Site icon Vistara News

Prerane | ಸಂಸಾರವೆಂಬುದೊಂದು ಕಾಲಿಗೆ ಕಟ್ಟಿದ ಗುಂಡು, ಕುತ್ತಿಗೆಗೆ ಕಟ್ಟಿದ ಬೆಂಡು!

spirituality prerane

ಶ್ರೀ ಕೈವಲ್ಯಾನಂದ ಸರಸ್ವತೀ
ಚಾಲಾಯೆ ಚಾಲಯೆ ಈ ಸಂಸಾರಮೆ ನಾಕು ಬರುವಾಯೆ|
ನಲುಗುರಿಲೋ ಬದುಕು ನಗುಬಾಲಟಲಾಯೆ |
ಫಲಮುಲೇಕ ಪೊಯ್ಯಿ ಪಲ್ಲಿ ಚಾಲಾಯೆ ||ಚಾ||
ಸುಖಮನೇದಿನಾಕು ಕರುವಾಯೆ|
ಇಕ ಏದಿನೇರ್ಚಿನ ಫಲಮು ಲೇದಾಯೆ|
ಒಕದಾನ್ನಿ ಚೇಯ ಬೋತೆ ಮರೊಕಟಾಯೆ|
ಒಕರಿ ಮಾಟ ಒಕರಿಕಿ ಸರಿಪಡದಾಯೆ ||ಚಾ||
ಮಾಟ ವಿನನಿ ಕೊಡುಕು ಶೂಲಮಾಯೆ|
ಚೂಟಿ ತೆಲಿಯನಿ ಭಾರ್ಯ (ಭರ‍್ತ) ತೋಡಾಯೆ|
ಇಂಟಿಲೋನಿ ದೊಂಗಲ ಚಾಟು ಜೋರಾಯೆ|
ಇಂಟಿಲೋನಿ ಸೊಮ್ಮುಲನ್ನಿ ಪಾಡಾಯೆ ||ಚಾ||
ತುಂಟರಿ ಗುಣಮುಲು ವಿಡನಾಯೆ| ಪಂಟ ಪಂಡೇ ಚೇನು ಬೀಡಾಯೇ|
ಇಂಟಿ ದೇವುಡು ಭಗವತ್ಪಾದುಡು ಮಂಟಲೊಪಡಿ ಮರಣಿಂಚನಾಯೆ ||ಚಾ||

ಇದರ ಅರ್ಥ ಹೀಗಿದೆ; ಸಾಕಾಯಿತು ಈ ಸಂಸಾರ, ಭಾರವಾಯಿತು. ನಾಲ್ಕು ಜನ ನಗುವಂತಾಯಿತು. ಯಾವ ಫಲವೂ ಇಲ್ಲದೆ ಹಳ್ಳಿಯೇ ಸಾಕಾಯಿತು. ಸುಖವೆಂಬುವುದು ಇಲ್ಲವಾಯಿತು. ಇನ್ನು ಏನು ಕಲಿತರೂ, ಏನು ಮಾಡಿದರೂ ಪ್ರಯೋಜನವಿಲ್ಲವೆನಿಸುತ್ತದೆ. ಒಂದು ಮಾಡಲೋದರೆ ಮತ್ತೊಂದಾಯಿತು. ಒಬ್ಬರ ಮಾತು ಇನ್ನೊಬ್ಬರಿಗೆ ಸರಿಯಾಗಲಿಲ್ಲ.ಮಾತು ಕೇಳದ ಮಗ ಶೂಲವಾದ. ಸೂಕ್ಷ್ಮತೆಯಿಲ್ಲದ ಹೆಂಡತಿ (ಗಂಡ) ಜೊತೆಯಾದಳು/ನು. ಮನೆಯ ಕಳ್ಳರಿಂದ ಮನೆಯಲ್ಲಿದ್ದ ಆಭರಣಗಳು ಹಾಳಾದವು. ಕೆಟ್ಟ ಚಾಳಿ ಯಾವುದೂ ಬಿಡಲಿಲ್ಲ. ಬೆಳೆ ಬೆಳೆಯಬೇಕಾದ ಹೊಲ ಬೀಳಾಯಿತು. ಕೊನೆಗೆ ದುಃಖ ತಪ್ತ ಮನಸ್ಸಿಗೆ ಮನೆದೇವರು ಸತ್ತಂತಾಯಿತು.

ನಮ್ಮ ಜೀವನವನ್ನು ನಾವು ಗಮನಿಸಿದರೆ ಇದೇ ಪರಿಸ್ಥಿತಿ. ಗಮನಿಸಿ ವೈರಾಗ್ಯವಂತರಾಗಬೇಕು. ಬಸವಣ್ಣನವರು ಹೇಳುವಂತೆ:
ಸಂಸಾರವೆಂಬುದೊಂದು ಶರದಿ ಅನ್ನಿಸಬೇಕು,
ಕಾಲಿಗೆ ಕಟ್ಟಿದ ಗುಂಡು, ಕುತ್ತಿಗೆಗೆ ಕಟ್ಟಿದ ಬೆಂಡು,
ತೇಲಲು ಬಿಡದು ಗುಂಡು, ಮುಳುಗಲು ಬಿಡದು ಬೆಂಡು,
ಇಂತಹ ಸಂಸಾರ ಶರದಿಯ ದಾಟಿಸೋ ಕೂಡಲ ಸಂಗಮ ದೇವ

ಇದು ನಮ್ಮ ನಿಮ್ಮ ಪ್ರಾರ್ಥನೆಯಾಗಬೇಕು. ಈ ಪ್ರಾರ್ಥನೆಯೇ ಮನುಷ್ಯ ಜೀವನದಲ್ಲಿ ಮೂಡಬೇಕಾದ ನಿಜವಾದ ಹಸಿವು-ದಾಹ. ಈ ದಾಹ ಪ್ರಾರಂಭವಾದಲ್ಲಿ ಜನ್ಮ ಸಾರ್ಥಕ. ಈ ದಾಹ ಎಷ್ಟರಮಟ್ಟಿಗೆ ಇರಬೇಕೆಂದರೆ “ತುಜೀಕಾರಣ್ ದೇಹ ಮಜ ಪಡಾವʼʼ (ನಿನಗಾಗಿ ನನ್ನ ದೇಹವು ಪೃಥ್ವಿ ಪಾಲಾಗಲಿ) – ಎಂದ ಸಮರ್ಥ ರಾಮ ದಾಸರಂತಿರಬೇಕು.

ನಾನಾರೆಂಬುದು ಪ್ರಾರಂಭದಲ್ಲಿ ಒಂದು ಪ್ರಶ್ನೆ. ನಿಧಾನವಾಗಿ ಅದು ಮುಮುಕ್ಷುವಿನ ಇಡೀ ಶರೀರ, ಮನಸ್ಸು, ಬುದ್ಧಿಗಳೆಲ್ಲವನ್ನೂ ವ್ಯಾಪಿಸಿಕೊಂಡು ಮುಮುಕ್ಷುವಿನ ಪೂರ್ಣ ಅಸ್ಥಿತ್ವವೇ ಆ ದಾಹದಿಂದ ತುಂಬಿಕೊಳ್ಳುತ್ತದೆ. ನಾನಾರೆಂಬ ಪ್ರಶ್ನೆಯು ಶಬ್ದಕ್ಕೆ ಅತೀತವಾಗುತ್ತದೆ. ಮುಮುಕ್ಷುವಿನ ಇಡೀ ಅಸ್ಥಿತ್ವವು ಪ್ರಶ್ನೆಯಾಗಿ ಪರಿವರ್ತ ನೆಗೊಳ್ಳುತ್ತದೆ. ಆ ಪ್ರಶ್ನೆ ಮಾನಸಿಕ ವ್ಯಾಯಾಮವಾಗದೆ, ಅದು ಅಸ್ಥಿತ್ವದ ಅನುಭವವಾಗುತ್ತದೆ. ಪ್ರಶ್ನೆಯು ಮಾಯವಾಗುತ್ತದೆ. ಆದರೆ ಸಮಾಧಾನ ಸಿಗುವುದಿಲ್ಲ. ಮುಮುಕ್ಷುವೇ ಸಮಾಧಾನವಾಗಿ ಉಳಿಯುತ್ತಾನೆ.

ಶಾಬ್ಧಿಕ ಸಮಾಧಾನ ಸಿಗುವುದಿಲ್ಲ. ಮುಮುಕ್ಷುವಿಗೆ ತಾನಾರೆಂಬುದು ತಿಳಿದಿದೆ. ಆದರೆ, ಸಮಾಧಾನವನ್ನು ಶಾಬ್ಧಿಕವಾಗಿ ಹೇಳಲು, ತಾನು ಶಬ್ಧಗಳಿಗೆ ನಿಲುಕದವನಾಗಿ ಬಹಳ ದೂರದಲ್ಲಿ ಉಳಿದಿರುತ್ತಾನೆ. ಮುಮುಕ್ಷುವಿಗೆ ತನ್ನ ಇರುವಿಕೆಯ ರುಚಿ ಗೊತ್ತಿದೆ. ತನ್ನ ಇರುವಿಕೆಯನ್ನು ನೋಡುತ್ತಿದ್ದಾನೆ. ತನ್ನ ಇರುವಿಕೆಯ ಸುಗಂಧದಿಂದ ತುಂಬಿಂದ್ದಾನೆ. ಆದರೆ ಶಬ್ಧಗಳಿಂದ ಏನನ್ನೂ ಹೇಳಲಾಗುತ್ತಿಲ್ಲ. ಮುಮುಕ್ಷುವು ತನ್ನನ್ನು ತಾನು ಅರಿತಾಗ-ತಾನೇತಾನಾಗಿ ಉಳಿದಾಗ ಪ್ರಶ್ನೆಯ ಬಗ್ಗೆ ಒಮ್ಮೆ ನಗುತ್ತಾನೆ. ಈ ಹಂತದಲ್ಲಿ ತಾನೇ ತಾನಾಗಿ ಇರುತ್ತಾನೆ, ಅದ್ಭುತವಾದ ಆನಂದವೇ ಇರುತ್ತದೆ. ಆದರೆ ಪ್ರಶ್ನೆಗೆ ಶಬ್ದದಿಂದ ಸಮಾಧಾನ ಸಿಗುವುದಿಲ್ಲ.

ಪ್ರಶ್ನೆ-ಸಮಾಧಾನದ ವಿಷಯವಲ್ಲ. ಪಡೆದ ಆಳವಾದ ಸಂತೃಪ್ತಿಯನ್ನು ವಿವರಿಸಲು ಸಾಧ್ಯವಿಲ್ಲ. ಪ್ರಶ್ನೆಯೇ ಇಲ್ಲ. ಪ್ರಶ್ನೆಗಳೇ ಮಾಯವಾಗಿದೆ. ಕೇವಲ ತಾನೇ ಉಳಿದಿದ್ದಾನೆ. ತನಗೆ ತಾನು ಬೆಳಕಾಗಿ, ಪ್ರಕಾಶಮಯವಾಗಿ, ಆಶ್ಚರ್ಯಕರವಾಗಿ, ಶಬ್ಧಗಳಿಂದ ಮತ್ತೊಬ್ಬರಿಗೆ ತಿಳಿಸಲಾಗದಂತಹ ಸ್ಥಿತಿಯೇ ಉಳಿದಿದೆ.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನು ಓದಿ | Prerane | ಮೇಲ್ಬೇರು, ಕೆಳಕೊಂಬೆ-ಈ ವೃಕ್ಷವಾದರೂ ಯಾವುದು?

Exit mobile version