Site icon Vistara News

Prerane :ಆಯುರ್ವೇದಾರಂಭ, ಅವಶ್ಯಕತೆ ಹಾಗು ವಿಶೇಷತೆ!

Prerane ayurvedha

ಡಾ. ಪುನೀತ್ ಕುಮಾರ್ . ಪಿ .
ಜಗತ್ತಿನ ಸೃಷ್ಟಿಯ ಆದಿಯಲ್ಲಿ ಭಗವಂತನು ತನ್ನ ಸಂಕಲ್ಪದಂತೆ ಹಲವಾರು ಪದಾರ್ಥಗಳನ್ನು ಒಂದರಮೇಲೊಂದು ಸೃಷ್ಟಿಸತೊಡಗಿದನು. ಅದು ಕಾಲದ ಆದಿಮೂಲದಲ್ಲಿನ ಸೃಷ್ಟಿಯ ಒಂದು ಪ್ರಸಂಗ. ಅಲ್ಲಿ ದೇವದಾನವರು ಕೂಡಿ ಅಮೃತ ತೃಷರಾಗಿ ಸಮುದ್ರಮಥನ ಮಾಡಲು ಒಪ್ಪಂದ ಮಾಡಿಕೊಂಡರು. ಈ ಮಹತ್ಕಾರ್ಯಕ್ಕೆ ಮಂದಾರ ಪರ್ವತವನ್ನು ಕಡಗೋಲಾಗಿ , ವಾಸುಕಿ ಸರ್ಪವನ್ನು ಹಗ್ಗವನ್ನಾಗಿಸಿಕೊಂಡು ಒಂದು ಕಡೆ ದೇವತೆಗಳು ಮತ್ತೊಂದು ಕಡೆ ದಾನವರು ಸಮುದ್ರ ಮಂಥನ ಗೈದರು.

ಆದಿದೇವನ ಸಂಕಲ್ಪದಂತೆ ಸಾಂಗೋಪಾಂಗವಾಗಿ, ಜೀವಿಗಳ ಉದ್ಧಾರಕ್ಕಾಗಿ ಬೇಕಾದಂತಹ ಧರ್ಮಸಾಧನೆಗೆ ಸಹಾಯವಾಗುವ ಪದಾರ್ಥಗಳು ಸೃಷ್ಟಿಯಾದವು.

ಜಗನ್ಮಾತೆ ಮಹಾಲಕ್ಷ್ಮಯನ್ನೂ ಸೇರಿಸಿಕೊಂಡು, ಕಲ್ಪವೃಕ್ಷ ದಂತಹ ಹಲವಾರು ಪದಾರ್ಥಗಳು ಸೃಷ್ಟಿಯಾದವು. ಇಂತಹ ಮುಖ್ಯ ಘಟ್ಟದಲ್ಲಿ ಮನುಕುಲದ ಏಳಿಗೆಗಾಗಿ ಒಂದು ವೈದ್ಯಶಾಸ್ತ್ರದ ಅವಶ್ಯಕತೆ ಇದ್ದಿತು. ಆಗ, ಶ್ರೀ ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದಂತಹ ಆರೋಗ್ಯದ ದೇವ ಭಗವಾನ್ ಧನ್ವಂತರಿ ಸ್ವಾಮಿಯ ಅವತಾರವಾಯಿತು. ಭಗವಾನ್ ಧನ್ವಂತರಿಯು ಶಂಖ ಚಕ್ರಧಾರಿಯಾಗಿ ಮೂರನೇ ಕೈಯಲ್ಲಿ ಆಯುರ್ವೇದ ಮೂಲಿಕೆಗಳು ಹಾಗು ನಾಲ್ಕನೇ ಕೈಯಲ್ಲಿ ಅಮೃತಕಲಶಪಿಡಿದು ಎಲ್ಲರ ಆರೋಗ್ಯ ಕಾಪಾಡುವ ಸಂಕಲ್ಪ ಹೊತ್ತಿದ್ದಾನೆ.

ಕೃತಯುಗದ ಆದಿಯಲ್ಲಿ ಬ್ರಹ್ಮನು ಆಯುರ್ವೇದ ಶಾಸ್ತ್ರವನ್ನು ಪುನಃ ಮನಸ್ಸಿಗೆ ತಂದುಕೊಂಡು ದೇವತೆಗಳ ಉದ್ಧಾರಕ್ಕಾಗಿ ದಕ್ಷಪ್ರಜಾಪತಿಗೆ ಧಾರೆ ಎರೆಯುತ್ತಾನೆ. ದಕ್ಷ ಪ್ರಜಾಪತಿಯು ಅಶ್ವಿನಿಕುಮಾರರಿಗೆ, ಮುಂದೆ ಅಶ್ವಿನಿಕುಮಾರರು ಇಂದ್ರದೇವನಿಗೆ, ಇಂದ್ರನಿಂದ ಭರದ್ವಾಜ ಮಹರ್ಷಿಯ ದ್ವಾರ ಆಯುರ್ವೇದ ಶಾಸ್ತ್ರವು ಋಷಿಗಳ ಪರಂಪರಾನುಗತವಾಗುತ್ತದೆ.

ಇಂತಹ ಒಂದು ಶಾಸ್ತ್ರದ ಅವಶ್ಯಕತೆ ನಿಜವಾಗಿಯೂ ನಮಗೆ ಇದೆಯೇ ? ಎಂಬುದು ಪ್ರಶ್ನೆ.

ಶರೀರ, ಇಂದ್ರಿಯ, ಸತ್ತ್ವ ಹಾಗು ಆತ್ಮಗಳು ಜೀವನದ ಮುಖ್ಯ ನಾಲ್ಕು ಭಾಗಗಳು. ಇವುಗಳ ಸಂಯೋಗವನ್ನೇ ನಾವು ಜೀವನ ಅಥವಾ ಆಯು ಎಂದು ಕರೆಯುತ್ತೇವೆ. ನಮ್ಮೆಲ್ಲರ ಜೀವನದ ಉದ್ದಿಶ್ಯವೇನೆಂದರೆ ಧರ್ಮಾರ್ಥ ಕಾಮಮೋಕ್ಷಗಳ ಸಾಧನೆ. ಈ ಸಾಧನೆಗೆ ಮೂಲವೇ ಆರೋಗ್ಯ. ಭಾರತೀಯ ಮಹರ್ಷಿಗಳು ಈ ಶಾಸ್ತ್ರದ ಅಧ್ಯಯನಕ್ಕೋಸ್ಕರ ಅದರ ಮೂಲವನ್ನು ಅರಿಯಲು ಶಾಸ್ತ್ರ ಹಾದು ಬಂದ ದಾರಿಯಲ್ಲಿ ಹಿಂದಕ್ಕೆ ಸಂಚಾರ ಮಾಡಿ (ವಿಪಶ್ಚಿತ ಚೇತರಾಗಿ) ಯಾವುದೇ ಪ್ರಯೋಗಶಾಲೆಗಳ ಸಹಾಯವಿಲ್ಲದೆ ಈ ಶಾಸ್ತ್ರದ ಜ್ಞಾನ ಪಡೆದರು.

ಶರೀರ, ಇಂದ್ರಿಯ, ಮನಸ್ಸುಗಳ ಆರೋಗ್ಯ ಕಾಪಾಡಿಕೊಳ್ಳಲು ದಿನಚರ್ಯೆ, ಋತುಚರ್ಯೆ, ಸ್ವಸ್ಥವೃತ್ತದ ಮೂಲಕ ದೇಹದಲ್ಲಿ ಉಂಟಾಗಬಹುದಾದ ದೋಷ ನಿವಾರಣೆ, ಹಾಗು ಸ್ವಾಸ್ಥ್ಯಪಾಲನೆಯ ಉಪಾಯಗಳನ್ನು ಈ ಶಾಸ್ತ್ರ ತಿಳಿಸಿಕೊಡುತ್ತದೆ.

ಹಾಗಾಗಿ ಆಯುರ್ವೇದವು ಆಧಿಭೌತಿಕ, ಅಧಿದೈವಿಕ ಹಾಗು ಆಧ್ಯಾತ್ಮಿಕ ಸ್ತರಗಳಲ್ಲಿಯೂ ಉಂಟಾಗಬಹುದಾದಂತಹ ಅನಾರೋಗ್ಯಕ್ಕೆ ಚಿಕಿತ್ಸೆ ಮಾಡಿ ಸಪ್ತಧಾತುಗಳಲ್ಲಿ, ತ್ರಿದೋಷಗಳ ನಡುವೆ ಸಾಮ್ಯತೆ ತಂದು ಆತ್ಮ, ಇಂದ್ರಿಯ ಮನಸ್ಸುಗಳಲ್ಲಿ ಪ್ರಸನ್ನತೆಯನ್ನು ತಂದು ಆಧ್ಯಾತ್ಮಿಕ ಸಾಧನೆಗೆ ಸಹಾಯ ಮಾಡಿಕೊಡುತ್ತದೆ. ಜೊತೆಗೆ ಆಯುರ್ವೇದದ ಔಷಧಿಗಳೂ ಕೂಡ ಯಾವುದೇ ಅನ್ಯ ವಿಕಾರ ಮಾಡದೆ ದೇಹವು ತನ್ನ ಸಹಜ ಕಾರ್ಯಗಳಲ್ಲಿ ಪ್ರವೃತ್ತ ವಾಗುವುದರಲ್ಲಿ ಸಹಾಯ ಮಾಡುತ್ತದೆ.

ಇಂತಹ ಋಷಿಪ್ರೋಕ್ತವಾದ, ರತ್ನಾಢ್ಯ ಶಾಸ್ತ್ರವಾದ ಆಯುರ್ವೇದವನ್ನು ಮನುಕುಲವೆಲ್ಲವೂ ಉಪಯೋಗ ಪಡೆದುಕೊಂಡು ನಮ್ಮ ಐಹಿಕ ಪಾರಮಾರ್ಥಿಕ ಜೀವನಗಳನ್ನು ಸುಗಮ ಮಾಡಿಕೊಳ್ಳಬಹುದು.

– ಲೇಖಕರು ಸಂಸ್ಕೃತಿ ಚಿಂತಕರು ಮತ್ತು ಆಯುರ್ವೇದ ವೈದ್ಯರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನು ಓದಿ| Prerane | ಅಧ್ಯಾತ್ಮದ ದಾರಿ ಕಠಿಣವಲ್ಲ, ನೀವದನ್ನು ಕಠಿಣವಾಗಿಸುತ್ತಿದ್ದೀರಿ…

Exit mobile version