ಶ್ರೀ ಕೈವಲ್ಯಾನಂದ ಸರಸ್ವತೀ
ನಾವೇಕೆ ದುಃಖಿಗಳಾಗಿದ್ದೇವೆ? ಏಕೆಂದರೆ, ಎಲ್ಲಿ ಮನೆಯನ್ನು ಮಾಡಲಾಗದೊ ಅಲ್ಲಿಯೇ ಮನೆ ಮಾಡಲು ಹೊರಟಿರುವಿರಿ. ಮತ್ತೆಲ್ಲಿ ಮನೆ ಮಾಡಲಾದೀತೋ ಮಾಡಿ ಸಿದ್ಧವಾಗಿದೆಯೋ ಆ ಮನೆಯನ್ನು ಒಮ್ಮೆ ತಿರುಗಿಯೂ ನೋಡುತ್ತಿಲ್ಲ. ಕಣ್ಣುಗಳು ವಿಷಮ ದಿಕ್ಕಿನೆಡೆ ನೆಟ್ಟಿದೆ. ಆದರಿಂದಲೇ ದುಃಖ ವಿಷಮತೆಯೊಂದಿಗೆ ಬೆರೆಯುವ ಪರಿಣಾಮವೇ ದುಃಖ. ವಿಷಮತೆಯ ಸಹವಾಸವೇ ದುಃಖಕರ. ಸತ್ಸಂಗ-ಸತ್ತಿನೊಡನೆ ಸಂಗ ಒಂದೇ ದುಃಖ ನಿವಾರಣ ಮಾರ್ಗ.
ಕಷ್ಟ ಬಂದಾಗ ಹೀಗೇಕೆ ಎನ್ನುತ್ತಾರೆ. ಸುಖ ಬಂದಾಗ ಆ ರೀತಿ ಪ್ರಶ್ನೆ ಹಾಕುವುದಿಲ್ಲ. ಈ ರೀತಿ ಇರಬಾರದು. ಎರಡನ್ನು ಒಪ್ಪಿಕೊಳ್ಳಬೇಕು. ಆಗ ಒಂದು ಪರಿವರ್ತನೆ ಇರುತ್ತದೆ. ಕಷ್ಟ ಬಂದಾಗ ಇದೂ ಸಹ ಜೀವನದ ಒಂದು ಅಂಗ ಎಂದು ಸ್ವೀಕರಿಸಬೇಕು. ಸ್ವೀಕರಿಸಿದ ಕ್ಷಣದಲ್ಲಿಯೆ ದುಃಖದ ಸ್ವಭಾವವು ಪರಿವರ್ತನೆಗೊಳ್ಳುತ್ತದೆ. ಸ್ವೀಕರಿಸುವುದರಿಂದ ದುಃಖದ ಗುಣವು ಬದಲಾಗುತ್ತದೆ.
ನೀವು ಸ್ವೀಕರಿಸಿದ್ದೇ ಆದರೆ ನೀವು ಅದನ್ನು ಬದಲಾಯಿಸಿರುತ್ತೀರ, ಇನ್ನು ಅದು ದುಃಖವಾಗಿ ಉಳಿಯದು, ಏಕೆಂದರೆ ನಾವುಗಳು ಸಂತೋಷವನ್ನೇ ಸ್ವಿಕರಿಸುತ್ತೇವೆ. ಇನ್ನೂ ಇದರ ಗೂಢಾರ್ಥವನ್ನು ತಿಳಿದು ಬಯಸಿದರೆ ನೀವು ಯಾವುದನ್ನು ಸ್ವೀಕರಿಸುವಿರೊ ಅದು ಸಂತಸವಾಗುತ್ತದೆ. ನಿರಾಕರಿಸಿದ್ದು ನೋವಾಗುತ್ತದೆ, ದುಃಖವಾಗುತ್ತದೆ. ಅಸಂತೋಷವಾಗುತ್ತದೆ. ನಿಮ್ಮನ್ನು ಬಿಟ್ಟು ಸಂತೋಷ ಅಸಂತೋಷಗಳೆಂಬುವಿಲ್ಲ. ನಿಮ್ಮ ಸ್ವೀಕಾರ, ನಿರಾಕರಣೆ-ಇದೇ ಮುಖ್ಯ. ಪ್ರಯತ್ನ ಮಾಡಿ ನೋಡಿ. ನಿಮ್ಮ ಅರಿವಿಲ್ಲದೆ ಹಲವಾರು ಸಲ ಇದು ನಿಮಗೆ ಆಗಿದೆ. ನಿಮ್ಮ ಮೇಲೆ ಆಧಾರ ಪಡೆದಿದೆ. ನಿಮ್ಮ ಸ್ವೀಕಾರ ಅಥವಾ ನಿಮ್ಮ ನಿರಾಕರಣೆಯ ಮೇಲೆ ನಿಂತಿದೆ.
ಸುಖ ದುಃಖಗಳೆರಡನ್ನೂ ಸ್ವೀಕರಿಸುವುದರಿಂದ ಅವುಗಳನ್ನು ದಾಟಲು ಸಾಧ್ಯ ಅಥವಾ ಎರಡನ್ನೂ ನಿರಾಕರಿಸುವುದ ರಿಂದಲೂ ದಾಟಬಹುದು. ಮೂಲಭೂತವಾಗಿ ಮನುಷ್ಯನು ಪರಿವರ್ತನೆಯಾಗಲು ಇವೆರೆಡೇ ಮಾರ್ಗಗಳು. ನೀವು ಸಂತೋಷವನ್ನು ನಿರಾಕರಿಸಿಸುವುದಾದರೆ ನೀವು ಎಂದೂ ದುಃಖಿಗಳಾಗುವುದಿಲ್ಲ. ದುಃಖವನ್ನು ಸ್ವೀಕರಿಸುವುದೇ ಆದಲ್ಲಿ ಎಂದೂ ದುಃಖಿಗಳಾಗುವುದಿಲ್ಲ. ದುಃಖವನ್ನು ಸ್ವೀಕರಿಸುವ ಮನುಷ್ಯನನ್ನು ಹೇಗೆ ದುಃಖಿಯನ್ನಾಗಿ ಮಾಡಲು ಸಾಧ್ಯ? ಸಾಧ್ಯವಿಲ್ಲ. ನೀವು ಇಬ್ಭಾಗ ಮಾಡುವುದರಿಂದಲೇ ಸಮಸ್ಯೆಯು ಪ್ರಾರಂಭವಾಗುತ್ತದೆ. ಇದು ಸುಖ, ಅದು ದುಃಖ ಎಂದು ನೀವೆ ಹೇಳುತ್ತೀರ. ಇದು ನಿಮ್ಮ ಮನಸ್ಸಿನಲ್ಲೇ ಇದೆ. ವಾಸ್ತವಿಕವಾಗಿ ವಿಭಾಗವಿಲ್ಲ. ಏರಿಳಿತಗಳೆರಡೂ ಜೀವನದಲ್ಲಿ ಸಹಜ. ಎರಡನ್ನೂ ಒಪ್ಪಬೇಕು ಇವುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಬೇಡ.
ಸ್ವೀಕರಿಸುವಿಕೆಯನ್ನು ಕಲಿಯುವುದೇ ನಿಜವಾದ ಸಾಧನ. ಅಯ್ಕೆಯನ್ನು ನಿಲ್ಲಿಸು. ಯಾವ ಆಯ್ಕೆ ಇಲ್ಲದೇ ಸ್ವೀಕರಿಸು. ಆಯ್ಕೆಯಿಲ್ಲದಿರು. ಸ್ವೀಕರಿಸಲು ಸಿದ್ದನಿರು. ಎರಡನ್ನೂ ಸ್ಪೀಕರಿಸುವುದರಿಂದ ಎರಡನ್ನೂ ದಾಟಲು ಸಾಧ್ಯ. ಆಗ ದುಃಖವು ನಿಮ್ಮನ್ನು ದುಃಖಿಯನ್ನಾಗಿ ಮಾಡದು, ಸುಖವು ಸುಖಿಯನ್ನಾಗಿ ಮಾಡದು, ಎರಡರಲ್ಲೂ ಸಮವಾಗಿ ರುತ್ತೀರ. ಎರಡೂ ಬಂದು ಹೋಗುತ್ತವೆ. ನಿಮ್ಮನ್ನು ಸ್ಪರ್ಶಿಸುವುದಿಲ್ಲ. ಆಗಲೇ ಸಮಾಧಾನ ಶಾಂತಿ, ಮೌನ, ಇವುಗಳು ಸಾಧ್ಯ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನು ಓದಿ: Prerane : ರುಕ್ಮಿಣಿಯ ಶರಣಾಗತಿ ಮತ್ತು ನಮ್ಮ ಆದರ್ಶ