Site icon Vistara News

Prerane | ಮೊದಲು ಏಟು ತಿಂದವರೇ ಮುಂದೆ ಪೂಜಿಸಲ್ಪಡುತ್ತಾರೆ!

stone Sculptor god prerane

ಗಣೇಶ ಭಟ್ಟ
ಅದೊಂದು ಹಳ್ಳಿ. ಆ ಹಳ್ಳಿಯ ಜನರು ಶಿಲಾಮಯ ದೇವಾಲಯ ನಿರ್ಮಾಣ ಮಾಡುವುದೆಂದು ನಿರ್ಧರಿಸಿ ಆ ಭಾಗದ ಪ್ರಸಿದ್ಧ ಶಿಲ್ಪಿಯನ್ನು ಸಂಪರ್ಕಿಸಿದರು. ಆ ಶಿಲ್ಪಿಯು ದೇವಾಲಯ ನಿರ್ಮಾಣಕ್ಕೆ ಒಪ್ಪಿ, ತನ್ನ ಕೆಲಸಗಾರರಿಂದ ಸುಂದರ ಶಿಲಾಮಯ ದೇವಾಲಯ ನಿರ್ಮಾಣ ಮಾಡಿದನು.

ಗರ್ಭಗುಡಿಯಲ್ಲಿ ಸ್ಥಾಪಿಸುವ ದೇವರಮೂರ್ತಿ ನಿರ್ಮಾಣ ಕಾರ್ಯ ಮಾತ್ರ ಬಾಕಿ ಉಳಿಯಿತು. ದೇವರಮೂರ್ತಿ ಶಿಲೆಯನ್ನು ಆಯ್ಕೆ ಮಾಡುವ ಸಲುವಾಗಿ, ಸ್ವತಃ ಶಿಲ್ಪಯೇ ಸಮೀಪದ ಪರ್ವತಕ್ಕೆ ತೆರಳಿದ. ಹಲವು ಸುತ್ತಿನ ಶಿಲ್ಪ ಪರೀಕ್ಷೆಯ ನಂತರ ಮೂರ್ತಿ ನಿರ್ಮಾಣ ಮಾಡಬಹುದಾದ ದೊಡ್ಡಕಲ್ಲು ಬಂಡೆಯೊಂದು ದೊರಕಿತು. ಅದನ್ನು ಅರ್ಧಭಾಗ ಮಾಡಿ, ಆ ಎರಡು ಭಾಗಗಳಲ್ಲಿ ಮೊದಲ ಭಾಗವನ್ನು ಆಯ್ಕೆ ಮಾಡಿಕೊಂಡು ದೇವರ ವಿಗ್ರಹ ನಿರ್ಮಾಣಕ್ಕೆ ತೊಡಗಿದ.

ಶಿಲ್ಪಿಯು ಚಾಣದ ಮೂಲಕ ಆ ಶಿಲೆಗೆ ಏಟು ನೀಡುತ್ತಿದ್ದಂತೆ, ಶಿಲ್ಪಿ ಕೊಟ್ಟ ಏಟನ್ನು ತಾಳಲಾರದೆ ಅದು ದೂರಸರಿಯಿತು. ಶಿಲ್ಪಿ ಆ ಶಿಲೆಗೆ –‘ನಾನು ಕೊಡುವ ಒಂದೊಂದು ಏಟಿನಲ್ಲೂ ನಿನ್ನ ಹಿತ ಅಡಗಿದೆ’ ಎಂದು ವಿನಂಮ್ರತೆಯಿಂದ ವಿನಂತಿಸಿಕೊಂಡರೂ ಅದುದೂರ ದೂರಕ್ಕೆ ಸರಿಯಿತು. ಶಿಲ್ಪಿ ಅನಿವಾರ್ಯವಾಗಿ ಆ ಶಿಲೆಯನ್ನು ಬಿಟ್ಟು ಶಿಲೆಯ ಎರಡನೇ ಭಾಗವನ್ನು ಉಪಯೋಗಿಸಿಕೊಂಡು ಸುಂದರವಾದ ಗಣಪತಿ ವಿಗ್ರಹವನ್ನು ನಿರ್ಮಾಣ ಮಾಡಿದ. ಹಳ್ಳಿಯ ಜನರು ಆ ಪರ್ವತಕ್ಕೆ ಬಂದರು. ತಾವು ತಂದ ವಾಹನದಲ್ಲಿ ಗಣಪತಿ ವಿಗ್ರಹವನ್ನು ಇಟ್ಟರು. ಶಿಲ್ಪಿ ವಿಗ್ರಹ ಮಾಡುವ ಸಲುವಾಗಿ ಮೊದಲು ಯಾವ ಶಿಲೆಯನ್ನು ಆಯ್ಕೆ ಮಾಡಿದ್ದನೋ ಆ ಶಿಲೆಯನ್ನೂ ವಾಹನಕ್ಕೆ ಹಾಕಿದರು. ಶುಭ ದಿನ-ವೇಳೆಯಲ್ಲಿ ದೇವರ ವಿಗ್ರಹವನ್ನು ಗರ್ಭಗುಡಿಯಲ್ಲಿ ಸ್ಥಾಪಸಿದರು, ಆ ಮೊದಲ ಶಿಲೆಯನ್ನು ದೇವಾಲಯದ ಹೊರಭಾಗದಲ್ಲಿ ಇಟ್ಟರು. ದೇವಾಲಯಕ್ಕೆ ಬಂದ ಭಕ್ತರು ತಾವು ತಂದ ತೆಂಗಿನಕಾಯನ್ನು ಜಪ್ಪಿ ಒಡೆಯಲು ಈ ಕಲ್ಲನ್ನು ಉಪಯೋಗಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ದೇವಾಲಯದ ಅರ್ಚಕರು ಪೂಜೆ ಮುಗಿಸಿ ಮನೆಗೆ ತೆರಳಿದ ಮೇಲೆ ಅಲ್ಲಿಯ ವಿಗ್ರಹಗಳು ಪರಸ್ಪರ ಮಾತನಾಡಲು ಪ್ರಾರಂಭಿಸಿದವು. ದೇವಾಲಯದ ಹೊರಭಾಗದಲ್ಲಿರುವ ಶಿಲೆಯು ಒಳಗೆ ಗರ್ಭ ಗೃಹದಲ್ಲಿರುವ ದೇವರ ವಿಗ್ರಹಶಿಲೆಗೆ ಹೀಗೆಂದಿತು- ‘ನಾವಿಬ್ಬರೂ ಕೆಲ ದಿನಗಳ ಹಿಂದಿನವರೆಗೂ ಪರ್ವತದ ಒಂದೇ ಶಿಲೆಯ ಭಾಗವಾಗಿದ್ದೇವು. ಆದರೆ ನಿನ್ನ ದರ್ಶನ ಮಾಡಲು ಬಂದ ಭಕ್ತರು ತಾವು ತಂದ ತೆಂಗಿನ ಕಾಯನ್ನು ಅತ್ಯಂತ ರಭಸದಿಂದ ಜಪ್ಪಿ ಒಡೆಯಲು ಉಪಯೋಗಿಸುವರು. ಒಡೆದ ತೆಂಗಿನ ಕಾಯಿಯ ಭಾಗವನ್ನು ನಿನಗೆ ನೈವೇದ್ಯದ ರೂಪದಲ್ಲಿ ಸಮರ್ಪಿಸುವರು. ಬೆಳಗಿನಿಂದ ರಾತ್ರಿಯವರೆಗೆ ಪ್ರತಿನಿತ್ಯ ನನ್ನದೇಹ ಸೀಳಿ ಹೋಗುವಂತೆ ತೆಂಗಿನ ಕಾಯಿ ಒಡೆಯುವರು, ನಿನ್ನನ್ನು ಪೂಜಿಸುವರು. ನನಗೆ ಅಸಾದ್ಯ ನೋವು, ನಿನಗಾದರೋ ಪೂಜೆ’ಎಂದಿತು.

ಅದಕ್ಕೆ ಆ ದೇವರ ವಿಗ್ರಹ ಶಿಲೆ –‘ಹೌದು ಗೆಳೆಯ, ಆದರೆ ಆ ಶಿಲ್ಪಿ ದೇವರ ವಿಗ್ರಹ ಮಾಡುವ ಸಲುವಾಗಿ ಮೊದಲು ನಿನ್ನನ್ನೇ ಆಯ್ಕೆ ಮಾಡಿದ. ಆದರೆ ನೀನು ಶಿಲ್ಪಿ ಕೊಟ್ಟ ಏಟನ್ನು ತಾಳಲಾರದೆ ದೂರ ಸರಿದೆ. ಶಿಲ್ಪಿ ಆ ಸಂದರ್ಭದಲ್ಲಿ ನುಡಿದ ಹಿತನುಡಿಗಳು ನಿನಗೆ ಪಥ್ಯವಾಗಲಿಲ್ಲ. ಶಿಲ್ಪಿ ಅನಿವಾರ್ಯವಾಗಿ ನಿನ್ನನ್ನು ಬಿಟ್ಟು ನನ್ನನ್ನು ಆಯ್ಕೆ ಮಾಡಿದ. ಶಿಲ್ಪಿ ಆ ಸಂದರ್ಭದಲ್ಲಿ ಕೊಟ್ಟ ಒಂದೊಂದು ಏಟು ನನಗೆ ಅಸಾಧ್ಯವಾದ ನೋವನ್ನು ಉಂಟು ಮಾಡುತ್ತಿದ್ದವು. ಆದರೆ ಶಿಲ್ಪಿ ಕೊಡುವ ಒಂದೊಂದು ಏಟಿನ ಹಿಂದೆ ನನ್ನ ಭವಿಷ್ಯದ ಹಿತ ಅಡಗಿದೆ ಎಂದು ಅದನ್ನೇಲ್ಲಾ ಸಹಿಸಿದೆ. ಹಾಗೆ ಸಹಿಸಿ ಇಂದು ಎಲ್ಲರೂ ಪೂಜಿಸುವ, ಗೌರವಿಸುವ ವಿಗ್ರಹವಾಗಿದ್ದೇನೆ. ನನ್ನ ಇಂದಿನ ಸುಖದ ಹಿಂದೆ ಶಿಲ್ಪಿಯ ಕೈಚಳಕ ನನ್ನ ಅಗಾದವಾದ ಪರಿಶ್ರಮ ಎಲ್ಲವೂ ಇದೆ’ ಎಂದಿತು.

ಶಿಲೆಯ ಒಂದು ಮೈಯನ್ನು ಕೆತ್ತಿದರೆ ದೇವಾಲಯದ ಹಾಸು ಕಲ್ಲಾಗುವುದು. ಶಿಲೆಯ ಎರಡು ಭಾಗವನ್ನು ಕೆತ್ತಿದರೆ ಮೆಟ್ಟಿಲ ಕಲ್ಲಾಗುವುದು. ಹಾಸುಕಲ್ಲನ್ನು, ಮೆಟ್ಟಿಲ ಕಲ್ಲನ್ನು ಮೆಟ್ಟುವರು, ಒಡಾಡಲು ಬಳಸುವರು. ಶಿಲೆಯ ಮೂರು ಭಾಗವನ್ನು ಕೆತ್ತಿದರೆ ದೇವಾಲಯದ ದ್ವಾರಪಾಲಕ ವಿಗ್ರಹವಾಗುವುದು. ಶಿಲೆಯ ನಾಲ್ಕೂ ಭಾಗಗಳನ್ನು ಕೆತ್ತಿದರೆ, ದೇವಾಲಯದ ಕಂಬವಾಗುವುದು. ದ್ವಾರಪಾಲಕ ವಿಗ್ರಹಕ್ಕಾಗಲಿ ದೇವಾಲಯದ ಕಂಬಕ್ಕಾಗಲಿ ಯಾವುದೇ ನೈವೇದ್ಯ ಪೂಜೆಯಾಗಲಿ ಇಲ್ಲ. ಶಿಲೆಯ ಎಲ್ಲಾ ಭಾಗಗಳನ್ನು ಕೆತ್ತಿದರೆ ಎಲ್ಲರೂ ಪೂಜಿಸುವ ದೇವರ ವಿಗ್ರಹವಾಗುವುದು.

ನಮ್ಮ ಬಾಲ್ಯದ ಸಂದರ್ಭದಲ್ಲಿ ಇರಬಹುದು ಅಥವಾ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಇರಬಹುದು ನಮ್ಮತಂದೆ-ತಾಯಿ, ಗುರು-ಹಿರಿಯರು ನಾವು ಮಾಡುವ ತಪ್ಪನ್ನು ತಿದ್ದುವ ಸಲುವಾಗಿ ನಮಗೆ ಬುದ್ಧಿಮಾತನ್ನು ಆಡುವರು ಅಥವಾ ಅಂತಹ ಸಂದರ್ಭ ಬಂದರೆ ಏಟನ್ನು ನೀಡಿದಾಗ ಅದು ನಮ್ಮ ಹಿತಕ್ಕೆ ಎಂದು ಭಾವಿಸಿ ತಪ್ಪನ್ನು ತಿದ್ದಿಕೊಂಡು ಮುನ್ನೆಡೆಯ ಬೇಕು. ಶಿಲ್ಪಿಯ ಏಟಿನ ಹಿಂದೆ ಶಿಲೆಯ ಹಿತ, ಗುರು-ಹಿರಿಯರಏಟಿನ ಹಿಂದೆ ವ್ಯಕ್ತಿಯ ಹಿತ ಅಡಗಿದೆ. ಅವುಗಳನ್ನು ಸಹಿಸಿಕೊಂಡು ಗುಣ-ನಡತೆ-ಸಂಸ್ಕಾರಗಳಿಂದ ವಿಕಸಿತನಾದಾಗಲೇ ವ್ಯಕ್ತಿ ತಾನೂ ಉನ್ನತಿಯನ್ನು ಹೊಂದಿ ಸಮಾಜದ ಗೌರವಾದರಕ್ಕೂ ಪಾತ್ರನಾಗುವನು ಎನ್ನುವುದನ್ನು ನಾವು ಮರೆಯಬಾರದು.

– ಲೇಖಕರು ಸಂಸ್ಕೃತ ಉಪನ್ಯಾಸಕರು, ನೆಲ್ಲಿಕೇರಿ, ಕುಮಟಾ(ಉ.ಕ)

ಇದನ್ನೂ ಓದಿ | Prerane | ಸ್ವರ್ಗ ಮತ್ತು ನರಕಕ್ಕೆ ಹೋಗಲು ಬೇಕಿರುವುದು ಒಂದೇ ಶಕ್ತಿ…

Exit mobile version