Site icon Vistara News

Prerane | ಉಪನಿಷತ್ತು ಎಂದರೆ ಉಪದೇಶವಲ್ಲ!

Prerane

ಶ್ರೀ ಕೈವಲ್ಯಾನಂದ ಸರಸ್ವತೀ
ಉಪನಿಷತ್ತು ಈ ಶಬ್ಧ ಮಹತ್ತರವಾಗಿ ಪ್ರಾಧಾನ್ಯವಾದದ್ದು, ಇದರ ಸರಳವಾದ ಅರ್ಥ- ಗುರುವಿನ ಪಾದಗಳಲ್ಲಿ ಸನ್ನಿಹಿತವಾಗಿ ಕೊಡುವಿಕೆ; It is communion – ಇದು ಜತೆಗೂಡುವಿಕೆ. “ಗುರುʼʼ ವು ಜೀವಂತ ಪೂರ್ಣತೆ. ಗುರುವು ಈಗಲೇ, ಇಲ್ಲೇ ಜೀವಂತವಾಗಿದ್ದಾರೆ. He is pulsating- ಗುರುವು ಸ್ಪಂಧಿಸಬಲ್ಲವನಾಗಿದ್ದಾನೆ. ಆತನ ಜೀವನವೊಂದು ಸಂಗೀತ, ಆತನ ಜೀವನ ಆನಂದ, ಅತ್ಯಂತ ಆಳವಾದ ಮೌನ. ಆತನ ಜೀವನ ಪ್ರಕಾಶಮಯ.

ಗುರುವಿನ ಸಾನಿಧ್ಯದಲ್ಲಿ ಮೌನವಾಗಿ ಕುಳಿತುಕೊಳ್ಳುವುದು ಪರ್ಯಾಪ್ತ. ಏಕೆಂದರೆ ಆತನ ಇರುವಿಕೆ ಅಂಟು ಸ್ವಭಾವದ್ದು. ಗುರುವಿನ ಇರುವಿಕೆ ಉಕ್ಕಿ ಹರಿಯುತ್ತಿದೆ. ಗುರುವಿನ ಮೌನ ನಿಮ್ಮ ಹೃದಯಾಂತರಾಳವನ್ನು ತಲುಪುತ್ತದೆ. ಗುರುವಿನ ಇರುವಿಕೆ ನಿಮಗೆ ಒಂದು ಅಯಸ್ಕಾಂತದ ಸೆಳೆತವಾಗುತ್ತದೆ. ನಿಮ್ಮ ಭೂತ-ಭವಿಷ್ಯತ್ತೆಂಬ ಮಣ್ಣಿನಿಂದ ಎಳೆದು ವರ್ತಮಾನಕ್ಕೆ ತಂದು ನಿಲ್ಲಿಸುತ್ತದೆ.

ಉಪನಿಷದ್ ಎಂಬುದು ಹೃದಯದಿಂದ ಹೃದಯಕ್ಕೆ ಒಟ್ಟಿಗೆ ಸೇರುವಿಕೆ, ಒಟ್ಟುಗೂಡೂವಿಕೆ. ಉಪದೇಶವಲ್ಲ. ಉಪದೇಶವೆಂಬುದು ತಲೆಯಿಂದ ತಲೆಗೆ (ಬುದ್ಧಿಯಿಂದ ಬುದ್ಧಿಗೆ). ಶ್ರವಣ ಮಾಡುವಾಗ ಶಬ್ದಗಳಿಗೆ ಹೆಚ್ಚು ಗಮನವಿಲ್ಲದಿರಲಿ. ಶಬ್ಧದಿಂದ ವ್ಯಕ್ತವಾಗುವ ಹೃದಯ ಸ್ಪಂಧನಕ್ಕೆ ಗಮನವಿರಲಿ. ಶಬ್ದಗಳು ಗುರುವಿನ ಹೃದಯಾಂತರಾಳದಿಂದ ಬರುತ್ತವೆ. ಹೃದಯಾಂತರಾಳದಲ್ಲಿ ರಂಗನ್ನು, ಪ್ರಕಾಶವನ್ನು ಹೊತ್ತು ತರುತ್ತವೆ. ಆ ಶಬ್ಧಗಳು ಗುರುವಿನ ಇರುವಿಕೆಯ ಸುಗಂಧವನ್ನು ಹೊತ್ತು ತರುತ್ತವೆ.

ನೀವು ತೆಗೆದ ಮನಸ್ಸಿನವರಾಗಿದ್ದರೆ, ಅಹಂಕಾರರಹಿತರು ಆಗಿದ್ದರೆ, ಗ್ರಹಿಸುವಿಕೆ ಇದ್ದರೆ, ಜ್ಞಾನವನ್ನು ಸ್ವಾಗತಿಸುವವರಾಗಿದ್ದರೆ, ಜ್ಞಾನವು ನಿಮ್ಮ ಹೃದಯಾಂತರಾಳವನ್ನು ಸೇರುತ್ತದೆ ಹಾಗೂ ಒಂದು ಕ್ರಮ ಆವಿರ್ಭವಿಸುತ್ತದೆ ಪರಿವರ್ತನೆಯ ಕ್ರಮ ಪ್ರಾರಂಭವಾಗುತ್ತದೆ.

ಒಬ್ಬ ಮೇಸ್ಟ್ರು ಹಾಗೂ ವಿದ್ಯಾರ್ಥಿಯ ಮಧ್ಯದಲ್ಲಿ ನಡೆಯುವ ವ್ಯವಹಾರದಲ್ಲಿ, ಯಾವುದೋ ವಿಷಯದ ಬಗ್ಗೆ ಕೆಲವು ಸಂಗತಿಗಳನ್ನು ತಿಳಿಸಬಹುದು. ಆದರೆ ಪರಿವರ್ತನೆಯಿರುವುದಿಲ್ಲ. ಇಲ್ಲಿ ಉಪದೇಶಮಾಡುವವರೇ ಪರಿವರ್ತನೆ ಯಾಗಬೇಕಾಗಿಲ್ಲ. ಆದಕಾರಣ ಬೇರೆಯವರಲ್ಲಿ ಪರಿವರ್ತನೆಯ ಕ್ರಮವನ್ನು ಪ್ರಚೋದಿಸುವ ಅಗತ್ಯವಿಲ್ಲ. ಆದರೆ ಉಪನಿಷದ್ ಈ ರೀತಿ ವಿದ್ಯೆಯಲ್ಲ. ಕೆಲವು ಸಂಗತಿಗಳನ್ನು ಸಂಗ್ರಹಿಸುವುದು ವಾಸ್ತವಾಂಶವಲ್ಲ. ಪರಿವರ್ತನೆಯೇ ವಾಸ್ತವಾಂಶ.

ಗುರುವು ನಿಮ್ಮಲ್ಲಿ ಜ್ಞಾನೋದಯವನ್ನು ಉಂಟುಮಾಡಲು ಸಾಧ್ಯವಿಲ್ಲ. ಆದರೆ ಶಿಷ್ಯರಲ್ಲಿ ಪರಿವರ್ತನೆಯ ಕ್ರಮವನ್ನು ಪ್ರಚೋದಿಸಲು ಸಾಧ್ಯ. ಆದರೆ ಬಲವಂತವಾಗಿ ಮಾಡಲು ಸಾಧ್ಯವಿಲ್ಲ. ಶಿಷ್ಯನು ಪೂರ್ಣವಾಗಿ ಗ್ರಹಿಸಬಲ್ಲನಾಗಿದ್ದರೇ ಸಾಧ್ಯ. ಗುರು- ಶಿಷ್ಯರ ಮಧ್ಯದಲ್ಲಿ ಪ್ರೇಮಪೂರಿತ ಸಂಬಂದ-ಭಕ್ತಿ ಸಂಬಂಧವಿದ್ದರೆ ಸಾಧ್ಯ. (ಭಕ್ತೋಸಿ ಮೇ ಸಖಾ ಚೇತಿ ರಹಸ್ಯಂ ಏತದುತ್ತಮಮ್|) ಶಿಷ್ಯನು ಸಂಪೂರ್ಣ ಶರಣಾಗತಿಯನ್ನು ಹೊಂದಿರಬೇಕು. ಇದೇ ಗುರುವಿನ ಸಾನಿಧ್ಯದ ಅರ್ಥ. ಸಮರ್ಪಿತವಾಗಿದ್ದಾನೆ. ಅಹಂಕಾರವನ್ನು ಪಕ್ಕಕ್ಕಿಟ್ಟಿದ್ದಾನೆ. ಅಪಾರವಾದ ನಂಬಿಕೆ ಶ್ರದ್ಧೆಗಳಿಂದ ತೆರೆದ ಮನಸ್ಸಿನವನಾಗಿದ್ಯಾನೆ. ನಂಬಿಕೆ ಇಲ್ಲದೆ, ಸಂದೇಹಯುಕ್ತವಾಗಿದ್ದಲ್ಲಿ ಪರಿವರ್ತನೆಯ
ಕ್ರಮಕ್ಕೆ ಹಿನ್ನಡಿಕೆಯಾಗುವುದು.

ಗುರುವಿನ ಬಳಿ ಸಂದೇಹ ಒಂದು ರೀತಿಯ ಅಡ್ಡಿ. ಇಲ್ಲಿ ಪ್ರಶ್ನಿಸುವುದಲ್ಲ. ಆತ್ಮನ ಅನ್ವೇಷಣೆ, ಹೃದಯಾಂತರಾಳದಿಂದ ನಡೆಯಬೇಕಾದ ವಿಚಾರ, ಅನ್ವೇಷಣೆ ಕೇವಲ ಬುದ್ಧಿಯ ಕುತೂಹಲವಲ್ಲ. ಅದಕ್ಕೂ ಹೆಚ್ಚಿನ ಪ್ರಾಮುಖ್ಯತೆ. ಇದು ಹುಟ್ಟು-ಸಾವುಗಳ ಪ್ರಶ್ನೆ.

ಎಲ್ಲ ರೀತಿಯ ಪ್ರಶ್ನೆ-ಸಮಾಧಾನ, ಎಲ್ಲ ವೈವಿಧ್ಯಮಯ ತತ್ವಶಾಸ್ತ್ರ, ಸಂಗ್ರಹಿಸಿದ ಜ್ಞಾನದಿಂದ ಇನ್ನೂ ಅಜ್ಞಾನಿಯಾಗಿ ಉಳಿದಿದ್ದಾನೆ. ಇದು ಅವನಲ್ಲಿ ಯಾವ ಪ್ರಕಾಶವನ್ನು ಉಂಟುಮಾಡಿಲ್ಲ. ಆದಕಾರಣ ಗುರುವಿನ ಬಳಿ ಬಂದಿದ್ದಾನೆ. ಗುರುವಿಗೆ ಆಗ ಸಮರ್ಪಿತನಾಗುತ್ತಾನೆ. ಯಾವ ಪ್ರಶ್ನೆಯೂ ಇಲ್ಲ. ಅವೆಲ್ಲವೂ ವ್ಯರ್ಥವೆಂದು ತಿಳಿದಿದ್ದಾನೆ. ಅಂತಹ ಶಿಷ್ಯ ಗುರುವಿನ ಬಳಿ ಬಂದು ಸಮರ್ಪಿತನಾಗಿ, ಗುರು ಸಾನಿಧ್ಯದಲ್ಲಿ ಮೌನವಾಗಿ ತೆರೆದ ಮನಸ್ಸು, ಬುದ್ಧಿ, ಹೃದಯಗಳಿಂದ ಪರಿವರ್ತನೆಗೆ ತಯಾರಾಗಿ, ಗ್ರಹಿಸಲು ಉದ್ಯುಕ್ತನಾಗಿ ಜ್ಞಾನಗರ್ಭನಾಗಿ ಕುಳಿತಿರುತ್ತಾನೆ. ವಿಶೇಷವಾದ ವ್ಯಕ್ತಿ ಎಂಬ ಭಾವನೆಯನ್ನು ಸಮರ್ಪಿಸಿರುತ್ತಾನೆ.

ಅಹಂಕಾರ ಸಮರ್ಪಿತವಾದಲ್ಲಿ ಜ್ಞಾನದ್ವಾರಗಳು ತೆರೆದಿವೆ – ಗುರುವಿನ ಇರುವಿಕೆ ಶಿಷ್ಯನಲ್ಲಿ ಪ್ರವೇಶಿಸುತ್ತದೆ. ಜ್ಞಾನದ ಗಾಳಿ, ಜ್ಞಾನದ ಮಳೆ, ಜ್ಞಾನ ಸೂರ್ಯ ಪ್ರವೇಶಿಸುತ್ತಾನೆ. ಶಿಷ್ಯನಲ್ಲಿ ಒಂದು ನೂತನ ನೃತ್ಯ, ನೂತನ ಕವಿತೆ, ಸಂಗೀತ, ಆಶ್ಚರ್ಯವನ್ನೂ ಗುರುವಿನ ಸಾನಿಧ್ಯ ಸೃಜಿಸುತ್ತದೆ.

“ಉಪನಿಷತ್ತುಗಳು ಜೀವನ ವಿರೋಧಿಯಲ್ಲ. ಅವುಗಳು ಜೀವನದಿಂದ ಓಡಿಹೋಗುವುದಕ್ಕಲ್ಲ. ಅವುಗಳು ಪೂರ್ಣಜೀವನವನ್ನು, ಜೀವನದ ಪೂರ್ಣತೆಯೊಂದಿಗೆ ಜೀವಿಸಬೇಕೆಂದು ಹೇಳುತ್ತವೆ. ಉಪನಿಷತ್ತುಗಳು ಮನುಷ್ಯನನ್ನು ಪ್ರಪಂಚದಲ್ಲಿ ಜೀವಿಸಬೇಕೆನ್ನುತ್ತವೆ. ಆದರೆ ಯಾವ ರೀತಿ ಜೀವಿಸಬೇಕೆಂದರೆ ಪ್ರಪಂಚದ ಆಚೆ ಇರುವವನಂತೆ, ಅತೀತನಾಗಿ, ಪ್ರಪಂಚದಲ್ಲಿದ್ದೂ ಪ್ರಾಪಂಚಿಕನಾಗದೇ ಜೀವಿಸಿ” ಎನ್ನುತ್ತದೆ ಉಪನಿಷತ್ತು, ಜೀವನ ಹೊಲಸಲ್ಲ, ಪಾಪವಲ್ಲ. ಜೀವನ ಪರಮಾತ್ಮನಿಂದ ಕೊಡಲ್ಪಟ್ಟ ಪಾರಿತೋಷಕ. ಜೀವನವು ಪರಮಾತ್ಮನ ವ್ಯಕ್ತ ಸ್ವರೂಪ.
“ಪ್ರಪಂಚವು ಪರಮಾತ್ಮನ ವ್ಯಕ್ತ ಸ್ವರೂಪವೆಂದು, ಪರಮಾತ್ಮನು ಪ್ರಪಂಚಕ್ಕೆ ಅವ್ಯಕ್ತ ಆಧಾರನೆಂದು” ಉಪನಿಷತ್ತುಗಳು ಘೋಷಿಸುತ್ತವೆ. ಈ ಮೂಲಭೂತ ಅಂಶವನ್ನು ನಾವುಗಳು ಸ್ಮೃತಿಯಲ್ಲಿಟ್ಟುಕೊಂಡಿರಬೇಕು. ಪ್ರತಿಯೊಂದು ವ್ಯಕ್ತ ಪ್ರಕೃತಿಯ ಘಟನೆಯೂ ವ್ಯಕ್ತವಾಗದ ಪರಮಾತ್ಮನೇ.

“ಸಾಪೇಕ್ಷಿತವಾದದ್ದನ್ನು” ಸಾಪೇಕ್ಷಿಕವಾಗಿಯೇ ಜೀವಿಸಬೇಕು. ಸಾಪೇಕ್ಷಿಕವೆಂದು ತಿಳಿದು; ಬದಲಾಗುವುದೆಂಬುದನ್ನು ತಿಳಿದು; ಸತತವಾಗಿ ಬದಲಾಗದ್ದನ್ನು, ಸತತವಾಗಿ ಸ್ಮರಣೆಯಲ್ಲಿ ಇಟ್ಟುಕೊಂಡಿರಬೇಕು. ದೇವರು ನಮ್ಮ ಆಸೆಗಳನ್ನು ನೋಡುವುದಿಲ್ಲ. ನಮಗಾವುದು ಹಿತವೋ ನೋಡುತ್ತಾನೆ. ಹಿತವಾದದ್ದನ್ನೇ ಕೊಡುತ್ತಾನೆ. ಇದೇ ನಂಬಿಕೆ. ಇದೇ ಆನಂದದಾಯಕವಾದ ಮನಸ್ಸಿನ ವೈಖರಿ. ಇದೇ (ಒಂದು ರೀತಿಯಲ್ಲಿ) ನೈಜ ಸಂನ್ಯಾಸ. ಕಣ್ವ ಋಷಿಗಳಿಗೆ ಉಪದೇಶ ಮಾಡಿದ ಕ್ರಮಕ್ಕೆ ಕಾಣ್ವ ಶಾಖೆ ಎನ್ನುತ್ತಾರೆ. ಮಧ್ಯಂದಿನ ಎಂಬುವವರಿಗೆ ಮಾಡಿದ್ದು ಮಾಧ್ಯಂದಿನ ಶಾಖೆ, ಇಬ್ಬರಿಗೂ ಯಾಜ್ಞವಲ್ಕ್ಯರಿಂದ ಉಪದೇಶ.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನು ಓದಿ | Prerane :ಆಯುರ್ವೇದಾರಂಭ, ಅವಶ್ಯಕತೆ ಹಾಗು ವಿಶೇಷತೆ!

Exit mobile version