ಶ್ರೀ ಕೈವಲ್ಯಾನಂದ ಸರಸ್ವತೀ
ಕಣ್ಣು ನೋಡುತ್ತಿದೆಯೋ? ಕಣ್ಣಿನ ಹಿಂಭಾಗದಲ್ಲಿ ನೀವಿದ್ದು ನೋಡುತ್ತಿರುವಿರೋ? ಕಣ್ಣಿನ ಹಿಂದೆಯೊ ಮುಂದೆಯೊ ಒಟ್ಟಿನಲ್ಲಿ ನೀವಿದ್ದು ನೋಡುತ್ತಿರುತ್ತೀರಿ ಎಂದು ಪ್ರವಚನಗಳಲ್ಲಿ ಪಂಡಿತರು ಹೇಳುತ್ತಿರುತ್ತಾರೆ. ಅಂದರೆ ನೀವು ಕಣ್ಣಿನಿಂದ ದೂರದಲ್ಲಿ ನಿಂತು ನೋಡುತ್ತಿರುತ್ತೀರಿ ಎಂಬುದು ಅವರ ಮಾತಾಗಿದೆ. ನಿಜವಾಗಿಯೂ ನೀವು ದೂರದಲ್ಲಿರುವಿರಾ? ವಾಸ್ತವಿಕವಾಗಿ ದೂರದಲ್ಲಿಲ್ಲ. ಕಣ್ಣಿನ ಮುಖಾಂತರ ನೋಡುವುದು ಕಣ್ಣಿಗೆ ವಿಲಕ್ಷಣವಾದ ಮತ್ತೊಂದು ವಾಸ್ತವಿಕವಾದ ದೃಕ್ ಎಂಬುದನ್ನು ನಿಮಗೆ ಅರ್ಥಮಾಡಿಸಲು ಈ ರೀತಿ ಹೇಳಲಾಗುತ್ತದೆ.
ಕಣ್ಣಿಗೆ ನೋಡುವ ಶಕ್ತಿ ಇದೆ ಎಂದು ತಪ್ಪಾಗಿ ಕಲ್ಪಿಸಿಕೊಂಡಿರುವ ಮುಮುಕ್ಷುವಿಗೆ ಆ ಅಭಿಪ್ರಾಯವನ್ನು ತೆಗೆದುಹಾಕಲು ಕಣ್ಣಿಗೆ ವಿಲಕ್ಷಣವಾದವನು ನೀನು ಎಂಬುದನ್ನು ಅರ್ಥೈಸಲು ಈ ರೀತಿ ಹೇಳಲಾಗಿದೆ. ಮುಮುಕ್ಷುವಿನ ಯೋಗ್ಯತೆಯನ್ನನುಸುರಿಸಿ ಮೆಲ್ಲಗೆ ಮೇಲಕ್ಕೆ ಕರೆದೊಯ್ಯುವ ಉಪಾಯ ಮಾತ್ರ.
ಮುಲ್ಲ ನಸುರುದ್ದಿನ್ ತನ್ನ ಮಗನಿಗೆ ದಕ್ಷಿಣ ಆಫ್ರಿಕಾದಲ್ಲಿ 10 ಸಿಂಹಗಳನ್ನು ಸಂಹಾರ ಮಾಡಿದೆನು ಎಂದು ಹೇಳುತ್ತಾನೆ. ಅದಕ್ಕೆ ಮಗ ಹೋದ ವರುಷ ಅಲ್ಲಿ ಐದು ಸಿಂಹಗಳು ಮಾತ್ರ ಇದೆ ಎಂದು ಹೇಳಿದ್ದೆಯಲ್ಲ ಎನ್ನುತ್ತಾನೆ. ಹೌದು ಮುಂದಿನ ವರುಷ ಹದಿನೈದು ಎಂದು ಹೇಳುತ್ತೇನೆ. ಏಕೆಂದರೆ ಎಷ್ಟನ್ನು ಅರ್ಥಮಾಡಿಕೊಳ್ಳುವಷ್ಟು ನಂಬುವಷ್ಟು ನೀನು ಬೆಳೆಯುತ್ತಿರುವೆಯೋ ಅದನ್ನು ಅನುಸರಿಸಿ ಹೇಳುತ್ತೇನೆ ಎನ್ನುತ್ತಾರೆ ತಂದೆ.
ಅದೇ ರೀತಿ ನೇರವಾಗಿ ಶರೀರಾಧಿಗಳು ನೀನಲ್ಲ, ನೀನು ಬ್ರಹ್ಮ ಸ್ವರೂಪ ಎಂದು ಹೇಳಿದರೆ ಅರ್ಥಮಾಡಿಕೊಳ್ಳುವುದು ಕಷ್ಟ ಸಾಧ್ಯ. ವಾಸ್ತವಿಕವಾಗಿ ಕಣ್ಣಿನ ಮುಂದೆ ಇಲ್ಲ. ಅದನ್ನು ಕಣ್ಣಿಗೆ ವಿಷಯ ಮಾಡಿಕೊಂಡು ನೋಡಲಾಗದು. ಕಣ್ಣಿನ ಹಿಂದೆ ಇದೆ, ನೀವು ನೋಡುತ್ತಿಲ್ಲ – ಎನ್ನುವುದರ ಅಭಿಫ್ರಾಯ ಪರಮಾತ್ಮ ಎಲ್ಲೊ ದೂರದಲ್ಲಿದ್ದಾನೆ ಎಂಬ ಅಭಿಪ್ರಾಯವನ್ನು ತೆಗೆದು ಹಾಕುವುದೇ ಆಗಿದೆ, ನೀವು ಪರಮಾತ್ಮ ಸಾನಿಧ್ಯ ದಲ್ಲೇ ಇರುವಿರಿ ಎಂದು ಹೇಳುವುದೇ ಆಗಿದೆ.
ಕಣ್ಣಿಗೆ ಹಿಂಭಾಗದಲ್ಲಿದೆ ಎಂಬುವುದು ಸತ್ಯಕ್ಕೆ ಇನ್ನೂ ಹತ್ತಿರವಾದ ಮಾತು. ನೋಡುವುದು ಕಣ್ಣಲ್ಲ, ಪರಮಾತ್ಮ ಸ್ವರೂಪವೇ ನೋಡುವುದು ಎಂಬುದನ್ನು ಉಪದೇಶಿಸುವುದು ಈ ಮಾತಿನ ಅರ್ಥ. ದೇವರನ್ನು ನೋಡಲಾಗದು. ಏಕೆಂದರೆ ದೇವರೇ ನಿಮ್ಮಲ್ಲಿ ನೋಡುವವನಾಗಿರುತ್ತಾನೆ. ದೇವರೆ ನಿಮ್ಮ ಮುಖಾಂತರ ನೋಡುತ್ತಿದ್ದಾನೆ. ನೀವು ಹೇಗೆ ತಾನೆ ದೇವರನ್ನು ನೋಡಬಲ್ಲಿರಿ?
ನೀನೆ ದೇವರೆಂಬುದನ್ನು ಅರ್ಥಮಾಡಿಕೊಳ್ಳವುದು ಕಷ್ಟ. ಆದಕಾರಣ ಇದೆಲ್ಲವೂ ತತ್ವಮಸಿ ಎಂಬುದನ್ನು ಅರ್ಥಮಾಡಿಸುವ ಪ್ರಯತ್ನ. ನಿಮಗೂ ಪರಮಾತ್ಮನಿಗೂ ದೂರವಿಲ್ಲ. ನೀವೇ ಅದು.
ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನು ಓದಿ: Prerane : ಮುನಿಪತ್ನಿಯರ ಭಕ್ತಿ ಮತ್ತು ನಮ್ಮ ಆದರ್ಶ