Site icon Vistara News

Prerane | ಎಣ್ಣೆ, ಬತ್ತಿ ಇಲ್ಲದೆ ಬೆಳಗುವ ದೀವಿಗೆ

Deepavali 2022

ಶ್ರೀ ಕೈವಲ್ಯಾನಂದ ಸರಸ್ವತೀ
ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಕಾರಣ ರಹಿತವಾದದ್ದು ಯಾವುದೂ ನಮಗೆ ಗೊತ್ತಿಲ್ಲ. ಪ್ರತಿಯೊಂದು ದೀವಿಗೆ ಎಣ್ಣೆ, ಬತ್ತಿಯಿಂದಲೇ ಉರಿಯುತ್ತದೆ. ಬೆಂಕಿ ಉರಿಯಲು, ಉರುವಲು, ಉರಿಸುವ ಸಾಮಗ್ರಿ ಬೇಕು. ಮನುಷ್ಯ ಓಡಾಡಲು ಆಹಾರ ಬೇಕು. ಆಹಾರಕ್ಕೆ ಉರುವಲು, ಕಾರಣ. ಕಾರಣ ಉಳ್ಳದ್ದಕ್ಕೆ ಅಂತ್ಯವೂ ಇದೆ.

ಆಹಾರದಿಂದ ನಾವು ಜೀವಿಸಿದ್ದೇವೆ. ಆಹಾರವಿಲ್ಲದಿದ್ದರೆ ಸಾಯುತ್ತೇವೆ. ಉಸಿರಾಟ ನಮ್ಮನ್ನು ಜೀವಂತವಾಗಿ ಮಾಡಿದೆ. ಉಸಿರಾಟವಿಲ್ಲದಿದ್ದರೆ ಸಾಯುತ್ತೇವೆ. ಸೂರ್ಯನಿಂದ ಜೀವಂತವಾಗಿರುವುದಾದರೆ, ಸೂರ್ಯನಿಲ್ಲದೆ ಸಾಯುತ್ತೇವೆ. ಕಾರಣವುಳ್ಳ ಪ್ರತಿಯೊಂದು ಸಾಯುತ್ತದೆ. ಕಾರಣವನ್ನು ನಾವು ಹಿಂತೆಗೆದುಕೊಳ್ಳಬಹುದು. ರೂಪವುಳ್ಳದು, ಕಾರಣವುಳ್ಳದ್ದು ಮಾಯವಾಗುತ್ತದೆ. ತಂದೆ ತಾಯಿಗಳನ್ನು ಕಾರಣವಾಗಿ ಹೊಂದಿರುವ ಶರೀರ, ಆಹಾರದಿಂದ ತಯಾರಾದ ಶರೀರ ಸಾಯುತ್ತದೆ. ಆಮ್ಲಜನಕದಿಂದ ಇರುವ ಶರೀರ ಆಮ್ಲಜನಕವಿಲ್ಲವಾಗಲು ಸಾಯುತ್ತದೆ.

ಆದರೆ ನಾವು ಪರೀಕ್ಷೆಮಾಡಿ ನೋಡಿದರೆ ಶರೀರವೇನಾದರೂ, ತಾನು ವಿಕಾರ ಹೊಂದದಿರುವುದೊಂದಿದೆ. ಶರೀರದಲ್ಲಿ ಅನಾರೋಗ್ಯವಿದ್ದಾಗ, ತನಗೆ ರೋಗದ ಸಂಬಂಧವಿಲ್ಲದಿರುವುದೊಂದಿದೆ. ನೀವು ದುಃಖದಲ್ಲಿದ್ದಾಗ, ದುಃಖವು ಸ್ಪರ್ಶ ಮಾಡದಿರುವುದಾವುದಾದರೂ ನಿಮ್ಮಲ್ಲಿದೆಯೆ ನೋಡಲು ಪ್ರಯತ್ನಮಾಡಿ. ನೀವು ಪರಾಜಯವನ್ನು ಹೊಂದಿ ಕೆಳಗೆ ಬಿದ್ದಿರುವಾಗ ಯಾರೋ ನಿಮ್ಮ ಎದೆಯ ಮೇಲೆ ಕುಳಿತಿರುತ್ತಾರೆ, ಆಗ ಕಣ್ಣುಗಳನ್ನು ಮುಚ್ಚಿ ನಿಜವಾಗಲೂ ನಿಮ್ಮ ಮೇಲೆ ಯಾರಾದರೂ ಕುಳಿತುಕೊಳ್ಳಲು ಸಾಧ್ಯವೇ ನೋಡಿ. ಆ ಎದೆ ನೀವೆ? ಬಿದ್ದಿರುವ ಶರೀರ ನೀವೆ? ಕೆಳಗೆ ಬಿದ್ದಿರುವ ಶರೀರ, ಎದೆ, ಎದೆಯಮೇಲೆ ಕುಳಿತಿರುವವನು ಇವೆಲ್ಲವನ್ನೂ ನೀವು ನೋಡುತ್ತಿಲ್ಲವೆ? ನೋಡುವವರೇ ನೀವು, ದೃಶ್ಯ ವಾದವುಗಳು ನೀವಲ್ಲವಲ್ಲವೆ? ಇದನ್ನು ನೀವು ಗಮನಿಸಿದರೆ ಜೀವನವು ಒಂದು ವಿನೋದ ಎನಿಸುತ್ತದೆ. ರೋಗಕ್ಕೆ ಸಂಬಂಧವಿಲ್ಲದ್ದರ ಸ್ವಲ್ಪ ಮಿಂಚು ನಿಮಗೆ ಹೊಳೆದರೂ ಸಾಕು, ನಿಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ. ದುಃಖವು ಸ್ವರ್ಗದ ಆನಂದನನ್ನು ತಂದುಕೊಡುವುದು. ಜೀವನವು ವಿನೋದವೆನಿಸುತ್ತದೆ. ಏಕೆಂದರೆ, ಯಾವುದನ್ನು ಯಾರೂ ಸರಪಳಿಯಿಂದ ಬಂಧಿಸಲಾಗದೋ ಅದು ಬಂಧನದಲ್ಲಿರುವಂತೆ ತೋರುತ್ತದೆ, ದುಃಖದ ಆಚೆಗಿರುವವನು ದುಃಖಿಯಂತೆ ಕಾಣುತ್ತಾನೆ.

ದುಃಖ, ವ್ಯಸನ, ಸಂಕಟಗಳ ಮಧ್ಯದಲ್ಲಿ ಇವುಗಳಾವುದರ ಸ್ಪರ್ಶವಿಲ್ಲದಿರುವುದನ್ನು ಗುರ್ತಿಸಿದ ಕ್ಷಣದಲ್ಲಿಯೇ, ಎಣ್ಣೆ, ಬತ್ತಿಯಿಲ್ಲದೆ ಬೆಳಗುವ ದೀವಟಿಗೆ ಯೊಂದಿರುವುದನ್ನು ಕಾಣುವಿರಿ. ಅದು ಒಂದೇ ದೀವಟಿಗೆಯೇ ಅನ್ವೇಷಣೆ ಮಾಡಲು ಯೋಗ್ಯವಾದದ್ದು. ಪ್ರಾಪ್ತಿಮಾಡಿಕೊಳ್ಳಲು ಯೋಗ್ಯವಾದ ಪ್ರಭೆ, ಅದೊಂದೆ. ಆ ಪ್ರಭೆಯ ಸರ್ವತ್ರ ಪ್ರಕಾಶಿಸುವುದನ್ನು ಕಾಣುತ್ತೀರ. ಹಾಗೂ ಎಲ್ಲದರ ಅಸ್ಥಿತ್ವವು ಆ ಪ್ರಭೆಯ ದೇಗುಲವೆಂಬುದನ್ನು ಕಾಣುತ್ತೀರ. ಆಗ ಇಡೀ ಅಸ್ಥಿತ್ವವು, ಎಲ್ಲೆಯಿಲ್ಲದ, ಮೊದಲು ಕೊನೆಯಿಲ್ಲದ, ತನ್ನದೇ ಆದ ಒಂದು ಗುರಿ ಇಲ್ಲದ ಶಕ್ತಿ ಎಂಬುದನ್ನು ಅರಿಯುತ್ತೀರ.

ನಾನು, ನೀವು ಎಲ್ಲರೂ ಇಲ್ಲವಾಗುತ್ತೇವೆ. ಏಕೆಂದರೆ ರೂಪವಿದೆ. ಆದರೆ ನನ್ನಲ್ಲೂ, ನಿಮ್ಮಲ್ಲೂ, ಯಾವುದು ರೂಪವಿರುವಂತೆ ಕಾಣುತ್ತದೋ, ಅದು ಇಲ್ಲವಾಗುವುದಿಲ್ಲ. ತಂದೆ ತಾಯಿಗಳಿಂದ ಬಂದ ಶರೀರ, ರೂಪಉಳ್ಳ ಶರೀರ ಮಾಯವಾಗುವುದು, ಮೃತ್ಯು ತೆಗೆದುಕೊಂಡು ಹೋಗುವುದು. ನಿಮ್ಮನ್ನಲ್ಲ.

ಅಹಂ ಎಂಬುದು ಎಣ್ಣೆಯಿಂದ ಬೆಳಗುತ್ತದೆ. ಆತ್ಮ ಎಣ್ಣೆ ಬತ್ತಿ ಇಲ್ಲದೆ ಬೆಳಗುತ್ತದೆ. ನಮ್ಮ ದೃಷಿಯಲ್ಲಿ ಬದಲಾವಣೆಬೇಕು. ಅಸ್ಥಿತ್ವವು ಒಂದು ಹಬ್ಬದಂತೆ ಕಾಣಬೇಕು.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನೂ ಓದಿ | Prerane | ಸಪ್ತ ಪ್ರಾಣಗಳೆಂಬ ಸಪ್ತ ವೃಷಭಗಳು

Exit mobile version