದ್ದರು.
ಸ್ವಲ್ಪ ಹೊತ್ತಾದ ಮೇಲೆ ಆ ವ್ಯಕ್ತಿ ತಾನು ಹೇಳಬೇಕೆಂದುಕೊಂಡಿದ್ದನ್ನೆಲ್ಲ ಹೇಳಿ ಮುಗಿಸಿದ. ಈಗ ಮಾತನಾಡುವ ಸರದಿ ಬುದ್ಧರದಾಗಿತ್ತು. ನೀವ್ಯಾರೊ ನನಗೆ ತಿಳಿಯದು. ನನ್ನ ಜ್ಞಾನ ಹಾಗೂ ಅನುಭವದ ಮಿತಿಯಲ್ಲಿ ನಾನು ಉಪದೇಶಿಸಿದ್ದೇನೆ. ಅದನ್ನು ಸ್ವೀಕರಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು, ಕೊಟ್ಟಿದ್ದನ್ನೆಲ್ಲ ತೆಗೆದುಕೊಳ್ಳಲೇ ಬೇಕೆಂದೇ ನೂ ಇಲ್ಲ. ಒಂದು ವೇಳೆ ನೀವು ಯಾರಿಗಾದರೂ ಉಡುಗೊರೆ ಕೊಡಲು ಹೋದಾಗ ಸ್ವೀಕರಿಸಬೇಕಿದ್ದ ವ್ಯಕ್ತಿ ಅದನ್ನು ಸ್ವೀಕರಿಸದೇ ಹೋದರೆ ಆ ಉಡುಗೊರೆ ಯಾರ ಬಳಿ ಉಳಿಯುತ್ತದೆ ಹೇಳಿ ಎಂದರು.
ಆ ವ್ಯಕ್ತಿ ಗಲಿಬಿಲಿಯಾದ; ಅದು ನನ್ನ ಬಳಿಯೇ ಉಳಿದುಕೊಳ್ಳುತ್ತದೆ ಎಂದ. ಹಾಗೆಯೇ ಈ ಮಾತುಕತೆ ವಿಷಯದಲ್ಲೂ ಆಗುತ್ತದೆ. ನಿಮಗೆ ನನ್ನ ಮಾತು ಹಿಡಿಸಲಿಲ್ಲವೆಂದರೆ ಸ್ವೀಕರಿಸಬೇಡಿ, ಅದು ನನ್ನಲ್ಲೇ ಉಳಿದುಕೊಳ್ಳುತ್ತದೆಯಷ್ಟೆ, ಹಾಗೆಯೇ ನೀವು ಇಷ್ಟು ಹೊತ್ತು ಆಡಿದ ನಿಂದನೆಯ ನುಡಿಗಳನ್ನು ನಾನು ಸ್ವೀಕರಿಸಿಲ್ಲ. ಅದು ನಿಮ್ಮ ಬಳಿಯೇ ಉಳಿದುಕೊಳ್ಳುತ್ತದೆ ಎಂದು ಮುಗುಳ್ನಗುತ್ತಾ ಉತ್ತರಿಸಿ ಬುದ್ಧ ಮೌನಿಯಾದರು. ಆ ವ್ಯಕ್ತಿಗೆ ಬುದ್ಧರು ಮಹಾತ್ಮರೆಂಬ ಅರಿವಾಯಿತು.
ಎಷ್ಟೋ ಸಲ ನಿಂದನೆಯ ನುಡಿಗಳನ್ನು ಕೇಳಿದಾಗ ನಾವು ವಿಚಲಿತರಾಗುತ್ತೇವೆ. ಅದನ್ನೇ ತಲೆಯಲ್ಲಿ ಇಟ್ಟುಕೊಂಡು ಕೊರಗುತ್ತೇವೆ. ಪ್ರತಿಯಾಗಿ ಮಾತನಾಡಲು ಹೋಗಿ ಕೆಟ್ಟವರಾಗುತ್ತೇವೆ. ‘ನಮ್ಮ ನಡೆ ಸರಿಯಿದೆ’ ಎಂಬುದರ ಖಾತ್ರಿ ನಮಗಿದ್ದಾಗ ಯಾರ ನಿಂದನೆಗಳನ್ನೂ ನಾವು ಸ್ವೀಕರಿಸಬೇಕಾಗಿಯೇ ಇಲ್ಲ. ಆಗ ಅದು ಅವರ ಬಳಿಯೇ ಉಳಿದು ಕೊಂಡ ಹಾಗಾಗುತ್ತದೆ. ಆಡಿಕೊಳ್ಳುವವರು ಸ್ವಲ್ಪಕಾಲ ಆಡಿಕೊಂಡು ಸುಮ್ಮನಾಗುತ್ತಾರೆ.
ನಮಗೆ ತೊಂದರೆ ಕೊಟ್ಟವರನ್ನೆಂದೂ ಮರೆಯಬಾರದು, ನಾವು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿದ್ದೇ ಅವರಿಂದ, ಅವರಿಗೊಂದು ಧನ್ಯವಾದವಿರಲಿ!
ಇದನ್ನೂ ಓದಿ | Prerane | ಸದ್ಗುರುವಿನ ಕೃಪೆಯಿಂದ ದೊರೆಯಲಿದೆ ಮೋಕ್ಷವೆಂಬ ಮಹಾಫಲ