Site icon Vistara News

Prerane | ನಿಮ್ಮನ್ನು ನೀವು ಬಾಹ್ಯದಿಂದ ನೋಡಿಕೊಳ್ಳಲು ಸಾಧ್ಯವೇ?

tatayya thathvamrutam a column by dr m r jayaram about saint kaivara narayanappa

guru

ಸದ್ಗುರು ಜಗ್ಗಿ ವಾಸುದೇವ್‌
ಇದು ಹಲವು ವರ್ಷಗಳ ಹಿಂದೆ ನಡೆದಿದ್ದು. ಯಾವುದೋ ಸಂಸ್ಥೆಗೆ ನನ್ನ ಮೆದುಳಿನಲ್ಲಿನ ಗಾಮಾ ಅಲೆಗಳನ್ನು ಅಳತೆ ಮಾಡಬೇಕಿತ್ತು. ಅವರು ನನಗೆ ಧ್ಯಾನ ಮಾಡಲು ಹೇಳಿದರು. ‘ನನಗೆ ಯಾವುದೇ ಧ್ಯಾನ ಗೊತ್ತಿಲ್ಲ’ ಎಂದು ನಾನು ಹೇಳಿದೆ. ಅದಕ್ಕವರು, ‘ಆದರೆ ನೀವು ಎಲ್ಲರಿಗೂ ಧ್ಯಾನವನ್ನು ಕಲಿಸುತ್ತೀರಿ’ ಎಂದರು. ನಾನು, ‘ಹೌದು, ಜನರಿಗೆ ಸುಮ್ಮನೆ ಕುಳಿತುಕೊಳ್ಳುವುದು ಹೇಗೆಂದು ತಿಳಿದಿಲ್ಲವಾದ್ದರಿಂದ, ಹಾಗೆ ಕೂರಲು ನಾವು ಅವರಿಗೆ ವಿಧಾನಗಳನ್ನು ಕಲಿಸುತ್ತೇವೆ. ನೀವು ಬಯಸಿದರೆ, ನಾನು ಅಲ್ಲಾಡದೆ ಕುಳಿತುಕೊಳ್ಳುತ್ತೇನೆ’ ಎಂದು ಹೇಳಿದೆ.

ಅವರು ಅದಕ್ಕೆ ಒಪ್ಪಿಕೊಂಡರು. ನಂತರ ಸುಮಾರು14 ಎಲೆಕ್ಟ್ರೋಡ್‌ಗಳನ್ನು ನನ್ನ ಮೇಲೆ ಇಟ್ಟರು. ನಾನು ಸುಮ್ಮನೆ ಅಲ್ಲಿಯೇ ಕುಳಿತಿದ್ದೆ. ಸುಮಾರು15 ರಿಂದ20 ನಿಮಿಷಗಳ ನಂತರ, ಅವರು ನನ್ನ ಮೊಣಕಾಲಿಗೆ ಲೋಹದ ವಸ್ತುವಿನಿಂದ ಹೊಡೆಯಲು ಪ್ರಾರಂಭಿಸಿದರು. “ಸರಿ,ಇದುಅವರ ಪ್ರಯೋಗದ ಭಾಗವಿರಬೇಕು” ಎಂದುಕೊಂಡು ನಾನು ಅಲ್ಲಿಯೇ ಕುಳಿತೆ. ನಂತರ ಅವರು ಬಹಳ ನೋವು ಕೊಡುವ ಭಾಗವಾದ ನನ್ನ ಹಿಮ್ಮಡಿಯ ಮೇಲಿನ ಮೂಳೆಯನ್ನು ಹೊಡೆಯಲು ಪ್ರಾರಂಭಿಸಿದರು. “ಸರಿ, ಇದೂ ಅವರ ಪ್ರಯೋಗ.” ಎಂದೇ ನಾನು ಯೋಚಿಸಿದೆ, ಆದರೆ ಇದರಿಂದಾಗುತ್ತಿದ್ದ ನೋವು ತೀವ್ರವಾಗಿತ್ತು.

ನಾನು ನಿಧಾನವಾಗಿ ಕಣ್ಣು ತೆರೆದೆ. ಅವರೆಲ್ಲರೂ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. “ನಾನು ಏನಾದರೂ ತಪ್ಪು ಮಾಡಿದೆನೆ?” ಎಂದು ಕೇಳಿದೆ. ಅವರು “ನಮ್ಮ ಉಪಕರಣಗಳ ಪ್ರಕಾರ, ನೀವು ಸತ್ತಿದ್ದೀರಿ.’ ಎಂದರು. ನಾನು “ಇದೊಂದು ಒಳ್ಳೆಯ ಡಯಾಗ್ನಾಸಿಸ್” ಎಂದೆ. ನಂತರ ಅವರು, “ಒಂದೋ, ನೀವು ಸತ್ತಿರುವಿರಿ ಅಥವಾ ನಿಮ್ಮ ಮೆದುಳು ನಿಷ್ಕ್ರಿಯವಾಗಿದೆ.” ಎಂದರು. ನಾನು, “ಅದು ತುಂಬಾ ಅವಮಾನಕರ. ನಾನು ಮೊದಲ ಡಯಾಗ್ನಾಸಿಸ್-ಅನ್ನೇ ಒಪ್ಪುತ್ತೇನೆ. ನಾನು ಸತ್ತಿದ್ದೇನೆ ಎಂದು ನೀವು ನನಗೆ ಪ್ರಮಾಣಪತ್ರವನ್ನು ನೀಡಿದರೆ, ಅದನ್ನು ಒಪ್ಪಿ ಬದುಕಬಲ್ಲೆ. ಆದರೆ ನನ್ನ ಮೆದುಳು ನಿಷ್ಕ್ರಿಯವಾಗಿದೆ ಎನ್ನುವುದು ಒಳ್ಳೆಯ ವಿಷಯವಲ್ಲ.” ಎಂದು ಹೇಳಿದೆ.

ನಾನು ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ಮನುಷ್ಯರು ಸೃಷ್ಟಿಸಿರುವ ಎಲ್ಲಾ ಉಪಕರಣಗಳು ಮಾನವ ಜೀವವ್ಯವಸ್ಥೆಗಿಂತ ಕಡಿಮೆ ಗುಣಮಟ್ಟದ ಸಾಧನಗಳಾಗಿವೆ. ದೂರವಾಣಿಯು, ನಾವು ಆಡುವ ಮಾತನ್ನು ಜನರಿಗೆ ಸಾಧ್ಯವಾಗುವುದಕ್ಕಿಂತ ಹೆಚ್ಚು ದೂರಕ್ಕೆ ರವಾನಿಸಬಹುದು. ಸೈಕಲ್ ನಮಗೆ ಸಾಧ್ಯವಾಗುವುದಕ್ಕಿಂತ ಹೆಚ್ಚು ವೇಗವಾಗಿ ಹೋಗಬಹುದು; ಬೈಕ್‌ಗೆ ಇನ್ನೂ ವೇಗವಾಗಿ ಹೋಗಲು ಸಾಧ್ಯವಾಗಬಹುದು; ವಿಮಾನವು ಹಾರಬಲ್ಲದು. ಒಂದು ‘ನಿರ್ದಿಷ್ಟ ಕ್ರಿಯೆಯ’ ವಿಷಯದಲ್ಲಿ, ಅವು ನಮಗಿಂತ ಉತ್ತಮವಾಗಿರಬಹುದು. ಆದರೆ ಪರಿಷ್ಕರಣೆಯ ವಿಷಯದಲ್ಲಿ ಅವೆಲ್ಲವೂ ಕಡಿಮೆ ಪರಿಷ್ಕೃತ ಸಾಧನಗಳಾಗಿವೆ.

ಅವು ಮನುಷ್ಯರಿಗಿಂತ ಹೆಚ್ಚು ಪರಿಷ್ಕೃತವಾಗಿರಲು ಸಾಧ್ಯವಿಲ್ಲ, ಏಕೆಂದರೆ ನಮಗಿಂತ ಹೆಚ್ಚು ಪರಿಷ್ಕೃತವಾದದ್ದನ್ನು ನಮಗೆ ಸೃಷ್ಟಿಸಲು ಸಾಧ್ಯವಿಲ್ಲ. ಆದ್ದರಿಂದ, ಮಾಪಕ ಸಾಧನಗಳ ಬಳಕೆಯು ಸೀಮಿತವಾಗಿದೆ. ಮೆದುಳನ್ನು ನೀವು ಸುಲಭವಾಗಿ ಮೋಸಗೊಳಿಸಬಹುದು- ಇದನ್ನು ಮಾಡಲು ಯೋಗದಲ್ಲಿ ಹಲವು ತಂತ್ರಗಳಿವೆ. ವಾಸನೆಯು ಧ್ವನಿಯಾಗುವಂತೆ, ಮತ್ತು ಧ್ವನಿಯ ಇನ್ನೇನೋ ಆಗುವಂತೆ ನೀವು ಮನಸ್ಸನ್ನು ಹೇಗೆ ಮೋಸಗೊಳಿಸಬಹುದು ಎಂಬುದರ ಕುರಿತು ಒಬ್ಬರು ನನ್ನೊಂದಿಗೆ ಮಾತನಾಡುತ್ತಿದ್ದರು. ಯಾವುದೇ ವೈಜ್ಞಾನಿಕ ಗ್ಯಾಜೆಟ್‌ಗಳಿಲ್ಲದೆಯೂ, ಮನುಷ್ಯರ ಮನಸ್ಸನ್ನು ಮೋಸಗೊಳಿಸಲು ಹಲವು ಮಾರ್ಗಗಳಿವೆ.

ಪ್ರಪಂಚದ ಮಾಂತ್ರಿಕರು ಈ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದಾರೆ. ನಿಮಗೆ ಏನಾಗುತ್ತಿದೆ ಎಂದು ತಿಳಿಯದಂತೆ ಅವರು ನಿಮ್ಮ ಜೇಬಿನಿಂದ ವಸ್ತುಗಳನ್ನು ಎಗರಿಸಬಹುದು. ಅದಲ್ಲದೆ, ಮೂಲಭೂತ ಪರಿಷ್ಕರಣೆಯ ವಿಷಯದಲ್ಲಿ, ಮಾನವ ಜೀವವ್ಯವಸ್ಥೆಗಿಂತ ಪರಿಷ್ಕೃತವಾದುದೇನೂ ಇಲ್ಲ. ಇದೊಂದು ಅದ್ಭುತ ಗ್ಯಾಜೆಟ್, ಮತ್ತು ನೀವು ಪ್ರಪಂಚವನ್ನು ಅನುಭವಿಸುವ ಏಕೈಕ ಮಾರ್ಗವಾಗಿದೆ.

ನೀವು ಪ್ರಪಂಚವನ್ನು ಅನುಭವಿಸುವವಿಧಾನ ಯಾವುದು?

ಈಗ ನೀವು ನಿಮ್ಮ ಸುತ್ತಲಿನಪ್ರಪಂಚವನ್ನು ಹೇಗೆ ಅನುಭವಿಸುತ್ತೀರಿ ಎಂದು ನೋಡೋಣ. ನೀವೆಲ್ಲರೂ ನನ್ನನ್ನು ನೋಡುತ್ತಿದ್ದೀರಿ. ನಾನು ಎಲ್ಲಿದ್ದೇನೆ ಎಂದು ತೋರಿಸಬೇಕಾದರೆ, ನೀವು ನನ್ನ ಕಡೆಗೆ ಕೈ ಮಾಡುತ್ತೀರಿ. ಆದರೆ ಅದು ಸಂಪೂರ್ಣವಾಗಿ ತಪ್ಪು. ನನ್ನ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ, ನಿಮ್ಮ ರೆಟಿನಾದಲ್ಲಿ ತಲೆಕೆಳಗಾದ ಚಿತ್ರವನ್ನು ಸೃಷ್ಟಿಸುತ್ತದೆ- ಇದು ನಿಮಗೆ ತಿಳಿದಿದ್ದೇ. ನೀವು ನನ್ನನ್ನು ನಿಮ್ಮೊಳಗೆ ನೋಡುತ್ತೀರಿ. ನೀವು ನನ್ನನ್ನು ನಿಮ್ಮೊಳಗೆ ಕೇಳುತ್ತೀರಿ. ನೀವು ಪ್ರಪಂಚದಲ್ಲಿ ಏನೇ ನೋಡಿದ್ದರೂ, ಅದನ್ನು ನಿಮ್ಮೊಳಗೆ ನೋಡಿದ್ದೀರಿ. ನಿಮಗಾದ ಎಲ್ಲ ಅನುಭವವವು ನಿಮ್ಮೊಳಗೆ ಮಾತ್ರ ಆಗಿರುವುದು.

ಯಾರಾದರೂ ನಿಮ್ಮ ಕೈಯನ್ನು ಮುಟ್ಟಿದರೆ, ನಿಮಗೆ ಅವರ ಕೈಯ ಸ್ಪರ್ಶದ ಅನುಭವವಾಗುತ್ತಿದೆಯೆಂದು ಭಾವಿಸುತ್ತೀರಿ, ಆದರೆ ವಾಸ್ತವವಾಗಿ, ನಿಮ್ಮ ಕೈಯಿನ ಸಂವೇದನೆಗಳನ್ನು ಮಾತ್ರ ನೀವು ಅನುಭವಿಸುತ್ತೀರಿ. ಉದಾಹರಣೆಗೆ ಯಾರಾದರೂ ನಿಮ್ಮ ಕೈಯನ್ನು ಐದು ಬಾರಿ ಸ್ಪರ್ಶಿಸುವಂತೆ ಮಾಡಿ. ನಂತರ, ಯಾರೂ ನಿಮ್ಮನ್ನು ಮುಟ್ಟದೆ, ಆ ವ್ಯಕ್ತಿಯು ನಿಮ್ಮೊಂದಿಗೆ ಇಲ್ಲದೆ, ನೀವು ನಿಮ್ಮೊಳಗೆ ಅದೇ ಸಂವೇದನೆಯನ್ನು ರಚಿಸಬಹುದು ಎಂದು ನೀವು ಗಮನಿಸುತ್ತೀರಿ. ನೀವು ಬಾಹ್ಯ ಪ್ರಚೋದಕಗಳೊಂದಿಗೆ ಸಂವೇದನೆಗಳನ್ನು ರಚಿಸಬಹುದು, ಅಥವಾ ನೀವು ಆಂತರಿಕವಾಗಿ ನಿಮಗೆ ಬೇಕಾದುದನ್ನು ಸೃಷ್ಟಿಸಬಹುದು.

ಸ್ವಲ್ಪ ಮಟ್ಟಿಗೆ, ಎಲ್ಲರೂ ಬಾಹ್ಯ ಪ್ರಚೋದನೆಗಳಿಲ್ಲದೆ ವಿವಿಧ ಅನುಭವಗಳನ್ನು ಯಾವಾಗಲೂ ಹಲವಾರು ರೀತಿಯಲ್ಲಿ ಸೃಷ್ಟಿಸುತ್ತಿದ್ದಾರೆ. ಅದು ನಿಯಂತ್ರಣ ತಪ್ಪಿದಾಗ, ನಾವು ಇದನ್ನು ಮಾನಸಿಕ ಸಮಸ್ಯೆ ಅಥವಾ ಮಾನಸಿಕ ಕಾಯಿಲೆ ಎಂದು ಪರಿಗಣಿಸುತ್ತೇವೆ. ಆದರೆ ಎಲ್ಲರೂ ಇದನ್ನು ಸ್ವಲ್ಪ ಮಟ್ಟಿಗೆ ಮಾಡುತ್ತಿದ್ದಾರೆ. ನೀವು ಕನಸು ಕಾಣುತ್ತಿದ್ದಾಗ, ಅದು ವಾಸ್ತವದಂತೆಯೇ ನೈಜವಾಗಿರುತ್ತದೆ. ಕೆಲ ವರ್ಷಗಳ ಹಿಂದೆ, ಒಂದು ದಿನ, ನಾನು ಈಶ ಹೋಮ್ ಶಾಲೆಗೆ ಹೋದಾಗ, ಒಬ್ಬ ಹುಡುಗ ನನ್ನ ಬಳಿಗೆ ಬಂದು, “ಸದ್ಗುರುಗಳೇ, ಜೀವನ ನಿಜವೇ ಅಥವಾ ಕನಸೇ?” ಎಂದು ಕೇಳಿದನು. ನಾನು ಅವನನ್ನು ನೋಡಿದೆ- ಆತ ಎಂಟು ವರ್ಷದ ಹುಡುಗ, ಆದ್ದರಿಂದ ನೀವು ಸತ್ಯವನ್ನು ಹೇಳಲೇಬೇಕು- “ಜೀವನವು ಒಂದು ಕನಸು, ಆದರೆ ಅದು ನಿಜವಾದ ಕನಸು.” ಅದೊಂದು ವಾಸ್ತವ. ಈಗ ಅದು ನಿಮ್ಮೊಳಗೆ ಆಗುತ್ತಿರುವ ರೀತಿ, ಜೀವನವು ಒಂದು ಕನಸು, ಆದರೆ ಕನಸು ನಿಮ್ಮ ಅನುಭವದಲ್ಲಿ ನಿಜವಾಗಿದೆ. ಆದರೆ ನೀವು ಈ ಕನಸನ್ನು ನಿಮಗೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳಬಹುದು.

ನಾನು ನಿಮಗೊಂದು ಜೋಕ್ ಹೇಳಲೇ?
ಒಬ್ಬ ಮಹಿಳೆಗೆ ರಾತ್ರಿ ನಿದ್ದೆಯಲ್ಲೊಂದು ಕನಸು ಬಿತ್ತು. ಆ ಕನಸಿನಲ್ಲಿ ಅವಳು ಒಬ್ಬ ಸುರಸುಂದರಾಂಗ ಅವಳನ್ನೇ ಎವೆಯಿಕ್ಕದೆ ನೋಡುತ್ತಿರುವುದನ್ನು ಕಂಡಳು. ಆತ ಅವಳ ಹತ್ತಿರಕ್ಕೆ ಬರಲು ಆರಂಭಿಸಿದನು. ಅವನ ಉಸಿರಾಟ ಕೇಳಿಸುವಷ್ಟು ಸನಿಹ ಬಂದನು. ಅವಳು ನಡುಗಿದಳು- ಭಯದಿಂದಲ್ಲ…

ನಂತರ ಅವಳು ಅವನನ್ನು ಕೇಳಿದಳು, “ನೀನು ನನಗೆ ಏನು ಮಾಡುತ್ತೀಯ?”
ಆತ ಹೇಳಿದ, “ಇದು ನಿನ್ನ ಕನಸು!” 

ಇದು ನಿಮ್ಮ ಕನಸು- ನಿಮಗೆ ಬೇಕಿರುವ ಹಾಗೆ ನೀವು ಕನಸು ಕಾಣಬಹುದು. ನಾವು ಇದನ್ನು ನಮಗಾಗಿ ಮತ್ತು ಪ್ರಪಂಚದಲ್ಲಿರುವ ಪ್ರತಿಯೊಬ್ಬರಿಗೂ ಅದ್ಭುತ ಕನಸಾಗಿ ಮಾಡಬಹುದು. ನಮ್ಮ ಕನಸುಗಳನ್ನು ವರ್ಧಿಸಲು ವಿಜ್ಞಾನ ಮತ್ತು ತಂತ್ರಜ್ಞಾನವು ಅದ್ಭುತವಾದ ಕೆಲಸಗಳನ್ನು ಮಾಡಿದೆ, ಆದರೆ ವಿಜ್ಞಾನಿಗಳು ಧ್ಯಾನ ಮಾಡಬೇಕೆಂದು ನಾನು ಬಯಸುತ್ತೇನೆ.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ | Prerane | ನಿಂದಕರ ಕಡೆಗಣಿಸೋಣ, ನಿಜ ಬದುಕ ಬದುಕೋಣ

Exit mobile version