ಗಣೇಶ ಭಟ್ಟ
ಪ್ರತಿಜೀವಿಯೂ ಸುಖವಾಗಿರಲು ಬಯಸುವುದು. ನಾವು ಸುಖವಾಗಿರಲು ಒಂದಲ್ಲಾ ಒಂದು ವಸ್ತು-ವ್ಯಕ್ತಿ-ವಿಷಯವನ್ನು ಅರಸುತ್ತೇವೆ. ನಮ್ಮ ಸುಖವು, ವಸ್ತು-ವ್ಯಕ್ತಿ-ವಿಷಯ ಆಧಾರಿತವಾಗಿದೆ. ಆದರೆ ಇವೆಲ್ಲಾ ದೊರಕಿದ ಮೇಲೂ ನಾವು ಸುಖಿಯಲ್ಲ ಎನ್ನುವುದು ಮಾತ್ರ ಕಟು ಸತ್ಯ.
ಇನ್ನೂ ಸ್ಕೂಲಿಗೆ ಹೋಗದ ಬಾಲಕನೊಬ್ಬ ಯೋಚಿಸುತ್ತಾನೆ- ‘ನಾನು ಒಂದು ವೇಳೆ ಸ್ಕೂಲಿಗೆ ತೆರಳಿದರೆ, ಮನೆಗಿಂತ ಹೆಚ್ಚಿನ ಸ್ವಾತಂತ್ರ, ಸ್ವಚ್ಛಂದತೆಯಿಂದ ಸುಖಿಯಾಗಿರಬಹುದು’. ಅದೇ ಸ್ಕೂಲಿಗೆ ತೆರಳುತ್ತಿರುವ ವಿದ್ಯಾರ್ಥಿ ಯನ್ನು-‘ನೀನು ಸುಖಿಯೇ?’ಎಂದು ಕೇಳಿದರೆ, ಆತ -‘ಈ ವಿದ್ಯೆಯಿಂದ ನನಗೊಂದು ಉದ್ಯೋಗ ದೊರಕಿದರೆ, ಆಗ ನಾನು ಸುಖಿ’ಎಂದು ಹೇಳುವನು. ಇನ್ನು ಆ ವ್ಯಕ್ತಿಗೆ ಉದ್ಯೋಗ ದೊರಕಿತು, ಆಗ ಆ ವ್ಯಕ್ತಿಯನ್ನು-‘ನೀನು ಸುಖಿಯೇ?’ಎಂದು ಕೇಳಿದರೆ-‘ನಾನು ಸುಖವಾಗಿರಲು ಬಾಳಸಂಗಾತಿಯೊಬ್ಬರು ಬೇಕು, ಆಗ ನಾನು ಸುಖಿಯಾಗಿರುವೆ’ಎನ್ನುವನು. ಆ ವ್ಯಕ್ತಿಗೆ ಬಾಳಸಂಗಾತಿಯೂ ದೊರಕಿದೆರೆ ಆಗ-‘ನೀವು ಸುಖವಾಗಿದ್ದೀರಾ?’ಎಂದು ಕೇಳಿದರೆ ಅವರು-‘ಸುಖಿಯಾಗಿರಲು ನಮಗೊಂದು ಮಗುವಿನ ಆವಶ್ಯ’ಎನ್ನುವರು.
ಯಾವಾಗ ಅವರಿಗೆ ಮಗು ವಾಯಿತೋ ಅವರನ್ನು-‘ನೀವು ಈಗ ಸುಖಿಯೇ?’ಎಂದು ವಿಚಾರಿಸಿದರೆ, ಅವರು ಹೇಳುವರು-‘ಮಕ್ಕಳು ದೊಡ್ಡವರಾಗಬೇಕು, ಅವರಿಗೆ ಒಳ್ಳೆಯ ಶಿಕ್ಷಣ ದೊರಕಬೇಕು, ಅವರಿಗೆ ಉತ್ತಮ ಉದ್ಯೋಗ ದೊರಕಿ, ತಮ್ಮ ಸ್ವಂತ ಕಾಲ ಮೇಲೆ ಅವರು ಯಾವಾಗ ನಿಲ್ಲುವರೊ, ಅಲ್ಲಿಯತನಕ ನಮಗೆ ಸುಖವಿಲ್ಲ’ ಎನ್ನುವರು. ಇವೆಲ್ಲವೂ ದೈವಾನುಗ್ರಹದಿಂದ ದೊರಕಿತು ಅಂದುಕೊಳ್ಳೋಣ, ಆಗ ಅವರಿಗೆ ವಯಸ್ಸಾಗಿರುತ್ತದೆ. ಅವರು ವೃತ್ತಿಯಿಂದ ನಿವೃತ್ತರಾಗಿರುತ್ತಾರೆ. ವೃತ್ತಿಯಿಂದ ನಿವೃತ್ತರಾದವರನ್ನು-‘ನೀವು ಸುಖಿಯೇ?’ಎಂದುಕೇಳಿದರೆ, ಅವರು-‘ನಾನು ಯೌವನದ ಕಾಲದಲ್ಲೇ ಸುಖವಾಗಿದ್ದೆ’ ಎಂದು ಅವರು ಆ ದಿನಗಳನ್ನು ನೆನಪಿಸಿಕೊಳ್ಳುವರು.
ತಾತ್ಪರ್ಯ ಇಷ್ಟೆ, ಒಬ್ಬ ವ್ಯಕ್ತಿಯ ಸಂಪೂರ್ಣ ಜೀವನ ಭವಿಷ್ಯತ್ತಿನ ಸುಖ-ಸಂತೋಷಗಳ ಸಿದ್ಧತೆಯಲ್ಲಿಯೇ ಕಳೆದು ಹೋಗುವುದು. ರಾತ್ರಿ ಪೂರ್ತಿ ಹಾಸಿಗೆ ಹಾಸುವುದರಲ್ಲೇ ಕಳೆದರೆ, ನಿದ್ರೆ ಮಾಡಲು ಸಮಯವೆಲ್ಲಿ ದೊರಕುವುದು? ನಾವು ನಮ್ಮಜೀವನದ ಎಷ್ಟು ನಿಮಿಷ, ಎಷ್ಟು ಗಂಟೆ, ಎಷ್ಟು ದಿನ ವರ್ತಮಾನಕ್ಷಣದಲ್ಲಿ ಬದುಕಿದ್ದೇವೆ? ಅದು ನಿಜವಾಗಿ ಬದುಕಿದ್ದು. ಪ್ರಸನ್ನತೆಯಿಂದ, ಸಂತೋಷದಿಂದ ಬದುಕಿರುವುದೇ ನಿಜವಾದ ಬದುಕು. ಮನಸ್ಸಿಟ್ಟು ಆನಂದವನ್ನು ಅನುಭವಿಸಿದ್ದು. ಬಾಲ್ಯದಲ್ಲಿರುವಾಗ ಇಷ್ಟವಾದ ಆಟದಲ್ಲಿ, ನೀರಿನಲ್ಲಿ ಈಜಾಡುತ್ತಾ ಮೈಮರೆತದ್ದು ಅಥವಾ ದೊಡ್ಡವರಾದಂತೆ,ಇಷ್ಟವಾದ ಕಾರ್ಯದಲ್ಲಿ ಕಳೆದ್ದು, ಸೂರ್ಯೋದಯ-ಸೂರ್ಯಾಸ್ತಗಳನ್ನು, ಸಮುದ್ರದ ಅಲೆಗಳನ್ನು ವೀಕ್ಷಿಸಿದ್ದು, ಪರ್ವತ ಶಿಖರದ ಮೇಲೆ ಕುಳಿತು ಪ್ರಕೃತಿಯ ಆನಂದವನ್ನು ಸವಿಯುತ್ತಾ ವರ್ತಮಾನದಲ್ಲಿ ಬದುಕಿದಕ್ಷಣವೇ ಸುಖದಕ್ಷಣ.
“ಅಂದು ಕೊಂಡದ್ದನ್ನು ಪಡೆದ ಮೇಲೆʼʼ ಸುಖಿಯಾಗಿ ಬದುಕುವೆ. ಏನು ಬೇಕಾದರೂ ಸಂಭವಿಸಲಿ ಕ್ಷಣ-ಕ್ಷಣವೂ, ವರ್ಷ ವರ್ಷವೂ ಸುಖವಾಗಿ ಬದುಕುವೆ ಎಂದು ನಾವು ಇವೆರಡರಲ್ಲಿ ಯಾವೊಂದನ್ನು ಆರಿಸಿಕೊಂಡರೂ, ಸುಖವಾಗಿ ಬದುಕುವೆವು. ಆನಂದದಿಂದ ಇರುವೆವು. ಅಷ್ಟೇ ಅಲ್ಲದೆ;
ಆರೋಗ್ಯಂ ಆನೃಣ್ಯಂ ಅವಿಪ್ರವಾಸಃ ಸದ್ಭಿರ್ಮನುಷ್ಯೈಃ ಸಹ ಸಂ ಪ್ರಯೋಗಃ |
ಸ್ವಪ್ರತ್ಯಯಾವೃತ್ತಿಃ ಅಭೀತಿವಾಸಃ ಷಡ್ ಜೀವಲೋಕಸ್ಯ ಸುಖಾನಿ ರಾಜನ್||
ಆರೋಗ್ಯವಾಗಿರುವಿಕೆ, ಸಾಲವಿಲ್ಲದಿರುವಿಕೆ, ಸದಾ ಪ್ರಯಾಣ ಮಾಡದಿರುವಿಕೆ, ಸಜ್ಜನರೊಂದಿಗಿನ ಸಹವಾಸ, ತನಗಿಷ್ಟವಾದ ವೃತ್ತಿ ಮಾಡುವಿಕೆ ಮತ್ತು ಭಯವಿಲ್ಲದೆ ಬದುಕುವಿಕೆ-ಈ ಆರು ಸುಖಕ್ಕೆ ಕಾರಣವಾದವುಗಳು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬದುಕುವಕಲೆಯನ್ನು ರೂಢಿಸಿಕೊಂಡರೆ ಜೀವನದಲ್ಲಿ ಸುಖವಾಗಿ ಬದುಕುವೆವು.
ಜೀವನದಲ್ಲಿ ಶೇಕಡಾ ಎಂಬತ್ತರಷ್ಟು ಆನಂದವೇ ತುಂಬಿದೆ. ಕೇವಲ ಇಪ್ಪತ್ತು ಪ್ರತಿಶತ ದುಃಖವಿದೆ. ಆದರೆ ನಾವು ಆ ಇಪ್ಪತ್ತು ಪ್ರತಿಶತವನ್ನೇ ಹಿಡಿದುಕೊಂಡು ಕೊರಗುತ್ತಿರುತ್ತೇವೆ. ಅದನ್ನೇ ಇನ್ನೂರು ಪ್ರತಿಶತ ಮಾಡಿಕೊಂಡು ದುಃಖಿಸುತ್ತೇವೆ. ಅಂಧಕಾರದ ನಂತರ ಬೆಳಕು ಮೂಡುವಂತೆ, ಕಾರ್ಮೋಡದ ನಂತರ ಶುಭ್ರವಾದ ಆಕಾಶ ಗೋಚರಿಸುವಂತೆ, ಒಂದು ವೇಳೆ ದುಃಖವಿದ್ದರೆ, ದುಃಖದ ನಂತರ ಸುಖದ ದಿನಗಳು ಬರುವವು ಎಂದು ವರ್ತಮಾನದಲ್ಲಿ ಬದುಕುತ್ತಾ ಆ ದಿನಗಳಿಗಾಗಿ ನಿರೀಕ್ಷಿಸಬೇಕಷ್ಟೆ.
-ಲೇಖಕರು ಸಂಸ್ಕೃತ ಉಪನ್ಯಾಸಕರು, ನೆಲ್ಲಿಕೇರಿ, ಕುಮಟಾ(ಉ.ಕ)
ಇದನ್ನು ಓದಿ| Prerane | ಎಣ್ಣೆ, ಬತ್ತಿ ಇಲ್ಲದೆ ಬೆಳಗುವ ದೀವಿಗೆ