ಸ್ವಾಮಿ ಯೋಗೀಶ್ವರಾನಂದ
ಆ ರಾಜನಿಗೆ ಇಬ್ಬರು ಹೆಣ್ಣು ಮಕ್ಕಳು. ಮಕ್ಕಳನ್ನು ಹೆತ್ತ ರಾಣಿ ಹೆರಿಗೆ ಸಂದರ್ಭದಲ್ಲಿಯೇ ಸಾವನಪ್ಪಿದ್ದಳು. ಹೀಗಾಗಿ ರಾಜನೇ ಅಕ್ಕರೆಯಿಂದ ಇಬ್ಬರನ್ನು ಸಾಕಿ ಬೆಳೆಸಿದ್ದ. ಇಬ್ಬರಿಗೂ ರಾಜನೆಂದರೆ ಎಲ್ಲಿಲ್ಲದ ಪ್ರೀತಿ. ಆತ ಹೇಳಿದ ಒಂದೇ ಒಂದು ಮಾತನ್ನೂ ಮೀರುತ್ತಿರಲಿಲ್ಲ. ರಾಜನ ಗಮಕ್ಕೆ ತಾರದೆ ಅರಮನೆಯಿಂದ ಹೊರಗೆ ಕೂಡ ಕಾಲಿಡುತ್ತಿರಲಿಲ್ಲ. ಹೀಗೆಯೇ ಬೆಳೆದು ದೊಡ್ಡವರಾದ ರಾಜಕುಮಾರಿಯರು ಮದುವೆ ವಯಸ್ಸಿಗೆ ಬಂದಿದ್ದರು. ರಾಜ ಒಳ್ಳೆಯ ಕಡೆ ಸಂಬಂಧ ಹುಡುಕಿ ದೊಡ್ಡವಳಿಗೆ ಮದುವೆ ಮಾಡಿದ್ದ. ಆದರೆ ಸಣ್ಣವಳಿಗೆ ಎಷ್ಟು ಹುಡುಕಿದರೂ ಸೂಕ್ತ ವರನೇ ಸಿಕ್ಕಿರಲಿಲ್ಲ. ತಾನು ಅರ್ಹನನ್ನು ಹುಡುಕುವವರೆಗೂ ಕಿರಿಯ ಮಗಳು ಕಾಯುತ್ತಾಳೆ ಎಂಬ ವಿಶ್ವಾಸದಲ್ಲಿಯೇ ರಾಜನಿದ್ದ.
ಹೀಗಿರುವಾಗ ಕಿರಿಯ ರಾಜಕುಮಾರಿಗೆ ಅರಮನೆ ಕಾಯುವ ಸೈನಿಕನೊಂದಿಗೆ ಪ್ರೀತಿಯಾಯಿತು. ಇವರಿಬ್ಬರೂ ಆಗಾಗ ಕದ್ದು ಸೇರತೊಡಗಿದರು. ಇದು ಗೊತ್ತಾಗುತ್ತಿದ್ದಂತೆಯೇ ಅರಮನೆ ಸಿಬ್ಬಂದಿ ರಾಜನಿಗೆ ಮಾಹಿತಿ ನೀಡಿ, ಸೂಕ್ಷ್ಮವಾಗಿ ಪರಿಸ್ಥಿತಿ ವಿವರಿಸಿದರು. ಯಾರು ಏನೇ ಹೇಳಿದರೂ ರಾಜ ಕೇಳಿಸಿಕೊಳ್ಳಲೇ ಇಲ್ಲ. ‘ನನ್ನ ಹಿರಿಮಗಳು ನೋಡಿ, ಎಷ್ಟು ಚೆಂದವಾಗಿ ಸಂಸಾರ ಮಾಡುತ್ತಿದ್ದಾಳೆ. ಹಾಗೆಯೇ ಕಿರಿಮಗಳು ಕೂಡ. ಅವಳು ತಪ್ಪು ಮಾಡಲು ಸಾಧ್ಯವೇ ಇಲ್ಲ’ ಎಂದು ಹೇಳಿ ದೂರು ಹೇಳಿದವರ ಬಾಯಿ ಮುಚ್ಚಿಸುತ್ತಿದ್ದ. ದೂರು ಜಾಸ್ತಿಯಾದಾಗ ‘ನನ್ನ ಮಗಳ ಬಗ್ಗೆ ವಿನಾ ಕಾರಣ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಭಾವಿಸಿದ ರಾಜ ಇನ್ನು ಮುಂದೆ ಈ ಬಗ್ಗೆ ಮಾತನಾಡುವವರಿಗೆ ಹತ್ತು ಛಡಿಯೇಟು ನೀಡಬೇಕೆಂದು ಆದೇಶಿಸಿದ.
ಹೀಗಾಗಿ ರಾಜಕುಮಾರಿಯ ಚಲನವಲನವನ್ನು ಗಮನಿಸಿ ಯಾರೂ ರಾಜನಿಗೆ ಮಾಹಿತಿ ನೀಡಲು ಮುಂದಾಗಲೇ ಇಲ್ಲ. ಇದರಿಂದ ರಾಜಕುಮಾರಿ ಮತ್ತು ಸೈನಿಕರಿಗೆ ಮುಕ್ತವಾಗಿ ಬೆರೆಯಲು ಸಾಧ್ಯವಾಯಿತಲ್ಲದೆ, ಇವ್ವರಿಬ್ಬರ ನಡುವಿನ ಪ್ರೀತಿ ಬಲಗೊಳ್ಳುತ್ತಾ ಹೋಯಿತು.
ಒಬ್ಬರನ್ನು ಬಿಟ್ಟು ಒಬ್ಬರು ಬದುಕಿರಲು ಸಾಧ್ಯವೇ ಇಲ್ಲವೆನಿಸಿದಾಗ ಅರಮನೆ ತೊರೆದು ಇಬ್ಬರೂ ದೇಶಾಂತರ ಹೋದರು. ಸುದ್ದಿ ರಾಜನಿಗೂ ತಲುಪಿತು. ಆದರೂ ಒಪ್ಪಿಕೊಳ್ಳದೆ ಸತ್ಯವೇನೆಂದು ತಿಳಿಯುವ ಮನಸ್ಸು ಮಾಡಿ ಕಿರಿಯ ರಾಜಕುಮಾರಿಯ ಕೊಠಡಿಗೆ ಬಂದ. ಅಲ್ಲಿ, ರಾಜಕುಮಾರಿ ಕ್ಷಮೆಯಾಚಿಸಿ ಬರೆದಿಟ್ಟಿದ್ದ ಪತ್ರ ಬಿಟ್ಟರೆ ಬೇರೇನೂ ಇರಲಿಲ್ಲ. ಅದನ್ನು ಓದಿದ ರಾಜ ಹೃದಯಾಘಾತದಿಂದ ಸತ್ತುಹೋದ.
ಜೀವನದಲ್ಲಿ ಹೀಗೆಯೇ ಕೆಲವೊಮ್ಮೆ ನಾವು ನಿರೀಕ್ಷಿಸಿರದ ಘಟನೆಗಳು, ಬೆಳವಣಿಗೆಗಳು ಸಂಭವಿಸುತ್ತವೆ. ಅದನ್ನು ಒಪ್ಪಿಕೊಳ್ಳುವ ಶಕ್ತಿ ನಮಗಿರಬೇಕು. ಇಲ್ಲದಿದ್ದರೆ ಈ ಕಥೆಯ ರಾಜನಂತೆ ಅಘಾತಕ್ಕೊಳಗಾಗಬೇಕಾಗುತ್ತದೆ. ರಾಜಕುಮಾರಿಯ ನಡವಳಿಕೆ ಬಗ್ಗೆ ದೂರು ಬಂದಾಗ ಅದನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಿ ಪರಿಶೀಲಿಸಿದ್ದಲ್ಲಿ ಸತ್ಯ ಏನೆಂಬುದು ರಾಜನಿಗೆ ಮನವರಿಕೆಯಾಗಿರುತ್ತಿತ್ತು. ಮುಂದೆ ರಾಜನೇ ನಿಂತು ಅವರಿಬ್ಬರ ಮದುವೆ ಮಾಡಬಹುದಿತ್ತು. ಆದರೆ ರಾಜ ವಿವೇಚನೆ ತೋರಲಿಲ್ಲ. ಆಕೆ ಓಡಿಹೋಗಿದ್ದಾಳೆ ಎಂಬುದನ್ನು ಒಪ್ಪಿಕೊಳ್ಳಲಾಗದೇ ಸತ್ತು ಹೋದ.
ಜೀವನದಲ್ಲಿ ಯಶಸ್ವಿಯಾಗ ಬಯಸುವವರು ಈ ರೀತಿಯ ಘಟನೆಗಳನ್ನು ಎದುರಿಸಲು ಸಜ್ಜಾಗಿರಬೇಕಾಗುತ್ತದೆ. ಹೀಗೆ ಸಜ್ಜಾಗಿರಬೇಕಾದರೆ ಪ್ರತಿ ಕ್ಷಣವೂ ಪ್ರತಿ ಸಂದರ್ಭವನ್ನೂ ಮುಕ್ತಮನಸ್ಸಿನಿಂದ, ವಿವೇಚನೆಯಿಂದ ಗ್ರಹಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಬದಲಾಗುತ್ತಿರುವ ಪರಿಸ್ಥಿತಿ, ಸನ್ನಿವೇಶಗಳನ್ನು ಮುಂಚಿತವಾಗಿಯೇ ಮನಗಂಡು ಆ ಬದಲಾವಣೆಗೆ ಒಗ್ಗಿಕೊಳ್ಳಲು ಮನಸ್ಸು ಮತ್ತು ದೇಹವನ್ನು ಅಣಿಗೊಳಿಸಬೇಕು. ಇಲ್ಲದಿದ್ದರೆ ಆಗುವ ಅಘಾತದಿಂದ ಹೊರಬರಲು ಸಾಧ್ಯವೇ ಆಗದು.
ಜೀವನದಲ್ಲಿ ಎಲ್ಲವೂ ನಾವಂದುಕೊಂಡಹಾಗೆ ನಡೆಯಲು ಸಾಧ್ಯವೇ ಇಲ್ಲ. ಆದರೆ ನಾವು ಹೀಗೇ ಬದುಕಬೇಕೆಂದು ಗೆರೆ ಎಳೆದುಕೊಂಡು ಈ ನಿಟ್ಟಿನಲ್ಲಿ ಪ್ರಯತ್ನಿಸಬಹುದಷ್ಟೇ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡಾಗಲಷ್ಟೇ ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತವೆ. ಪ್ರತಿಯೊಂದನ್ನೂ ಸ್ವೀಕರಿಸುವ ಮನೋಭಾವವೂ ಬೆಳೆಯುತ್ತದೆ. ಬಂದದ್ದನ್ನೆಲ್ಲಾ ಒಪ್ಪಿಕೊಂಡು, ಮುನ್ನೆಡೆದಾಗಲಷ್ಟೇ ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ.
ಲೇಖಕರು ಸಂಗಮ ಆಶ್ರಮದ ಮುಖ್ಯಸ್ಥರು,
ಆಧ್ಯಾತ್ಮಿಕ ಪ್ರವಚನಕಾರರು
ಇದನ್ನೂ ಓದಿ | Prerane | ಯಾವುದೇ ಕಾರ್ಯವನ್ನು ಪೂರ್ಣ ಮನಸ್ಸಿಟ್ಟು ಮಾಡೋಣ