Site icon Vistara News

Prerane | ಫಲ ಮೂಲಾಶನಾಃ ದಾನ್ತಾಃ ಎಂಬ ಋಷಿ ವಾಕ್ಯದ ಅಂತರಾರ್ಥ

prerane hindu sages

ಸುಬ್ರಹ್ಮಣ್ಯ ಸೋಮಯಾಜಿ
ಪ್ರಾಚೀನ ಭಾರತದ ಋಷಿಗಳ ಬಗ್ಗೆ ಉಲ್ಲೇಖಿಸುವಾಗ, “ಫಲ ಮೂಲಾಶನಾಃ ದಾನ್ತಾಃ” ಎಂಬ ಮಾತಿದೆ. ಆ ಇಂದ್ರಿಯ ಸಂಯಮಿಗಳು ಕಾಡಿನಲ್ಲಿ ಸಿಗುವ ಹಣ್ಣು ಮತ್ತು ಗಡ್ಡೆ ಗಳನ್ನು ಆಹಾರವಾಗಿ ಬಳಸುತ್ತಿದ್ದರು ಎಂಬುದು ಮಾತಿನ ಸಾಮಾನ್ಯ ವ್ಯಾಖ್ಯಾನ.

ಆದರೆ ಋಷಿಗಳ ಮಾತನ್ನು ನಾವು ಸ್ಥೂಲ ಬುದ್ಧಿಯಿಂದ ವ್ಯಾಖ್ಯಾನ ಮಾಡುತ್ತೇವೆ. ಕಾರಣ ನಾವು ಅವರಂತೆ ಸ್ಥೂಲ, ಸೂಕ್ಷ್ಮ, ಪರಾ ಎಂಬ ಜೀವನದ ಮೂರೂ ಕ್ಷೇತ್ರಗಳನ್ನು ಮುಟ್ಟಿದವರಾಗಿಲ್ಲ. ಅವರ ಮಾತಿಗೆ ವ್ಯಾಖ್ಯಾನ ಮಾಡಲು ಅವರಂತೆಯೇ ಯೋಗದೃಷ್ಟಿ ಇರುವವರಿಗೆ ಮಾತ್ರ ಸಾಧ್ಯ. ಅಂತಹವರ ಮಾತೇ ನಿಜಕ್ಕೂ ಪ್ರಮಾಣವಾಗುತ್ತವೆ. ಮಹಾ ಯೋಗಿಗಳಾದ ಶ್ರೀರಂಗ ಮಹಾಗುರುಗಳ ವ್ಯಾಖ್ಯಾನವು ಹೀಗಿತ್ತು; “ಋಷಿಗಳು ಸೃಷ್ಟಿಯ ಮೂಲ ಮತ್ತು ಸೃಷ್ಟಿಯ ಫಲ ಇವೆರಡನ್ನೇ ಆಹಾರವಾಗಿಟ್ಟುಕೊಂಡು ಜೀವಿಸುತ್ತಿದ್ದರು”. ಎಂತಹ ಅದ್ಭುತವಾದ ವ್ಯಾಖ್ಯಾನ!

ಯಾವ ಚೈತನ್ಯದ ಮೂಲದಿಂದ ಸೃಷ್ಟಿ ಆರಂಭವಾಯಿತೋ ಅದರೆಡೆಗೆ ಅವರ ಲಕ್ಷ್ಯವಿತ್ತು, ಹಾಗೆಯೇ ಆ ಚೈತನ್ಯದ ವಿಕಾಸದ ಫಲ ಮತ್ತೆ ಆ ಚೈತನ್ಯದಲ್ಲೇ ಒಂದಾಗುವ ಮೋಕ್ಷ. ಇವೆರಡನ್ನೂ ಅರೆನಿಮಿಷವೂ ಮರೆಯದೇ ಅವರು ಜೀವನ ನಡೆಸುತ್ತಿದ್ದರಿಂದ ಅದು ಅವರ ಆಹಾರ. ಅವರ ಜೀವನದ ನಡೆ ಎಲ್ಲವೂ ಸೃಷ್ಟಿಯ ಈ ಸಹಜವಾದ ವೃತ್ತಕ್ಕೆ ಅನುಗುಣವಾಗಿಯೇ ಇರುತ್ತಿತ್ತು. ಒಂದು ವೃತ್ತದ ಅಂತ ವೃತ್ತಾಂತ- ಅದು ಹೊರಟ ಜಾಗಕ್ಕೆ ಮತ್ತೆ ಬಂದು ಸೇರಿದಾಗಲೇ ಆಗುವುದು. ಒಂದು ಬೀಜವು ಬೆಳೆಯುತ್ತಾ, ಕಾಂಡವಾಯಿತು, ಕೊಂಬೆ, ಎಲೆಗಳಾದವು, ಕಾಯಿ, ಹಣ್ಣಾಗಿ ಮತ್ತೆ ಬೀಜದಲ್ಲಿ ನಿಂತಾಗಲೇ ಅದರ ವೃತ್ತದ ಅಂತವಾಗುವುದು.

ಹಾಗೆಯೇ ಭಗವಂತ ಎಂಬ ಮಹಾಶಕ್ತಿಯಿಂದ ಹೊರಟು ತನ್ನ ವಿಕಾಸದ ಹಾದಿಯಲ್ಲೆಲ್ಲೂ ಅದನ್ನು ಮರೆಯದೇ ಕಡೆಯಲ್ಲಿ ಆ ಶಕ್ತಿಯಲ್ಲೇ ಒಂದಾಗಿ ಸೇರುವುದು ಮಾನವ ಜೀವನದ ಸಹಜವಾದ ವೃತ್ತಾಂತ ಎಂಬುದನ್ನು ತಮ್ಮ ತಪಸ್ಯೆಯಿಂದ ಈ ದೇಶದ ಮಹರ್ಷಿಗಳು ಕಂಡುಕೊಂಡ ಪರಮ ಸತ್ಯ. ಅಂತಹ ಜೀವನ ವೃಕ್ಷದ ಕೃಷಿ ಅದರ ಮೂಲ ಮತ್ತು ಫಲದ ಅರಿವಿಲ್ಲದೇ ಮಾಡುವುದಾದರೂ ಹೇಗೆ? ಅಂತಹ ತುಂಬು ಜೀವನವನ್ನು ನಡೆಸಿ ಅದಕ್ಕೆ ಬೇಕಾದ ಕೃಷಿ ವಿಧಾನವನ್ನು ತಮ್ಮ ತಪಸ್ಯೆಯಿಂದ ಕಂಡುಕೊಂಡು ಅದನ್ನು ಲೋಕಕ್ಕೆಲ್ಲಾ ಸಾರಿದ ಮಹಾಪುರುಷರ ನಾಡು ನಮ್ಮೀ ಭಾರತ ಭೂಮಿ.

ನಾವು ನಮ್ಮ ಎಲ್ಲ ಇಂದ್ರಿಯಗಳಿಂದ ಏನೇನನ್ನು ಒಳಗೆ ತೆಗೆದುಕೊಳ್ಳುತ್ತೆವೋ ಅದೆಲ್ಲವೂ ಒಂದು ದೃಷ್ಟಿಯಿಂದ ಆಹಾರವೇ ಆಗಿದೆ. ಬರಿಯ ಹೊಟ್ಟೆ ತುಂಬಿಸುವುದಷ್ಟೇ ಆದರೆ ಉಳಿದ ಪ್ರಾಣಿಗಳಿಗೂ ನಮಗೂ ಯಾವ ವ್ಯತ್ಯಾಸವೂ ಇಲ್ಲ. ನಮ್ಮ ಕಣ್ಣಿಂದ ನೋಡುವ ರೂಪ, ಕಿವಿಯಿಂದ ಕೇಳುವ ಶಬ್ದ, ಬಾಯಿಂದ ತೆಗೆದುಕೊಳ್ಳುವ ಅನ್ನ ಎಲ್ಲವೂ ಆಹಾರವೇ. ಅವೆಲ್ಲವೂ ನಮ್ಮ ಮನಸ್ಸನ್ನೂ ಬೆಳೆಸುತ್ತವೆ ಎಂಬುದನ್ನು ಮರೆಯಬಾರದು. ಮನಸ್ಸಿಗೆ ತನ್ನ ಜೀವನದ ಸಹಜವಾದ ಧ್ಯೇಯವಾದ ನೆಮ್ಮದಿ, ಆನಂದವನ್ನು ಅನುಭವಿಸುವುದಕ್ಕೆ ವ್ಯತಿರಿಕ್ತವಾದ ಆಹಾರವೆಲ್ಲವೂ ತ್ಯಾಜ್ಯ. ಮನಸ್ಸು ಜೀವನದ ಸದ್ವೃತ್ತವನ್ನು ಮರೆಯದೇ ಆ ದಿಕ್ಕಿನಲ್ಲಿ ಹೋಗುವಂತಾದರೆ ಅದಕ್ಕೆ ಸಹಕಾರಿಯಾದ ಆಹಾರವೆಲ್ಲವೂ ಪೂಜ್ಯ. ಇದು ಭಾರತೀಯ ಮಹರ್ಷಿಗಳ ನೋಟ.

ಇಂತಹ ಜೀವನ ದರ್ಶನವನ್ನು ಲೋಕಕ್ಕೆ ಕೊಟ್ಟ ಮಹರ್ಷಿಗಳ ಬಗ್ಗೆ ಬಂದ ಮಾತು “ಫಲಮೂಲಾಶನಾಃ ದಾನ್ತಾಃ” ಈ ಮಾತಿನ ಹಿಂದಿನ ಸತ್ಯಾರ್ಥದ ಶ್ರೀರಂಗಮಹಾಗುರುಗಳ ವ್ಯಾಖ್ಯಾನ ಎಷ್ಟು ಅರ್ಥಪೂರ್ಣವಲ್ಲವೇ?.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Prerane | ಆಧುನಿಕ ಕ್ಷೇತ್ರಗಳಲ್ಲಿ ಯೋಗಸೂತ್ರದ ಪಾಲನೆ

Exit mobile version