Site icon Vistara News

Prerane : ಪರಮಾತ್ಮ ಮತ್ತು ನಮ್ಮ ನಡುವೆ ತಡೆಯಾಗಿರುವುದೇನು?

prerane

ಶ್ರೀ ಕೈವಲ್ಯಾನಂದ ಸರಸ್ವತೀ
ನಮಗೂ ಪರಮಾತ್ಮನಿಗೂ ಕಾಲಕೃತವಾದ, ದೇಶಕೃತವಾದ ದೂರವಿಲ್ಲ ಅಥವಾ ಪರಮಾತ್ಮನಿಗೂ ನಮಗೂ ಮಧ್ಯೆ ಯಾವ ತೆರೆಯೂ ಇಲ್ಲ. ಆದರೆ ಪರಮಾತ್ಮನಿಗೂ ನಮಗೂ ದೂರ, ವ್ಯವಧಾನ ಹೇಗುಂಟಾಯಿತು? ಕಾಲಕೃತ, ದೇಶಕೃತ, ವಸ್ತುಕೃತ ದೂರವೇಕಿಲ್ಲವೆಂದರೆ? ಪರಮಾತ್ಮ ಸರ್ವವ್ಯಾಪಿ. ಕಾಲವಿದ್ದಾಗಲೂ, ಕಾಲವಿಲ್ಲ ದಾಗಲೂ, ಸರ್ವದೇಶಗಳಲ್ಲೂ, ದೇಶವಿಲ್ಲದಾಗಲೂ ಪರಮಾತ್ಮನಿದ್ದಾನೆ. ತೆರೆ ಬೀಳಲು ಪರಮಾತ್ಮನಿಲ್ಲದ ಸ್ಥಳವೇ ಇಲ್ಲ. ಆದರೂ ನಮಗೂ ಪರಮಾತ್ಮನಿಗೂ ದೂರ ಹೇಗುಂಟಾಯಿತು.

ಅಹಂಕಾರವು ಎಷ್ಟು ಗಟ್ಟಿಯಾಗುತ್ತಾ ಹೋಗುತ್ತದೋ ಅಷ್ಟರಮಟ್ಟಿಗೆ ನನ್ನ ನೈಜ ಇರುವಿಕೆಗೆ ನಾನು ದೂರ ವಾಗುತ್ತೇನೆ. ಅಹಂಕಾರವೇ ಅಡ್ಡಿ, ಅಹಂಕಾರವೇ ದೂರ, ಅಹಂಕಾರವು ಯಾವಾಗ ಕರಗಿ ಮಾಯವಾಗುತ್ತದೋ, ಆಗ ಆಂತರಿಕ ದೂರ ಇಲ್ಲವಾಗುತ್ತದೆ. ಯಾವಾಗ ʻನಾನು’ ಇಲ್ಲವಾಗುತ್ತದೋ – ಅಹಂಕಾರ ಸಂಪೂರ್ಣವಾಗಿ ಇಲ್ಲವಾಗುತ್ತದೋ ಹಾಗೂ ಅಹಂಕಾರರಹಿತನಾಗುತ್ತೇನೋ ಆಗ ನನಗೂ ದೈವಕ್ಕೂ ಇದ್ದ ಆಂತರಿಕ ದೂರ ಸಂಪೂರ್ಣಮಾಯವಾಗುತ್ತದೆ.

ʻಉಪಾಸನಾ’ ಎಂಬ ಶಬ್ದ ಬಹಳ ಸುಂದರ. ಅದರ ಅರ್ಥವೆಂದರೆ ದೇವರ ಸಾನ್ನಿಧ್ಯದಲ್ಲಿ ವಾಸಮಾಡುವಿಕೆ. ಯಾವ ಪ್ರತೀಕವನ್ನು ಪೂಜೆ ಮಾಡುತ್ತೇವೆಯೋ ಅದರ ಸಾಮೀಪ್ಯಕ್ಕೆ ಹೋಗುವುದು. ಪೂಜೆ ಮಾಡುವವ ಇಲ್ಲವಾಗುತ್ತಾನೆ. ದೈವಕ್ಕೆ ಹತ್ತಿರವಾಗುವ ಪ್ರಯತ್ನದಲ್ಲಿ ಪೂಜೆ ಮಾಡುವವ ಇಲ್ಲವಾಗುತ್ತಾನೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಅಹಂಕಾರದಿಂದಲೇ ದೈವಕ್ಕಿಂತಲೂ ಬೇರೆಯಾಗಿದ್ದಾನೆ. ಅನ್ವೇಷಕನಿಗೂ, ಅನ್ವೇಷಣೆ ವಿಷಯದ ದೈವಕ್ಕೂ ಗಲ್ಫ್ (Gulf) ಅಹಂಕಾರವೇ. ಅಹಂಕಾರವು ದೊಡ್ಡದಾದಷ್ಟು, ಎರಡರ ಮಧ್ಯೆ ದೂರವೂ ದೊಡ್ಡದಾಗುವುದು. ಎರಡರ ಮಧ್ಯೆ ಅಹಂಕಾರವೇ ದೂರದ ಅಳತೆಗೋಲು. ಎಷ್ಟರಮಟ್ಟಿಗೆ ಅಹಂಕಾರವು ಕರಗಿ ಇಲ್ಲವಾಗುವುದೋ ಅಷ್ಟರಮಟ್ಟಿಗೆ ದೇವರಿಗೆ ಹತ್ತಿರ, ಹತ್ತಿರವಾಗುವನು. ಹಾಗೂ ಎಂದು ಅಹಂಕಾರವು ಸಂಪೂರ್ಣವಾಗಿ ಇಲ್ಲವಾಗುವುದೋ, ಅನ್ವೇಷಕನು ಇಲ್ಲವಾದಂದು ಉಪಾಸನೆಯು ಪೂರ್ಣವಾಗುವುದು. ಹಾಗೂ ತಾನೇ ದೈವವಾಗಿ ಉಳಿಯುವನು. ಅಹಂಕಾರವು ಒಂದೇ ಅಡ್ಡಿ ಹಾಗೂ ಅಜ್ಞಾನ. ʻನಾನಿಂತಹವನು’ ಎಂದು ಉಳಿಯುವುದು ಬಂಧನ, ನಾನಿಂತಹವನೆಂಬ ಅಭಿಮಾನವಿಲ್ಲದೆ, ನಿರಭಿಮಾನವಾಗಿ ಉಳಿಯುವುದೇ ಮೋಕ್ಷ. ನಾನು ಸ್ವತಂತ್ರನಾಗಬೇಕೆಂದು ಬಯಸಬಹುದು. ಆದರೆ ʻನಾನಿರುವವರೆಗೂ ಸ್ವತಂತ್ರನಾಗಲಾರ’


ಬಾಹ್ಯ ಪ್ರಪಂಚದ ಬಗ್ಗೆ, ಬಾಹ್ಯ ಗಮನ ಮತ್ತು ಬಾಹ್ಯಕ್ಕೆ ಸಂಬಂಧಪಟ್ಟ ಕರ್ಮ-ಇವುಗಳು ನಮ್ಮ ಆಂತರಿಕ ಯಾತ್ರೆಗೆ ಅವಸರವಾಗುವಷ್ಟು ಮಾತ್ರವೇ ಇರಬೇಕು. ಅದಕ್ಕಿಂತಲೂ ಅಧಿಕವಾದದ್ದು ಅನವಶ್ಯಕ.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನು ಓದಿ: Prerane : ರುಕ್ಮಿಣಿಯ ಶರಣಾಗತಿ ಮತ್ತು ನಮ್ಮ ಆದರ್ಶ

Exit mobile version