Site icon Vistara News

Prerane : ಅಲ್ಲಿರುವುದು ನಮ್ಮನೆ, ಇಲ್ಲಿಗೆ ಬಂದೆವು ಸುಮ್ಮನೆ!

Prerane

jatra

ಸುಮುಖ ಹೆಬ್ಬಾರ್
ರಥಸಪ್ತಮಿಯ ನಂತರ ಪ್ರತಿ ಊರಿನಲ್ಲಿಯೂ ಜಾತ್ರೆಯ ಸಂಭ್ರಮ. ಅಂಗಡಿಯ ಸಾಲು. ವಿಶೇಷ ಆಕರ್ಷಕ ಮಾರಾಟ ವಸ್ತುಗಳು. ಮಕ್ಕಳಿಗಂತೂ ಬಗೆಬಗೆಯ ಆಟದ ವಸ್ತುಗಳ ಮೇಲೆ ಒಲವು. ಸರ್ಕಸ್ಸಿನ ಪ್ರಾಣಿಗಳನ್ನು ಪಳಗಿಸಿರುವ ರೀತಿ, ಅವುಗಳು ತೋರುವ ಬುದ್ಧಿಶಕ್ತಿ, ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

ರುಚಿಯಾದ ಖಾದ್ಯಗಳೇನು, ಬಟ್ಟೆ, ಪಾತ್ರೆಗಳ ವೈವಿದ್ಯಗಳೇನು? ರಥಬೀದಿಯ ಅಲಂಕಾರ, ಝಗಮಗಿಸುವ ದೀಪಗಳು, ದೇವಾಲಯದ ಕಾರ್ಯಕಲಾಪಗಳು, ಸ್ನೇಹಿತರು ಮತ್ತು ಬಂಧು-ಬಾಂಧವರ ಭೇಟಿಯ ಸಂಭ್ರಮ, ಮಾತು-ಕತೆ, ಹರಟೆ, ನಗು, ಸಂತೋಷ. ಅಬ್ಬಬ್ಬಾ ಒಂದೇ, ಎರಡೇ, ಜಾತ್ರೆಯ ವೈಭವ ಎಷ್ಟು ಚಂದ!!

ಹೀಗೆ ಜಾತ್ರೆಯನ್ನು ಆಸ್ವಾದಿಸುತ್ತಿರುವ ಅಸಾಮಿಗೆ, ನಾನು ಮನೆಯಿಂದ ಜಾತ್ರೆಗೆ ಬಂದಿದ್ದೇನೆ. ಪುನಃ ಮನೆಗೆ ವಾಪಸ್ಸು ಹಿಂತಿರುಗಬೇಕು ಎಂಬ ವಿಷಯವೇ ಮರೆತುಹೋದರೆ?! ಎರಡು ದಿನದಲ್ಲಿ ಮುಗಿಯುವ ಜಾತ್ರೆಯಲ್ಲಿಯೇ ಮನಸ್ಸು ಲಗ್ನಗೊಂಡು ಅಲ್ಲಿಯೇ ಉಳಿದುಬಿಟ್ಟರೆ? ಆ ವ್ಯಕ್ತಿಯ ಮೇಲೆ ಅನುಕಂಪ ಮೂಡುವುದು ಸಹಜವಷ್ಟೇ. “ಅಯ್ಯಾ!, ನಿನಗೊಂದು ಮನೆ ಇದೆ. ಅಲ್ಲಿ ನಿನಗಾಗಿ, ನಿನ್ನವರು ಕಾಯುತ್ತಿರುತ್ತಾರೆ. ನೀನು ಅಲ್ಲಿಗೆ ಹಿಂದಿರುಗಬೇಕು” ಎಂದು ಹೇಳುವ ಮನಸ್ಸಾಗುತ್ತದೆಯಲ್ಲವೇ?”

ವಾಸ್ತವವಾಗಿ ಜಾತ್ರೆಯಲ್ಲಿ ಸಿಕ್ಕಿಹಾಕಿಕೊಂಡ ಅಸಾಮಿಯಯ ಸ್ಥಿತಿಯೇ ನಮ್ಮದೂ ಆಗಿದೆ. ಒಂದು ಕಾಲದಲ್ಲಿ ನಾವೆಲ್ಲರೂ ಭಗವಂತನ ಮಡಿಲಿನಲ್ಲಿ ಆಟವಾಡುತ್ತಾ ಇದ್ದವರಂತೆ. ಭಗವಂತನು ಈ ಪ್ರಕೃತಿಯನ್ನು ಸೃಷ್ಟಿಸಿ, ಇದನ್ನು ಒಮ್ಮೆ ನೋಡಿಕೊಂಡು ಬಾ ಎಂದು ನಮ್ಮನ್ನು ಕಳುಹಿಸಿದನಂತೆ. ಅವನಿಂದ ಹೊರಟ ನಾವು, ಸೃಷ್ಟಿಯನ್ನು ನೋಡುತ್ತಾ, ನೋಡುತ್ತಾ, ಅದರ ಆಸ್ವಾದನೆಯಲ್ಲಿಯೇ ಎಲ್ಲವನ್ನೂ ಮರೆಯುತ್ತಾ ಬಹುದೂರ ಬಂದುಬಿಟ್ಟಿದ್ದೇವಂತೆ. ಅದೆಷ್ಟು ದೂರ ಬಂದೆವೆಂದರೆ, ಹಿಂದೆತಿರುಗಿ ನೋಡಿದಾಗ, ಹೊರಟ ಜಾಗವೇ ಮರೆಯುವಷ್ಟು. ಬಂದ ದಾರಿಯೂ ನೆನಪಲ್ಲಿ ಉಳಿಯದಷ್ಟು. ನಾವು ಭಗವಂತನ ಬಳಿಯಿಂದ ಬಂದವರು ಪುನಃ ಅವನಲ್ಲೇ ಹೋಗಿ ಸೇರಬೇಕು ಎಂಬ ವಿಷಯವೇ ನಮ್ಮಿಂದ ಮರೆಯಾಗಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಮಗ ಜಾತ್ರೆಗೆ ಹೋಗಿ ಮನೆಗೆ ಬಾರದಿದ್ದರೆ, ತಂದೆಯು ಮಗನ ನಿರೀಕ್ಷೆಯಲ್ಲಿರುತ್ತಾರೆ ಅಲ್ಲವೇ? ಸಾಕಷ್ಟು ಕಾದು, ನಂತರ ತಂದೆಯೇ ಜಾತ್ರೆಗೆ ಹೋಗಿ, ಮಗನನ್ನು ಹುಡುಕಿತರುವುದು ಸಹಜವೇ ತಾನೇ. ಹಾಗೆಯೇ ಭಗವಂತನು ನಮ್ಮ ನಿರೀಕ್ಷೆಯಲ್ಲಿರುತ್ತಾನಂತೆ. “ಒಂದು ಜೀವ ಭಗವಂತನ ಕಡೆ ಒಂದು ಹೆಜ್ಜೆ ಹಾಕಿದರೆ, ಭಗವಂತ ಜೀವದ ಕಡೆ ಹತ್ತು ಹೆಜ್ಜೆ ಹಾಕಿ ಬರುತ್ತಾನಪ್ಪ” ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು.

ಒಂದೊಮ್ಮೆ ಸೃಷ್ಟಿಯ ಚಕ್ರದಲ್ಲಿ ಸಿಲುಕಿ ದಾರಿಯೇ ಗೊತ್ತಾಗದಿದ್ದಾಗ ಪರಮ ಕರುಣೆಯಿಂದ, ಸಾಕ್ಷಾತ್ಭಗವಂತನೇ ಅವತರಿಸಿ ಬರುವುದುಂಟು. ಜ್ಞಾನಿಗಳ ಮೂಲಕ ನಮ್ಮ ಮನೆ ನೆನಪಿಸಲು ಪ್ರಕಟವಾಗುವುದುಂಟು. ಹೀಗೆ,ರಾಮ – ಕೃಷ್ಣರಂತಹ ಅವತಾರ ನಡೆದಾಗ ಅವರನ್ನು ಅವಲಂಬಿಸಿ ಮನೆ ತಲುಪಿದ ಧನ್ಯಜೀವಿಗಳೆಷ್ಟೋ! ನಾವೆಲ್ಲರೂ ಅವತಾರ ಪುರುಷರ, ಜ್ಞಾನಿಗಳ ಸಹಕಾರದಿಂದ ಮತ್ತೆ ನಮ್ಮ ಮನೆಗೆ ಮರಳುವಂತಾಗಲಿ ಎಂದು ಆಶಿಸೋಣ.

ಲೇಖಕರು ಸಂಸ್ಕೃತಿ ಚಿಂತಕರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Prerane | ನಿಮ್ಮ ಕಣ್ಣಿಂದ ನೀವೇ ನೋಡುತ್ತಿರುವಿರೋ?

Exit mobile version