Site icon Vistara News

Prerane : ಪುನರ್ಜನ್ಮವಿರದ ಕೇಶವದರ್ಶನ ರಥೋತ್ಸವ

Prerane

Prerane

ಸುಬ್ರಹ್ಮಣ್ಯ ಸೋಮಯಾಜಿ
ಡೋಲಾಯಮಾನಂ ಗೋವಿಂದಂ, ಮಂಚಸ್ಥಂ ಮಧುಸೂದನಮ್
ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ||

ಉಯ್ಯಾಲೆಯಲ್ಲಿ ಕುಳಿತ ಗೋವಿಂದನನ್ನು, ಮಂಚದಲ್ಲಿ ಪವಡಿಸಿದ ಮಧುಸೂದನನನ್ನು, ರಥದಲ್ಲಿ ವಿರಾಜಮಾನನಾಗಿರುವ ಕೇಶವನನ್ನು ನೋಡಿದರೆ ಪುನರ್ಜನ್ಮ ಇರುವುದಿಲ್ಲ, ಮೋಕ್ಷವನ್ನು ಪಡೆಯುತ್ತಾನೆ ಎಂಬುದು ಈ ಆಗಮೋಕ್ತವಾದ ಶ್ಲೋಕದ ಭಾವಾರ್ಥ.

ಎಷ್ಟು ಸುಲಭ! ಮನೆಮುಂದೆ ರಥೋತ್ಸವ ಬಂದಾಗ ಆಚೆ ಬಂದು ರಥದಲ್ಲಿರುವ ದೇವರ ಮೂರ್ತಿಯನ್ನು ನೋಡಿದರಾಯಿತು. ಮೋಕ್ಷದ ಉಪಾಯ ಇಷ್ಟು ಸುಲಭವಾಗಿರುವಾಗ ತಪಸ್ಸು, ಧ್ಯಾನ, ಪೂಜೆ, ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಇವುಗಳಿಗೆಲ್ಲಾ ಏನು ಅರ್ಥವಿದೆ? ಸುಮ್ಮನೇ ಕಷ್ಟಪಡುವುದೇಕೆ ಎನ್ನಿಸಬಹುದು.

ಮಹರ್ಷಿ ಹೃದಯವೇದ್ಯರಾದ ಶ್ರೀರಂಗಮಹಾಗುರುಗಳು ತಿಳಿಸಿದಂತೆ, ಅಲ್ಲಿ ಹೇಳಿರುವ ಉಯ್ಯಾಲೆ, ಮಂಚ, ರಥ ಇವೆಲ್ಲವೂ ನಮ್ಮ ಶರೀರವೇ ಆಗಿವೆ. ಉಯ್ಯಾಲೆ ಮುಂದಕ್ಕೆ ಹಿಂದಕ್ಕೆ ತೂಗುತ್ತದೆ. ನಮ್ಮನ್ನು ಪ್ರವೃತ್ತಿ ಮಾರ್ಗ ಮತ್ತು ನಿವೃತ್ತಿ ಮಾರ್ಗಗಳಲ್ಲಿ ಸಾಗುವಂತೆ ಮಾಡುವ ಈ ಶರೀರವಾಸಿಯಾದ, ಪ್ರೇರಕ ಶಕ್ತಿಯಾದ ಗೋವಿಂದನನ್ನು ನೋಡುವಂತಾಗಬೇಕು. ಧರ್ಮ, ಅರ್ಥ, ಕಾಮ, ಮೋಕ್ಷ ಗಳೆಂಬ ನಾಲ್ಕು ಪುರುಷಾರ್ಥಗಳನ್ನು ಅನುಭವಿಸುವ ಯೋಗ್ಯತೆ ಇರುವ ಚತುರ್ಭದ್ರವಾದ -ನಾಲ್ಕು ಕಾಲಿನ ಮಂಚವೇ ನಮ್ಮ ಶರೀರ. ಅದರಲ್ಲಿ ಅವೆಲ್ಲವನ್ನೂ ದಯಪಾಲಿಸುವ ಸ್ವಾಮಿಯಾಗಿ ಪವಡಿಸಿದ ಮಧುಸೂದನನ ದರ್ಶನ ಮಾಡುವಂತಾಗಬೇಕು.

ಇನ್ನು ಈ ಶರೀರವನ್ನು ಒಂದು ರಥವಾಗಿ ಕಂಡಿದ್ದಾರೆ. ಈ ರಥದ ಸ್ವಾಮಿಯೇ ಒಳಗೆ ಬೆಳಗುವ ಚೈತನ್ಯಸ್ವರೂಪಿಯಾದ ಭಗವಂತ. ಅವನೇ ಕೇಶವ. ಅವನನ್ನು ಈ ರಥದ ಒಳಗೆ ಕಾಣುವಂತಾಗಬೇಕು. ಅದಕ್ಕಾಗಿಯೇ ನಮ್ಮ ಸಾಧನೆ, ತಪಸ್ಸು, ಧ್ಯಾನ, ಪೂಜೆ ಎಲ್ಲವೂ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಭಾರತೀಯ ಸಂಸ್ಕೃತಿಯ ಎಲ್ಲ ಸಾಧನಾ ಮಾರ್ಗಗಳ ಅಂತಿಮ ಗುರಿಯೂ ಇದೇ ಆಗಿದೆ. ಈ ರಥದ ಅನುಕೃತಿಯಾಗಿ ಹೊರಗೂ ರಥವನ್ನು ತಂದರು. ನಮ್ಮ ದೇಹರಥವನ್ನು ನೆನಪಿಸುವ ಹೊರ ರಥ ಅದು. ಈ ಹೊರ ರಥದ ಶಿಲ್ಪದಲ್ಲಿ ಕೆಳಭಾಗದಲ್ಲಿ ಪ್ರಾಣಿಗಳ, ಇಂದ್ರಿಯಜೀವನದ ಚಿತ್ರಗಳು ಎಲ್ಲವನ್ನೂ ಕಾಣಬಹುದು. ಮೇಲೆ ಮೇಲಕ್ಕೆ ಹೋದಂತೆ ದೇವತೆಗಳ, ಅಂತರಂಗದ ದರ್ಶನಗಳ ಚಿತ್ರಗಳನ್ನು ಕಾಣಬಹುದು. ಇನ್ನೂ ಮೇಲೆ ದೇವದೇವನನ್ನು ಕುಳ್ಳಿರಿಸಿ ರಥವನ್ನು ಎಳೆಯುತ್ತಾರೆ. ನಮ್ಮ ಸಂಸ್ಕಾರ ಕೇವಲ ಭೌತಿಕ ಜೀವನಕ್ಕೆ ಸೀಮಿತವಾಗಿದ್ದಾಗ ನಮ್ಮ ಪ್ರವೃತ್ತಿಗಳು ಪಶುಗಳಂತೆ-ಕೇವಲ ಇಂದ್ರಿಯ ಜೀವನವಷ್ಟೇ ಆಗಿರುತ್ತದೆ.

ಪರಮಗುರುವಿನ ಮಾರ್ಗದರ್ಶನದಲ್ಲಿ ಅಂತರಂಗದ ಸಾಧನೆ ಬೆಳೆದು ಸಂಸ್ಕಾರ ವೃದ್ಧಿಯಾದಂತೆ ಅಲ್ಲಿ ದೇವತಾ ದರ್ಶನವುಂಟು. ಸಂಸ್ಕಾರವು ಪೂರ್ಣಪ್ರಮಾಣದಲ್ಲಿ ಬೆಳೆದಾಗ ಜೀವನದ ತುತ್ತತುದಿಯಲ್ಲಿ ಬೆಳಗುವ ದೇವದೇವನ ದರ್ಶನವೂ ಉಂಟು. ಹೀಗೆ ನಮ್ಮ ಸಮಗ್ರ ಜೀವನದ ಉದ್ದೇಶವನ್ನೇ ಪರಿಚಯಮಾಡಿಸುವ ಉಪಾಯವಾಗಿ ರಥೋತ್ಸವವನ್ನು ಈ ದೇಶದ ಜ್ಞಾನಿಗಳು ತಂದಿದ್ದಾರೆ.

ಇಂದು ಎಲ್ಲೆಡೆ ರಥೋತ್ಸವಗಳು ಆರಂಭವಾಗುವ ಕಾಲದಲ್ಲಿ ಶ್ರೀರಂಗಮಹಾಗುರುಗಳು ಅರುಹಿದ ಈ ನೈಜ ಪರಿಚಯದಿಂದ ರಥಸಪ್ತಮಿಯನ್ನು ಆಚರಿಸುವಂತಾಗಲಿ.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Prerane | ನಾವೇಕೆ ದುಃಖಿಗಳಾಗಿದ್ದೇವೆ?

Exit mobile version