Site icon Vistara News

Prerane | ಸ್ಫೂರ್ತಿಯ ಮಾತುಗಳಿಂದ ಕಾರ್ಯೋತ್ಸಾಹ

Prerane inspiration

ಗಣೇಶ ಭಟ್ಟ
ಒಬ್ಬ ರಾಜನಲ್ಲಿ ವಜ್ರಜಂಘ ಎನ್ನುವ ಹೆಸರಿನ ಪರಾಕ್ರಮಶಾಲಿಯಾದ ಅನೆ ಇತ್ತು. ರಾಜನಿಗೆ ಅತ್ಯಂತ ಪ್ರೀತಿಯ ಆನೆಯಾದ ವಜ್ರಜಂಘದ ಸಹಾಯದಿಂದ, ರಾಜನು ಅದರ ಮೇಲೆ ಕುಳಿತು ಅನೇಕ ಯುದ್ಧಗಳನ್ನು ಗೆದ್ದಿದ್ದ. ಯುದ್ಧದಲ್ಲಿ ರಾಜನ ಇಚ್ಛಾನುವರ್ತಿಯಾಗಿ ವರ್ತಿಸಿ ಶತ್ರು ಸೈನಿಕರನ್ನು ರಾಜನ ಜೊತೆಯಲ್ಲಿ ತಾನೂ ದಾಳಿಮಾಡುತಿತ್ತು. ಆದ್ದರಿಂದ ರಾಜನಿಗೆ ವಜ್ರಜಂಘ ಆನೆಯ ಕುರಿತು ಅತ್ಯಂತ ಹೆಮ್ಮೆಯಿತ್ತು.

ವಜ್ರಜಂಘನಿಗೆ ವಯಸ್ಸಾಗಿತ್ತು, ಅಲ್ಲದೇ ಯುದ್ಧದಲ್ಲಿ ಅದಕ್ಕೆ ಗಾಯವೂ ಆಗಿತ್ತು. ರಾಜನಿಗೆ ಅನ್ನಿಸಿತು, ವಜ್ರಜಂಘನಿಗೆ ವಿಶ್ರಾಂತಿ ಕೊಡಬೇಕೆಂದು ರಾಜನಿಗೆ ಅನ್ನಿಸಿತು. ವಜ್ರಜಂಘನ ಸ್ಥಾನದಲ್ಲಿ ಚಿಕ್ಕ ವಯಸ್ಸಿನ ಆನೆಯನ್ನು ಅಣಿಗೊಳಿಸ ಲಾಯಿತು. ಸರಿಯಾದ ದೇಖರಿಕೆಯಿಲ್ಲದೆ ವಜ್ರಜಂಘ ಆನೆ ವಯಸ್ಸಾದಂತೆ, ದುರ್ಬಲವಾದಂತೆ ತೋರುತ್ತಿತ್ತು. ಒಟ್ಟಿನಲ್ಲಿ ವಜ್ರಜಂಘ ಆನೆ ಮಂಕಾಯಿತು.

ಒಮ್ಮೆ ಗಜಶಾಲೆಯಲ್ಲಿಯಲ್ಲಿದ್ದ ವಜ್ರಜಂಘನ ಸಹಿತ ಎಲ್ಲಾ ಆನೆಗಳನ್ನು ಮಾವುತರು ಅರಮನೆಯ ಸಮೀಪದ ಕೊಳಕ್ಕೆ ಸ್ನಾನ-ವಿಹಾರಕ್ಕೊಸ್ಕರ ಒಯ್ದರು. ಕೆಸರಿನಿಂದ ಕೂಡಿದ ಆ ಕೊಳದಲ್ಲಿ ಅರಮನೆಯ ಆನೆಗಳು ಮೈದಣಿ ಯುವಂತೆ ಸಾಕಷ್ಟು ವಿಹರಿಸಿದವು. ಕೊಳದ ದಡದಲ್ಲಿ ನಿಂತಿದ್ದ ಮಾವುತರ ಸೂಚನೆಯಂತೆ ಆನೆಗಳು ಒಂದೊಂದಾಗಿ ದಡದತ್ತ ಬಂದವು. ಆದರೆ ವಜ್ರಜಂಘನ ಕಾಲು ಮಾತ್ರ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ವಜ್ರಜಂಘ ಆನೆ ಕೆಸರಿನಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿತು. ಅದರ ಜೊತೆಗಾರ ಆನೆಗಳೂ ಕೂಡ ಅದನ್ನು ನೀರಿನಿಂದ ಹೊರತರಲು ಪ್ರಯತ್ನಿಸಿ ಕೈಚೆಲ್ಲಿದವು.

ಮಾವುತರು ಮಾಡಿದ ಪ್ರಯತ್ನವೂ ಫಲಕೊಡಲಿಲ್ಲ. ವಜ್ರಜಂಘನ ಕಾಲು ಮಾತ್ರ ಕೆಸರಿನ ಆಳಕ್ಕೆ ಇಳಿಯುತ್ತಾನೇ ಇತ್ತು. ವಜ್ರಜಂಘ ಆನೆಯನ್ನು ಹೊರತರಲು ಮಾಡಿದ ಎಲ್ಲಾ ಪ್ರಯತ್ನಗಳೂ ವ್ಯರ್ಥವಾದವು. ತನ್ನ ಪ್ರೀತಿಯ ಆನೆ ಕೆಸರಿನಲ್ಲಿ ಸಿಲುಕಿದ ವಾರ್ತೆ ರಾಜನಿಗೂ ತಲುಪಿ,ರಾಜನೂ ಕೊಳದ ಸಮೀಪಕ್ಕೆ ಬಂದ. ರಾಜನು ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿ, ಸೈನಿಕನ ಕಿವಿಯಲ್ಲಿ ಏನೋ ಸೂಚನೆಯನ್ನು ಕೊಟ್ಟ.

ಅದರಂತೆ ಸೈನಿಕನು ಕ್ಷಣಮಾತ್ರದಲ್ಲಿ ಯುದ್ಧದ ಸನ್ನಿವೇಶವನ್ನು ಸಿದ್ಧಗೊಳಿಸಿದ. ಯುದ್ಧ ಪ್ರಾರಂಭದ ಸೂಚನೆಯಾಗಿ ಭೇರಿ, ನಗಾರಿ, ಶಂಖ, ಕಹಳೆವಾದ್ಯ ಮುಂತಾದವುಗಳನ್ನು ಸೈನಿಕರು ಜೋರಾಗಿ ಬಾರಿಸತೊಡಗಿದರು. ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದ ವಜ್ರಜಂಘ ಆನೆಗೆ ಆ ಧ್ವನಿಯಿಂದ ಇನ್ನಿಲ್ಲದ ಸ್ಫೂರ್ತಿ-ಹುಮ್ಮಸ್ಸು ಬಂತು. ಅದು ತನ್ನ ಮೈಯನ್ನು ಕೊಡವಿಕೊಂಡು ಕೆಸರಿನಿಂದ ಹೊರಬಂತು.

ಸ್ಫೂರ್ತಿಯ ಧ್ವನಿಗೆ, ಸ್ಫೂರ್ತಿಯ ಮಾತುಗಳಿಂದ, ಸ್ಫೂರ್ತಿಯ ಸನ್ನಿವೇಶಗಳಿಗೆ ಅಂತಹ ಶಕ್ತಿಯಿದೆ. ದುಃಖಸಾಗರದಲ್ಲಿ ಮುಳುಗಿದವನಿಗೆ ಸ್ಫೂರ್ತಿಯುಕ್ತವಾದ ಮಾತು ಹರಿಗೋಲಿನಂತೆ ಆಸರೆಯಗುವುದು. ಕಷ್ಟದಲ್ಲಿರುವವರಿಗೆ, ಸೋತವರಿಗೆ ಆ ಕಷ್ಟಗಳಿಂದ, ಸೋಲಿನಿಂದ ಪಾರಾಗುವ ಪ್ರೇರಣೆ ದೊರಕುವುದು. ಸ್ಫೂರ್ತಿಯ ಮಾತುಗಳನ್ನು ಕೇಳಿದಾಗ, ಅಂತಹ ದೃಶ್ಯಗಳನ್ನು ನೋಡಿದಾಗ ಮನೋಬಲವು ಹೆಚ್ಚುವುದು, ರೋಮಾಂಚಿತವಾಗುವುದು, ಅಂತಃಪ್ರೇರಣೆಯುಂಟಾಗುವುದು, ಮಾಡುವ ಕಾರ್ಯದಲ್ಲಿ ಕಾರ್ಯೋತ್ಸಾಹ ಉಂಟಾಗುವುದು. ಮನಸ್ಸಿಗೆ ಪ್ರೇರಣೆ-ಸ್ಫೂರ್ತಿ ನೀಡುವ ಮಾತುಗಳನ್ನೇ ಆಲಿಸೋಣ. ದೃಶ್ಯಗಳನ್ನೇ ವೀಕ್ಷಿಸೋಣ. ತನ್ಮೂಲಕ ಸಾಧನೆಗಳನ್ನು ಮೆರೆಯೋಣ.

– ಲೇಖಕರು ಸಂಸ್ಕೃತ ಉಪನ್ಯಾಸಕರು, ನೆಲ್ಲಿಕೇರಿ, ಕುಮಟಾ(ಉ.ಕ)

ಇದನ್ನೂ ಓದಿ |Prerane | ಸಂಸಾರವೆಂಬುದೊಂದು ಕಾಲಿಗೆ ಕಟ್ಟಿದ ಗುಂಡು, ಕುತ್ತಿಗೆಗೆ ಕಟ್ಟಿದ ಬೆಂಡು!

Exit mobile version