ಶ್ರೀ ಕೈವಲ್ಯಾನಂದ ಸರಸ್ವತೀ
ಹುಟ್ಟಿದ ಪ್ರತಿಯೊಬ್ಬರಿಗೂ -ಸ್ತ್ರೀಯಾಗಲಿ, ಪುರುಷನಾಗಲಿ ಪ್ರಾರಂಭದಲ್ಲಿ “ನಾನುʼʼ ಎಂಬ ಅಭಿಮಾನವಿರದು. ಒಂದನೆ ವಯಸ್ಸಿನ ನಂತರ “ನಾನುʼʼ ಎಂಬ ಅಭಿಮಾನ ಪ್ರಾರಂಭವಾಗುವುದು. ಆಗ ಶರೀರವೇ ನಾನೆಂದುಕೊಳ್ಳುತ್ತಾನೆ. ಇದು ಸ್ವಾಭಾವಿಕವಾಗಿ – ಅಂದರೆ ವಿಚಾರ ಮಾಡದೇ ಬಂದ ಅಭಿಮಾನ. ಈ ಅಭಿಮಾನದಿಂದಲೇ ಜೀವಿ ಸುತ್ತಾನೆ. ಸುಖ, ಸಂತೋಷ ಆನಂದಗಳಿಗಾಗಿ ಬಹಳ ಪ್ರಯತ್ನ ಮಾಡುತ್ತಾನೆ. ಎಷ್ಟೇ ಪ್ರಯತ್ನ ಮಾಡಿದರೂ ದುಃಖಿಯಾಗಿಯೇ ಜೀವನ ಸಾಗುತ್ತದೆ. ಕೊನೆಗೊಂದು ದಿನ ಇಷ್ಟವಿಲ್ಲದ ಮೃತ್ಯುವನ್ನೂ ಪಡೆಯುತ್ತಾನೆ. ಈ ರೀತಿ ಜೀವನ, ವ್ಯರ್ಥ ಜೀವನವೇ.
ಏಕೆ ಹೀಗಾಗುತ್ತಿದೆ ಎಂದರೆ ಮನುಷ್ಯನ ಮೂಲಭೂತ ಸಮಸ್ಯೆ “ಶರೀರವೇ ನಾನೆಂದು ಜೀವಿಸುತ್ತಿರುವುದುʼʼ ಮಹಾಭಾರತದ, ಶಾಂತಿಪರ್ವದ 351ನೇ ಸರ್ಗದ 6ನೇ ಶ್ಲೋಕ ಹೀಗೆ ಹೇಳುತ್ತದೆ;
ಕ್ಷೇತ್ರಾಣಿಹೀ ಶರೀರಾಣಿ ಬೀಜಂ ಚಾಪಿ ಶುಭಾಶುಭಮ್|
ತಾನಿವೇತ್ತಿ ಸಯೋಗಾತ್ಮಾ ತತಃ ಕ್ಷೇತ್ರಜ್ಞ ಉಚ್ಯತೇ||
ಶ್ಲೋಕಾರ್ಥ; ಶರೀರಗಳನ್ನು ಕ್ಷೇತ್ರಗಳೆನ್ನುತ್ತಾರೆ. ಶರೀರಗಳಿಗೆ ಜೀವಿಯ ಜನ್ಮಜನ್ಮಗಳ ಶುಭಾಶುಭ ಕರ್ಮಗಳೇ ಬೀಜವು – ಪ್ರಾರಬ್ಧವು. ಯೋಗಾತ್ಮನಾದ ಪರಮಾತ್ಮ ಈ ಎರಡನ್ನೂ ತಿಳಿದಿರುತ್ತಾನೆ. ತಿಳಿದು ಬರುವ ಶರೀರಗಳು ನಾವಲ್ಲ. ತಿಳಿಯುವ ಪರಮಾತ್ಮನೇ ನಮ್ಮ ಸ್ವರೂಪ. ಇದೇ ಅಭಿಪ್ರಾಯವನ್ನೇ ಭಗವದ್ಗೀತೆಯಲ್ಲಿಯೂ ಶ್ರೀ ಕೃಷ್ಣ ಪರಮಾತ್ಮ;
ಇದಂ ಶರೀರಂ ಕೌಂತೇಯ, ಕ್ಷೇತ್ರ ಮಿತ್ಯಭಿದೇಯತೇ|
ಏತದ್ಯೋವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ || 13-1|| ಎನ್ನುತ್ತಾರೆ.
“ಹೇ ಕೌತೇಯನೇ, ಈ ಶರೀರವನ್ನು “ಕ್ಷೇತ್ರ”ವೆಂದು, ಇದನ್ನು ಯಾರು (ಉಂಗುಷ್ಠದಿಂದ ನೆತ್ತಿಯವರೆಗೂ) ತಿಳಿಯುತ್ತಾನೋ, ಅವನನು “ಕ್ಷೇತ್ರಜ್ಞ’’ ವೆಂದು, ಅದನ್ನು ಬಲ್ಲವರು ಹೇಳುತ್ತಾರೆ’’ –
ಈ ಎರಡು ಶ್ಲೋಕಗಳ ಅಭಿಪ್ರಾಯವನ್ನು ನಾವುಗಳು ಅನುಭವ ಪೂರ್ವಕವಾಗಿ ನೋಡಿಕೊಂಡರೆ ಶರೀರವು ದೃಶ್ಯ – ಶರೀರವನ್ನೂ ತಿಳಿದುಕೊಳ್ಳುತ್ತಿರುವ ನಾನು ಧೃಕ್ ಸ್ವರೂಪ. ಶರೀರವು ನಾನಲ್ಲವೆಂಬುದು ಸ್ಪಷ್ಟ. ಶರೀರವು ಕೇವಲ ಜೀವನಯಾತ್ರೆಗಾಗಿ ಉಪಯೋಗವಾಗುತ್ತಿರುವ ವಾಹನ; ಶರೀರವು ಕೇವಲ ಬಾಡಿಗೆ ಮನೆಯಿದ್ದಂತೆ; ಶರೀರವು ಕೇವಲ ಬಸ್-ನಿಲ್ದಾಣ. ವಾಹನ, ಮನೆ, ಬಸ್ ನಿಲ್ದಾಣವಾಗಿರುವ ಈ ಶರೀರವನ್ನು ಒಂದು ದಿವಸ ಮೃತ್ಯು ಬಂದಾಗ ಖಾಲಿ ಮಾಡಿ ಹೋಗುತ್ತೇವೆ.
ಶರೀರವು ನಾನಲ್ಲವೆಂದ ಮೇಲೆ, ನಾನೆಂಬುದಾವುದು? ಎಂದರೆ “ಕ್ಷೇತ್ರಜ್ಞ’’ ನೇ ನಾನು. ಶ್ರೀ ಕೃಷ್ಣ ಪರಮಾತ್ಮ “ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿʼʼ ಎನ್ನುತ್ತಾರೆ. ಕ್ಷೇತ್ರಜ್ಞನೇ ಕೃಷ್ಣ ಪರಮಾತ್ಮನೆಂದು ತಿಳಿಯಬೇಕು. ತಿಳಿದರೆ ಹುಟ್ಟಿ ಸಾಯುವ ಜೀವಿ ನಾನಲ್ಲ, ಹುಟ್ಟಿಲ್ಲದ ಸಾವಿಲ್ಲದ ಕೃಷ್ಣ ಸ್ವರೂಪಿಗಳೇ ಎಲ್ಲರೂ ಸಹ.
ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನು ಓದಿ | Prerane | ಒಂದಾಗುವ ಹಾತೊರೆಯುವಿಕೆಯೇ ಪ್ರೀತಿ, ಒಂದಾಗುವುದೇ ಯೋಗ